ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್ಎನ್‌ಎಲ್‌ ಪುನಶ್ಚೇತನ: ಹಣ ಒದಗಿಸಿದರಷ್ಟೇ ಸಾಲದು

Last Updated 30 ಅಕ್ಟೋಬರ್ 2019, 3:38 IST
ಅಕ್ಷರ ಗಾತ್ರ

ಸರ್ಕಾರಿ ಸ್ವಾಮ್ಯದ ಭಾರತ್‌ ಸಂಚಾರ್‌ ನಿಗಮ ನಿಯಮಿತ (ಬಿಎಸ್‌ಎನ್‌ಎಲ್‌) ಮತ್ತು ಮಹಾನಗರ ಟೆಲಿಫೋನ್‌ ನಿಗಮ ನಿಯಮಿತ (ಎಂಟಿಎನ್‌ಎಲ್‌) ಸಂಸ್ಥೆಗಳ ಭವಿಷ್ಯದ ಕುರಿತ ಅನಿಶ್ಚಿತತೆಗೆ ಕೊನೆಗೂ ತೆರೆಬಿದ್ದಿದೆ. ಈ ಎರಡೂ ಸಂಸ್ಥೆಗಳ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರವು ₹ 69 ಸಾವಿರ ಕೋಟಿ ಮೊತ್ತದ ಯೋಜನೆ ಪ್ರಕಟಿಸಿದೆ. ನಷ್ಟದಲ್ಲಿರುವ ಸಂಸ್ಥೆಗಳ ಅಸ್ತಿತ್ವ ಉಳಿಸಿ, ಆರ್ಥಿಕವಾಗಿ ಅವುಗಳನ್ನು ಸಬಲಗೊಳಿಸುವ ಪ್ರಯತ್ನ ಇದಾಗಿದೆ. ಈ ಪ್ರಕ್ರಿಯೆಗೆತಡವಾಗಿಯಾದರೂ ಚಾಲನೆ ಸಿಕ್ಕಿರುವುದು ಸ್ವಾಗತಾರ್ಹ. ದೇಶಿ ದೂರಸಂಪರ್ಕ ವಲಯವು ತೀವ್ರ ಪರಿವರ್ತನೆಯ ಕಾಲಘಟ್ಟದಲ್ಲಿ ಇರುವಾಗಲೇ ಈ ಮಹತ್ವದ ನಿರ್ಧಾರ ಪ್ರಕಟಗೊಂಡಿದೆ.

ಹಿಂದೊಮ್ಮೆ ಏಕಸ್ವಾಮ್ಯದಿಂದ ಬೀಗುತ್ತಿದ್ದ ಇವೆರಡೂ ಸಂಸ್ಥೆಗಳು ಇತ್ತೀಚಿನ ವರ್ಷಗಳಲ್ಲಿ ತಮ್ಮ ಪ್ರಾಬಲ್ಯ ಕಳೆದುಕೊಂಡಿವೆ. ಖಾಸಗಿ ಮೊಬೈಲ್‌ ಸೇವಾ ಸಂಸ್ಥೆಗಳ ಪೈಪೋಟಿ ಎದುರಿಸಲು ಸಾಧ್ಯವಾಗದೆ ನಷ್ಟಕ್ಕೆ ಗುರಿಯಾಗಿವೆ. ಸಂಪನ್ಮೂಲದ ಲಭ್ಯತೆ, ತಂತ್ರಜ್ಞಾನ ನವೀಕರಣ, ಸೇವಾ ಸೌಲಭ್ಯದಲ್ಲಿ ಹೊಸತನದಂತಹ ವಿಷಯಗಳಲ್ಲಿ ಹಿಂದೆ ಬಿದ್ದಿವೆ. ಬಿಎಸ್‌ಎನ್‌ಎಲ್‌ ಸೇವೆಯನ್ನು ದೇಶದ ಉದ್ದಗಲಕ್ಕೂ ವಿಸ್ತರಿಸುವ ಉದ್ದೇಶದಿಂದ ಮೂಲ ಸೌಕರ್ಯ ಸೃಷ್ಟಿಗೆ ಸರ್ಕಾರವು ಅಪಾರ ಹಣ ವೆಚ್ಚ ಮಾಡಿದೆ. ಆದರೆ, ಲಾಭದಾಯಕವಾಗಿ ನಡೆಸಲು ಸಾಧ್ಯವಾಗದ ಕಾರಣ ನಷ್ಟಕ್ಕೆ ಗುರಿಯಾಗಬೇಕಾಯಿತು. ದೆಹಲಿ ಮತ್ತು ಮುಂಬೈ ಮಹಾನಗರಗಳಲ್ಲಿ ಸೇವೆ ನೀಡುತ್ತಿರುವ ಎಂಟಿಎನ್‌ಎಲ್‌ ಸಂಸ್ಥೆಯು ಒಂಬತ್ತು ವರ್ಷಗಳಿಂದ ನಷ್ಟದಲ್ಲಿದೆ. ಈ ಎರಡೂ ನಿಗಮಗಳು ಒಟ್ಟಾರೆ ₹ 40 ಸಾವಿರ ಕೋಟಿ ಮೊತ್ತದ ನಷ್ಟದ ಹೊರೆ ಹೊತ್ತುಕೊಂಡಿವೆ. 4ಜಿ ತರಂಗಾಂತರ ಹಂಚಿಕೆ, ಬಾಂಡ್‌ ಖಾತರಿ, ಪುನರ್ಧನ ನೆರವು, ಬಜೆಟ್‌ ಬೆಂಬಲ, ನಿಗಮಗಳ ಸ್ಥಿರಾಸ್ತಿ ಮಾರಾಟ, ಸ್ವಯಂ ನಿವೃತ್ತಿ ಯೋಜನೆ, ವಿಲೀನ ಪ್ರಕ್ರಿಯೆ... ಇವೆಲ್ಲವೂ ಪುನಶ್ಚೇತನಕ್ಕೆ ನೆರವಾಗುವ ನಿರೀಕ್ಷೆ ಇದೆ.

ನಷ್ಟದಲ್ಲಿರುವ ಕೇಂದ್ರೋದ್ಯಮಗಳುಹಣ ತೊಡಗಿಸಿದ ಮಾತ್ರಕ್ಕೇ ಲಾಭದ ಹಾದಿಗೆ ಮರಳುವುದಿಲ್ಲ. ವಿಲೀನದ ನಂತರ ಅಸ್ತಿತ್ವಕ್ಕೆ ಬರಲಿರುವ ಹೊಸ ಸಂಸ್ಥೆಯು ಸ್ಪರ್ಧಾತ್ಮಕತೆ ರೂಢಿಸಿಕೊಳ್ಳುವುದರ ಮೇಲೆ ಅದರ ಭವಿಷ್ಯ ನಿಂತಿದೆ. ಲಾಭದ ಹಾದಿಗೆ ಮರಳುವ ಕಾರ್ಯತಂತ್ರವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವುದು ಅಗತ್ಯ. ಗ್ರಾಹಕರನ್ನು ಮೌಲ್ಯವರ್ಧಿತ ಸೇವೆಗಳಿಂದ ಸೆಳೆಯಬೇಕಾಗಿದೆ. ವಿಳಂಬ ಧೋರಣೆಯಿಂದ ಹೊರಬಂದು ಗ್ರಾಹಕ ಕೇಂದ್ರಿತ ಚಿಂತನೆಗೆ ಆದ್ಯತೆ ನೀಡಬೇಕಾಗುತ್ತದೆ. ಹೊಸ ತಲೆಮಾರಿನ ಗ್ರಾಹಕರ ಅಗತ್ಯಗಳನ್ನು ಅರಿತು ಅವರನ್ನು ಸೆಳೆಯಬೇಕಾಗಿದೆ.

ದತ್ತಾಂಶ ನೀಡಿಕೆಯಲ್ಲಿ (ಡೇಟಾ) ಉತ್ಕೃಷ್ಟ ಸೇವೆ ನೀಡಿದರೆ ಮಾತ್ರ ಲಾಭದ ಹಾದಿಗೆ ಹೊರಳಬಹುದು. ಪುನಶ್ಚೇತನಕ್ಕೆ ಬಳಕೆಯಾಗುತ್ತಿರುವುದು ಸಾರ್ವಜನಿಕರ ತೆರಿಗೆ ಹಣ ಎಂಬುದು ಸರ್ಕಾರಕ್ಕೂ ಸಂಸ್ಥೆಗಳಿಗೂ ನೆನಪಿರಬೇಕು. ಪಡೆದುಕೊಳ್ಳುವ ಪ್ರತಿ ಪೈಸೆಯೂ ಸದ್ಬಳಕೆ ಆಗಬೇಕು. ವೆಚ್ಚಗಳಿಗೆ ಉತ್ತರದಾಯಿ ಆಗುವ ಹೊಣೆಗಾರಿಕೆಯನ್ನೂ ತೋರಬೇಕು. ಸಿಬ್ಬಂದಿಯು ಜಡತ್ವ ಬಿಟ್ಟು ಕ್ರಿಯಾಶೀಲರಾಗುವುದು, ವೃತ್ತಿಪರತೆ ಮೈಗೂಡಿಸಿಕೊಳ್ಳುವುದು ತುರ್ತಾಗಿ ಆಗಬೇಕಾದ ಕೆಲಸ. ಗ್ರಾಹಕರ ದೂರುಗಳಿಗೆ ಸಮರ್ಪಕವಾಗಿ ಸ್ಪಂದಿಸುವ ಸಂವೇದನೆ ಬೆಳೆಸಿಕೊಳ್ಳಬೇಕು. ಇವೆಲ್ಲ ಆಗಬೇಕಾದರೆ ಸಂಸ್ಥೆಗೆ ದಕ್ಷ ನಾಯಕತ್ವ ಕೂಡ ಬೇಕಾಗುತ್ತದೆ.‘4ಜಿ’ ಮತ್ತು ‘5ಜಿ’ ತಂತ್ರಜ್ಞಾನದ ನೆರವಿನಿಂದ ಗ್ರಾಹಕರನ್ನು ಸೆಳೆಯಲು ಈಗಲೂ ವಿಪುಲ ಅವಕಾಶಗಳಿವೆ. ಅವುಗಳನ್ನು ಬಳಸಿಕೊಳ್ಳಬೇಕು. ಮುಂದೆ ಮತ್ತೆ ಸರ್ಕಾರದ ಎದುರು ಹಣಕ್ಕಾಗಿ ಕೈಯೊಡ್ಡುವ ಸ್ಥಿತಿ ಬಾರದಂತೆ ನೋಡಿಕೊಳ್ಳುವ ಗುರುತರ ಹೊಣೆ ಕೂಡ ಹೊಸದಾಗಿ ರೂಪು ಪಡೆಯಲಿರುವ ಸಂಸ್ಥೆ ಮೇಲೆ ಇರಲಿದೆ. ಸಂಸ್ಥೆಯ ಚಟುವಟಿಕೆಗಳ ಮೇಲೆ ಸರ್ಕಾರವು ನಿಗಾ ಇಡಬೇಕು. ಆದರೆ, ಅತಿಯಾದ ಹಸ್ತಕ್ಷೇಪ ಸಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT