ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ನರ್ಸಿಂಗ್‌ ಕಾಲೇಜು, ಲೋಪ ಪತ್ತೆಜತೆಗೆ ಸುಧಾರಣೆಗೂ ಗಮನವಿರಲಿ

Last Updated 23 ಮಾರ್ಚ್ 2021, 19:31 IST
ಅಕ್ಷರ ಗಾತ್ರ

2020–21ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆಯು 47 ನರ್ಸಿಂಗ್‌ ಕಾಲೇಜುಗಳು ಮತ್ತು ಅರೆ ವೈದ್ಯಕೀಯ ಕೋರ್ಸ್‌ಗಳ 45 ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡಿರುವುದರಲ್ಲಿ ದೊಡ್ಡ ಪ್ರಮಾಣದ ಅಕ್ರಮ ನಡೆದಿದೆ ಎಂಬ ಆರೋಪ ವಿಧಾನ ಪರಿಷತ್‌ನಲ್ಲಿ ಕೇಳಿಬಂದಿದೆ. ಆಡಳಿತಾರೂಢ ಬಿಜೆಪಿಯ ಸದಸ್ಯರೇ ಈ ವಿಚಾರವನ್ನು ಪರಿಷತ್‌ನಲ್ಲಿ ಚರ್ಚೆಯ ಮುನ್ನೆಲೆಗೆ ತಂದರು. ಅದನ್ನೇ ಅಸ್ತ್ರವಾಗಿಸಿಕೊಂಡ ಜೆಡಿಎಸ್‌ ಸದಸ್ಯರು ಸದನ ಸಮಿತಿ ರಚನೆಗೆ ಆಗ್ರಹಿಸಿ ಮೂರು ದಿನ ಧರಣಿ ನಡೆಸಿದರು. ವಿರೋಧ ಪಕ್ಷದ ಸದಸ್ಯರ ಹೋರಾಟಕ್ಕೆ ಮಣಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ನರ್ಸಿಂಗ್‌ ಮತ್ತು ಅರೆ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡಿರುವ ಪ್ರಕ್ರಿಯೆ ಕುರಿತ ತನಿಖೆಗೆ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಎರಡೂ ಸದನಗಳ ಸದಸ್ಯರನ್ನು ಒಳಗೊಂಡ ಜಂಟಿ ಸದನ ಸಮಿತಿಯನ್ನು ರಚಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ರಾಜ್ಯದಲ್ಲಿ ಖಾಸಗಿ ವೈದ್ಯಕೀಯ, ನರ್ಸಿಂಗ್‌ ಮತ್ತು ಅರೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಆರಂಭಕ್ಕೆ ಅನುಮತಿ ನೀಡುವಾಗ ಪ್ರಭಾವ, ಒತ್ತಡ ಮತ್ತು ಆಮಿಷಗಳಿಗೆ ಮಣಿದು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬ ಆರೋಪ ಬಹಳ ಹಿಂದಿನಿಂದಲೂ ಇದೆ. ಈ ಬಾರಿಯೂ ಮತ್ತೆ ಅದೇ ಆರೋಪ ಕೇಳಿಬಂದಿದೆ. 2019ರಲ್ಲೇ ನರ್ಸಿಂಗ್‌ ಮತ್ತು ಅರೆ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡಲು ಅರ್ಜಿ ಆಹ್ವಾನಿಸಲಾಗಿತ್ತು. ನರ್ಸಿಂಗ್‌ ಕಾಲೇಜುಗಳ ಆರಂಭಕ್ಕೆ 101 ಮತ್ತು ಅರೆ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ 70 ಅರ್ಜಿಗಳು ಸಲ್ಲಿಕೆಯಾಗಿದ್ದವು. ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಸೆನೆಟ್‌, ಸ್ಥಳೀಯ ಪರಿಶೀಲನಾ ಸಮಿತಿಗಳ ವರದಿಗಳನ್ನು ಆಧರಿಸಿ 62 ನರ್ಸಿಂಗ್‌ ಕಾಲೇಜುಗಳು, 45 ಅರೆ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡಬಹುದು ಎಂದು ಶಿಫಾರಸು ಮಾಡಿತ್ತು. ಆದರೆ, ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ರಚಿಸಿ ಮತ್ತೊಮ್ಮೆ ದಾಖಲೆ ಪರಿಶೀಲಿಸಿದ ಬಳಿಕ 47 ನರ್ಸಿಂಗ್‌ ಮತ್ತು 45 ಅರೆ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಪರವಾನಗಿ ನೀಡಲಾಗಿದೆ

ಕಟ್ಟಡ, ತರಗತಿ ಕೊಠಡಿ, ಪ್ರಯೋಗಾಲಯ, ಬೋಧನಾ ಆಸ್ಪತ್ರೆ ಸೇರಿದಂತೆ ಯಾವುದೇ ಮೂಲಸೌಕರ್ಯ ಹೊಂದಿಲ್ಲದ ಕೆಲವು ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ ಎಂಬ ಆರೋಪವಿದೆ. ಕೆಲವು ಸಂಸ್ಥೆಗಳಿಗೆ ಒಂದೇ ಕಟ್ಟಡದ ವಿಳಾಸದಲ್ಲಿ ಎರಡಕ್ಕಿಂತ ಹೆಚ್ಚು ಕಾಲೇಜುಗಳಿಗೆ ಅನುಮತಿ ನೀಡಿರುವ ದೂರುಗಳೂ ಇವೆ. ಈ ರೀತಿ ಅನುಮತಿ ಪಡೆದ ಕಾಲೇಜುಗಳಲ್ಲಿ ತರಗತಿ ನಡೆಸದೆ ನೇರವಾಗಿ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗುತ್ತಿದೆ ಮತ್ತು ವಿದ್ಯಾರ್ಥಿಗಳು ತಾವು ಇರುವ ಸ್ಥಳದಿಂದಲೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ ಎಂದು ವಿಧಾನ ಪರಿಷತ್‌ನ ಸದಸ್ಯರು ಪಕ್ಷಭೇದ ಮರೆತು ಆಪಾದಿಸಿದ್ದಾರೆ. ಅದು ನಿಜವೇ ಆಗಿದ್ದಲ್ಲಿ, ಅಗತ್ಯ ತರಬೇತಿ ಮತ್ತು ಶಿಕ್ಷಣವನ್ನೇ ಪಡೆಯದವರು ಅಕ್ರಮವಾಗಿ ನರ್ಸಿಂಗ್‌ ಮತ್ತು ಅರೆ ವೈದ್ಯಕೀಯ ಕೋರ್ಸ್‌ಗಳ ಪದವಿ ಪ್ರಮಾಣಪತ್ರ ಪಡೆದು ದೇಶದ ಆರೋಗ್ಯ ಕ್ಷೇತ್ರವನ್ನು ಪ್ರವೇಶಿಸಲು ಸರ್ಕಾರವೇ ಬಾಗಿಲು ತೆರೆದಂತಾಗುತ್ತದೆ. ಕೆಲವು ವೈದ್ಯಕೀಯ ಕಾಲೇಜುಗಳು ಮಾತ್ರವಲ್ಲ ನರ್ಸಿಂಗ್‌ ಮತ್ತು ಅರೆ ವೈದ್ಯಕೀಯ ಕಾಲೇಜುಗಳಲ್ಲೂ ಆಡಳಿತ ಮಂಡಳಿ ಕೋಟಾದಡಿ ಪ್ರವೇಶ ಪಡೆದವರಿಗೆ ಪ್ರತ್ಯೇಕವಾಗಿ ‘ಪ್ಯಾಕೇಜ್‌’ ಪಡೆದು ಪರೀಕ್ಷೆ ನಡೆಸುವ ವ್ಯವಸ್ಥೆ ಇದೆ ಎಂಬುದಕ್ಕೆ ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ನಡೆಸಿದ ಶೋಧದ ವೇಳೆ ಸಾಕ್ಷ್ಯಗಳು ಪತ್ತೆಯಾಗಿವೆ. ನರ್ಸಿಂಗ್‌ ಮತ್ತು ಅರೆ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡುವ ಹಂತದಲ್ಲೇ ಅಕ್ರಮ ನಡೆದಿದೆ ಎಂಬ ಆರೋಪದ ಕುರಿತು ತನಿಖೆ ನಡೆಸಲು ಜಂಟಿ ಸದನ ಸಮಿತಿ ರಚಿಸುವ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾದುದು. ವೈದ್ಯಕೀಯ ಶಿಕ್ಷಣ ಸಚಿವ ಮತ್ತು ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧ ಸದನದಲ್ಲೇ ನೇರ ಆರೋಪ ವ್ಯಕ್ತವಾಗಿದೆ. ಎಲ್ಲ ಆರೋಪಗಳ ಕುರಿತು ಮುಕ್ತವಾಗಿ ತನಿಖೆ ನಡೆಸಲು ಸದನ ಸಮಿತಿಗೆ ಅವಕಾಶ ಕಲ್ಪಿಸಬೇಕಾದ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಆರೋಗ್ಯ ಕ್ಷೇತ್ರದ ಮೇಲೆ ತೀವ್ರವಾದ ಪರಿಣಾಮ ಬೀರಬಲ್ಲ ಈ ವಿಚಾರದ ಕುರಿತು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಬೇಕು. ಅಕ್ರಮಗಳು ನಡೆದಿದ್ದರೆ ಬಯಲಿಗೆ ತರುವುದಷ್ಟೇ ಅಲ್ಲ, ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡುವ ವಿಚಾರದಲ್ಲಿ ಮುಂದೆಂದೂ ಇಂತಹ ಲೋಪಗಳಿಗೆ ಅವಕಾಶವಾಗದಂತಹ ಬಿಗಿಯಾದ ವ್ಯವಸ್ಥೆಯೊಂದನ್ನು ರೂಪಿಸುವ ಬಗ್ಗೆಯೂ ಸದನ ಸಮಿತಿ ಶಿಫಾರಸು ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT