ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕೆಪಿಎಸ್‌ಸಿ ನೇಮಕಾತಿಯಲ್ಲಿ ವಿಳಂಬ,ಸರ್ಕಾರದ ನಿಸ್ಸೀಮ ನಿರ್ಲಕ್ಷ್ಯದ ಫಲ

Last Updated 24 ಜನವರಿ 2022, 19:30 IST
ಅಕ್ಷರ ಗಾತ್ರ

‘ಕರ್ನಾಟಕ ಲೋಕಸೇವಾ ಆಯೋಗವನ್ನು (ಕೆಪಿಎಸ್‌ಸಿ) ಮುಚ್ಚಲು ಇದು ಸಕಾಲ’ ಎಂದು ರಾಜ್ಯ ಹೈಕೋರ್ಟ್, ಎರಡು ವರ್ಷಗಳ ಹಿಂದೆ ಅತ್ಯಂತ ಕಟುವಾದ ಪದಗಳಲ್ಲಿ ಕುಟುಕಿತ್ತು. ಕೆಪಿಎಸ್‌ಸಿ ಅವ್ಯವಸ್ಥೆಗಳ ಕುರಿತು ಬರುತ್ತಿದ್ದ ಪ್ರಕರಣಗಳಿಂದ ರೋಸಿಹೋಗಿದ್ದ ಕೋರ್ಟ್‌ ಹಾಗೆ ಆಕ್ರೋಶವನ್ನು ಹೊರಹಾಕಿತ್ತು. ಆದರೆ, ರಾಜ್ಯ ಸರ್ಕಾರವು ಅಕ್ಷರಶಃ ಆ ಮಾತಿನಂತೆ ನಡೆಯಲು ಮುಂದಾಗಿದೆಯೇನೋ ಎಂಬ ಅನುಮಾನ ಬರುವಂತಿದೆ ಅದರ ಇತ್ತೀಚಿನ ಧೋರಣೆ. ಏಕೆಂದರೆ, ಎಂಟು ತಿಂಗಳಿನಿಂದ ಕೆಪಿಎಸ್‌ಸಿಗೆ ಕಾಯಂ ಪರೀಕ್ಷಾ ನಿಯಂತ್ರಕರೇ ಇಲ್ಲ. ಅದರಲ್ಲೂ ಕಳೆದ ಮೂರು ವರ್ಷಗಳ ಅವಧಿಯಲ್ಲಿ ನಾಲ್ವರು ಪರೀಕ್ಷಾ ನಿಯಂತ್ರಕರನ್ನು ಆಯೋಗ ಕಾಣುವಂತಾಗಿದೆ. ಅದರ ಪರಿಣಾಮವಾಗಿ, ಸರ್ಕಾರದ ನಾನಾ ಇಲಾಖೆಗಳ ವಿವಿಧ ಶ್ರೇಣಿಗಳಿಗೆ ಸೇರಿದ 4,078 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಕೆಪಿಎಸ್‌ಸಿ ವ್ಯವಸ್ಥೆ ಇರುವುದೇ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳ ಭರ್ತಿಗೆ ಅಗತ್ಯವಾದ ಪ್ರಕ್ರಿಯೆ ನಡೆಸುವುದಕ್ಕಾಗಿ. ಅಧಿಕಾರಿಗಳನ್ನೇ ನಿಯೋಜಿಸದೆ ಹೋದರೆ ಆ ಪ್ರಕ್ರಿಯೆಯನ್ನು ನಡೆಸುವುದಾದರೂ ಹೇಗೆ? ‘ನಿಯಮಿತ ಪರೀಕ್ಷಾ ಕಂಟ್ರೋಲರ್‌ ಇಲ್ಲದ ಕಾರಣ ರಾಜ್ಯ ಲೆಕ್ಕಪತ್ರ ಇಲಾಖೆಯ ಸಹಾಯಕ ನಿಯಂತ್ರಕರ ಮುಖ್ಯ ಪರೀಕ್ಷೆಯ ಮೌಲ್ಯಮಾಪನ ಪೂರ್ಣಗೊಂಡಿಲ್ಲ. 2017ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಮುಖ್ಯ ಪರೀಕ್ಷೆಯ ಮೌಲ್ಯಮಾಪನ ಆರಂಭವೇ ಆಗಿಲ್ಲ. ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ಆಯ್ಕೆಗೆ ಸ್ಪರ್ಧಾತ್ಮಕ ಪರೀಕ್ಷೆಯ ನಂತರದ ಪ್ರಕ್ರಿಯೆಗಳೂ ಶುರುವಾಗಿಲ್ಲ. ವಿವಿಧ ಇಲಾಖೆಗಳ ತಾಂತ್ರಿಕೇತರ ಹುದ್ದೆಗಳ ಆಯ್ಕೆಗೆ ನಡೆದ ಪರೀಕ್ಷೆ, ಲೋಕೋಪಯೋಗಿ ಇಲಾಖೆಯ ಕಿರಿಯ ಮತ್ತು ಸಹಾಯಕ ಎಂಜಿನಿಯರ್‌ ಹುದ್ದೆಗಳ ನೇಮಕಾತಿಗೆ ನಡೆದ ಪರೀಕ್ಷೆಗಳ ಮೌಲ್ಯಮಾಪನವೂ ನನೆಗುದಿಗೆ ಬಿದ್ದಿದೆ’ ಎಂದು ಮುಖ್ಯಮಂತ್ರಿಯವರಿಗೆಕೆಪಿಎಸ್‌ಸಿ ಅಧ್ಯಕ್ಷರೇ ಬರೆದ ಪತ್ರದಲ್ಲಿ ಪಟ್ಟಿ ಮಾಡಿದ್ದಾರೆ. ಮೇಲೆ ಉಲ್ಲೇಖಗೊಂಡ ಎಲ್ಲ ಪರೀಕ್ಷೆಗಳೂ ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಡೆದಂಥವು. ನೇಮಕಾತಿ ವಿಳಂಬದಿಂದ ಒಂದೆಡೆ ಉದ್ಯೋಗ ಆಕಾಂಕ್ಷಿಗಳು ಅಸಮಾಧಾನಗೊಂಡರೆ, ಇನ್ನೊಂದೆಡೆ ವಿವಿಧ ಇಲಾಖೆಗಳು ಸಿಬ್ಬಂದಿ ಕೊರತೆಯಿಂದ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.

ಸದ್ಯ ಆಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರೀಕ್ಷಾ ನಿಯಂತ್ರಕರನ್ನು ಸಮವರ್ತಿ ಪ್ರಭಾರದಲ್ಲಿ ಇರಿಸಲಾಗಿದೆ. ಅವರು ಆಯೋಗದ ಕಾರ್ಯನಿರ್ವಹಣೆಯ ಜೊತೆಗೆ ರೇಷ್ಮೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹೊಣೆಯನ್ನೂ ನಿಭಾಯಿಸಬೇಕಿದೆ. ಪೂರ್ಣಾವಧಿ ಪರೀಕ್ಷಾ ನಿಯಂತ್ರಕರಿದ್ದಾಗಲೇ ಕೆಪಿಎಸ್‌ಸಿ ಮೇಲಿನ ಕಾರ್ಯಭಾರದ ಒತ್ತಡವನ್ನು ನಿಭಾಯಿಸುವುದು ಕಷ್ಟ. ಇನ್ನು ಬೇರೊಂದು ಇಲಾಖೆಯ ಪ್ರಮುಖ ಹೊಣೆಯನ್ನೂ ನಿಭಾಯಿಸಬೇಕಾದ ಈ ಅಧಿಕಾರಿ, ನೇಮಕಾತಿ ಪ್ರಕ್ರಿಯೆಗೆ ಸಮರ್ಪಕ ಸಮಯ ನೀಡಲು ಸಾಧ್ಯವಾಗದ ಕಾರಣ ಆಯೋಗದ ಕಾರ್ಯನಿರ್ವಹಣೆ ವಿಳಂಬ ಆಗುತ್ತಿದೆ ಎನ್ನುವುದು ಕೆಪಿಎಸ್‌ಸಿ ಅಧ್ಯಕ್ಷರ ಅಳಲು. 18 ತಿಂಗಳ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಯ ಕಿರಿಯ ಮತ್ತು ಸಹಾಯಕ ಎಂಜಿನಿಯರ್‌ ಹುದ್ದೆಗಳ ನೇಮಕಾತಿಗೆ ಪರಿಷ್ಕೃತ ಅಧಿ
ಸೂಚನೆಯೊಂದನ್ನು ಹೊರಡಿಸಿರುವುದು ಹೊರತುಪಡಿದರೆ ಯಾವುದೇ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಅಧಿಸೂಚನೆಯನ್ನು ಹೊರಡಿಸಲು ಸಾಧ್ಯವಾಗಿಲ್ಲ. ಆಯೋಗ ಎಷ್ಟೊಂದು ‘ಕ್ರಿಯಾಶೀಲ’ವಾಗಿ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದರ ದ್ಯೋತಕ ಇದು. ಆಯೋಗದ ಮೂಲಕ ನಡೆಯುವ ನೇಮಕಾತಿಯನ್ನೇ ನಂಬಿರುವ ಉದ್ಯೋಗಾ‌ಕಾಂಕ್ಷಿಗಳಿಗೆ ಅದರ ಮಂದಗತಿಯ ಕಾರ್ಯಾಚರಣೆ ಬಲು ನಿರಾಸೆ ಮೂಡಿಸಿದೆ. ಅಲ್ಲದೆ, ಅನೇಕರು ವಯೋಮಿತಿ ಮೀರುವ ಆತಂಕದಲ್ಲಿದ್ದಾರೆ. ಅವರ ಭವಿಷ್ಯದ ಪ್ರಶ್ನೆಗೆ ಯಾರ ಬಳಿ ಉತ್ತರವಿದೆ? ಇಲಾಖೆಗಳು ಸಹ ವಿವಿಧ ಶ್ರೇಣಿಯ ಹುದ್ದೆಗಳ ಪಟ್ಟಿ ನೀಡಿ, ಅರ್ಹರನ್ನು ಆಯ್ಕೆ ಮಾಡಿಕೊಡುವಂತೆ ಕೆಪಿಎಸ್‌ಸಿಗೆ ಮನವಿ ಮಾಡಿ, ಕಾಯುತ್ತಾ ಕುಳಿತಿವೆ. ಅವುಗಳ ದೈನಂದಿನ ಕೆಲಸವೂ ಖಾಲಿ ಹುದ್ದೆಗಳಿಂದಾಗಿ ಕುಂಟುತ್ತಿದೆ. ಆದರೆ, ಕೆಪಿಎಸ್‌ಸಿ ಮಾತ್ರ ಯಾವುದೇ ಪ್ರಕ್ರಿಯೆ ನಡೆಸಲು ಸಾಧ್ಯವಾಗದೆ ಕೈಕಟ್ಟಿ ಕುಳಿತಿದೆ.

ಕೆಪಿಎಸ್‌ಸಿಯಲ್ಲಿ ಆಗಬೇಕಾದ ಸುಧಾರಣೆಗಳ ಕುರಿತು ವರದಿ ನೀಡಲು ಪಿ.ಸಿ. ಹೋಟಾ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿತ್ತು. ಈ ಸಮಿತಿ ಮಾಡಿದ್ದ ಶಿಫಾರಸಿನಂತೆ ಐಎಎಸ್‌ ಹಿರಿಯ ಶ್ರೇಣಿಯ ಪರೀಕ್ಷಾ ನಿಯಂತ್ರಕ ಹುದ್ದೆಯನ್ನೇನೋ ಸೃಜಿಸಲಾಯಿತು. ಆದರೆ, ಈ ಹುದ್ದೆಗೆ ನಿಯೋಜಿತರಾದವರನ್ನು ಕನಿಷ್ಠ ಮೂರು ವರ್ಷಗಳವರೆಗೆ ವರ್ಗಾವಣೆ ಮಾಡಬಾರದು ಎಂಬ ಸಮಿತಿಯ ಮತ್ತೊಂದು ಶಿಫಾರಸನ್ನು ನಿರ್ಲಕ್ಷಿಸಲಾಯಿತು. ಹೀಗಾಗಿ ಕೆಪಿಎಸ್‌ಸಿ ವ್ಯವಸ್ಥೆಯಲ್ಲಿ ಪೂರ್ಣ ಸುಧಾರಣೆ ಎನ್ನುವುದು ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಸಾರ್ವಜನಿಕರು ಮತ್ತು ಉದ್ಯೋಗ ಆಕಾಂಕ್ಷಿಗಳಿಂದ ಹಿಡಿಶಾಪಕ್ಕೆ ಒಳಗಾಗುತ್ತಲೇ ಇರುವ, ಮೇಲಿಂದ ಮೇಲೆ ಕೋರ್ಟ್‌ ಕಟಕಟೆಯಲ್ಲಿ ನಿಲ್ಲುತ್ತಿರುವ, ಅದರಿಂದ ಛೀಮಾರಿಗೂ ಒಳಗಾಗುತ್ತಿರುವ ಕೆಪಿಎಸ್‌ಸಿಯನ್ನು ಸದ್ಯದ ಸ್ಥಿತಿಯಿಂದ ಮೇಲೆತ್ತಿ, ಅದನ್ನು ಕ್ರಿಯಾಶೀಲಗೊಳಿಸಲು ಎಲ್ಲ ಅಗತ್ಯ ಕ್ರಮಗಳನ್ನೂ ಸರ್ಕಾರ ಆದ್ಯತೆ ಮೇರೆಗೆ ಕೈಗೊಳ್ಳಬೇಕು. ಆ ಮೂಲಕ ಜನಹಿತ ಕಾಯುವ ತನ್ನ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು. ನೇಮಕಾತಿ ಪ್ರಕ್ರಿಯೆ ಮೇಲೆ ಜನರ ವಿಶ್ವಾಸ ಮೂಡಿಸುವಂತಹ ಹೊಣೆಗಾರಿಕೆ ಸರ್ಕಾರ, ಆಯೋಗ ಎರಡರ ಮೇಲೂ ಇದೆ. ಆಯೋಗ ಸುಗಮವಾಗಿ ಕಾರ್ಯನಿರ್ವಹಿಸಲು ಬೇಕಾದ ಎಲ್ಲ ಅಗತ್ಯ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಬೇಕು. ಆಯೋಗ ಸಮರ್ಪಕವಾಗಿ ಕಾರ್ಯ ನಿರ್ವಹಿಸಿ, ಸಕಾಲದಲ್ಲಿ ನಿಷ್ಪಕ್ಷಪಾತದಿಂದ ನೇಮಕಾತಿ ಪ್ರಕ್ರಿಯೆ ನಡೆಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT