ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಎಸಿಬಿ ಅಧಿಕಾರಿಗಳು, ಸಿಬ್ಬಂದಿಯ ಸ್ಥಳ ನಿಯುಕ್ತಿಗೆ ವಿಳಂಬ ಸಲ್ಲದು

Last Updated 18 ನವೆಂಬರ್ 2022, 21:00 IST
ಅಕ್ಷರ ಗಾತ್ರ

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿ ತನಿಖೆ ನಡೆಸುವ ಅಧಿಕಾರವನ್ನು ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಪುನಃ ನೀಡಿ, ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ರದ್ದುಗೊಳಿಸಿ ಹೈಕೋರ್ಟ್‌ ಆದೇಶ ನೀಡಿ ಮೂರು ತಿಂಗಳು ಕಳೆದಿದೆ. ಎಸಿಬಿಯನ್ನು ಅಸ್ತಿತ್ವಕ್ಕೆ ತರಲು ಹೊರಡಿಸಿದ್ದ ಎಲ್ಲ ಅಧಿಸೂಚನೆಗಳನ್ನು ರದ್ದುಗೊಳಿಸಿದ್ದ ನ್ಯಾಯಪೀಠ, ಎಸಿಬಿಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸುವಂತೆ ಆದೇಶದಲ್ಲಿ ಹೇಳಿದೆ.

ಅಳೆದು– ತೂಗಿ ಲೆಕ್ಕಾಚಾರ ಹಾಕುವುದರಲ್ಲಿ ನಿರತವಾಗಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್‌), ಎಸಿಬಿಯಲ್ಲಿರುವ ಎಲ್ಲ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸಲು ಸೆಪ್ಟೆಂಬರ್‌ 31ರಂದು ಆದೇಶ ಹೊರಡಿಸಿತ್ತು. ಹೈಕೋರ್ಟ್‌ ಆದೇಶ ಪ್ರಕಟವಾದ ದಿನದಿಂದಲೇ ಎಸಿಬಿಯಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ತನಿಖೆಗೆ ಸಂಬಂಧಿಸಿದ ಕೆಲಸಗಳನ್ನು ಸ್ಥಗಿತಗೊಳಿಸಿದ್ದರು. ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ, ಎಸ್‌ಪಿ, ಡಿವೈಎಸ್ಪಿ, ಇನ್‌ಸ್ಪೆಕ್ಟರ್‌ ಸೇರಿದಂತೆ 122 ಪೊಲೀಸ್‌ ಅಧಿಕಾರಿಗಳು ಹಾಗೂ 200 ಸಿಬ್ಬಂದಿ ಎಸಿಬಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅವರಲ್ಲಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಸೇರಿದಂತೆ ಕೆಲವು ಅಧಿಕಾರಿ ಗಳನ್ನು ಬೇರೆ ಹುದ್ದೆಗಳಿಗೆ ವರ್ಗಾವಣೆ ಮಾಡಲಾಗಿದೆ. ಬೆರಳೆಣಿಕೆಯಷ್ಟು ಅಧಿಕಾರಿಗಳು ಮತ್ತು 100 ಮಂದಿ ಕಾನ್‌ಸ್ಟೆಬಲ್‌ಗಳನ್ನು ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಆದರೆ, ನೂರಕ್ಕೂ ಹೆಚ್ಚು ಪೊಲೀಸ್‌ ಅಧಿಕಾರಿಗಳು ಮತ್ತು ನೂರು ಮಂದಿ ಕಾನ್‌ಸ್ಟೆಬಲ್‌ಗಳನ್ನು ಮೂರು ತಿಂಗಳಿನಿಂದ ಎಸಿಬಿಯಲ್ಲೇ ಇರಿಸಲಾಗಿದೆ. ಈ ಅಧಿಕಾರಿಗಳು ಮತ್ತು ಸಿಬ್ಬಂದಿ ಅಸ್ತಿತ್ವ ಕಳೆದುಕೊಂಡಿರುವ ಸಂಸ್ಥೆಯ ಕಚೇರಿಗೆ ಬಂದು, ಹಾಜರಿ ಪುಸ್ತಕಕ್ಕೆ ಸಹಿ ಹಾಕಿ ಸಂಜೆ ವಾಪಸ್‌ ಹೋಗುವುದಕ್ಕೆ ಸೀಮಿತವಾಗಿದ್ದಾರೆ.

ಎಸಿಬಿಯಲ್ಲಿದ್ದ ಎಲ್ಲ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಲೋಕಾಯುಕ್ತಕ್ಕೆ ನೀಡುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಅವರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು. ಆದರೆ, ರಾಜ್ಯದಲ್ಲಿ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕೊರತೆ ಇದೆ ಎಂಬ ಕಾರಣ ನೀಡಿದ್ದ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು, ಎಸಿಬಿಯ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸ್‌ ವಿಭಾಗದಲ್ಲಿ ವಿಲೀನಗೊಳಿಸುವ ಬೇಡಿಕೆಯನ್ನು ವಿರೋಧಿಸಿದ್ದರು. ಎಸಿಬಿಯಲ್ಲಿನ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಂಚಿಕೆ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಲೋಕಾಯುಕ್ತ ಮತ್ತು ಪೊಲೀಸ್‌ ಇಲಾಖೆಯ ಅಧಿಕಾರಿಗಳು ಹಲವು ಸುತ್ತಿನ ಚರ್ಚೆ ನಡೆಸಿದ್ದರು. ಪೊಲೀಸ್‌ ಇಲಾಖೆಯ ಇತರ ಘಟಕಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆ ನೀಗಲು ಎಸಿಬಿಯಲ್ಲಿನ ಪೊಲೀಸ್‌ ಸಿಬ್ಬಂದಿಯನ್ನು ಬಳಸಿಕೊಳ್ಳುವ ಪೊಲೀಸ್‌ ಮಹಾನಿರ್ದೇಶಕರ ಪ್ರಸ್ತಾವವನ್ನು ಉನ್ನತಮಟ್ಟದ ಸಮಿತಿ ಒಪ್ಪಿಕೊಂಡಿತ್ತು. ಆದರೆ, ಆ ಬಳಿಕವೂ ನೂರಕ್ಕೂ ಹೆಚ್ಚು ಪೊಲೀಸ್‌ ಅಧಿಕಾರಿಗಳು ಮತ್ತು 100 ಮಂದಿ ಕಾನ್‌ಸ್ಟೆಬಲ್‌ಗಳನ್ನು ಎಸಿಬಿಯಿಂದ ವರ್ಗಾವಣೆ ಮಾಡುವ ಪ್ರಕ್ರಿಯೆ ಈವರೆಗೂ ನಡೆದಿಲ್ಲ. ವಿಶ್ವಸಂಸ್ಥೆಯ ಮಾನದಂಡಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಜನಸಂಖ್ಯೆ ಮತ್ತು ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿಯ ಅನುಪಾತ ಕಡಿಮೆಯೇ ಇದೆ.

ರಾಜ್ಯದ ಹಲವು ಪೊಲೀಸ್‌ ಠಾಣೆಗಳು, ವಿಶೇಷ ಘಟಕಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕೊರತೆ ಇದೆ. ಪೊಲೀಸ್‌ ಪಡೆಯ ಕೊರತೆಯ ಕಾರಣದಿಂದಾಗಿ ಕೆಲವೆಡೆ ಅಪರಾಧ ನಿಯಂತ್ರಣ ಸವಾಲಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ 200ಕ್ಕೂ ಹೆಚ್ಚು ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಸ್ತಿತ್ವ ಕಳೆದುಕೊಂಡ ತನಿಖಾ ಸಂಸ್ಥೆಯಲ್ಲಿ ಮೂರು ತಿಂಗಳಿನಿಂದ ಮುಂದುವರಿಸಿರುವುದು ಜನಪರವಾದ ನಡೆಯಲ್ಲ. ಈ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪ್ರತೀ ತಿಂಗಳು ವೇತನ ಮತ್ತು ಭತ್ಯೆಗಳನ್ನು ನೀಡಲು ಜನರ ತೆರಿಗೆಯ ಹಣದಲ್ಲಿ ಕೋಟ್ಯಂತರ ರೂಪಾಯಿ ವ್ಯಯಿಸಲಾಗುತ್ತಿದೆ. ಆದರೆ, ಎಸಿಬಿಯಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸ್ಥಳ ನಿಯುಕ್ತಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವಲ್ಲಿ ಸರ್ಕಾರ ಅನುಸರಿಸುತ್ತಿರುವ ವಿಳಂಬ ಧೋರಣೆಯು ಪೊಲೀಸ್‌ ಸಿಬ್ಬಂದಿಯ ನೇಮಕ ಹಾಗೂ ವೇತನ, ಭತ್ಯೆ ಪಾವತಿಯ ಉದ್ದೇಶವನ್ನೇ ವಿಫಲಗೊಳಿಸುವಂತಿದೆ.

ಎಸಿಬಿಯಲ್ಲಿ ಕೆಲಸವಿಲ್ಲದೇ ಖಾಲಿ ಕುಳಿತಿರುವ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬೇರೆ ಹುದ್ದೆಗಳಿಗೆ ವರ್ಗಾವಣೆ ಮಾಡಲು ಯಾವ ಅಡ್ಡಿಯೂ ಇಲ್ಲ. ಎಸಿಬಿಯನ್ನು ರದ್ದುಗೊಳಿಸಿದ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಮೇಲ್ಮನವಿಗಳೂ ತಿರಸ್ಕೃತ ಗೊಂಡಿವೆ. ಈಗ ಎಸಿಬಿಯಲ್ಲಿ ಲಭ್ಯವಿರುವ ಪೊಲೀಸರನ್ನು ಲೋಕಾಯುಕ್ತವೂ ಸೇರಿದಂತೆ ಅಗತ್ಯ ಇರುವ ಘಟಕಗಳಿಗೆ ತ್ವರಿತವಾಗಿ ವರ್ಗಾವಣೆ ಮಾಡುವ ಮೂಲಕ, ಪೊಲೀಸರ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕಾದ ಹೊಣೆಗಾರಿಕೆ ರಾಜ್ಯ ಸರ್ಕಾರದ ಮೇಲಿದೆ. ಸಲ್ಲದ ನೆವಗಳನ್ನು ಹೇಳಿಕೊಂಡು ಅಧಿಕಾರಿಗಳು, ಸಿಬ್ಬಂದಿಗೆ ಹುದ್ದೆ ತೋರಿಸದೇ ಕಾಲಹರಣ ಮಾಡುವ ಕೆಟ್ಟ ಪ್ರವೃತ್ತಿಯನ್ನು ಕೈಬಿಡಬೇಕು. ಜನರ ತೆರಿಗೆಯ ಪಾಲಿನಲ್ಲಿ ವೇತನ, ಭತ್ಯೆಗಳನ್ನು ಪಡೆಯುವ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಯ ಸೇವೆಯನ್ನು ಮರಳಿ ಜನರಿಗಾಗಿ ಒದಗಿಸುವ ಬದ್ಧತೆಯನ್ನು ಕಾರ್ಯಾಂಗದ ನೇತೃತ್ವ ವಹಿಸಿರುವವರು ಪ್ರದರ್ಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT