ಶುಕ್ರವಾರ, ಜೂನ್ 5, 2020
27 °C

ಕಚ್ಚಾತೈಲ ಉತ್ಪಾದನೆ ಕಡಿತ: ಬಿಕ್ಕಟ್ಟು ಶಮನಕ್ಕೆ ಪೂರಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಚ್ಚಾತೈಲ ಉತ್ಪಾದಿಸುವ ವಿಶ್ವದ ಪ್ರಮುಖ ದೇಶಗಳು ಉತ್ಪಾದನೆ ತಗ್ಗಿಸುವ ನಿರ್ಧಾರಕ್ಕೆ ಬಂದಿರುವುದು ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆ ಮೂಡಿಸುವ ದಿಸೆಯಲ್ಲಿ ಮಹತ್ವದ ಬೆಳವಣಿಗೆ. ತುರ್ತಾಗಿ ವಿಡಿಯೊ ಕಾನ್ಫರೆನ್ಸ್ ನಡೆಸಿ ಈ ನಿರ್ಧಾರಕ್ಕೆ ಬಂದಿರುವುದು ಸದ್ಯದ ಅನಿವಾರ್ಯವನ್ನು ಸೂಚಿಸುತ್ತದೆ. ಮೇ ತಿಂಗಳಿನಿಂದ ಜುಲೈವರೆಗೆ ಪ್ರತಿದಿನ 1 ಕೋಟಿ ಬ್ಯಾರಲ್‌ಗಳಷ್ಟು ಉತ್ಪಾದನೆ ಕಡಿತಗೊಳಿಸಲು, ಕಚ್ಚಾತೈಲ ರಫ್ತು ಮಾಡುವ ದೇಶಗಳು (ಒಪೆಕ್) ಮತ್ತು ರಷ್ಯಾ ತಾತ್ವಿಕವಾಗಿ ಸಮ್ಮತಿಸಿವೆ. ಕೊರೊನಾ–2 ವೈರಾಣು ವಿಶ್ವದಾದ್ಯಂತ ಮೂಡಿಸಿರುವ ಆರ್ಥಿಕ, ಸಾಮಾಜಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ನಿರ್ಧಾರಕ್ಕೆ ಹೆಚ್ಚು ಮಹತ್ವ ಇದೆ. ಕೊರೊನಾ ಸೃಷ್ಟಿಸಿದ ದಿಗ್ಬಂಧನದಿಂದಾಗಿ ಜಾಗತಿಕ ತೈಲ ಬೇಡಿಕೆಯಲ್ಲಿ ವಿಪರೀತ ಕುಸಿತ ಉಂಟಾಗಿದೆ. ಇಂತಹ ಸಂಕ್ರಮಣ ಸಂದರ್ಭದಲ್ಲಿಯೂ ಮಾರುಕಟ್ಟೆ ಮೇಲಿನ ಹಿಡಿತ ಕೈಜಾರಿ ಹೋಗಬಾರದು ಎಂಬ ಉದ್ದೇಶದಿಂದ ಉತ್ಪಾದನೆ ಹೆಚ್ಚಿಸಲು ಕೆಲವು ದೇಶಗಳು ನಿರ್ಧರಿಸಿದ್ದವು. ಒಪೆಕ್‌ನ ಪ್ರಭಾವಿ ದೇಶ ಸೌದಿ ಅರೇಬಿಯಾ ಮತ್ತು ಒಪೆಕ್‌ ಹೊರತಾದ ದೇಶಗಳ ನಾಯಕತ್ವ ವಹಿಸಿರುವ ರಷ್ಯಾ ನಡುವೆ ಬೆಲೆ ಸಮರ ನಡೆದಿತ್ತು. ಬೇಡಿಕೆ ಮತ್ತು ಪೂರೈಕೆ ನಡುವಣ ಭಾರಿ ಅಸಮತೋಲನದಿಂದಾಗಿ ತೈಲ ಬೆಲೆ ಪ್ರಪಾತಕ್ಕೆ (ಪ್ರತೀ ಬ್ಯಾರಲ್‌ಗೆ 20 ಡಾಲರ್‌) ಬಿದ್ದಿತ್ತು. ಎರಡು ದಶಕಗಳಲ್ಲಿನ ಅತ್ಯಂತ ಕನಿಷ್ಠ ಮಟ್ಟ ಇದಾಗಿತ್ತು. ಇದರಿಂದ ತೈಲ ಉತ್ಪಾದನೆ ಮತ್ತು ಮಾರಾಟ ಆಧಾರಿತ ಅರ್ಥವ್ಯವಸ್ಥೆಯ ದೇಶಗಳಿಗೆ ಭಾರಿ ಹೊಡೆತವೂ ಬಿದ್ದಿತ್ತು. ಅಡುಗೆ ಅನಿಲ (ಎಲ್‌ಪಿಜಿ) ಹೊರತುಪಡಿಸಿ ಪೆಟ್ರೋಲ್‌, ಡೀಸೆಲ್‌ ಮತ್ತಿತರ ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯು ಗಮನಾರ್ಹ ಕುಸಿತ ಕಂಡಿದೆ. ಉತ್ಪಾದನೆ ಕಡಿತದ ನಿರ್ಧಾರದಿಂದ ತೈಲ ಪೂರೈಕೆ ಪ್ರಮಾಣ ಮತ್ತು ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಹಾಗೂ ಬಿಕ್ಕಟ್ಟಿನ ತೀವ್ರತೆ ತಗ್ಗಿಸಲು ಸಾಧ್ಯವಾಗಲಿದೆ.

ತೈಲ ದರ ಸಮರಕ್ಕೆ ತಾತ್ಕಾಲಿಕ ವಿರಾಮ ದೊರೆತಿರುವುದು ಸದ್ಯದ ಮಟ್ಟಿಗೆ ಸಮಾಧಾನಕರ ಸಂಗತಿ. ಕೊರೊನಾ ಬಿಕ್ಕಟ್ಟಿನಿಂದಾಗಿ ಇಂಧನ ಬಳಕೆಯ ಪ್ರಮಾಣದಲ್ಲಿ ಆಗಿರುವ ಕುಸಿತಕ್ಕೆ ಹೋಲಿಸಿದರೆ, ಉದ್ದೇಶಿತ ಉತ್ಪಾದನೆ ಕಡಿತದ ಪ್ರಮಾಣವು ಕಡಿಮೆ. ಹೀಗಾಗಿ, ಪೂರೈಕೆ ಮತ್ತು ಬೇಡಿಕೆಯಲ್ಲಿನ ಅಸಮತೋಲನ ಮುಂದುವರಿಯುವ ಸಾಧ್ಯತೆ ಇದೆ. ತೈಲ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಉತ್ಪಾದಕರು, ಆಮದು ಮಾಡಿಕೊಳ್ಳುವ ದೇಶಗಳು ಮತ್ತು ಬಳಕೆದಾರರ ಹಿತಾಸಕ್ತಿ ಕಾಯಲು ಅಗತ್ಯ. ಭಾರತ ತನಗೆ ಬೇಕಿರುವ ತೈಲದ ಪ್ರಮಾಣದಲ್ಲಿ ಶೇಕಡ 83ರಷ್ಟು ಆಮದು ಮಾಡಿಕೊಳ್ಳುತ್ತಿದೆ. ಹಾಗಾಗಿ, ತೈಲ ಬೆಲೆ ಸ್ಥಿರತೆಗೂ ದೇಶದ ಅರ್ಥವ್ಯವಸ್ಥೆಯ ಆರೋಗ್ಯಕ್ಕೂ ನೇರ ಸಂಬಂಧವಿದೆ. ತೈಲ ದರ ಕಡಿಮೆ ಇದ್ದಷ್ಟೂ ಭಾರತಕ್ಕೆ ಹೆಚ್ಚು ಪ್ರಯೋಜನಕಾರಿ. ಕಡಿಮೆ ದರದ ನೇರ ಪ್ರಯೋಜನ ಗ್ರಾಹಕರಿಗೆ ಪೂರ್ಣಪ್ರಮಾಣದಲ್ಲಿ ಲಭ್ಯವಾಗದಿದ್ದರೂ, ದೇಶದ ಬೊಕ್ಕಸ ತುಂಬಿಸಲು ಇದು ನೆರವಾಗುತ್ತದೆ. ಆಮದು ಮತ್ತು ರಫ್ತು ನಡುವಣ ವ್ಯತ್ಯಾಸವನ್ನು ಹೇಳುವ ಚಾಲ್ತಿ ಖಾತೆ ಕೊರತೆಗೆ ಕಡಿವಾಣ ವಿಧಿಸಲು, ಡಾಲರ್‌ ಎದುರು ರೂಪಾಯಿ ವಿನಿಮಯ ದರ ಹೆಚ್ಚಿಸಲು ಸಾಧ್ಯವಾಗಲಿದೆ. ಈ ನಡುವೆ, ಒಪ್ಪಂದಕ್ಕೆ ಮೆಕ್ಸಿಕೊ ಅಡ್ಡಗಾಲು ಹಾಕಿರುವುದು ಅನಿರೀಕ್ಷಿತ ಬೆಳವಣಿಗೆ. ತೈಲ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಎಲ್ಲ ದೇಶಗಳು ಒಮ್ಮತದ ನಿರ್ಧಾರಕ್ಕೆ ಬರುವ ಅಗತ್ಯ ಇದೆ. ಉತ್ಪಾದನೆ ಕಡಿತವು ತೈಲ ದರದ ವಿಪರೀತ ಏರಿಕೆಗೆ ದಾರಿ ಮಾಡಿಕೊಡಬಾರದು ಕೂಡ. ಹಾಗೇನಾದರೂ ಆದರೆ, ಜಾಗತಿಕ ಆರ್ಥಿಕತೆಯು ಅದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು