ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕನ್ನಡದ ನಾಳೆಗಳಿಗೆ ಹತ್ತಾರು ಸೂತ್ರ- ಸರ್ಕಾರಕ್ಕೆ ಸಂಕಲ್ಪ ಶಕ್ತಿಯ ಪಾಠ

Last Updated 6 ಜನವರಿ 2023, 19:45 IST
ಅಕ್ಷರ ಗಾತ್ರ

ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ
ಪ್ರೊ. ದೊಡ್ಡರಂಗೇಗೌಡ ಅವರು ಪ್ರಸ್ತಾ‍ಪಿಸಿರುವ ಹಲವು ಸಂಗತಿಗಳು ಕನ್ನಡ ನಾಡು–ನುಡಿ ಹಿತಾಸಕ್ತಿಯ ದೃಷ್ಟಿಯಿಂದ ಮಹತ್ವದ್ದಾಗಿವೆ. ಶಿಕ್ಷಣ, ಜ್ಞಾನ ಹಾಗೂ ಅನ್ನದ ಭಾಷೆಯಾಗಿ ಕನ್ನಡವನ್ನು ರೂಪಿಸುವ ಅಗತ್ಯದ ಬಗ್ಗೆ ವಿಸ್ತೃತವಾಗಿ ಮಾತನಾಡಿರುವ ಅವರು, ಆ ದಿಸೆಯಲ್ಲಿ ಆಗಬೇಕಾದ ಕೆಲಸ ಗಳೇನು ಎನ್ನುವುದನ್ನೂ ಸೂಚಿಸಿದ್ದಾರೆ. ಅವರು ‍ಪ್ರಸ್ತಾಪಿಸಿರುವ, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣವನ್ನು ಕನ್ನಡ ಭಾಷೆಯಲ್ಲಿಯೇ ನೀಡುವ ತಲಾ ಒಂದೊಂದು ಕಾಲೇಜನ್ನಾದರೂ ಮುಂದಿನ ಮೂರು ವರ್ಷದ ಅವಧಿಯಲ್ಲಿ ಆರಂಭಿಸುವುದು, ‘ಕನ್ನಡ ಜ್ಞಾನ–ವಿಜ್ಞಾನ–ತಂತ್ರಜ್ಞಾನ ಕಾರ್ಯಪಡೆ’ ರಚನೆ, ‘ಕನ್ನಡ ಸಮಗ್ರ ಪಾರಿಭಾಷಿಕ ಶಬ್ದಕೋಶ’ ರೂಪಿಸುವುದು, ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ–2022’ ಕಾಯ್ದೆ ರೂಪ ಪಡೆಯುವುದು, ಖಾಸಗಿ ಕ್ಷೇತ್ರಗಳಲ್ಲಿ ಕನ್ನಡವನ್ನು ಪ್ರೋತ್ಸಾಹಿಸಲು ವಿಶೇಷ ಸರ್ಕಾರಿ ನೀತಿ ರೂಪಿಸುವುದು, ಕನ್ನಡದ ಎಲ್ಲ ಪ್ರಾಚೀನ ಹಾಗೂ ಕ್ಲಾಸಿಕ್‌ ಕೃತಿಗಳು ಉಚಿತವಾಗಿ ಲಭಿಸುವ ಆನ್‌ಲೈನ್‌ ಕೋಶ ರಚನೆ, ಇವೆಲ್ಲವೂ ಕನ್ನಡವನ್ನು ಸಶಕ್ತವಾಗಿಸುವ ನಿಟ್ಟಿನಲ್ಲಿ ಆಗಬೇಕಾದ ಕೆಲಸಗಳಾಗಿವೆ. ಉನ್ನತ ಶಿಕ್ಷಣದಲ್ಲಿ ಕನ್ನಡವನ್ನು ಮಾಧ್ಯಮವಾಗಿ ರೂಪಿಸಲು ಸ್ಪಷ್ಟ ಕಾರ್ಯಸೂಚಿಯ ಅಗತ್ಯವನ್ನು ಪ್ರತಿಪಾದಿಸಿರುವ ಅವರು, ಐದನೇ ತರಗತಿ ವರೆಗೆ ಕನ್ನಡ ಕಲಿಕೆ ಕಡ್ಡಾಯ ಮಾಡುವಂತೆ ಆಗ್ರಹಿಸಿದ್ದಾರೆ. ಬೆಳಗಾವಿ ಸೇರಿದಂತೆ ಕನ್ನಡದ ಒಂದು ಅಂಗುಲ ನೆಲವನ್ನೂ ಬೇರೆಯವರಿಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿರುವ ಸಮ್ಮೇಳನಾಧ್ಯಕ್ಷರು, ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾಜನ್ ವರದಿಯೇ ಅಂತಿಮ ಎಂದು ಹೇಳಿರುವುದು ಸರಿಯಾಗಿದೆ. ಪುಸ್ತಕೋದ್ಯಮದ ನಿರ್ಲಕ್ಷ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ನೆರವಿಗೆ ಸರ್ಕಾರ ಕಡಿವಾಣ ಹಾಕಿರುವುದರ ಬಗ್ಗೆ ಸಮ್ಮೇಳನಾಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ರಂಥಾಲಯಗಳಿ ಗೆಂದು ಸಂಗ್ರಹಿಸಿದ ಕರವನ್ನು ಅವುಗಳಿಗೆ ನೀಡದೆ ಉಳಿಸಿಕೊಂಡಿರುವುದು ಅನ್ಯಾಯ ಎಂದು ಟೀಕಿಸಿ ರುವ ಅವರು, ಸಾಂಸ್ಕೃತಿಕ ಸಂಸ್ಥೆಗಳು ಧನ ಸಹಾಯ ಪಡೆಯಲು ಅನುಸರಿಸಬೇಕಾದ ಕಗ್ಗಂಟಿನ ಮಾರ್ಗ ಗಳನ್ನು ಬದಲಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಕನ್ನಡದ ಸಾಮಾಜಿಕ–ಸಾಂಸ್ಕೃತಿಕ ಪರಂಪರೆಯ ಸ್ವರೂಪವನ್ನು ಕಟ್ಟಿಕೊಡುವುದರ ಜೊತೆಗೆ, ಆಯಾ ಕಾಲದಲ್ಲಿ ನಾಡು–ನುಡಿ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನೂ ಚರ್ಚಿಸುವ ಕಾರಣದಿಂದಾಗಿ, ಸಮ್ಮೇಳನ ಅಧ್ಯಕ್ಷರ ಭಾಷಣಗಳು ಚಾರಿತ್ರಿಕ ದಾಖಲೆಗಳಾಗಿ ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ. ಆ ಪರಂಪರೆಗೆ ಹಾವೇರಿ ಸಮ್ಮೇಳ ನಾಧ್ಯಕ್ಷರ ಭಾಷಣ ಉತ್ತಮ ಸೇರ್ಪಡೆಯಾಗಿದ್ದು, ಪ್ರಸಕ್ತ ಜಾಗತಿಕ ಸಂದರ್ಭದಲ್ಲಿ ಕನ್ನಡ ನುಡಿ ಎದುರಿಸುತ್ತಿರುವ ಸವಾಲುಗಳನ್ನು ದೊಡ್ಡರಂಗೇಗೌಡ ಅವರು ಜನರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ. ಕನ್ನಡ ಕಟ್ಟುವ ಕೆಲಸಗಳಲ್ಲಿ ಸರ್ಕಾರದ ನಿರ್ಲಕ್ಷ್ಯ ಹಾಗೂ ಇಚ್ಛಾಶಕ್ತಿಯ ಕೊರತೆಯನ್ನು ಟೀಕಿಸಲು ಅವರು ಹಿಂಜರಿದಿಲ್ಲ. ಶಾಸ್ತ್ರೀಯ ಭಾಷಾ ಸ್ಥಾನಮಾನದ ಹಿನ್ನೆಲೆಯಲ್ಲಿ ನೀಡುವ ಅನುದಾನದಲ್ಲಿ ಕೇಂದ್ರ ಸರ್ಕಾರ ಮಾಡುತ್ತಿರುವ ತಾರತಮ್ಯವನ್ನು ಅಂಕಿಅಂಶಗಳೊಂದಿಗೆ ಬಿಡಿಸಿಟ್ಟಿರುವ ಅವರು, ಕನ್ನಡಕ್ಕೆ ದೊರೆಯಬೇಕಾದ ಹಕ್ಕಿನ ಹಣವನ್ನು ತರುವ ರಾಜ್ಯ ಸರ್ಕಾರದ ಜವಾಬ್ದಾರಿಯನ್ನು ನೆನಪಿಸಿ ದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವು ಕಣ್ಣೊರೆಸುವ ತಂತ್ರವಾಗಿದೆಯೇ ಹೊರತು ಭಾಷೆ, ಸಂಶೋಧನೆಯ ದೃಷ್ಟಿಯಿಂದ ಮಹತ್ವದ್ದೇನನ್ನೂ ಸಾಧಿಸಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ‘ಡಬಲ್ ಎಂಜಿನ್ ಸರ್ಕಾರದ ಅನುಕೂಲಗಳ ಬಗ್ಗೆ ಪದೇ ಪದೇ ಹೇಳುವ ಕೇಂದ್ರ ಸರ್ಕಾರವು ಕನ್ನಡಕ್ಕೆ ಮಾಡಿರುವ ಅನುಕೂಲ ಇದೇ ಏನು’ ಎಂದು ನೇರವಾಗಿಯೇ ಪ್ರಶ್ನಿಸಿದ್ದಾರೆ. ನಮ್ಮ ಹೆಮ್ಮೆಯ ಗುರುತಾಗಿದ್ದ ಅನೇಕ ಬ್ಯಾಂಕುಗಳು ವಿಲೀನದ ನಂತರ ಚಹರೆ ಬದಲಿಸಿಕೊಂಡಿರುವುದನ್ನು ವಿಷಾದದಿಂದ ನೆನಪಿಸಿಕೊಂಡಿರುವ ಅವರು, ಗ್ರಾಹಕನ ಭಾಷೆಯನ್ನಾಡದ ಬ್ಯಾಂಕುಗಳು ಕರ್ನಾಟಕದಲ್ಲಿ ಏಕಾದರೂ ಇರಬೇಕು ಹೇಳಿ ಎಂದು ಪ್ರಶ್ನಿಸಿರುವುದು ಹಾಗೂ ನಮ್ಮ ಭಾಷೆಯಲ್ಲಿ ಸೇವೆ ನೀಡದ ಬ್ಯಾಂಕುಗಳು, ಸರ್ಕಾರಿ ಉದ್ದಿಮೆಗಳು, ಖಾಸಗಿ ಸಂಸ್ಥೆಗಳನ್ನು ಜನ ಮುಲಾಜಿಲ್ಲದೆ ಧಿಕ್ಕರಿಸಬೇಕು ಎಂದು ಕರೆ ನೀಡಿರುವುದು ಸಮಂಜಸವಾಗಿದೆ.

ಪರಧರ್ಮ ಮತ್ತು ಪರವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡಿಗರಲ್ಲಿ ಇರುವ ಸಹಿಷ್ಣು ಗುಣವನ್ನು ಸಮ್ಮೇಳನಾಧ್ಯಕ್ಷರು ನೆನಪಿಸಿಕೊಂಡಿದ್ದಾರೆ. ಶಿಶುನಾಳ ಶರೀಫ, ನಿಸಾರ್‌ ಅಹಮದ್‌, ಕರೀಂಖಾನ್‌ ಅವರನ್ನು ಸ್ಮರಿಸಿಕೊಂಡಿದ್ದಾರೆ. ‘ಸರ್ವ ಜನಾಂಗದ ಶಾಂತಿಯ ತೋಟವಾಗಿ ನಾಡು ನಳನಳಿಸಲಿ’ ಎನ್ನುವ ಆಶಯವು ಭಾಷಣದ ಕೊನೆಯಲ್ಲಿದೆ. ಆದರೆ, ಈ ಒಳಗೊಳ್ಳುವಿಕೆಯು ಹಾವೇರಿ ಸಮ್ಮೇಳನ ದಲ್ಲಿ ಎಷ್ಟರಮಟ್ಟಿಗೆ ಸಾಕಾರಗೊಂಡಿದೆ ಎನ್ನುವ ಪ್ರಶ್ನೆಗೆ ಸಮ್ಮೇಳನಾಧ್ಯಕ್ಷರು ಉತ್ತರಿಸುವ ಗೋಜಿಗೆ ಹೋಗಿಲ್ಲ. ಸಾಂಸ್ಕೃತಿಕ, ತಾಂತ್ರಿಕ, ಶೈಕ್ಷಣಿಕ, ಔದ್ಯಮಿಕ ಸೇರಿದಂತೆ ಕನ್ನಡದ ಬಹುಮುಖಿ ಸಾಧ್ಯತೆಗಳ ಬಗ್ಗೆ ಚರ್ಚಿಸಿದ್ದಾರೆ. ಆದರೆ ನೈತಿಕತೆ ಕಳೆದುಕೊಂಡಿರುವ ರಾಜಕಾರಣವನ್ನು ವಿಮರ್ಶೆಗೆ ಒಳಪಡಿಸಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ರಾಜಕಾರಣದ ಅನೈತಿಕ ನಡೆಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಗೊಳ ಗಾಗಿದ್ದು, ಅದರ ಪರಿಣಾಮ ಕನ್ನಡ ಸಮಾಜ ಮತ್ತು ಸಂಸ್ಕೃತಿಯ ಮೇಲೂ ಆಗಿರುವುದನ್ನು ಗಮನಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT