ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐಗೆ ಅನುಕೂಲಕರ: ಲೋಧಾಶಿಫಾರಸುಗಳ ಮೂಲ ಆಶಯಕ್ಕೆ ಧಕ್ಕೆ

Last Updated 10 ಆಗಸ್ಟ್ 2018, 19:50 IST
ಅಕ್ಷರ ಗಾತ್ರ

‘ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ನನಗೆ ಖುಷಿ ನೀಡಿಲ್ಲ. ಕ್ರಿಕೆಟ್ ಆಡಳಿತದಲ್ಲಿ ಸುಧಾರಣೆಗಾಗಿ ನಾವು ಮಾಡಿದ್ದ ಶಿಫಾರಸುಗಳ ಮೂಲ ಸ್ವರೂಪವೇ ಬದಲಾದಂತಾಗಿದೆ’ –ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಅವರ ಅಸಮಾಧಾನದ ನುಡಿಗಳಿವು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಆಡಳಿತದಲ್ಲಿ ಸುಧಾರಣೆ ತರುವ ಉದ್ದೇಶದಿಂದ ಲೋಧಾ ನೇತೃತ್ವದ ಸಮಿತಿಯು ಮಾಡಿದ್ದ ಶಿಫಾರಸುಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಲೋಧಾ ಶಿಫಾರಸುಗಳನ್ನು ಒಂದಲ್ಲ ಒಂದು ರೀತಿಯಲ್ಲಿ ವಿರೋಧಿಸುತ್ತಲೇ ಬಂದಿರುವ ಬಿಸಿಸಿಐಗೆ ಇದು ಅನುಕೂಲಕರವಾಗಿ ಪರಿಣಮಿಸಿದೆ.

ಭಾರತದಲ್ಲಿ ಕೋಟ್ಯಂತರ ಜನರು ಕ್ರಿಕೆಟ್ ಆಟವನ್ನು ಧರ್ಮದಂತೆ ಆರಾಧಿಸುತ್ತಾರೆ. ಆಟಗಾರರು, ಆಡಳಿತಗಾರರಿಗೆ ಇತ್ತೀಚಿನ ವರ್ಷಗಳಲ್ಲಿ ಹಣ ಮತ್ತು ಖ್ಯಾತಿಗಳೆರಡೂ ಹೆಚ್ಚಿವೆ. ಆದರೆ ಇನ್ನೊಂದೆಡೆ ಕೆಲವು ಪಟ್ಟಭದ್ರರ, ಲಾಭಕೋರರಿಂದಾಗಿ ‘ಸಭ್ಯರ ಆಟ’ಕ್ಕೆ ಕಳಂಕ ಮೆತ್ತಿದ ಘಟನೆಗಳು ನಡೆದಿವೆ. 2013ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ನಡೆದಿದ್ದ ಸ್ಪಾಟ್‌ ಫಿಕ್ಸಿಂಗ್ ಹಗರಣದ ತನಿಖೆ ನಡೆಸಿದ್ದ ನಿವೃತ್ತ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಸಮಿತಿಯು ಸಲ್ಲಿಸಿದ್ದ ವರದಿಯಲ್ಲಿ ಬಿಸಿಸಿಐ ಆಡಳಿತದಲ್ಲಿ ಪಾರದರ್ಶಕತೆ ತರಲು ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌, 2015ರ ಜನವರಿಯಲ್ಲಿ ಲೋಧಾ ಸಮಿತಿಯನ್ನು ನೇಮಕ ಮಾಡಿತ್ತು. ಜುಲೈ 2016ರವರೆಗೆ ಸಮಗ್ರ ಪರಿಶೀಲನೆ ನಡೆಸಿದ್ದ ಲೋಧಾ ಸಮಿತಿಯು ಹತ್ತು ಶಿಫಾರಸುಗಳನ್ನು ಮಾಡಿತ್ತು. ಬೆಟ್ಟಿಂಗ್‌ ಕಾನೂನುಬದ್ಧಗೊಳಿಸುವುದು, ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳನ್ನು ಕ್ರಿಕೆಟ್‌ ಆಡಳಿತದಿಂದ ದೂರ ಇಡುವುದು, ಹಿತಾಸಕ್ತಿ ಸಂಘರ್ಷಕ್ಕೆ ಕಡಿವಾಣ ಹಾಕುವುದು ಮತ್ತಿತರ ಆಶಯಗಳು ಈ ಶಿಫಾರಸುಗಳಲ್ಲಿದ್ದವು. ದೇಶದ ಬೇರೆ ಕ್ರೀಡಾ ಸಂಸ್ಥೆಗಳಲ್ಲಿಯೂ ಲೋಧಾ ಶಿಫಾರಸುಗಳು ಜಾರಿಯಾಗಬೇಕು ಎಂದು ಕೆಲ ಹಿರಿಯ ಕ್ರೀಡಾಪಟುಗಳು ಒತ್ತಾಯಿಸಿದ್ದರು.

ಆದರೆ ಇದೀಗ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಚಂದ್ರಚೂಡ್ ಅವರ ಪೀಠವು ನೀಡಿರುವ ತೀರ್ಪು ಅಚ್ಚರಿ ಮೂಡಿಸಿದೆ. ‘ಒಂದು ರಾಜ್ಯ ಒಂದು ಮತ’ ಶಿಫಾರಸನ್ನು ನ್ಯಾಯಾಲಯವು ಕೈಬಿಟ್ಟಿದೆ. ಇದರಿಂದಾಗಿ ಮಹಾರಾಷ್ಟ್ರ, ಮುಂಬೈ, ವಿದರ್ಭ, ಗುಜರಾತ್, ಸೌರಾಷ್ಟ್ರ ಮತ್ತು ಬರೋಡಾ ತಮ್ಮ ಮತದಾನದ ಹಕ್ಕು ಉಳಿಸಿಕೊಂಡಿವೆ. ಈ ಕಾರಣದಿಂದ ಪಶ್ಚಿಮ ವಲಯವು ತನ್ನ ಏಕಸ್ವಾಮ್ಯವನ್ನು ಮುಂದುವರಿಸುವ ಅವಕಾಶ ಪಡೆದುಕೊಂಡಂತಾಗಿದೆ. ಒಟ್ಟು ಆರು ಮತಗಳನ್ನು ಹೊಂದಿರುವ ಈ ವಲಯವು ಬಿಸಿಸಿಐ ಪದಾಧಿಕಾರಿಗಳ ನೇಮಕದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ‘ಮುಂಬೈ, ಬರೋಡಾ ಸಂಸ್ಥೆಗಳು ದೇಶದ ಕ್ರಿಕೆಟ್‌ ಬೆಳವಣಿಗೆಗೆ ಅಪೂರ್ವ ಕೊಡುಗೆ ನೀಡಿವೆ. ಆದ್ದರಿಂದ ಅವುಗಳನ್ನು ಕೈಬಿಡಬಾರದು’ ಎಂದು ಬಿಸಿಸಿಐ ವಾದ ಮಂಡಿಸಿತ್ತು. ಪಟ್ಟಭದ್ರ ಹಿತಾಸಕ್ತಿಗಳಿಗೆ ಕಡಿವಾಣ ಹಾಕಲು ರೂಪಿಸಲಾಗಿದ್ದ ಕೂಲಿಂಗ್ ಆಫ್‌ ಅವಧಿ (ಯಾವುದೇ ಪದಾಧಿಕಾರಿಯು ರಾಜ್ಯ ಅಥವಾ ಕೇಂದ್ರ ಕ್ರಿಕೆಟ್ ಸಂಸ್ಥೆಯಲ್ಲಿ ಸತತ ಎರಡು ಅವಧಿಗೆ ನೇಮಕವಾಗುವಂತಿಲ್ಲ) ಜಾರಿಗೆ ಶಿಫಾರಸು ಮಾಡಿತ್ತು. ಈಗ, ನ್ಯಾಯಾಲಯದ ತೀರ್ಪಿನ ಪ್ರಕಾರ ಪದಾಧಿಕಾರಿಗಳು ಎರಡು ಅವಧಿಗೆ ಅಧಿಕಾರದಲ್ಲಿ ಇರಬಹುದಾಗಿದ್ದು ಸತತ ಆರು ವರ್ಷ ಆಡಳಿತ ಕೇಂದ್ರದಲ್ಲಿರಲು ಅನುಕೂಲ ಕಲ್ಪಿಸಿದಂತಾಗಿದೆ.

1975ರ ತಮಿಳುನಾಡು ಸೊಸೈಟಿ ಆ್ಯಕ್ಟ್‌ನಲ್ಲಿ ನೋಂದಾಯಿತವಾಗಿರುವ ಬಿಸಿಸಿಐ ಇದುವರೆಗೆ ಸರ್ಕಾರದಿಂದ ಅನುದಾನ ಪಡೆದಿಲ್ಲ. ಆ ನೆಪದಿಂದಾಗಿ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಬರುವುದನ್ನೂ ತಪ್ಪಿಸಿಕೊಳ್ಳುತ್ತಿದೆ. ಆದರೆ ಸರ್ಕಾರಿ ಪ್ರಶಸ್ತಿಗಳನ್ನು, ಸೌಲಭ್ಯಗಳನ್ನುಪಡೆದುಕೊಳ್ಳುತ್ತಿದೆ. ಇದರಿಂದಾಗಿ ರೈಲ್ವೇಸ್‌, ಸರ್ವಿಸಸ್ ಮತ್ತು ವಿಶ್ವವಿದ್ಯಾಲಯಗಳ ಸಂಘಟನೆಗೆ ಸಂಪೂರ್ಣ ಮತದಾನದ ಸದಸ್ಯತ್ವದ ಹಕ್ಕು ನೀಡಬೇಕು ಎಂದು ಮನವಿ ಸಲ್ಲಿಸಿತ್ತು. ಅದಕ್ಕೂ ನ್ಯಾಯಾಲಯವು ಹಸಿರು ನಿಶಾನೆ ತೋರಿಸಿದೆ. ಹೀಗಾಗಿ ಸರ್ಕಾರದ ಪ್ರಭಾವದಿಂದ ಕ್ರಿಕೆಟ್ ಆಡಳಿತವನ್ನು ದೂರವಿಡಬೇಕೆಂಬ ಉದ್ದೇಶಕ್ಕೆ ಹಿನ್ನಡೆಯಾದಂತಾಗಿದೆ. ಈ ತೀರ್ಪಿನಿಂದಾಗಿ ಬಿಸಿಸಿಐ ಮತ್ತು ರಾಜ್ಯ ಸಂಸ್ಥೆಗಳ ಚುನಾವಣೆ ಆಯೋಜನೆಗೆ ಅನುಮತಿ ಸಿಕ್ಕಿದೆ. ಆದರೆ ಬಹಳಷ್ಟು ಹಳೆಯ ಹುಲಿಗಳು 70 ವರ್ಷ ದಾಟಿದ್ದು ಮತ್ತು ಕೂಲಿಂಗ್ ಆಫ್ ಅವಧಿಯಲ್ಲಿ ಇರುವುದರಿಂದ ಒಂದಿಷ್ಟು ಹೊಸ ಮುಖಗಳನ್ನು ನಿರೀಕ್ಷಿಸಬಹುದು. ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸೌರವ್ ಗಂಗೂಲಿ ಅವರು ಮಂಡಳಿಯ ಅಧ್ಯಕ್ಷರಾಗುವತ್ತ ಚಿತ್ತ ನೆಟ್ಟಿದ್ದಾರೆನ್ನಲಾಗುತ್ತಿದೆ. ಒಟ್ಟಾರೆ ಲೋಧಾ ಸಮಿತಿ ಶಿಫಾರಸುಗಳಲ್ಲಿ ಅಳಿದುಳಿದಿರುವ ಉತ್ತಮ ಅಂಶಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವವರ ಅಗತ್ಯ ಈಗ ಇದೆ. ಕ್ರಿಕೆಟ್‌ ಬೆಳವಣಿಗೆಯ ಜೀವನಾಡಿಯಾದ ಆಟಗಾರರು ಮತ್ತು ಅಭಿಮಾನಿಗಳಿಗೆ ಸ್ವಚ್ಛ, ಪಾರದರ್ಶಕ ಆಡಳಿತ ನೀಡುವಂತಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT