ಗುರುವಾರ , ನವೆಂಬರ್ 26, 2020
20 °C

ಸಂಪಾದಕೀಯ: ಕೋವಿಡ್‌ ಪ್ರಕರಣ: ಸಂಖ್ಯೆ ಇಳಿಕೆ ಮೈಮರೆಯಲು ಕಾರಣವಾಗದಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜ್ಯದಲ್ಲಿ ಮಾತ್ರವಲ್ಲ, ದೇಶದಾದ್ಯಂತ ಕೋವಿಡ್‌ ಪ್ರಕರಣಗಳು ಹಾಗೂ ಈ ಸಂಬಂಧದ ಸಾವಿನ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಕೊರೊನಾ ವೈರಸ್‌ ಕಾರಣದಿಂದ ಏಳೆಂಟು ತಿಂಗಳುಗಳಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಜನಸಮುದಾಯ ಎದುರಿಸುತ್ತಿರುವ ಆರ್ಥಿಕ, ಸಾಮಾಜಿಕ ಹಾಗೂ ಕೌಟುಂಬಿಕ ಸಂಕಷ್ಟ, ಜನಮನದಲ್ಲಿ ದಟ್ಟೈಸಿರುವ ತೀವ್ರ ಆತಂಕದ ಕಾರ್ಮೋಡದ ನಡುವೆ, ಇಂತಹದ್ದೊಂದು ಆಶಾದಾಯಕ ಸುದ್ದಿ ಮೂಡಿಸುವ ಭರವಸೆಯು ಬೆಲೆಕಟ್ಟಲಾಗದಂತಹದ್ದು. ರಾಜ್ಯದಲ್ಲಿ ಈ ತಿಂಗಳ ಪ್ರಾರಂಭದಲ್ಲಿ ದಿನವೂ 10 ಸಾವಿರ ದಾಟುತ್ತಿದ್ದ ಪ್ರಕರಣಗಳ ಸಂಖ್ಯೆ ಈಗ 3,100ರ ಆಸುಪಾಸಿಗೆ ತಗ್ಗಿರುವುದು, ಕೋವಿಡ್‌ ಲಸಿಕೆಯ ಅಭಿವೃದ್ಧಿಯಲ್ಲಿ ಪ್ರಗತಿ ಕಂಡುಬರುತ್ತಿರುವುದು ಜನರಲ್ಲಿ ತುಸು ನಿರಾಳಭಾವ ಮೂಡಿಸಿದೆ. ಆದರೆ, ಈ ವಿಷಯದಲ್ಲಿ ನಮ್ಮದು ಇನ್ನೂ ಪ್ರಪಾತದಂಚಿನ ಹಗ್ಗದ ಮೇಲಿನ ನಡಿಗೆಯೇ ಎಂಬ ಕಟು ವಾಸ್ತವವೂ ನಮ್ಮ ಮುಂದೆ ಇದೆ. ಈ ಕಾರಣಕ್ಕೇ ಕೊರೊನಾ ಸೋಂಕಿನ ವಿರುದ್ಧದ ಸಮರದಲ್ಲಿ ಮುಂದಿನ ಎರಡು ತಿಂಗಳು ನಿರ್ಣಾಯಕ ಘಟ್ಟ ಎಂದು ಹೇಳಿರುವ ತಜ್ಞರ ಮಾತು ಮೌಲಿಕವಾದುದು. ಮಾರುಕಟ್ಟೆಗಳಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ– ವಹಿವಾಟು ಚೇತರಿಕೆ ಕಂಡಿದೆ. ಅನ್‌ಲಾಕ್‌ ಭಾಗವಾಗಿ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ ಆರಂಭವಾಗಿವೆ. ಶೇ 50ರಷ್ಟು ಸೀಟು ಭರ್ತಿಗೆ ಮಾತ್ರ ಅವಕಾಶ ನೀಡಿ ಚಿತ್ರಮಂದಿರಗಳ ಬಾಗಿಲು ತೆರೆಯಲಾಗಿದೆ. ಆದರೆ ಪ್ರೇಕ್ಷಕರ ಸ್ಪಂದನ, ನಿರೀಕ್ಷೆಯಂತೆ ಇಲ್ಲ ಎಂಬ ವರದಿಗಳಿವೆ. ಸಾಮೂಹಿಕವಾಗಿ ಜನ ಸೇರುವ ಸ್ಥಳಗಳಿಗೆ ಬರಲು ನಾಗರಿಕರು ಇನ್ನೂ ಹಿಂದೇಟು ಹಾಕುತ್ತಿದ್ದಾರೆ. ಇದನ್ನು ಮುನ್ನೆಚ್ಚರಿಕೆಯ ಭಾಗವೆಂದೂ ಪರಿಗಣಿಸ ಬಹುದು. ಆದರೆ ಹಾಗೆಂದ ಮಾತ್ರಕ್ಕೆ ಎಲ್ಲರಲ್ಲೂ ಇಂತಹದ್ದೊಂದು ವಿವೇಕ ಮೂಡಿದೆ ಎನ್ನಲಾಗದು. ಇದಕ್ಕೆ ರಸ್ತೆಗಳಲ್ಲಿ, ವ್ಯಾಪಾರ ಸ್ಥಳಗಳಲ್ಲಿ ಸೂಕ್ತವಾಗಿ ಮಾಸ್ಕ್‌ ಧರಿಸದೆ, ಅಂತರ ಕಾಯ್ದುಕೊಳ್ಳದೆ ಸಂಚರಿಸುವ ಜನರೇ ಸಾಕ್ಷಿ. ಉಪಚುನಾವಣೆ ನಡೆಯುತ್ತಿರುವ ಶಿರಾ ಮತ್ತು ರಾಜರಾಜೇಶ್ವರಿ
ನಗರ ವಿಧಾನಸಭಾ ಕ್ಷೇತ್ರಗಳ ಪ್ರಚಾರದ ಸಂದರ್ಭದಲ್ಲಂತೂ ಎಗ್ಗಿಲ್ಲದೇ ಗುಂಪುಗುಂಪಾಗಿ ಜನ ಸೇರುತ್ತಿರುವ ದೃಶ್ಯಗಳು ಸಾಮಾನ್ಯ ಎಂಬಂತಾಗಿವೆ. ಹೇಳಿಕೇಳಿ ಕೊರೊನಾ ಸೋಂಕು ಸಾಂಕ್ರಾಮಿಕ. ಹೀಗಾಗಿ, ಯಾರೋ ಕೆಲವರು ಎಚ್ಚರಿಕೆ ವಹಿಸಿದ ಮಾತ್ರಕ್ಕೆ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರದು. ಈ ಸಾಮೂಹಿಕ ಪಿಡುಗನ್ನು ಎದುರಿಸುವ ವಿಧಾನವೂ ಸಾಮೂಹಿಕವಾಗಿಯೇ ಇರಬೇಕಾಗುತ್ತದೆ. ಎಚ್ಚರಿಕೆ ಸರಪಳಿಯ ಒಂದು ಕೊಂಡಿ ಸಡಿಲವಾದರೂ ಹತ್ತಾರು ಜನರಿಗೆ, ಆ ಮೂಲಕ ನೂರಾರು ಮಂದಿಗೆ ಅದರ ಬಿಸಿ ತಟ್ಟುತ್ತದೆ ಎಂಬುದು ಈಗಾಗಲೇ ನಮ್ಮೆಲ್ಲರ ಅರಿವಿಗೆ ಬಂದಿದೆ.

ಹಬ್ಬಗಳ ಸಾಲು ಆರಂಭವಾಗಿದೆ. ದಸರಾ ಮುಗಿದಿದೆ, ದೀಪಾವಳಿಗೆ ಬೆರಳೆಣಿಕೆಯಷ್ಟು ದಿನಗಳಿವೆ. ಯುಗಾದಿ, ಮಹಾಲಯ ಅಮಾವಾಸ್ಯೆ ಸಂದರ್ಭದಲ್ಲಿ ಮಾರುಕಟ್ಟೆಗಳಲ್ಲಿ ಮುನ್ನೆಚ್ಚರಿಕೆ ವಹಿಸದೆ, ಅಂತರ ಕಾಯ್ದುಕೊಳ್ಳದೆ ಖರೀದಿಗಾಗಿ ಜನ ಮುಗಿಬಿದ್ದದ್ದನ್ನು ಗಮನಿಸಿದವರಿಗೆ, ಜನ ಮರುಳೋ ಜಾತ್ರೆ ಮರುಳೋ ಎಂಬ ಗಾದೆ ನೆನಪಾಗದೇ ಇರಲಿಲ್ಲ. ಬಾಳಿನಲ್ಲಿ ಬೆಳಕು ಮೂಡಿಸುವ ಸದಾಶಯದ ದೀಪಾವಳಿಯಲ್ಲಿ ಪ್ರತೀ ಬಾರಿಯೂ ಬೆಳಕಿಗಿಂತ ಪಟಾಕಿಯ ಹಾವಳಿಯೇ ಹೆಚ್ಚು ಸದ್ದು ಮಾಡುತ್ತದೆ. ಪಟಾಕಿ ಹೊಡೆದು ಸಂಭ್ರಮಿಸುವವರಿಗಿಂತ ಅದರಿಂದಾಗುವ ಶಬ್ದ ಮಾಲಿನ್ಯ, ವಾಯುಮಾಲಿನ್ಯದಿಂದ ಸಂಕಷ್ಟ ಅನುಭವಿಸುವವರೇ ಹೆಚ್ಚು. ಪ್ರವಾಹ, ಬರಗಾಲದಂತಹ ನೈಸರ್ಗಿಕ ಪ್ರಕೋಪಗಳಿಗೂ ಪಟಾಕಿ ಮೇಲಿನ ಜನರ ವ್ಯಾಮೋಹಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಆದರೆ ಈ ಬಾರಿಯ ಸಂದರ್ಭ ಎಂದಿನಂತಲ್ಲ. ವಾಯುಮಾಲಿನ್ಯದಿಂದ ಕೋವಿಡ್‌–19 ರೋಗಿಗಳಲ್ಲಿ ಉಸಿರಾಟದ ತೊಂದರೆ ಉಲ್ಬಣಿಸುತ್ತದೆ ಎಂದು ತಜ್ಞ ವೈದ್ಯರು ಎಚ್ಚರಿಸಿದ್ದಾರೆ. ಇದರಿಂದ, ಮರಣ ಪ್ರಮಾಣ ಹೆಚ್ಚಾಗಬಹುದೆಂಬ ಆತಂಕವೂ ಇದೆ. ಹೀಗಾಗಿ, ಮಕ್ಕಳಲ್ಲಿ ಈ ಕುರಿತು ಅರಿವು ಮೂಡಿಸಿ ಪಟಾಕಿ ಹೊಡೆಯುವುದನ್ನು ನಿಯಂತ್ರಿಸುವ ಮಹತ್ವದ ಸವಾಲು ಪೋಷಕರ ಮುಂದಿದೆ. ಅವರು ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಯುರೋಪ್‌ ದೇಶಗಳಲ್ಲಿ ನಿಯಂತ್ರಣಕ್ಕೆ ಬಂದಿದ್ದ ಕೋವಿಡ್‌, ಜನ ಮೈಮರೆತ ಕಾರಣಕ್ಕೆ ಮತ್ತೆ ಏರುಮುಖವಾಗಿದ್ದನ್ನು ಕಂಡಿದ್ದೇವೆ. ಕೊರೊನಾ ನಿಯಂತ್ರಣದ ಮೂಲಕ ಮಾದರಿ ಯಾಗಿದ್ದ ಕೇರಳ, ಓಣಂ ವೇಳೆ ಮೈಮರೆತದ್ದಕ್ಕೆ ಭಾರಿ ಬೆಲೆಯನ್ನೇ ತೆತ್ತಿದೆ. ಈಗ, ಕೇರಳದಲ್ಲಿನ ಕೋವಿಡ್‌ ಪರಿಸ್ಥಿತಿಯು ನಮಗೆಲ್ಲ ಪಾಠವಾಗಬೇಕು. ಇನ್ನು ಎರಡು–ಮೂರು ತಿಂಗಳು ಕಟ್ಟುನಿಟ್ಟಾಗಿ ಕೋವಿಡ್‌ ಮಾರ್ಗಸೂಚಿ ಅನುಸರಿಸಿ ಮಹಾಸಾಂಕ್ರಾಮಿಕವನ್ನು ಸಂಪೂರ್ಣ ತಹಬಂದಿಗೆ ತರುವುದು ನಮ್ಮ ಕೈಯಲ್ಲಿಯೇ ಇದೆ. ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದರೆ ಅದಕ್ಕೆ ಜೀವದ ಬೆಲೆ ತೆರಬೇಕಾಗಬಹುದು ಎಂಬ ಎಚ್ಚರ ನಮ್ಮೆಲ್ಲರಲ್ಲಿ ಮೂಡಲಿ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು