ಸೋಮವಾರ, ಸೆಪ್ಟೆಂಬರ್ 20, 2021
27 °C

ಸಂಪಾದಕೀಯ | ಕೋವಿಡ್‌: ಬೆಲೆ ತೆತ್ತಿದ್ದೇವೆ ಇನ್ನು ನಿರ್ಲಕ್ಷ್ಯ ಬೇಡ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕರ್ನಾಟಕದ ಜೊತೆ ಗಡಿ ಹಂಚಿಕೊಂಡಿರುವ ಕೇರಳದಲ್ಲಿ ಕೋವಿಡ್ ಪ್ರಕರಣಗಳು ಏರುಗತಿ ಪಡೆದುಕೊಂಡಿವೆ. ಇನ್ನೊಂದು ಗಡಿ ರಾಜ್ಯ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿಯೇ ಇವೆ. ಕೇರಳದಲ್ಲಿ ಶನಿವಾರ 20 ಸಾವಿರಕ್ಕೂ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಆರು ಸಾವಿರಕ್ಕಿಂತ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಕರ್ನಾಟಕ ಸೇರಿದಂತೆ ದೇಶದ ಹತ್ತು ರಾಜ್ಯಗಳ 46 ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇಕಡ 10ಕ್ಕಿಂತ ಹೆಚ್ಚಿದೆ. ಅಂದರೆ, ಕೋವಿಡ್ ಪರೀಕ್ಷೆಗೆ ಒಳಗಾಗುವ ಪ್ರತೀ 100 ಜನರ ಪೈಕಿ 10ಕ್ಕಿಂತ ಹೆಚ್ಚಿನ ಜನರಲ್ಲಿ ಕೋವಿಡ್ ದೃಢವಾಗುತ್ತಿದೆ. ಈ ಜಿಲ್ಲೆಗಳಲ್ಲಿ ‘ಜನರ ಓಡಾಟ ಮತ್ತು ಜನಸಂದಣಿ ಕಡಿಮೆ ಮಾಡಲು ಕಠಿಣ ನಿರ್ಬಂಧಗಳ ಅಗತ್ಯ ಇದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳಿಗೆ ಸೂಚನೆ ನೀಡಿದೆ. 46 ಜಿಲ್ಲೆಗಳ ಪರಿಸ್ಥಿತಿ ಹೀಗಿದ್ದರೆ, ಇನ್ನೂ 53 ಜಿಲ್ಲೆಗಳಲ್ಲಿ ಕೋವಿಡ್ ದೃಢ ಪ್ರಮಾಣವು ಶೇಕಡ 5ರಿಂದ 10ರವರೆಗೆ ಇದೆ. ‘ಈ ಹಂತದಲ್ಲೇ ನಿರ್ಬಂಧಗಳನ್ನು ವಿಧಿಸದೆ ಇದ್ದರೆ ಮುಂದೆ ಪರಿಸ್ಥಿತಿ ಗಂಭೀರವಾಗಲಿದೆ’ ಎಂದು ಕೇಂದ್ರವು ರಾಜ್ಯಗಳನ್ನು ಎಚ್ಚರಿಸಿದೆ. ಕೊರೊನಾ ವೈರಾಣುವಿನ ಪ್ರಕರಣಗಳು ದೇಶದಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದ 2020ರ ಮಾರ್ಚ್‌ ತಿಂಗಳಲ್ಲಿ ದೇಶದಾದ್ಯಂತ ತಾನೇ ಲಾಕ್‌ಡೌನ್‌ ವಿಧಿಸಿದ್ದ ಕೇಂದ್ರ ಸರ್ಕಾರವು ಈಗ ಲಾಕ್‌ಡೌನ್‌ ಜಾರಿಗೆ ತರುವ ಅಥವಾ ಕೆಲವು ನಿರ್ಬಂಧಗಳನ್ನು ಮಾತ್ರ ಜಾರಿಗೊಳಿಸುವ ತೀರ್ಮಾನವನ್ನು ರಾಜ್ಯಗಳೇ ಕೈಗೊಳ್ಳಬಹುದು ಎಂದು ಹೇಳಿದೆ. ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳು ನಿರ್ಬಂಧಗಳನ್ನು ಜಾರಿಗೆ ತರುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿವೆ. ಸಾಂಕ್ರಾಮಿಕವನ್ನು ನಿಯಂತ್ರಿಸಲು ಇಡೀ ರಾಜ್ಯಕ್ಕೆ ಅನ್ವಯವಾಗುವ ಸೂತ್ರವನ್ನು ಜಾರಿಗೆ ತರುವ ಬದಲು, ಆಯಾ ಪ್ರದೇಶಗಳ ಪರಿಸ್ಥಿತಿಯನ್ನು ಅವಲೋಕಿಸಿ, ಅಲ್ಲಿಗೆ ಸೀಮಿತವಾದ ನಿರ್ಬಂಧಗಳನ್ನು ಜಾರಿಗೆ ತರುವುದು ಹೆಚ್ಚು ಸೂಕ್ತವೂ ಹೌದು.

ಕರ್ನಾಟಕದಲ್ಲಿ ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಅಲ್ಪಪ್ರಮಾಣದ ಏರಿಕೆ ಈಚಿನ ದಿನಗಳಲ್ಲಿ ಕಂಡುಬಂದಿದೆ. ಮುಖ್ಯವಾಗಿ, ಬೆಂಗಳೂರು ನಗರ, ದಕ್ಷಿಣ ಕನ್ನಡ, ಹಾಸನ, ಮೈಸೂರು, ಕೊಡಗು ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗುತ್ತಿವೆ. ಕೋವಿಡ್‌ನ ಮೊದಲ ಅಲೆಯ ಅಬ್ಬರ ತಗ್ಗಿದ ನಂತರದಲ್ಲಿ, ‘ಕೋವಿಡ್‌ ಹೊರಟುಹೋಯಿತು’ ಎಂದು ಭಾವಿಸಿದವರು ಇದ್ದರು. ಆದರೆ, ಧುತ್ತೆಂದು ಎದುರಾದ ಎರಡನೆಯ ಅಲೆಯು ದೇಶದ ಮೇಲೆ ಭಾರಿ ಏಟು ನೀಡಿದೆ. ಈಗ ಪ್ರಕರಣಗಳ ಸಂಖ್ಯೆಯಲ್ಲಿ ಆಗುತ್ತಿರುವ ಹೆಚ್ಚಳವು ಮೂರನೆಯ ಅಲೆಯ ಮುನ್ಸೂಚನೆ ಎಂಬ ಅಭಿಪ್ರಾಯಗಳು ಇವೆ. ಎರಡನೆಯ ಅಲೆಯ ಸಂದರ್ಭದಲ್ಲಿ ಆಗಿರುವ ಜೀವಹಾನಿಯನ್ನು ಗಮನಿಸಿ, ಅದರಿಂದ ಪಾಠಗಳನ್ನು ಕಲಿತು ಒಂದಿಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಸರ್ಕಾರವು ವೈದ್ಯಕೀಯ ಆಮ್ಲಜನಕದ ಲಭ್ಯತೆಯನ್ನು ಹೆಚ್ಚುಮಾಡಬೇಕು. ರೋಗಿಗಳು ಹಾಸಿಗೆಯ ಮೇಲೆ ಮಲಗಿದ ನಂತರದಲ್ಲಿ ಆಮ್ಲಜನಕಕ್ಕಾಗಿ ಹುಡುಕಾಡುವ ಸ್ಥಿತಿ ಎದುರಾಗಬಾರದು. ಕೆಲವು ಔಷಧಗಳಿಂದ ಕೋವಿಡ್‌ ಚಿಕಿತ್ಸೆ ಸಾಧ್ಯವಿಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸ್ಪಷ್ಟವಾಗಿ ಹೇಳಿದ ನಂತರವೂ ಅವೇ ಔಷಧಿಗಳನ್ನು ಕೆಲವು ಆಸ್ಪತ್ರೆಗಳು ಕೋವಿಡ್‌ ರೋಗಿಗಳಿಗೆ ನೀಡುತ್ತಿದ್ದುದು, ಆ ಔಷಧಿಗಳಿಗೆ ವಿಪರೀತ ಬೇಡಿಕೆ ಸೃಷ್ಟಿಯಾಗಿ ಅವು ಅಕ್ರಮವಾಗಿ ಅತಿಯಾದ ಬೆಲೆಗೆ ಮಾರಾಟವಾಗುತ್ತಿದ್ದುದು ಕೂಡ ಎರಡನೆಯ ಅಲೆಯ ಸಂದರ್ಭದಲ್ಲಿ ಆಗಿದ್ದಿದೆ. ಸಂಬಂಧವಿಲ್ಲದ ಔಷಧಗಳನ್ನು ನೀಡುವುದರಿಂದ ಕಾಯಿಲೆ ಉಪಶಮನ ಆಗದು ಎಂದು ವಿಜ್ಞಾನ ಹೇಳುತ್ತದೆ. ಹಾಗಾಗಿ, ವೈಜ್ಞಾನಿಕವಾದ, ‍ಪುರಾವೆಗಳ ಮೇಲೆ ನಿಂತಿರುವ ಚಿಕಿತ್ಸಾ ಕ್ರಮವೊಂದನ್ನು ಸರ್ಕಾರಗಳು ತಜ್ಞರ ನೇತೃತ್ವದಲ್ಲಿ ಆದಷ್ಟು ಬೇಗ ಸಿದ್ಧಪಡಿಸಬೇಕು ಮತ್ತು ಆ ಚಿಕಿತ್ಸಾ ಕ್ರಮವು ಸಂಬಂಧಪಟ್ಟ ಎಲ್ಲರ ಅರಿವಿಗೂ ಬರುವಂತೆ ನೋಡಿಕೊಳ್ಳಬೇಕು. ಸೋಂಕಿಗೆ ಒಳಗಾದವರ ಬಂಧುಗಳು ಅನಗತ್ಯ ಔಷಧಿಗಳಿಗಾಗಿ ಅಲ್ಲಿ–ಇಲ್ಲಿ ಅಲೆಯುವ ಸಂದರ್ಭ ಯಾವ ಕಾರಣಕ್ಕೂ ಎದುರಾಗಬಾರದು. ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಅತ್ಯಂತ ಅಗತ್ಯವಾಗಿರುವ ಪಲ್ಸ್‌ ಆಕ್ಸಿಮೀಟರ್‌, ಆಮ್ಲಜನಕದ ಸಾಂದ್ರಕದಂತಹ ಉಪಕರಣಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಲಭ್ಯವಿರುವಂತೆ ಆಗಬೇಕು. ರೋಗಿಗಳನ್ನು ಪತ್ತೆ ಮಾಡುವ ಕೆಲಸ, ಪರೀಕ್ಷಿಸುವುದು ಹಾಗೂ ಅವರನ್ನು ಇತರರಿಂದ ಪ್ರತ್ಯೇಕ ಇರಿಸುವ ಕಾರ್ಯ ಚುರುಕಾಗಿ ನಡೆಯಬೇಕು. ಇವೆಲ್ಲವುಗಳ ಜೊತೆಯಲ್ಲೇ, ಕೋವಿಡ್‌ ಲಸಿಕೆ ನೀಡುವ ಕೆಲಸ ವೇಗ ಪಡೆದುಕೊಳ್ಳಬೇಕು.

ಇವೆಲ್ಲ ಆಳುವ ವರ್ಗದ ಕಡೆಯಿಂದ ಆಗಬೇಕಿರುವ ಕೆಲಸಗಳು. ಸಾರ್ವಜನಿಕರು ಕೂಡ ಈ ವಿಚಾರದಲ್ಲಿ ಸರ್ಕಾರಗಳ ಜೊತೆ ಕೈಜೋಡಿಸಲೇಬೇಕು. ಕೋವಿಡ್‌ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಿ, ನಿರ್ಬಂಧಗಳು ತೀರಾ ಬಿಗಿಯಾದರೆ ಆರ್ಥಿಕ ಚಟುವಟಿಕೆಗಳಿಗೆ ಪೆಟ್ಟು ಬೀಳುತ್ತದೆ. ಆಗ ಜನರ ಬದುಕು ಇನ್ನಷ್ಟು ಕಷ್ಟಕ್ಕೆ ಸಿಲುಕುತ್ತದೆ. ಹಾಗಾಗಿ, ಜನ ಗುಂಪುಗೂಡುವುದನ್ನು ತಡೆಯಲೇಬೇಕು. ಮುಖಗವಸು ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸಬಾರದು. ಕೋವಿಡ್‌ ತಡೆ ಶಿಷ್ಟಾಚಾರಗಳಲ್ಲಿ ಯಾವುದನ್ನೂ ನಿರ್ಲಕ್ಷಿಸಬಾರದು. ಎರಡನೆಯ ಅಲೆಯ ಸಂದರ್ಭದಲ್ಲಿ ತಾವು ಅನುಭವಿಸಿರಬಹುದಾದ ಸಂಕಷ್ಟಗಳನ್ನು ನೆನಪಿಗೆ ತಂದುಕೊಂಡು, ಇನ್ನು ಮುಂದೆ ಮತ್ತೆ ಅಂತಹ ಪರಿಸ್ಥಿತಿಗೆ ಸಿಲುಕದಂತೆ ನೋಡಿಕೊಳ್ಳುವ ಹೊಣೆ ಎಲ್ಲರ ಮೇಲಿದೆ. ಕೋವಿಡ್‌ ವಿಚಾರವಾಗಿ ಭಾರಿ ಬೆಲೆ ತೆತ್ತಾಗಿದೆ; ನಿರ್ಲಕ್ಷ್ಯ ವಹಿಸಿದರೆ ಮತ್ತೆ ಉರುಳಿಗೆ ಕೊರಳೊಡ್ಡುವ ಸ್ಥಿತಿ ಬರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು