ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿದ ಸಂಪುಟ ಕಸರತ್ತು: ಅಭಿವೃದ್ಧಿಗೆ ಸಿಗಲಿ ಆದ್ಯತೆ

Last Updated 13 ಜನವರಿ 2021, 19:31 IST
ಅಕ್ಷರ ಗಾತ್ರ

ಬಹುದಿನಗಳ ಹೊಯ್ದಾಟದ ನಂತರ ಅಂತೂ ಸಚಿವ ಸಂಪುಟ ವಿಸ್ತರಣೆ ಆಗಿದೆ. ಒಬ್ಬ ಸಚಿವರನ್ನು ಕೈಬಿಟ್ಟು, ಏಳು ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದವರಿಗೂ ಅವಕಾಶ ಸಿಕ್ಕಿದೆ. ಮೂಲ ಬಿಜೆಪಿಯ ಕೆಲವರಿಗೂ ಸಚಿವ ಸ್ಥಾನ ದೊರಕಿದೆ. ಮುಖ್ಯಮಂತ್ರಿ ಬದಲಾಗುತ್ತಾರೆ, ಹೊಸ ಸಚಿವ ಸಂಪುಟ ಅಸ್ತಿತ್ವಕ್ಕೆ ಬರುತ್ತದೆ, ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ವರಿಷ್ಠರು ಒಪ್ಪಿಗೆ ನೀಡುವುದಿಲ್ಲ ಎಂಬ ಮಾತುಗಳಿಗೆ ಈಗ ತೆರೆಬಿದ್ದಿದೆ. ವರಿಷ್ಠರ ಮನವೊಲಿಸಿ ಸಚಿವ ಸಂಪುಟ ವಿಸ್ತರಣೆ ಮಾಡುವಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಆದರೂ ಸಚಿವ ಸಂಪುಟವು ಸಮತೋಲನದಿಂದ ಕೂಡಿಲ್ಲ ಎನ್ನುವುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ. ಕೆಲವೇ ಜಿಲ್ಲೆಗಳು ಅತಿ ಹೆಚ್ಚಿನ ಪಾಲು ಪಡೆದುಕೊಂಡಿವೆ. ಕೆಲವು ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ಇಲ್ಲ. ಪ್ರಾದೇಶಿಕ ಅಸಮಾನತೆಯು ಕೆಲವು ಶಾಸಕರ ಅತೃಪ್ತಿಗೆ ಕಾರಣವಾಗಿದೆ. ಜಾತಿ ಲೆಕ್ಕಾಚಾರದಲ್ಲಿಯೂ ಸಮತೋಲನ ಸಾಧ್ಯವಾಗಿಲ್ಲ ಎಂಬ ಅಸಮಾಧಾನ ಇದೆ. ಈ ಹಿಂದೆ ಅಧಿಕಾರದಲ್ಲಿದ್ದ ಜೆಡಿಎಸ್–ಕಾಂಗ್ರೆಸ್‌ ನೇತೃತ್ವದ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿ, ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲು ನೆರವಾದವರು ಹಾಗೂ ಮೂಲ ಬಿಜೆಪಿಗರಲ್ಲಿ ರಚ್ಚೆ ಹಿಡಿದ ಕೆಲವರನ್ನು ಸಮಾಧಾನಪಡಿಸುವುದು ಮುಖ್ಯಮಂತ್ರಿ ಅವರ ಉದ್ದೇಶವಾಗಿತ್ತು ಎನ್ನುವುದು ನೂತನ ಸಚಿವರ ಪಟ್ಟಿಯನ್ನು ನೋಡಿದರೆ ಗೊತ್ತಾಗುತ್ತದೆ. ಇದೇನೇ ಇರಲಿ, ಆಡಳಿತವನ್ನು ಚುರುಕುಗೊಳಿಸಲೇಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಮುಖ್ಯಮಂತ್ರಿ ಇದ್ದಾರೆ ಎಂಬುದು ಸ್ಪಷ್ಟ. ‘ರಾಜ್ಯ ಸರ್ಕಾರ ಇನ್ನೂ ಟೇಕ್ ಆಫ್ ಆಗಿಲ್ಲ’ ಎಂದು ವಿರೋಧ ಪಕ್ಷದವರು ಟೀಕಿಸುತ್ತಲೇ ಇದ್ದಾರೆ. ಆ ಟೀಕೆಯಲ್ಲಿ ಸತ್ಯಾಂಶ ಇಲ್ಲ ಎಂದೂ ಹೇಳಲಾಗದು. ಬಿಜೆಪಿ ಒಳಗೆ ತೆರೆಮರೆಯಲ್ಲಿಯೇ ನಡೆಯುತ್ತಿದ್ದ ವಿದ್ಯಮಾನಗಳು, ಮುಖ್ಯಮಂತ್ರಿ ವಿರುದ್ಧ ಕೆಲವು ಮುಖಂಡರು ಬಹಿರಂಗವಾಗಿ ನೀಡುತ್ತಿದ್ದ ಹೇಳಿಕೆಗಳು ಈ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಭಾವನೆಯನ್ನು ಜನರಲ್ಲಿ ಉಂಟು ಮಾಡಿದ್ದವು. ಸಂಪುಟ ವಿಸ್ತರಣೆಯ ಕಸರತ್ತು ಮುಗಿದಿದೆ. ರಾಜ್ಯದ ಅಭಿವೃದ್ಧಿ ಕಡೆಗೆ ಸರ್ಕಾರ ಈಗಲಾದರೂ ಗಮನ ನೀಡಬೇಕು. ಕೋವಿಡ್ ನಂತರದ ಸಂಕಷ್ಟ, ವರಮಾನ ಕುಸಿತ, ನಿರುದ್ಯೋಗ ಮುಂತಾದ ಸಮಸ್ಯೆಗಳ ನಿವಾರಣೆಗೆ ಆದ್ಯತೆ ಮೇರೆಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ರಾಜ್ಯದ ಜನರಿಗೆ ‘ಸರ್ಕಾರ ಇದೆ, ಅದು ನಮ್ಮ ಪರವಾಗಿ ಕೆಲಸ ಮಾಡುತ್ತಿದೆ’ ಎಂಬ ಭಾವನೆ ಬರುವಂತೆ ಮಾಡಬೇಕು. ಇಲ್ಲವಾದರೆ ಜನರು ಕ್ಷಮಿಸುವುದಿಲ್ಲ.

ಸಂಪುಟ ವಿಸ್ತರಣೆಯ ಜೊತೆಗೇ ಆಡಳಿತಾರೂಢ ಬಿಜೆಪಿಯಲ್ಲಿ ಅಸಮಾಧಾನವೂ ಸ್ಫೋಟಗೊಂಡಿದೆ. ಯಡಿಯೂರಪ್ಪ ಪರವಾಗಿ ಧ್ವನಿ ಎತ್ತುತ್ತಿದ್ದ ಶಾಸಕರೇ ಆಕ್ಷೇಪದ ಮಾತನಾಡಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಆದಾಗಲೆಲ್ಲಾ ಅಸಮಾಧಾನ ಸ್ಫೋಟವಾಗುವುದು ಮಾಮೂಲು ಎನ್ನುವಂತಾಗಿದೆ. ಈ ಪರಿಪಾಟಕ್ಕೆ ಪಕ್ಷಭೇದ ಎಂಬುದು ಇಲ್ಲ. ಈ ರೀತಿಯ ಅಸಮಾಧಾನವು ಆಡಳಿತದ ಮೇಲೆ ಪರಿಣಾಮ ಬೀರದಂತೆ ಮುಖ್ಯಮಂತ್ರಿ ಎಚ್ಚರ ವಹಿಸಬೇಕು. ಎಲ್ಲ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಬಿಜೆಪಿಯಲ್ಲಿ ಈಗ ಕಾಣಿಸಿಕೊಂಡಿರುವ ಅತೃಪ್ತಿಯು ಭಿನ್ನಮತವಾಗಿ ಪರಿವರ್ತನೆಯಾಗುವುದನ್ನು ತಡೆಯುವುದು ಮುಖ್ಯಮಂತ್ರಿಯ ನಡೆಯನ್ನು ಅವಲಂಬಿಸಿದೆ. ಅಭಿವೃದ್ಧಿಗೆ ಅಡ್ಡಿಯಾಗದಂತೆ ನಡೆದುಕೊಳ್ಳುವುದು ತಮ್ಮ ಹೊಣೆಗಾರಿಕೆ ಎಂಬುದನ್ನು ಶಾಸಕರೂ ಅರಿಯಬೇಕು. ಎಲ್ಲ ಶಾಸಕರನ್ನೂ ಸಚಿವರನ್ನಾಗಿಸುವುದು ಸಾಧ್ಯವಿಲ್ಲ. ಜನಪರವಾಗಿ ಕೆಲಸ ಮಾಡಲು ಸಚಿವ ಸ್ಥಾನ ಇರಲೇಬೇಕು ಎಂದೂ ಇಲ್ಲ. ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲು ಸಹಕರಿಸಿದ್ದೇವೆ ಎಂಬ ಒಂದೇ ಕಾರಣವನ್ನು ಮುಂದಿಟ್ಟುಕೊಂಡು ಸಚಿವ ಸ್ಥಾನಕ್ಕೆ ಪಟ್ಟು ಹಿಡಿಯುವುದು ಸರಿಯಲ್ಲ.
ಶಾಸಕರಾದವರಿಗೆ ರಾಜ್ಯದ ಅಭಿವೃದ್ಧಿ ಮುಖ್ಯವಾಗಬೇಕು. ಜನಕಲ್ಯಾಣದತ್ತ ಗಮನ ಹರಿಸಬೇಕು. ಈಗ ಸಚಿವರಾಗಿರುವವರೂ ಇದನ್ನು ಮನಗಾಣಬೇಕು. ಆಡಳಿತ ಸುಧಾರಣೆ ಕಡೆಗೆ ಗಮನ ನೀಡಬೇಕು. ಕೊಟ್ಟ ಖಾತೆಯನ್ನು ಸಮರ್ಥವಾಗಿ ನಿಭಾಯಿಸಬೇಕು. ಹಾಗಾದಾಗ ಮಾತ್ರ ಸಚಿವರಾದುದಕ್ಕೆ ಸಮರ್ಥನೆ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT