ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ನಾಲ್ಕನೇ ಅಲೆ ಸಾಧ್ಯತೆ ಸ್ವಯಂಪ್ರೇರಿತ ಮುನ್ನೆಚ್ಚರಿಕೆ ಅಗತ್ಯ

Last Updated 26 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಕೋವಿಡ್‌ನ ನಾಲ್ಕನೇ ಅಲೆ ಕಾಡಬಹುದಾದ ಸಾಧ್ಯತೆಯ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮಾರ್ಗಸೂಚಿ ಗೊತ್ತುಪಡಿಸಿರುವುದು ರಾಜ್ಯ ಸರ್ಕಾರಕ್ಕೆ ಅನಿವಾರ್ಯವಾಗಿದ್ದ ಕ್ರಮ. ದೆಹಲಿ, ಹರಿಯಾಣ ಮತ್ತು ತಮಿಳುನಾಡಿನಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರುಮುಖದಲ್ಲಿದೆ. ಬೆಂಗಳೂರಿನಲ್ಲಿ ಕೋವಿಡ್‌ ದೃಢ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಏರಿಕೆಯ ಕಾರಣದಿಂದಾಗಿ ಕೊರೊನಾ ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಸಾರ್ವಜನಿಕ ಜಾಗೃತಿ ಮೂಡಿಸುವುದು ಅಗತ್ಯವಾಗಿತ್ತು. ಕೊರೊನಾ ಪ್ರಕರಣಗಳು ವಿರಳಗೊಂಡ ಹಿನ್ನೆಲೆಯಲ್ಲಿ, ಬೆಂಗಳೂರನ್ನು ಹೊರತುಪಡಿಸಿ ರಾಜ್ಯದ ಉಳಿದೆಡೆಗಳಲ್ಲಿ ಮಾಸ್ಕ್‌ ಧರಿಸುವವರ ಸಂಖ್ಯೆ ತೀರಾ ಕಡಿಮೆಯಾಗಿತ್ತು. ಕೊರೊನಾ ಕಾರಣದಿಂದಾಗಿ ಎರಡು ವರ್ಷಗಳಿಂದ ಕ್ಷೀಣಿಸಿದ್ದ ಯುಗಾದಿ ಹಬ್ಬದ ಸಂಭ್ರಮ ಈ ಬಾರಿ ಗರಿಗೆದರಿತ್ತು. ರಾಜ್ಯದ ವಿವಿಧ ಭಾಗಗಳಲ್ಲಿ ಜಾತ್ರೆ–ರಥೋತ್ಸವಗಳು ಸಾವಿರಾರು ಜನರ ಹಾಜರಿಯಲ್ಲಿ ಅದ್ಧೂರಿಯಾಗಿ ನಡೆದಿದ್ದವು. ಸಾರ್ವಜನಿಕ ಬದುಕು ಹಳಿಗೆ ಮರಳುತ್ತಿರುವ ಸಂದರ್ಭದಲ್ಲೇ ಕೊರೊನಾ ಸೋಂಕಿನ ಪ್ರಮಾಣ ಮತ್ತೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳ, ಒಳಾಂಗಣ ಮತ್ತು ಪ್ರಯಾಣದ ಸಂದರ್ಭದಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸುವ ನಿರ್ಧಾರಕ್ಕೆ ಸರ್ಕಾರ ಇನ್ನೂ ಬಂದಿಲ್ಲವಾದರೂ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ದಂಡ ಹಾಕುವುದಾಗಿ ಎಚ್ಚರಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಎರಡು ಅಡಿ ಭೌತಿಕ ಅಂತರ ಕಾಯ್ದುಕೊಳ್ಳುವಂತೆಯೂ ಸೂಚಿಸಿದೆ. ಸರ್ಕಾರದ ಈ ಮಾರ್ಗಸೂಚಿಯನ್ನು ಹೇರಿಕೆಯೆಂದು ಭಾವಿಸದೆ, ವೈಯಕ್ತಿಕ ಹಾಗೂ ಸಮುದಾಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಸ್ವಯಂಪ್ರೇರಣೆಯಿಂದ ಪಾಲಿಸಬೇಕಾಗಿದೆ. ಕೊರೊನಾದ ಮೊದಲ ಎರಡು ಅಲೆಗಳಲ್ಲಿ ಎದುರಿಸಿದ ಸಾವುನೋವುಗಳ ಪಾಠ ಸುಲಭಕ್ಕೆ ಮರೆಯುವಂತಹದ್ದಲ್ಲ. ಮೂರನೇ ಅಲೆಯು ಸೌಮ್ಯವಾಗಿದ್ದ ಕಾರಣ ಹೆಚ್ಚು ಸಾವುನೋವಿಲ್ಲದೆ ಅದನ್ನು ಎದುರಿಸಲು ಸಾಧ್ಯವಾಗಿತ್ತು. ಈಗ ನಾಲ್ಕನೇ ಅಲೆಯ ಆತಂಕ ಎದುರಾಗಿದ್ದು, ಮುನ್ನೆಚ್ಚರಿಕೆಯ ವಿವೇಕ ಹಾಗೂ ಸಂಯಮವನ್ನು ಪ್ರದರ್ಶಿಸಬೇಕಾಗಿದೆ. ಕೊರೊನಾ ನಿಯಂತ್ರಣದ ಉದ್ದೇಶದಿಂದ ಜಾರಿಗೆ ತರಲಾಗಿದ್ದ ಲಾಕ್‌ಡೌನ್‌ಗಳು ಜನಸಾಮಾನ್ಯರನ್ನು ಇನ್ನಿಲ್ಲದಂತೆ ನಲುಗಿಸಿವೆ. ಮತ್ತೊಂದು ಲಾಕ್‌ಡೌನ್‌ಗೆ ಅವಕಾಶ ಕಲ್ಪಿಸದಿರುವ ಸಾಧ್ಯತೆ ಸಾರ್ವಜನಿಕರ ಕೈಯಲ್ಲೇ ಇದೆ. ಚೀನಾದ ಬೀಜಿಂಗ್‌, ಶಾಂಘೈನಲ್ಲಿ ಕೊರೊನಾ ಪ್ರಕರಣಗಳು ಹಾಗೂ ಸಾವುಗಳ ಸಂಖ್ಯೆ ಏರುತ್ತಿದೆ. ಅಂಥ ಸನ್ನಿವೇಶ ನಮ್ಮಲ್ಲಿ ಸೃಷ್ಟಿಯಾಗದಿರುವಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಬದ್ಧತೆಯನ್ನು ಸಮಾಜ ಮೈಗೂಡಿಸಿಕೊಳ್ಳಬೇಕಾಗಿದೆ.

ಮುನ್ನೆಚ್ಚರಿಕೆ ಲಸಿಕೆ ಪಡೆಯುವುದು ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುವ ಅಂಶ ಎಂದು ಸರ್ಕಾರ ಹಾಗೂ ಲಸಿಕೆ ತಯಾರಿಕಾ ಸಂಸ್ಥೆಗಳು ಸಾರ್ವಜನಿಕರಿಗೆ ಕಿವಿಮಾತು ಹೇಳುತ್ತಿವೆ. ಮೊದಲೆರಡು ಡೋಸ್‌ಗಳನ್ನು ಉಚಿತವಾಗಿ ನೀಡಿದ್ದರಿಂದಾಗಿ, ಲಸಿಕೆ ಪಡೆದವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿತ್ತು. ಈಗ ಮುನ್ನೆಚ್ಚರಿಕೆ ಲಸಿಕೆಯನ್ನು ಹಣ ಪಾವತಿಸಿ ಪಡೆಯಬೇಕಾಗಿರುವುದರಿಂದ, ಎಲ್ಲರೂ ಲಸಿಕೆಯನ್ನು ಪಡೆಯುತ್ತಾರೆಂದು ನಿರೀಕ್ಷಿಸುವುದು ಸಾಧ್ಯವಿಲ್ಲ. ಆದರೆ, ಹಿರಿಯ ನಾಗರಿಕರಿಗೆ ಸರ್ಕಾರ ನೀಡುತ್ತಿರುವ ಉಚಿತ ಲಸಿಕೆಯನ್ನು 60 ವರ್ಷ ಮೇಲ್ಪಟ್ಟ ಎಲ್ಲರೂ ಪಡೆಯುವುದು ಒಳ್ಳೆಯದು. ಹಣ ಭರಿಸಲು ಸಾಧ್ಯವಾಗದ ದುರ್ಬಲ ವರ್ಗದವರಿಗೆ ಉಚಿತವಾಗಿ ಲಸಿಕೆ ನೀಡುವ ಸಾಧ್ಯತೆಯನ್ನು ಸರ್ಕಾರ ಪರಿಶೀಲಿಸಬೇಕು. ಪ್ರಸ್ತುತ ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರಲ್ಲಿ ಲಸಿಕೆ ಪಡೆಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿ ಕೂಡ ಲಸಿಕೆಯ ಮಹತ್ವವನ್ನು ದೃಢಪಡಿಸುವಂತಿದೆ. ಹಾಗಾಗಿ, ಆದಷ್ಟೂ ಹೆಚ್ಚು ಜನರು ಲಸಿಕೆ ಪಡೆಯಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ಸಾರ್ವಜನಿಕರಿಗೆ ಮಾರ್ಗದರ್ಶಿ ಸೂತ್ರಗಳನ್ನು ಗೊತ್ತುಪಡಿಸಿ, ‘ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ’ ಎಂದು ಹೇಳಿದಷ್ಟಕ್ಕೆ ಸರ್ಕಾರದ ಕರ್ತವ್ಯ ಮುಗಿಯುವುದಿಲ್ಲ. ಲಸಿಕೆ ಅಭಿಯಾನದ ಜೊತೆಗೆ, ಆರೋಗ್ಯ ವಲಯವನ್ನು ಸದೃಢಗೊಳಿಸಲು ಈಗಿನಿಂದಲೇ ಸಿದ್ಧತೆ ನಡೆಸುವುದು ಅಗತ್ಯ. ಆಸ್ಪತ್ರೆಗಳು ತಮ್ಮ ಮೂಲಭೂತ ಸೌಕರ್ಯಗಳನ್ನು ಪುನರ್‌ ಪರಿಶೀಲಿಸಿಕೊಂಡು ಕೊರೊನಾ ಸೋಂಕನ್ನು ಎದುರಿಸಲು ಸಜ್ಜಾಗಬೇಕಾಗಿದೆ. ಮೇ 16ರಿಂದ ಶಾಲೆಗಳು ಆರಂಭಗೊಳ್ಳುತ್ತಿವೆ. 5ರಿಂದ 12 ವಯೋಮಾನದ ಮಕ್ಕಳಿಗೆ ತುರ್ತು ಬಳಕೆಗಾಗಿ ಎರಡು ಲಸಿಕೆಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಅವಕಾಶವನ್ನು ಬಳಸಿಕೊಂಡು, ಶಾಲಾ ಮಕ್ಕಳನ್ನು ಲಸಿಕೆಯ ಸುರಕ್ಷಿತ ಆವರಣದೊಳಗೆ ತರುವುದಕ್ಕೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಸರ್ಕಾರ ತ್ವರಿತವಾಗಿ ಮಾಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT