ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಬಿಡಿಎ: ಪ್ರಭಾವಿಗಳಿಗೆ ಮಣೆ ಹೊಣೆಗೇಡಿ ವರ್ತನೆ ಅಕ್ಷಮ್ಯ

Last Updated 28 ಆಗಸ್ಟ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು ಮಹಾನಗರ ಪ್ರದೇಶದ ವ್ಯಾಪ್ತಿಯಲ್ಲಿ ಬಡಾವಣೆಗಳನ್ನು ನಿರ್ಮಿಸಿ, ಅರ್ಹರಿಗೆ ಕೈಗೆಟಕುವ ದರದಲ್ಲಿ ವಸತಿ ಸೌಲಭ್ಯ ಕಲ್ಪಿಸುವುದು ಮತ್ತು ಇಡೀ ನಗರಕ್ಕೆ ಸುಸಜ್ಜಿತವಾದ ಮೂಲಸೌಕರ್ಯ ಒದಗಿಸುವ ಆಶಯದಿಂದ ಸ್ಥಾಪಿತವಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಭ್ರಷ್ಟಾಚಾರ, ದುರಾಡಳಿತದ ಕೂಪವಾಗಿ ಪರಿವರ್ತನೆಯಾಗಿದೆ. 1976ರಲ್ಲಿ ಅಸ್ತಿತ್ವಕ್ಕೆ ಬಂದ ಬಿಡಿಎ ಕೆಲವು ದಶಕಗಳಿಂದ ಈಚೆಗೆ ‘ಭ್ರಷ್ಟಾಚಾರ ಅಭಿವೃದ್ಧಿ ಪ್ರಾಧಿಕಾರ’ವಾಗಿ ಬದಲಾಗಿದೆ. ವಸತಿ ಬಡಾವಣೆಗಳ ನಿರ್ಮಾಣಕ್ಕೆ ಭೂಸ್ವಾಧೀನ, ಜಮೀನು ಮಾಲೀಕರಿಗೆ ಪರಿಹಾರ ವಿತರಣೆ, ಬಡಾವಣೆಗೆ ಗುರುತಿಸಿದ ಜಮೀನುಗಳನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವುದು (ಡಿನೋಟಿಫಿಕೇಷನ್‌), ಬಡಾವಣೆ ನಿರ್ಮಾಣ ಮತ್ತು ನಗರ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಕಾಮಗಾರಿಗಳಲ್ಲಿ ಭ್ರಷ್ಟಾಚಾರದ ಆರೋಪ ನಿರಂತರವಾಗಿ ಕೇಳಿಬರುತ್ತಲೇ ಇದೆ. ರಾಜಧಾನಿಯ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಬೇಕಿದ್ದ ಇಂತಹ ಪ್ರಾಧಿಕಾರವನ್ನು ಹಾಳುಗೆಡಹುವಲ್ಲಿ ಆಡಳಿತ ನಡೆಸಿದ ಎಲ್ಲ ಪಕ್ಷಗಳ ನಾಯಕರ ಪಾಲೂ ಇದೆ. ಮುಖ್ಯಮಂತ್ರಿಗಳಾಗಿದ್ದವರು, ಅವರ ಆಪ್ತ ಕೂಟವು ಈ ಪ್ರಾಧಿಕಾರವನ್ನು ಸಂಪದ್ಭರಿತವಾದ ಚಿನ್ನದ ಗಣಿಯನ್ನಾಗಿ ಮಾಡಿಕೊಂಡಿದ್ದಕ್ಕೆ ಬಿಡಿಎ ಇತಿಹಾಸದಲ್ಲಿ ನಡೆದಿರುವ ಅಕ್ರಮಗಳೇ ಸಾಕ್ಷ್ಯ ಒದಗಿಸುತ್ತವೆ. ಪ್ರಾಧಿಕಾರದ ಆಯಕಟ್ಟಿನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳಲ್ಲಿ ನಿಷ್ಕಳಂಕಿತರಾಗಿ ಹೊರಹೋದವರು ವಿರಳ ಎಂಬ ಸ್ಥಿತಿ ಇದೆ. ಭ್ರಷ್ಟಾಚಾರ ಮತ್ತು ದುರಾಡಳಿತದ ಕಾರಣಕ್ಕಾಗಿಯೇ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ನಿಂದ ಬಿಡಿಎ ಹಲವು ಬಾರಿ ಛೀಮಾರಿಗೆ ಒಳಗಾಗಿದೆ.

ಈ ಬಾರಿ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಬಿಡಿಎ, ಸುಪ್ರೀಂ ಕೋರ್ಟ್‌ನ ಆದೇಶವನ್ನೇ ಉಲ್ಲಂಘಿಸಿ ಪ್ರಭಾವಿಗಳಿಗೆ ಬದಲಿ ನಿವೇಶನ ಹಂಚಿಕೆ ಮಾಡಿದೆ. ‘ಅತಿಕ್ರಮಣಕಾರರಿಂದ ಮರುಸ್ವಾಧೀನಪಡಿಸಿಕೊಂಡಿರುವ ಅಥವಾ ಪೂರ್ಣ ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿನ ನಿವೇಶನಗಳನ್ನು ಹರಾಜಿನ ಮೂಲಕ ಮಾತ್ರ ಹಂಚಿಕೆ ಮಾಡಬೇಕು’ ಎಂದು 2021ರ ಅಕ್ಟೋಬರ್‌
ನಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದರೆ, ಸುಪ್ರೀಂ ಕೋರ್ಟ್‌ನ ಆದೇಶವನ್ನೂ ಧಿಕ್ಕರಿಸಿ ಬದಲಿ ನಿವೇಶನ ಹಂಚಿಕೆ ಮಾಡುವ ದರ್ಪವನ್ನು ಬಿಡಿಎ ತೋರಿದೆ. ಹಿಂದೆ ಪ್ರಾಧಿಕಾರದ ಆಯುಕ್ತರಾಗಿದ್ದ ಎಂ.ಬಿ.ರಾಜೇಶ್‌ ಗೌಡ ಇದಕ್ಕೆ ನೇರ ಹೊಣೆಗಾರರು. ಪರ್ಯಾಯ ನಿವೇಶನ ಹಂಚುವುದು ಕೇವಲ ಆಯುಕ್ತರ ವಿವೇಚನಾಧಿಕಾರವಲ್ಲ; ಆಡಳಿತ ಮಂಡಳಿಯೇ ಸಂಪೂರ್ಣ ಹೊಣೆ ಹೊರಬೇಕಾಗುತ್ತದೆ. ಪ್ರಭಾವಿಗಳಿಗೆ ನಿವೇಶನ ಹಂಚಿದ ಹೊಣೆಯನ್ನು ಬಿಡಿಎ ಅಧ್ಯಕ್ಷರೂ ಆಗಿರುವ ಶಾಸಕ ಎಸ್.ಆರ್. ವಿಶ್ವನಾಥ್ ಹಾಗೂ ಇನ್ನಿತರ ಸದಸ್ಯರೂ ಹೊರಬೇಕಾಗುತ್ತದೆ. ಗೃಹ ಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ಶಾಸಕ ವೀರಣ್ಣ ಚರಂತಿಮಠ, ರಾಜ್ಯಸಭೆಗೆ ಬಿಜೆಪಿಯಿಂದಲೇ ಆಯ್ಕೆಯಾಗಿದ್ದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದ ಬಸವರಾಜ ಪಾಟೀಲ ಸೇಡಂ, ಕೆಪಿಎಸ್‌ಸಿ ಸದಸ್ಯರಾಗಿದ್ದ ಎಂ. ನಾಗರಾಜ್ ಹಾಗೂ ನಗರಾಭಿವೃದ್ಧಿ ಇಲಾಖೆಯ ಉಪಕಾರ್ಯದರ್ಶಿ ಜಗದೀಶ ರೆಡ್ಡಿ ಅವರ ಹತ್ತಿರದ ಸಂಬಂಧಿಕರೊಬ್ಬರು ಸೇರಿದಂತೆ ಪ್ರಭಾವಿ ವ್ಯಕ್ತಿಗಳಿಗೆ ನ್ಯಾಯಾಲಯದ ಆದೇಶಕ್ಕೆ ವ್ಯತಿರಿಕ್ತವಾಗಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಹಲವು ವರ್ಷಗಳ ಹಿಂದೆ ಅಭಿವೃದ್ಧಿ ಪಡಿಸಿರುವ ಆರ್‌ಎಂವಿ ಬಡಾವಣೆಯಲ್ಲಿ ಈಗ ನಿವೇಶನಗಳ ಮೌಲ್ಯ ಬಹುಕೋಟಿ ರೂಪಾಯಿ.
ಪ್ರಭಾವಿಗಳಲ್ಲದೇ ಇರುವವರು ಇಂತಹ ಬಡಾವಣೆಯಲ್ಲಿ ಬದಲಿ ನಿವೇಶನದ ಹೆಸರಿನಲ್ಲಿ ನಿವೇಶನ ಪಡೆಯುವುದು ಅಸಾಧ್ಯ.

ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಿಂದ ಛೀಮಾರಿಗೆ ಒಳಗಾದ ಬಳಿಕ ನಿವೇಶನ ವಾಪಸ್ ಪಡೆಯುವುದಾಗಿ ಹೇಳಿಕೊಂಡಿರುವ ಬಿಡಿಎ, ಫಲಾನುಭವಿಗಳಿಗೆ ನೋಟಿಸ್ ಜಾರಿ ಮಾಡಿರುವುದಾಗಿಯೂ ಹೇಳಿದೆ. ಇದು, ಕಣ್ಣೊರೆಸುವ ತಂತ್ರ ಆಗಬಾರದು. ಈ ನಿವೇಶನ
ಗಳನ್ನು ಹಿಂಪಡೆದು ಹರಾಜಿನ ಮೂಲಕವೇ ಹಂಚಿಕೆ ಮಾಡಬೇಕು. ರಾಜೇಶ್‌ ಗೌಡ ಅವರನ್ನು ಬಿಡಿಎ ಆಯುಕ್ತರ ಹುದ್ದೆಯಿಂದ ವರ್ಗಾವಣೆ ಮಾಡಲಾಗಿದೆ. ಆದರೆ, ಶಿಸ್ತುಕ್ರಮ ಅಷ್ಟಕ್ಕೇ ಸೀಮಿತವಾಗಬಾರದು. ಬಿಡಿಎ ಅಧ್ಯಕ್ಷ ವಿಶ್ವನಾಥ್‌ ಸೇರಿದಂತೆ ಯಾರೇ ಈ ಪ್ರಕರಣದಲ್ಲಿ ತಪ್ಪೆಸಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವ ಬದ್ಧತೆಯನ್ನು ಸರ್ಕಾರ ಪ್ರದರ್ಶಿಸಬೇಕು.

ಇಂತಹ ಎಡವಟ್ಟುಗಳು ಬಿಡಿಎಗೆ ಹೊಸತೇನಲ್ಲ. ಸುಮಾರು ಎರಡು ದಶಕಗಳಿಂದ ಈಚೆಗೆ ಆಯುಕ್ತರಾಗಿದ್ದವರು ಮತ್ತು ಆಯಕಟ್ಟಿನ ಜಾಗದಲ್ಲಿದ್ದವರು ಇಂತಹ ತಪ್ಪುಗಳನ್ನು ಮಾಡುತ್ತಲೇ ಬಂದಿದ್ದಾರೆ. ಆಯಕಟ್ಟಿನ ಹುದ್ದೆಗಳಿಗೆ ಅಧಿಕಾರಿಗಳ ವರ್ಗಾವಣೆಯಲ್ಲಿ ನಡೆಯುವ ಭ್ರಷ್ಟಾಚಾರವೇ ಇಂತಹ ಅಕ್ರಮಗಳಿಗೆ ಮೂಲ. ಇದಕ್ಕೆ ಯಾವ ಪಕ್ಷದ ನೇತೃತ್ವದ ಸರ್ಕಾರವೂ ಹೊರತಲ್ಲ. ಹೀಗಾಗಿ ಪ್ರಾಧಿಕಾರದಲ್ಲಿ ನಡೆದಿರುವ ಅಕ್ರಮಗಳಿಗೆ ಅಧಿಕಾರ ನಡೆಸಿದ ಎಲ್ಲರೂ ಹೊಣೆಯಾಗುತ್ತಾರೆ. ಪ್ರಾಧಿಕಾರದಲ್ಲಿನ ಭ್ರಷ್ಟಾಚಾರವನ್ನು ಇಲ್ಲವಾಗಿಸಲು ಯಾರೊಬ್ಬರಿಗೂ ಮನಸ್ಸಿದ್ದಂತೆ ಕಾಣುತ್ತಿಲ್ಲ. ಅಧಿಕಾರದಲ್ಲಿ ಇರುವವರಿಗೆ ‘ಅಕ್ಷಯಪಾತ್ರೆ’ ಆಗಿರುವ ಬಿಡಿಎ, ಹೀಗೆಯೇ ಇರಬೇಕು ಎಂಬುದು ಅಧಿಕಾರಸ್ಥರ ಇಚ್ಛೆ ಆಗಿರುವಂತಿದೆ. ಕೋರ್ಟ್ ಚಾಟಿ ಬೀಸಿದ ಮೇಲಾದರೂ ಸರ್ಕಾರ ಎಚ್ಚೆತ್ತುಕೊಂಡು, ಪ್ರಾಧಿಕಾರದ ಕೊಳೆ ತೊಳೆಯಲಿ. ವ್ಯವಸ್ಥೆಯನ್ನು ಪಾರದರ್ಶಕವಾಗಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT