ಗುರುವಾರ , ಮಾರ್ಚ್ 30, 2023
24 °C

ಸಂಪಾದಕೀಯ | PMLA ವ್ಯಾಪ್ತಿಗೆ ಕ್ರಿಪ್ಟೊ ವಹಿವಾಟು; ಅಕ್ರಮ ತಡೆಯಲು ಉತ್ತಮ ಕ್ರಮ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕ್ರಿಪ್ಟೊಕರೆನ್ಸಿಗಳ, ಕ್ರಿಪ್ಟೊ ಆಸ್ತಿಗಳ ವಿಚಾರವಾಗಿ ನಿಯಂತ್ರಣ ಚೌಕಟ್ಟೊಂದನ್ನು ರೂಪಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ತೀರ್ಮಾನ ಸ್ವಾಗತಾರ್ಹ. ಬಹುಮಟ್ಟಿಗೆ ನಿಯಂತ್ರಣವೇ ಇಲ್ಲದ ಹಣಕಾಸಿನ ವಲಯವೊಂದರಲ್ಲಿ ನಿಯಮ ಆಧಾರಿತ ವ್ಯವಸ್ಥೆಯೊಂದನ್ನು ಸೃಷ್ಟಿಸಲು ಇದು ಮುಖ್ಯ ಹೆಜ್ಜೆ. ಕ್ರಿಪ್ಟೊ ಆಸ್ತಿಗಳನ್ನು ನಿರ್ವಹಿಸುವ ವೇದಿಕೆಗಳನ್ನು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಅಡಿಯಲ್ಲಿ ತರಲು ಕೇಂದ್ರವು ಈಚೆಗೆ ತೀರ್ಮಾನಿಸಿದೆ. ಈಗ ಕ್ರಿಪ್ಟೊಕರೆನ್ಸಿ ವಿನಿಮಯ ಸೇವೆಗಳನ್ನು ಒದಗಿಸುವ ವೇದಿಕೆಗಳು ತಮ್ಮ ಗ್ರಾಹಕರಿಗೆ ಸಂಬಂಧಿಸಿದ ಕೆಲವು ಅಗತ್ಯ ದಾಖಲೆಗಳನ್ನು (ಕೆವೈಸಿ ದಾಖಲೆ) ಪಡೆದುಕೊಳ್ಳುವುದು ಕಡ್ಡಾಯವಾಗುತ್ತದೆ. ಷೇರುಗಳು, ಬಾಂಡ್‌ಗಳು ಸೇರಿದಂತೆ ಇತರ ಯಾವುದೇ ಆಸ್ತಿವರ್ಗಗಳಲ್ಲಿ ವಹಿವಾಟು ನಡೆಸುವ, ಅವುಗಳನ್ನು ಖರೀದಿಸುವ, ಮಾರಾಟ ಮಾಡುವ ವ್ಯಕ್ತಿಗಳಿಂದ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳುವ ರೀತಿಯಲ್ಲಿಯೇ, ಕ್ರಿಪ್ಟೊ ಆಸ್ತಿಯಲ್ಲಿ ವಹಿವಾಟು ನಡೆಸುವವರಿಂದ ದಾಖಲೆಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಕ್ರಿಪ್ಟೊ ಆಸ್ತಿಗಳಲ್ಲಿ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ವಹಿವಾಟುಗಳ ವರದಿ ಮಾಡಬೇಕಾಗುತ್ತದೆ. ಕ್ರಿಪ್ಟೊ ಆಸ್ತಿಗಳು ಈಚಿನ ವರ್ಷಗಳಲ್ಲಿ ಹೆಚ್ಚಾಗಿವೆ. ಕೋವಿಡ್‌ ಸಾಂಕ್ರಾಮಿಕದ ನಂತರದಲ್ಲಿ ಅವುಗಳ ಏರಿಕೆ ಪ್ರಮಾಣವು ಜಾಸ್ತಿಯಾಗಿದೆ. ಭಾರತದಲ್ಲಿ ಕ್ರಿಪ್ಟೊ ಆಸ್ತಿಗಳನ್ನು ಹೊಂದಿರುವವರ ಸಂಖ್ಯೆ 9.80 ಕೋಟಿ ಎಂಬ ವರದಿಗಳಿವೆ. ಇದು ವಿಶ್ವದಲ್ಲೇ ಅಧಿಕ ಎಂಬ ಮಾತು ಇದೆ. ಹೀಗಾಗಿ, ಕ್ರಿಪ್ಟೊ ಆಸ್ತಿಗಳಲ್ಲಿನ ವಹಿವಾಟುಗಳನ್ನು ನಿಯಂತ್ರಣಕ್ಕೆ ಒಳಪಡಿಸುವ ಅಗತ್ಯ ಇದೆ. ಕ್ರಿಪ್ಟೊ ಆಸ್ತಿಗಳಲ್ಲಿನ ವಹಿವಾಟುಗಳ ದುರ್ಬಳಕೆ ಆದರೆ ಅದು ಅರ್ಥ ವ್ಯವಸ್ಥೆಯನ್ನು ಹಾಳುಮಾಡಬಲ್ಲದು. ಕಪ್ಪುಹಣವು ಅರ್ಥ ವ್ಯವಸ್ಥೆಯನ್ನು ಹೇಗೆ ಹಾಳು ಮಾಡಬಲ್ಲದೋ, ಕ್ರಿಪ್ಟೊ ಆಸ್ತಿಗಳು ಕೂಡ ಅದೇ ಕೆಲಸ ಮಾಡಬಲ್ಲವು.

ಕ್ರಿಪ್ಟೊ ವಹಿವಾಟು ವೇದಿಕೆಗಳನ್ನು ಪಿಎಂಎಲ್‌ಎ ಅಡಿಯಲ್ಲಿ ತರುವ ಮೂಲಕ, ಇಂತಹ ವೇದಿಕೆಗಳನ್ನು ಬಳಸಿಕೊಂಡು ಹಣದ ಅಕ್ರಮ ವರ್ಗಾವಣೆ ನಡೆಯುವುದನ್ನು ನಿಯಂತ್ರಿಸಬಹುದು. ವಹಿವಾಟು ವೇದಿಕೆಗಳು ತಾವು ಇರಿಸಿಕೊಳ್ಳುವ ದಾಖಲೆಗಳನ್ನು ಕಾನೂನು ಜಾರಿ ಸಂಸ್ಥೆಗಳ ಜೊತೆ ಹಂಚಿಕೊಳ್ಳಬಹುದು. ಕ್ರಿಪ್ಟೊ ವಹಿವಾಟುಗಳ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಪ್ಪಂದವೊಂದು ಏರ್ಪಟ್ಟ ನಂತರದಲ್ಲಿ, ಈ ದಾಖಲೆಗಳನ್ನು ಬೇರೆ ದೇಶಗಳ ಕಾನೂನು ಜಾರಿ ಸಂಸ್ಥೆಗಳ ಜೊತೆಯಲ್ಲಿಯೂ ಹಂಚಿಕೊಳ್ಳಬಹುದು. ಕ್ರಿಪ್ಟೊ ಆಸ್ತಿಗಳನ್ನು ಬಳಸಿ ಹಣದ ಅಕ್ರಮ ವರ್ಗಾವಣೆ ನಡೆಯುತ್ತಿರುವುದು ಪತ್ತೆಯಾದಲ್ಲಿ, ಭಾರಿ ಮೊತ್ತದ ದಂಡ ವಿಧಿಸಬಹುದು, ಗರಿಷ್ಠ ಏಳು ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಬಹುದು, ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳ ಬಹುದು. ಈ ಶಿಕ್ಷೆಗಳು ಕ್ರಿಪ್ಟೊ ಆಸ್ತಿಗಳನ್ನು ಬಳಸುವುದಕ್ಕೆ ಬೆದರಿಕೆಯಾಗಿ ಪರಿಣಮಿಸಬಹುದು. ಮಧ್ಯವರ್ತಿ ಕಂಪನಿಗಳು ಪಾಲಿಸಬೇಕಿರುವ ನಿಯಮಗಳ ಹೊರೆ ದೊಡ್ಡದಾಗಿರುವ ಕಾರಣದಿಂದಾಗಿ, ಕ್ರಿಪ್ಟೊ ವಹಿವಾಟಿನ ಆಕರ್ಷಣೆ ತಗ್ಗಬಹುದು. ಕ್ರಿಪ್ಟೊ ವೇದಿಕೆಗಳು ಎಲ್ಲ ವಹಿವಾಟುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ಕೈಗೊಂಡ ಕೆಲವು ಕ್ರಮಗಳ ಪರಿಣಾಮವಾಗಿ ಕ್ರಿಪ್ಟೊ ವಹಿವಾಟುಗಳ ಪ್ರಮಾಣವು ಕಡಿಮೆ ಆಗಿದೆ ಎಂಬ ವರದಿಗಳಿವೆ. ನಿಯಮ ಉಲ್ಲಂಘನೆಗೆ ಭಾರಿ ಶಿಕ್ಷೆ ಇರುವುದರಿಂದಾಗಿ ಹಾಗೂ ಕ್ರಿಪ್ಟೊ ವಹಿವಾಟು ವೇದಿಕೆಗಳು ಪಾಲಿಸಬೇಕಿರುವ ಷರತ್ತುಗಳು ಕೂಡ ಹಲವು ಇವೆಯಾದ ಕಾರಣ ಬಹುತೇಕ ವೇದಿಕೆಗಳು ಅಸ್ತಿತ್ವ ಉಳಿಸಿಕೊಳ್ಳುವುದೇ ಕಷ್ಟವಾಗಬಹುದು.

ಕೆಲವು ಕ್ರಿಪ್ಟೊ ವಿನಿಮಯ ವೇದಿಕೆಗಳು ಹಣದ ಅಕ್ರಮ ವರ್ಗಾವಣೆಯಲ್ಲಿ ತೊಡಗಿದ್ದು ಪತ್ತೆಯಾಗಿದೆ, ಜನವರಿ 31ರವರೆಗಿನ ಮಾಹಿತಿ ಪ್ರಕಾರ ₹ 936 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಈಚೆಗೆ ಲೋಕಸಭೆಗೆ ತಿಳಿಸಿದೆ. ಕ್ರಿಪ್ಟೊ ಆಸ್ತಿಗಳನ್ನು ಬಳಸುವವರು ಯಾರು ಎಂಬುದು ಗೋಪ್ಯವಾಗಿ ಇರುವ ಕಾರಣದಿಂದಾಗಿ, ಅವುಗಳ ವಹಿವಾಟು ದೇಶಗಳ ನಡುವೆ ಬಹಳ ತ್ವರಿತವಾಗಿ ಆಗುತ್ತದೆಯಾದ ಕಾರಣ, ಈ ಆಸ್ತಿಗಳನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶಗಳು ಹೆಚ್ಚಿರುತ್ತವೆ. ಕೆಲವು ದೇಶಗಳು ಕ್ರಿಪ್ಟೊ ಆಸ್ತಿಗಳನ್ನು ನಿಷೇಧಿಸಿವೆ, ಇನ್ನು ಕೆಲವು ದೇಶಗಳು ಅವುಗಳನ್ನು ಕಾನೂನಿನ ಚೌಕಟ್ಟಿನ ಅಡಿ ತರುವ ಯತ್ನ ನಡೆಸಿವೆ, ಇನ್ನು ಕೆಲವು ದೇಶಗಳು ಅವುಗಳನ್ನು ನಿಭಾಯಿಸುವುದು ಹೇಗೆ ಎಂಬುದನ್ನು ಪರಿಶೀಲಿಸುತ್ತಿವೆ. ಈ ಪರಿಸ್ಥಿತಿಯನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಜಾಗತಿಕವಾಗಿ ಸ್ವೀಕೃತವಾಗಿರುವ ಪ್ರಕ್ರಿಯೆಗಳನ್ನು ಒಳಗೊಂಡ ನಿಯಂತ್ರಣ ವ್ಯವಸ್ಥೆಯೊಂದು ಬೇಕಾಗಿದೆ. ಕ್ರಿಪ್ಟೊ ಆಸ್ತಿಗಳನ್ನು ನಿಷೇಧಿಸುವ ಬದಲು ಅವುಗಳನ್ನು ಕಾನೂನಿನ ಚೌಕಟ್ಟಿನ ಅಡಿ ತರುವುದು ಸರ್ಕಾರದ ಉದ್ದೇಶ ಎಂಬಂತೆ ಕಾಣುತ್ತಿದೆ. ಈ ವಹಿವಾಟಿಗೆ ನಿಷೇಧ ವಿಧಿಸಿದರೆ, ವಹಿವಾಟುಗಳನ್ನು ವ್ಯವಸ್ಥೆಯ ಕಣ್ಣಿಗೆ ಮಣ್ಣೆರಚಿ ನಡೆಸಲು ಯತ್ನಿಸುವ ಸಾಧ್ಯತೆ ಇರುತ್ತದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು