ಉಗ್ರರ ದಾಳಿ ಹೇಯ ಕೃತ್ಯ: ಯೋಜಿತ ಪ್ರತ್ಯುತ್ತರ ಅಗತ್ಯ

ಶುಕ್ರವಾರ, ಮಾರ್ಚ್ 22, 2019
21 °C

ಉಗ್ರರ ದಾಳಿ ಹೇಯ ಕೃತ್ಯ: ಯೋಜಿತ ಪ್ರತ್ಯುತ್ತರ ಅಗತ್ಯ

Published:
Updated:
Prajavani

ಕಾಶ್ಮೀರ ಕಣಿವೆಯಲ್ಲಿ ಜೈಷ್‌–ಎ– ಮೊಹಮ್ಮದ್‌ (ಜೆಇಎಂ) ಉಗ್ರರು ಪುನಃ ಅಟ್ಟಹಾಸ ಮೆರೆದಿದ್ದಾರೆ. ಜಮ್ಮುವಿನಿಂದ ಕಾಶ್ಮೀರದ ಕಡೆ ಹೊರಟಿದ್ದ ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್) ಬಸ್‌ ಮೇಲೆ ದಾಳಿ ಮಾಡಿ 49 ಯೋಧರನ್ನು ಹತ್ಯೆ ಮಾಡಿ ರಕ್ತದ ಕೋಡಿಯನ್ನೇ ಹರಿಸಿದ್ದಾರೆ. ಭಾರಿ ಹಿಮಪಾತಕ್ಕೆ ಸಿಲುಕಿ ಮುರುಟಿಹೋಗಿರುವ ಕಣಿವೆ ಜನರ ಬದುಕು ಭಯೋತ್ಪಾದಕರ ಈ ಕ್ರೌರ್ಯದಿಂದಾಗಿ ಮತ್ತಷ್ಟು ತತ್ತರಿಸಿದೆ. ತಲೆತಿರುಕ ಉಗ್ರರು ನಡೆಸಿರುವ ಹಿಂಸಾಚಾರಕ್ಕೆ ಜಾಗತಿಕವಾಗಿ ಖಂಡನೆ ವ್ಯಕ್ತವಾಗಿದೆ. ರಕ್ತಪಿಪಾಸುಗಳ ಈ ಅಮಾನವೀಯ ಕ್ರೌರ್ಯಕ್ಕೆ ದೇಶದ ಸಮಸ್ತ ಜನಸಮೂಹ ಆಕ್ರೋಶಗೊಂಡಿದೆ. ಜೆಇಎಂನ ರಣಹೇಡಿ ಉಗ್ರರು ಇಂಥ ಬೀಭತ್ಸ ಕೃತ್ಯ ಎಸಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಉರಿ ಹಾಗೂ ಪಠಾಣ್‌ಕೋಟ್‌ಗಳಲ್ಲಿ ದಾಳಿ ನಡೆಸಿದ್ದರು. ಅಮರನಾಥ ಯಾತ್ರೆಗೆ ಹೋಗಿ ಹಿಂದಿರುಗುತ್ತಿದ್ದವರ ಮೇಲೂ ಯರ‍್ರಾಬಿರ‍್ರಿ ಗುಂಡು ಹಾರಿಸಿದ್ದರು. ಆದರೆ, ಇಂಥ ದುಷ್ಕೃತ್ಯಗಳು ನಡೆದಾಗಲೆಲ್ಲಾ ನಮ್ಮ ಯೋಧರು ದಿಟ್ಟ ಉತ್ತರವನ್ನೇ ಕೊಟ್ಟಿದ್ದಾರೆ. ಸಿಆರ್‌ಪಿಎಫ್‌ ಯೋಧರನ್ನು ಬಲಿ ಪಡೆದ ಉಗ್ರರು ಮತ್ತು ಅವರಿಗೆ ಕುಮ್ಮಕ್ಕು ನೀಡಿದವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ. ಸೇನೆಗೆ ಮುಕ್ತ ಅಧಿಕಾರ ನೀಡುವುದಾಗಿ ಘೋಷಿಸಿದ್ದಾರೆ. ಉಗ್ರರನ್ನು ನಿರ್ದಾಕ್ಷಿಣ್ಯವಾಗಿ ಬಗ್ಗುಬಡಿಯುವುದಕ್ಕೆ ಯಾರ ಆಕ್ಷೇಪವೂ ಇಲ್ಲ. ಆದರೆ, ಸೇನೆಗೆ ನೀಡುವ ಮುಕ್ತ ಅಧಿಕಾರ ದುರ್ಬಳಕೆ ಆಗದಂತೆ ಎಚ್ಚರ ವಹಿಸಬೇಕಿದೆ. ಶತ್ರುಗಳನ್ನು ನಿರ್ದಿಷ್ಟವಾಗಿ ಗುರುತಿಸಿ ಕಾರ್ಯಾಚರಣೆ ನಡೆಸಬೇಕಿದೆ. ಕಾಶ್ಮೀರದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಈ ಕೆಲಸ ಸುಲಭವಾಗಬಹುದು.

ಅವಂತಿ‍ಪೋರಾದ ಈ ದುಷ್ಕೃತ್ಯದ ಹಿಂದೆ ಪಾಕಿಸ್ತಾನದ ಸಂಚು ಇದೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ. ಜೆಇಎಂ ಮುಖಂಡ ಮಸೂದ್‌ ಅಜರ್‌ ಆ ದೇಶದಲ್ಲಿ ಆಶ್ರಯ ಪಡೆದಿರುವುದಕ್ಕೆ ಭಾರತ ಬೇಕಾದಷ್ಟು ಸಾಕ್ಷ್ಯಾಧಾರ ಒದಗಿಸಿದೆ. ನಮ್ಮ ನೆಲದಲ್ಲಿ ನಡೆದಿರುವ ಅನೇಕ ದಾಳಿಗಳ ಹಿಂದೆಯೂ ಈ ಸಂಘಟನೆಯ ಕೈವಾಡವಿರುವ ಬಗ್ಗೆ ದಾಖಲೆಗಳನ್ನು ಒದಗಿಸಿದೆ. ಇಷ್ಟಾದರೂ ಉಗ್ರ ಸಂಘಟನೆಗಳಿಗೆ ಕುಮ್ಮಕ್ಕು ಕೊಡುವುದನ್ನು ಪಾಕಿಸ್ತಾನ ನಿಲ್ಲಿಸಿಲ್ಲ. ಗುರುವಾರದ ದಾಳಿ ಬಳಿಕ, ಪಾಕಿಸ್ತಾನಕ್ಕೆ ನೀಡಿದ್ದ ಅತಿ ಅನುಕೂಲಿತ ರಾಷ್ಟ್ರ (ಮೋಸ್ಟ್‌ ಫೇವರ್ಡ್‌ ನೇಷನ್‌) ಮಾನ್ಯತೆಯನ್ನು ಭಾರತ ವಾಪಸ್‌ ಪಡೆದಿದೆ. ಆದರೆ, ಇದೊಂದೇ ಕ್ರಮದಿಂದ ಅದನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ಎಲ್ಲ ದೇಶಗಳ ಮೇಲೂ ಒತ್ತಡ ಹೇರಿ ಜಾಗತಿಕವಾಗಿ ಅದನ್ನು ಏಕಾಂಗಿ ಮಾಡಲು ಪ್ರಯತ್ನಿಸಬೇಕು. ಇದು ಸುಲಭದ ಕೆಲಸವಲ್ಲ. ಏಕೆಂದರೆ, ಪಾಕಿಸ್ತಾನಕ್ಕೆ ದಕ್ಷಿಣ ಏಷ್ಯಾ ಮಾತ್ರವಲ್ಲ, ವಿಶ್ವದ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಲು ಪ್ರಯತ್ನಿಸುತ್ತಿರುವ ಚೀನಾ ಬೆಂಬಲವಿದೆ. ಪಾಕಿಸ್ತಾನ ಹೆಚ್ಚಿನ ವ್ಯಾಪಾರ ಸಂಬಂಧ ಹೊಂದಿರುವುದು ಚೀನಾದೊಂದಿಗೆ. ಪರಸ್ಪರರ ಹಿತಾಸಕ್ತಿ ಕಾಪಾಡಲು ಉಭಯತ್ರರು ಬದ್ಧವಾಗಿರುವುದರಿಂದ ಪಾಕಿಸ್ತಾನವನ್ನು ಏಕಾಂಗಿಯಾಗಿಸಲು ಭಾರತಕ್ಕೆ ಕಷ್ಟವಾಗಿದೆ. ಈ ಕಾರಣಕ್ಕೆ, ಮಸೂದ್‌ ಅಜರ್‌ನನ್ನು ‘ಜಾಗತಿಕ ಉಗ್ರ’ ಎಂದು ಘೋಷಿಸಬೇಕು ಎಂಬ ಭಾರತದ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ. ಅಮೆರಿಕ ಮತ್ತಿತರ ರಾಷ್ಟ್ರಗಳು ಭಾರತದ ಪರ ಗಟ್ಟಿಯಾಗಿ ಮಾತನಾಡುವ ಸ್ಥಿತಿಯಲ್ಲಿಲ್ಲ. ಇದನ್ನು ಬಳಸಿಕೊಂಡು ಪಾಕಿಸ್ತಾನ ಆಟವಾಡುತ್ತಿದೆ. ಭಾರತದ ವಿರುದ್ಧ ಉಗ್ರರಿಗೆ ತನ್ನ ನೆಲ ಬಳಸಿಕೊಳ್ಳಲು ಅವಕಾಶ ನೀಡುತ್ತಿದೆ. ಸಿಆರ್‌ಪಿಎಫ್‌ ಯೋಧರ ಮೇಲೆ ನಡೆದ ದಾಳಿಯ ಹಿಂದೆ ಗುಪ್ತಚರ ವೈಫಲ್ಯವೂ ಇದೆ. ಉಗ್ರರ ಯೋಜನೆ ಬಗ್ಗೆ ಮಾಹಿತಿ ಸಂಗ್ರಹಿಸಲು ಗುಪ್ತದಳಕ್ಕೆ ಏಕೆ ಸಾಧ್ಯವಾಗಲಿಲ್ಲ ಎಂಬುದು ಯಕ್ಷಪ್ರಶ್ನೆ. ಸದಾ ಭಾರಿ ಭದ್ರತೆ ಇರುವ ಜಮ್ಮು– ಶ್ರೀನಗರ ಹೆದ್ದಾರಿಗೆ ನುಗ್ಗಲು ಉಗ್ರನಿಗೆ ಹೇಗೆ ಸಾಧ್ಯವಾಯಿತು. ಭದ್ರತಾ ಪಡೆಗಳು ಏನು ಮಾಡುತ್ತಿದ್ದವು ಎಂಬುದು ಅರ್ಥವಾಗದ ಸಂಗತಿ. ಸಿಆರ್‌ಪಿಎಫ್‌ನ 2,547 ಸಿಬ್ಬಂದಿಯನ್ನು ಬೇರೆ ಬೇರೆ ತಂಡಗಳಲ್ಲಿ ಕಳುಹಿಸಬಹುದಿತ್ತು. ಒಟ್ಟಿಗೆ ಕರೆದೊಯ್ದು ಕೆಲವರನ್ನು ಉಗ್ರರಿಗೆ ಬಲಿ ಕೊಟ್ಟಿದ್ದು ಮಾತ್ರ ಅತ್ಯಂತ ನೋವಿನ ಸಂಗತಿ. ಎಡವಟ್ಟು ಆಗಿದ್ದು ಎಲ್ಲಿ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !