ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಸುದ್ದಿಮಾಧ್ಯಮಗಳ ಸ್ವೇಚ್ಛಾಚಾರ; ಸಿಜೆಐ ಟೀಕೆ ಎಚ್ಚರಿಕೆಯ ಗಂಟೆ

Published : 29 ಜುಲೈ 2022, 20:30 IST
ಫಾಲೋ ಮಾಡಿ
Comments

ಸುದ್ದಿವಾಹಿನಿಗಳು ಮತ್ತು ಸಾಮಾಜಿಕ ಜಾಲತಾಣಗಳು ‘ಕಾಂಗರೂ ನ್ಯಾಯಾಲಯ’ಗಳನ್ನು (ವ್ಯಕ್ತಿಯೊಬ್ಬರಿಗೆ ತಪ್ಪಿತಸ್ಥ ಎಂಬ ಹಣೆಪಟ್ಟಿ ಕಟ್ಟುವುದಕ್ಕಾಗಿ ಅನಧಿಕೃತವಾಗಿ ರೂಪಿಸಿದ ನ್ಯಾಯಾ ಲಯ) ನಡೆಸುತ್ತಿವೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌.ವಿ. ರಮಣ ಟೀಕಿಸಿದ್ದಾರೆ. ಮಾಧ್ಯಮದ ನಡತೆಯನ್ನು ಕುರಿತಂತೆ ನ್ಯಾಯಾಂಗದಿಂದ ಟೀಕೆ ಬಂದಿರುವುದು ಇದು ಮೊದಲೇನಲ್ಲ. ರಮಣ ಅವರು ಭಾಷಣವೊಂದರಲ್ಲಿ ಈ ಟೀಕೆ ಮಾಡಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿಯೂ ಕೆಲವು ನ್ಯಾಯಮೂರ್ತಿಗಳು ಈ ಹಿಂದೆ ಇಂತಹ ವಿಮರ್ಶೆಗಳನ್ನು ಮಾಡಿದ್ದಿದೆ. ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವ ಅಪರಾಧ ಪ್ರಕರಣಗಳ ಕುರಿತು ಸುದ್ದಿವಾಹಿನಿಗಳಲ್ಲಿ ಚರ್ಚೆಗಳನ್ನು ನಡೆಸುವುದು ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ನೇರವಾಗಿ ಹಸ್ತಕ್ಷೇಪ ಮಾಡಿದಂತೆ ಎಂದು ನ್ಯಾಯಮೂರ್ತಿ ಯು.ಯು. ಲಲಿತ್ ಅವರು ಕೆಲ ವಾರಗಳ ಹಿಂದೆ ಹೇಳಿದ್ದರು. ಸಾಕ್ಷಿ ಮತ್ತು ಸಾಕ್ಷ್ಯಗಳಿಗೆ ಸಂಬಂಧಿಸಿ ಚರ್ಚಿಸಲು ಸಾರ್ವಜನಿಕ ವೇದಿಕೆಯು ಸರಿಯಾದ ಸ್ಥಳ ಅಲ್ಲ ಎಂದೂ ಹೇಳಲಾಗಿತ್ತು. ರಮಣ ಅವರು ಕೂಡ ಇದೇ ಧಾಟಿಯಲ್ಲಿ ಹೇಳಿಕೆ ನೀಡಿದ್ದಾರೆ. ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಬಗ್ಗೆ ‘ಸರಿಯಾದ ಮಾಹಿತಿ ಇಲ್ಲದೆ, ಪೂರ್ವಗ್ರಹಪೀಡಿತವಾಗಿ, ಕಾರ್ಯಸೂಚಿ ಆಧರಿಸಿ ಮಾಧ್ಯಮಗಳಲ್ಲಿ ಚರ್ಚೆ ನಡೆಸುವುದು’ ನ್ಯಾಯದಾನ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ. ಮಾಧ್ಯಮವು ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡಿದೆ ಮತ್ತು ಪ್ರಜಾಪ್ರಭುತ್ವವು ಎರಡು ಹೆಜ್ಜೆ ಹಿಂದೆ ಸರಿಯುವಂತೆ ಮಾಡಿದೆ. ಇದು ಜನರು ಮತ್ತು ವ್ಯವಸ್ಥೆಯನ್ನು ಬಾಧಿಸಿದೆ ಎಂಬುದು ಅವರ ಅಭಿಪ್ರಾಯವಾಗಿದೆ.

ಏನನ್ನು ವರದಿ ಮಾಡಲಾಗುತ್ತಿದೆ ಮತ್ತು ಪ್ರೇಕ್ಷಕ ರಿಗೆ ತಿಳಿಸಲಾಗುತ್ತಿದೆ ಎಂಬುದರ ಕುರಿತು ಯಾವುದೇ ರೀತಿಯ ಉತ್ತರದಾಯಿತ್ವ ಇಲ್ಲದ ಸುದ್ದಿವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಕ್ಕೆ ಸಂಬಂಧಿಸಿ ಮುಖ್ಯ ನ್ಯಾಯಮೂರ್ತಿಯವರು ಈ ಹೇಳಿಕೆ ನೀಡಿದ್ದಾರೆ. ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುವ ಚರ್ಚೆಗಳಲ್ಲಿ ಪಕ್ಷಪಾತದಿಂದ ಕೂಡಿದ ಅಭಿಮತ ಇರುತ್ತದೆ, ಲಘುವಾದ ಹೇಳಿಕೆಗಳಿರುತ್ತವೆ, ಸಂಘರ್ಷಕ್ಕೆ ಕುಮ್ಮಕ್ಕು ನೀಡುವಂತಹ, ಉದ್ವಿಗ್ನಗೊಳಿಸುವಂತಹ ಧಾಟಿಯು ಇರುತ್ತವೆ. ಇವು ಯಾವುದೇ ಜ್ಞಾನವನ್ನು ನೀಡುವುದಿಲ್ಲ ಮತ್ತು ಯಾರನ್ನೂ ಸುಧಾರಿಸುವುದು ಕೂಡ ಇಲ್ಲ. ಸಾಮಾನ್ಯವಾಗಿ ರಾಜಕೀಯಕ್ಕೆ ಸಂಬಂಧಿಸಿದ ಪಕ್ಷಪಾತದ ನಿಲುವು ಇರುತ್ತದೆ ಮತ್ತು ಯಾವ ಕಡೆಗೆ ವಾಲಿಕೊಂಡಿದೆ ಎಂಬುದೇ ಸುದ್ದಿವಾಹಿನಿ ಚರ್ಚೆಯು ಹೇಗೆ ನಡೆಯಬೇಕು ಎಂಬುದನ್ನು ನಿರ್ಧರಿಸುತ್ತದೆ. ಬಾಲಿವುಡ್ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಾವು, ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆ, ದೆಹಲಿಯಲ್ಲಿ 2020ರ ಫೆಬ್ರುವರಿಯಲ್ಲಿ ನಡೆದ ಗಲಭೆಯ ಕುರಿತಂತೆ ನಡೆದ ಕೆಲವು ಚರ್ಚೆಗಳು ಸುದ್ದಿವಾಹಿನಿಗಳ ಇಂತಹ ಚರ್ಚೆಯ ಇತ್ತೀಚಿನ ಕೆಲವು ಉದಾಹರಣೆಗಳು. ಸುದ್ದಿವಾಹಿನಿಗಳ ನಿರೂಪಕರು ಮತ್ತು ಚರ್ಚೆಯಲ್ಲಿ ಭಾಗವಹಿಸುವವರು ನ್ಯಾಯಾಧೀಶರ ಪಾತ್ರ ವಹಿಸುತ್ತಾರೆ ಮತ್ತು ಘಟನೆಗಳು, ವಿಚಾರಗಳು, ವ್ಯಕ್ತಿಗಳು ಹಾಗೂ ಸಮುದಾಯಗಳ ಬಗ್ಗೆ‌ ಜನರನ್ನು ದಾರಿ ತಪ್ಪಿಸುತ್ತಾರೆ ಹಾಗೂ ಪೂರ್ವಗ್ರಹ ತುಂಬುತ್ತಾರೆ. ಮಾಧ್ಯಮಗಳು ಇಂತಹ ವರ್ತನೆಯನ್ನು ಬಿಡಬೇಕು. ಇದು, ಮಾಧ್ಯಮದ ವಿಶ್ವಾಸಾರ್ಹತೆಗೆ ಒಳಿತನ್ನು ಮಾಡುತ್ತದೆ.

ಸಾಮಾಜಿಕ ಮಾಧ್ಯಮವು ಇನ್ನೂ ಹೆಚ್ಚು ಕೆಟ್ಟು ಹೋಗಿದೆ. ಇದು ಸಂಘಟಿತವಲ್ಲದ ವೇದಿಕೆ. ಅಲ್ಲಿ ಇರುವವರಿಗೆ ಒಂದು ರೀತಿಯ ಅನಾಮಧೇಯತ್ವ ಇರುತ್ತದೆ. ಹಾಗಾಗಿ, ಹೊಣೆಗೇಡಿತನ ಹಾಗೂ ಪ್ರಚೋದನಕಾರಿ ವರ್ತನೆ ಇನ್ನೂ ಹೆಚ್ಚೇ ಇದೆ. ರಾಜಕೀಯ ಪಕ್ಷಗಳು ಸೇರಿದಂತೆ ದೊಡ್ಡ ಸಂಘಟನೆಗಳು ಸಾಮಾಜಿಕ ಮಾಧ್ಯಮದ ಹಿಂದೆ ಕೆಲಸ ಮಾಡುತ್ತಿವೆ. ಈ ಮಾಧ್ಯಮಗಳನ್ನು ತಮ್ಮ ಕುರಿತ ಪ್ರಚಾರ, ಇತರರನ್ನು ಕುರಿತ ಅಪಪ್ರಚಾರ ಮತ್ತು ತಮಗೆ ಆಗದವರಿಗೆ ಅಗೌರವ ತರುವುದಕ್ಕಾಗಿ ಒಂದು ಉಪಕರಣವಾಗಿ ಬಳಸಲಾಗುತ್ತಿದೆ. ಸುದ್ದಿವಾಹಿನಿಗಳಿಗಾಗಲೀ ಸಾಮಾಜಿಕ ಮಾಧ್ಯಮಕ್ಕಾಗಲೀ ಕಡಿವಾಣದ ವ್ಯವಸ್ಥೆ ಇಲ್ಲ ಹಾಗೂ ಸ್ವಯಂ ನಿಯಂತ್ರಣವಂತೂ ಇಲ್ಲವೇ ಇಲ್ಲ. ಅದಲ್ಲದೆ, ಈ ಎರಡರ ಮಧ್ಯೆ ಪರಸ್ಪರ ನಂಟೂ ಇದೆ. ಮುದ್ರಣ ಮಾಧ್ಯಮದಲ್ಲಿಯೂ ಎಲ್ಲವೂ ಸರಿ ಇದೆ ಎಂದು ಹೇಳಲಾಗದು. ಆದರೆ, ಇಲ್ಲಿ ಕಾನೂನಿಗೆ ಸ್ವಲ್ಪಮಟ್ಟಿನ ಉತ್ತರದಾಯಿತ್ವ ಇದೆ. ಮುಖ್ಯ ನ್ಯಾಯ
ಮೂರ್ತಿಯವರೇ ಹೇಳಿದಂತೆ, ನ್ಯಾಯಾಂಗದ ವ್ಯಾಪ್ತಿಯಲ್ಲಿರುವ ವಿಚಾರಗಳು ಅಥವಾ ಮಾನ ಹಾನಿಕಾರಕ ವಿಚಾರಗಳಿಗೆ ಸಂಬಂಧಿಸಿ ಇಲ್ಲಿ ಹೆಚ್ಚು ಎಚ್ಚರಿಕೆ ಇದೆ. ಮುಖ್ಯ ನ್ಯಾಯಮೂರ್ತಿಯವರು ಗಂಭೀರ ಸಮಸ್ಯೆಯೊಂದರತ್ತ ಬೊಟ್ಟು ಮಾಡಿದ್ದಾರೆ. ಆದರೆ, ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಸರ್ಕಾರದ ದುರ್ಬಳಕೆಗೆ ನಿಲುಕದ ರೀತಿಯ ಪರಿಣಾಮಕಾರಿ ನಿಯಂತ್ರಣ ವ್ಯವಸ್ಥೆ ರೂಪಿಸುವುದು ಕೂಡ ಕಷ್ಟವೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT