ಭಾನುವಾರ, ಏಪ್ರಿಲ್ 5, 2020
19 °C

ಸಂಪಾದಕೀಯ | ಪರಿಹಾರ ಪ್ಯಾಕೇಜ್‌ ಸ್ವಾಗತಾರ್ಹ, ಎಲ್ಲ ದಿನಗೂಲಿಗಳಿಗೂ ನೆರವು ಸಿಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ–2 ವೈರಸ್ ವಿರುದ್ಧ ಹೋರಾಡುವ ದಿಸೆಯಲ್ಲಿ ಮೂರು ವಾರಗಳ ಕಾಲ ಇಡೀ ದೇಶವೇ ಸ್ತಬ್ಧಗೊಳ್ಳುತ್ತಿದೆ. ಮಾನವ ಸಂಪರ್ಕದ ಮೂಲಕ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ದೇಶದಾದ್ಯಂತ ದಿಗ್ಬಂಧನ ವಿಧಿಸಿರುವುದು ಅನಿವಾರ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಟಲಿ, ಸ್ಪೇನ್‌, ಇರಾನ್‌, ಫ್ರಾನ್ಸ್‌, ಅಮೆರಿಕ ಮುಂತಾದ ದೇಶಗಳಲ್ಲಿ ಕೋವಿಡ್– 19 ರೋಗಕ್ಕೆ ಜನ ಬಲಿ ಆಗಿರುವ ಪ್ರಮಾಣವನ್ನು ಗಮನಿಸಿದರೆ, ನಾವು ವಹಿಸುತ್ತಿರುವ ಮುನ್ನೆಚ್ಚರಿಕೆ ಕ್ರಮಗಳ ಅಗತ್ಯದ ಅರಿವಾಗುತ್ತದೆ. ದಿನನಿತ್ಯದ ಆವಶ್ಯಕ ಸೇವೆಗಳ ಹೊರತಾಗಿ ಉಳಿದೆಲ್ಲ ಅಂಗಡಿ ಮುಂಗಟ್ಟುಗಳೂ ಉದ್ಯಮಗಳೂ ಬಾಗಿಲು ಮುಚ್ಚಿವೆ.

ಈ ಬಂದ್‍ನ ನೇರ ಹೊಡೆತ ಬೀಳುತ್ತಿರುವುದು ಆಯಾ ದಿನ ದುಡಿದರೆ ಮಾತ್ರ ಊಟ ಸಿಗುವ ದಿನಗೂಲಿಗಳು ಮತ್ತು ಆಸರೆಯೇ ಇಲ್ಲದ ನಿರ್ಗತಿಕ ಒಂಟಿಜೀವಗಳ ಮೇಲೆ. ಸಂಘಟಿತ ವಲಯದ ಕಾರ್ಮಿಕರಿಗೆ ಕಷ್ಟ ಅನ್ನಿಸಬಹುದಾದರೂ ಅಸಂಘಟಿತ ವಲಯದ ಕಾರ್ಮಿಕರ ಗೋಳು ಇನ್ನಷ್ಟು ವಿಪರೀತ. ದುಡಿಯಲು ಕೆಲಸವೇ ಇಲ್ಲದಿದ್ದರೆ ಅವರು ಬದುಕುವುದಾದರೂ ಹೇಗೆ? ಕೊರೊನಾ– 2 ವೈರಸ್‍ಗಿಂತ ಭೀಕರವಾಗಿ ಹಸಿವು ಇವರನ್ನು ಕಾಡಬಹುದು. ಕೃಷಿ ಕೂಲಿಕಾರ್ಮಿಕರಿಗೆ ಆಸರೆಯಾಗಿದ್ದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯೂ (ಮನರೇಗಾ) ಸ್ಥಗಿತಗೊಂಡಿದೆ.

ದೇಶದಾದ್ಯಂತ ಕೋಟ್ಯಂತರ ಸಂಖ್ಯೆಯಲ್ಲಿರುವ ದಿನಗೂಲಿಗಳು, ಗುತ್ತಿಗೆ ನೌಕರರು, ಸಣ್ಣಪುಟ್ಟ ಸ್ವಉದ್ಯೋಗಗಳನ್ನು ನಡೆಸಿ ಅಂದಿನ ಅನ್ನವನ್ನು ಅಂದೇ ಗಳಿಸಿಕೊಳ್ಳುವ ಜನರು ಕೆಲಸವಿಲ್ಲದೆ ಮನೆಯಲ್ಲಿ ಕೂರುವಂತಾಗಿದೆ. ಒಂದು ಅಂದಾಜಿನ ಪ್ರಕಾರ, ಉದ್ಯೋಗ ಖಾತರಿ ಯೋಜನೆಯಡಿ ದೇಶದಲ್ಲಿ 26 ಕೋಟಿ ಕಾರ್ಮಿಕರು ಹೆಸರು ನೋಂದಾಯಿಸಿಕೊಂಡಿದ್ದರು. ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಯೋಜನೆಯಡಿ 7.75 ಕೋಟಿ ಜನರು ಕೆಲಸ ಮಾಡುತ್ತಿದ್ದರು. ಇವರೆಲ್ಲ ಈಗ ಅತಂತ್ರರಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇವರತ್ತ ತುರ್ತು ಗಮನ ಹರಿಸಬೇಕಾದ ಅಗತ್ಯವಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ₹ 1.70 ಲಕ್ಷ ಕೋಟಿ ಮೊತ್ತದ ಪರಿಹಾರ ಪ್ಯಾಕೇಜ್ ಪ್ರಕಟಿಸಿದ್ದಾರೆ. ಜನಧನ್ ಖಾತೆ ಹೊಂದಿರುವ ಮಹಿಳೆಯರಿಗೆ ತಿಂಗಳಿಗೆ ₹ 500ರಂತೆ ಮೂರು ತಿಂಗಳು ಹಣ ನೀಡುವುದು, 80 ಕೋಟಿ ಬಡವರಿಗೆ 5 ಕೆ.ಜಿ. ಉಚಿತ ಆಹಾರ ಪದಾರ್ಥ, ನೇರ ನಗದು ವರ್ಗಾವಣೆ ಯೋಜನೆಯಡಿ 8.6 ಕೋಟಿ ರೈತರಿಗೆ ಏಪ್ರಿಲ್ ಮೊದಲ ವಾರ ತಲಾ
₹ 2,000 ನೀಡುವುದು, ಕಾರ್ಮಿಕರ 3 ತಿಂಗಳ ಇಪಿಎಫ್ ಮೊತ್ತವನ್ನು ಸರ್ಕಾರವೇ ಭರಿಸುವುದು... ಮುಂತಾದ ಕ್ರಮಗಳು ಈ ಪ್ಯಾಕೇಜ್‍ನಲ್ಲಿ ಸೇರಿವೆ. ದೇಶದಾದ್ಯಂತ 3.5 ಕೋಟಿ ನೋಂದಾಯಿತ ಕಟ್ಟಡ ಕಾರ್ಮಿಕರಿದ್ದು, ಅವರಿಗೆ ಮೀಸಲಿಟ್ಟಿರುವ ₹ 31,000 ಕೋಟಿಯಷ್ಟು ನಿಧಿಯನ್ನು  ಬಳಸಿಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸಚಿವೆ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ 21 ಲಕ್ಷ ಕಟ್ಟಡ ಕಾರ್ಮಿಕರಿಗೆ ತಲಾ ₹ 1 ಸಾವಿರ ಪರಿಹಾರ ನೀಡುವುದಾಗಿ ಇತ್ತೀಚೆಗೆ ಪ್ರಕಟಿಸಿದ್ದಾರೆ. ಘೋಷಿತ ನೆರವು ಅರ್ಹರಿಗೆ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ತಲುಪಲಿದೆ ಎಂಬುದರ ಮೇಲೆ ಸರ್ಕಾರದ ಕ್ರಮಗಳ ಸಾರ್ಥಕ್ಯ ಅಡಗಿದೆ. ಪ್ರತಿದಿನ ಮೂಟೆ ಹೊತ್ತು ಕೂಲಿ ಪಡೆಯುವ ಕಾರ್ಮಿಕರ ಸಂಖ್ಯೆ ರಾಜ್ಯದಲ್ಲಿ ಸುಮಾರು 4 ಲಕ್ಷದಷ್ಟಿದೆ. ಇದರಲ್ಲಿ, ಎಪಿಎಂಸಿ ಹಮಾಲಿಗಳು ಸಂಘಟಿತ ವಲಯದಡಿ ಬರುತ್ತಾರೆ. ಅವರ ಸಂಖ್ಯೆ ಹೆಚ್ಚೆಂದರೆ 25 ಸಾವಿರ ದಾಟುವುದಿಲ್ಲ.

ಬಸ್‌ ನಿಲ್ದಾಣ, ಮಾರುಕಟ್ಟೆ, ಮಿಲ್‍ ಮುಂತಾದೆಡೆ ಮೂಟೆ ಹೊರುವ ಕಾರ್ಮಿಕರಿಗೆ ಸರ್ಕಾರದ ಈ ಪರಿಹಾರ ತಲುಪುವ ಬಗೆ ಹೇಗೆ? ರಾಜ್ಯದಲ್ಲಿ ಬಿಸಿಯೂಟದ ಕಾರ್ಮಿಕರು ಸುಮಾರು ಒಂದು ಲಕ್ಷದಷ್ಟಿದ್ದು, ಶಾಲೆಗಳು ಮುಚ್ಚಿರುವುದರಿಂದ ಅವರೂ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಬೆಂಗಳೂರು ಸಹಿತ ರಾಜ್ಯದಾದ್ಯಂತ ಬಾಗಿಲು ಮುಚ್ಚಿರುವ ಗಾರ್ಮೆಂಟ್ಸ್‌ ಕಾರ್ಮಿಕರ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ಬೀದಿ ಬದಿ ವ್ಯಾಪಾರಿಗಳ ಪರಿಸ್ಥಿತಿ ಇನ್ನಷ್ಟು ದಯನೀಯವಾಗಿದೆ. ಪ್ಲಾಂಟೇಶನ್ ಕಾರ್ಮಿಕರು, ಬೀಡಿ ಕಾರ್ಮಿಕರು, ಆಟೊ ಚಾಲಕರು, ಕಾರು ಬಾಡಿಗೆಗೆ ಓಡಿಸುವ ಚಾಲಕರ ಭವಿಷ್ಯವೂ ಅತಂತ್ರವಾಗಿದೆ. ಈ ಬಗೆಯ ಎಲ್ಲ ವರ್ಗಗಳ ನೋವಿಗೂ ಸರ್ಕಾರ ಮಿಡಿಯಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು