ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಧರ್ಮದ ಹೆಸರಲ್ಲಿ ಹಿಂಸೆ ಅಕ್ಷಮ್ಯ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆಯಾಗಲಿ

Last Updated 13 ಆಗಸ್ಟ್ 2020, 2:45 IST
ಅಕ್ಷರ ಗಾತ್ರ

ಬೆಂಗಳೂರಿನ ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಹಾಗೂ ಕಾವಲ್‌ ಭೈರಸಂದ್ರ ಪ್ರದೇಶದಲ್ಲಿ ನಡೆದಿರುವ ವ್ಯಾಪಕ ಹಿಂಸಾಚಾರವು ಧರ್ಮದ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ಕ್ರೌರ್ಯದ ಮನಃಸ್ಥಿತಿಯ ದ್ಯೋತಕವಾಗಿದೆ. ಕಾರಣ ಯಾವುದೇ ಆಗಿದ್ದರೂ ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾನಿಗೊಳಿಸುವ ಪುಂಡಾಟಿಕೆ ಸಮರ್ಥನೀಯವಲ್ಲ; ಅಂಥ ಅಧಿಕಾರ ಯಾರಿಗೂ ಇಲ್ಲ. ಧರ್ಮದ ಹೆಸರಿನಲ್ಲಿ ನಡೆಯುವ ಗಲಭೆಗಳು ಸಮಾಜದಲ್ಲಿ ಒಡಕಿಗೆ ಕಾರಣವಾಗುತ್ತವೆ.

ದೇಶದ ಸಮಗ್ರತೆಗೆ ಬೆದರಿಕೆಯೊಡ್ಡುವ ಇಂಥ ಕೃತ್ಯಗಳಲ್ಲಿ ಭಾಗಿಯಾದವರ ಹಾಗೂ ಅವರಿಗೆ ಕುಮ್ಮಕ್ಕು ನೀಡಿದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರವಾದಿ ಮಹಮ್ಮದ್‌ ಪೈಗಂಬರ್‌ ಅವರ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಲಾಗಿದೆ ಎನ್ನುವ ಆರೋಪವು ಬೆಂಗಳೂರಿನಲ್ಲಿ ನಡೆದ ಗಲಭೆಗೆ ಕಾರಣ ಎಂದು ವರದಿಯಾಗಿದೆ.

ಹಿಂಸಾಚಾರದಲ್ಲಿ ನೂರಾರು ಜನ ಭಾಗಿಯಾಗಿದ್ದಾರೆ. ಪೊಲೀಸ್ ಹಾಗೂ ಸಾರ್ವಜನಿಕರ ವಾಹನಗಳ ಗಾಜುಗಳನ್ನು ಪುಡಿ ಪುಡಿ ಮಾಡಲಾಗಿದ್ದು, ಕೆಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪೈಗಂಬರ್‌ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಿದ್ದಾರೆ ಎನ್ನಲಾದ ವ್ಯಕ್ತಿಯ ಸಂಬಂಧಿ ಎನ್ನುವ ಕಾರಣಕ್ಕಾಗಿ ಪುಲಿಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯ ಮೇಲೂ ದಾಳಿ ನಡೆದಿದೆ. ಹಿಂಸಾಚಾರವನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಗುಂಡಿನ ದಾಳಿಗೆ ಮೂವರು ಬಲಿಯಾಗಿದ್ದಾರೆ.

ಧರ್ಮವನ್ನು ಹಾಗೂ ಧಾರ್ಮಿಕ ನಾಯಕರನ್ನು ಕೋಮು ಸಾಮರಸ್ಯ ಕದಡುವ ಉದ್ದೇಶದಿಂದ ಕೆಟ್ಟದಾಗಿ ಬಿಂಬಿಸುವುದು ಕಿಡಿಗೇಡಿತನ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ, ಇಂಥ ಕಿಡಿಗೇಡಿತನವನ್ನು ಕಾನೂನುಬದ್ಧವಾಗಿಯೇ ಎದುರಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳು ಸಹಜ. ತಕರಾರುಗಳನ್ನು ಬಗೆಹರಿಸಿಕೊಳ್ಳಲು ಸಂವಾದದ ಮಾರ್ಗ ಇದ್ದೇ ಇದೆ.

ಮಾತುಕತೆಯಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಸಾಧ್ಯವಿಲ್ಲ ಎನ್ನುವುದಾದರೆ, ನ್ಯಾಯಾಲಯದ ಮೊರೆ ಹೋಗಬಹುದಾಗಿದೆ. ಕಾನೂನಿಗೆ ಯಾರೂ ಅತೀತರಲ್ಲ. ಬಿಕ್ಕಟ್ಟು ತಲೆದೋರಿದಾಗ ಅದನ್ನು ಪ್ರಜಾಸತ್ತಾತ್ಮಕವಾಗಿ ಬಗೆಹರಿಸಿಕೊಳ್ಳಬೇಕೇ ವಿನಾ ಪುಂಡಾಟಿಕೆಯಿಂದಲ್ಲ. ಧರ್ಮದ ಹೆಸರಿನಲ್ಲಿ ಕಾನೂನನ್ನು ಯಾರೇ ಉಲ್ಲಂಘಿಸಿದರೂ ಅದು ಒಪ್ಪತಕ್ಕದ್ದಲ್ಲ. ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿದವರು ಯಾವುದೇ ಧರ್ಮದವರಾಗಿರಲೀ, ಎಷ್ಟೇ ಪ್ರಭಾವಿಗಳಾಗಿರಲೀ ಅವರ ಮೇಲೆ‌ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು.

ಮಾತುಕತೆ ಮತ್ತು ಸಂಧಾನದಲ್ಲಿ ಬಗೆಹರಿಯಬೇಕಾದ ಪ್ರಕರಣಗಳು ಹಿಂಸಾಚಾರದಲ್ಲಿ ಕೊನೆಗೊಳ್ಳುವ ಉದಾಹರಣೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದನ್ನು ನೋಡಿದರೆ, ಭಾರತೀಯ ಸಂಸ್ಕೃತಿಯ ಮೂಲಧಾತುಗಳಾದ ಸಹನೆ ಮತ್ತು ಸಂವಾದದ ಪಾಠಗಳನ್ನು ನಾವು ಮರೆತಂತೆ ಕಾಣಿಸುತ್ತದೆ. ಸಂವಾದಗಳ ಮೂಲಕವೇ ಭಾರತೀಯ ಪರಂಪರೆಯು ವಿಶ್ವದಲ್ಲೇ ಅನನ್ಯವಾದ ಬಹುತ್ವವನ್ನು ರೂಢಿಸಿಕೊಂಡು ಬಂದಿದೆ.

ದುರದೃಷ್ಟವೆಂದರೆ, ಈ ಕಾಲದ ಸಂವಾದಗಳಲ್ಲಿ ಪರಸ್ಪರರನ್ನು ಅರಿಯುವ ಪ್ರಯತ್ನದ ಬದಲಾಗಿ, ಹೀಗಳೆಯುವುದೇ ಮುಖ್ಯವಾಗುತ್ತಿದೆ. ದ್ವೇಷದ ಮಾತುಗಳು ಹಾಗೂ ಪೂರ್ವಗ್ರಹ ಮನಃಸ್ಥಿತಿಯಿಂದ ಸಂವಾದ ಫಲಪ್ರದವಾಗುವುದಿಲ್ಲ. ಸಂವಾದದಿಂದ ಅರಿವಿನ ಬೆಳಕು ಮೂಡಬೇಕೇ ವಿನಾ ಸಂಘರ್ಷದ ಬೆಂಕಿಯಲ್ಲ. ಸಮುದಾಯಗಳ ನಡುವೆ ಒಡಕನ್ನು ತಂದಿಟ್ಟು ಸ್ವಹಿತ ಸಾಧಿಸಿಕೊಳ್ಳುವ ಸಮಯಸಾಧಕರೂ ಇದ್ದಾರೆ. ಅಂಥವರ ಬಗ್ಗೆ ಸಮಾಜ ಎಚ್ಚರಿಕೆ ವಹಿಸಬೇಕಾಗಿದೆ.

ಜಾತಿ–ಧರ್ಮ ಎನ್ನುವುದು ಹುಟ್ಟಿನಿಂದ ಗುರುತಿಸಲಾಗುವ ಒಂದು ಸಂಕೇತವೇ ಹೊರತು, ಬೇರೆ ಯಾರನ್ನೋ ಕೀಳಾಗಿ ನೋಡಲು ದೊರೆಯುವ ಪರವಾನಗಿಯಲ್ಲ. ವೈಯಕ್ತಿಕವಾಗಿ ಯಾರು ಯಾವ ಧರ್ಮವನ್ನು ಅನುಸರಿಸಿದರೂ ಅಂತಿಮವಾಗಿ ಎಲ್ಲರೂ ಮಾನವಧರ್ಮದ ಅನುಯಾಯಿಗಳೇ ಆಗಿದ್ದೇವೆ ಎನ್ನುವುದರಲ್ಲಿ ದೇಶದ ಹಾಗೂ ಮನುಕುಲದ ಹಿತವಿದೆ.

ಭಾರತದ ಸಂವಿಧಾನ ಪ್ರತಿನಿಧಿಸುವ ಬಹುತ್ವ ಕೂಡ ಮಾನವಧರ್ಮದ ದ್ಯೋತಕವೇ ಆಗಿದೆ. ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿಯಲ್ಲಿ ನಡೆದಂತಹ ಕೃತ್ಯಗಳು ‘ಬಹುತ್ವ ಭಾರತ’ದ ಸೌಂದರ್ಯವನ್ನು ವಿರೂಪಗೊಳಿಸುವ ಪ್ರಯತ್ನಗಳಾಗಿವೆ. ಇಂಥ ಅಹಿತಕರ ಘಟನೆಗಳು ಮತ್ತೆ ನಡೆಯದಂತೆ ಸಮುದಾಯಗಳ ನಾಯಕರು ಎಚ್ಚರ ವಹಿಸಬೇಕು. ಜಾತಿ–ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಉಂಟು ಮಾಡಿದವರಿಗೆ ಕಠಿಣ ಶಿಕ್ಷೆಯಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT