ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐ ಆಡಳಿತ ಮಂಡಳಿ ರಂಗೋಲಿ ಕೆಳಗೆ ನುಸುಳಿದ ರಾಜಕೀಯ

ಬಹುಕೋಟಿ ಉದ್ಯಮವಾಗಿರುವ ಕ್ರಿಕೆಟ್‌ನ ಆಡಳಿತ ಪಾರದರ್ಶಕವಾಗಿ ಉಳಿಯಬೇಕು. ಇಲ್ಲದಿದ್ದರೆ ಕೋಟ್ಯಂತರ ಕ್ರಿಕೆಟ್‌ಪ್ರೇಮಿಗಳ ವಿಶ್ವಾಸಕ್ಕೆ ದ್ರೋಹ ಬಗೆದಂತೆ ಆಗುತ್ತದೆ
Last Updated 19 ಅಕ್ಟೋಬರ್ 2019, 5:20 IST
ಅಕ್ಷರ ಗಾತ್ರ

ಸೌರವ್ ಗಂಗೂಲಿ ಅವರು ಭಾರತ ತಂಡದಲ್ಲಿ ತಮ್ಮ ನಾಯಕತ್ವ ಮತ್ತು ಆಟದ ಮೂಲಕ ‘ಬಂಗಾಳದ ಹುಲಿ’ ಎಂದೇ ಖ್ಯಾತರಾದವರು. ಇದೀಗ ಅವರು, ವಿಶ್ವದ ಶ್ರೀಮಂತ ಕ್ರೀಡಾ ಸಂಸ್ಥೆಗಳಲ್ಲಿ ಒಂದಾದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷರಾಗುತ್ತಿದ್ದಾರೆ. ಈ ತಿಂಗಳ 23ರಂದು ಅಧಿಕೃತ ಘೋಷಣೆಯಾಗಬೇಕಷ್ಟೆ. ಆದರೆ ಅವರು ಇಲ್ಲಿಯೂ ತಮ್ಮ ‘ಹುಲಿ’ ಪಟ್ಟ ಉಳಿಸಿಕೊಳ್ಳು ವರೇ ಅಥವಾ ರಾಜಕಾರಣಿಗಳ ಕೈಗೊಂಬೆಯಾಗುವರೇ ಎಂಬ ಸಂದೇಹ ವ್ಯಕ್ತವಾಗುತ್ತಿದೆ. ಏಕೆಂದರೆ, ಅವರೊಂದಿಗೆ ಇನ್ನುಳಿದ ಪದಾಧಿಕಾರಿಗಳ ಸ್ಥಾನಗಳನ್ನು ಪಡೆದವರಲ್ಲಿ ಬಹುತೇಕರು ರಾಜಕೀಯ ಹಿನ್ನೆಲೆಯುಳ್ಳವರು. ಅಲ್ಲದೆ ಈ ಹಿಂದೆ ಬಿಸಿಸಿಐ ಮೇಲೆ ಬಿಗಿಹಿಡಿತ ಹೊಂದಿದ್ದವರ ಮಕ್ಕಳು, ಸಂಬಂಧಿಕರು ಮತ್ತು ಆಪ್ತರೂ ಆಗಿದ್ದಾರೆ. ಇದರಿಂದಾಗಿ, ಕ್ರಿಕೆಟ್‌ ಆಡಳಿತವನ್ನು ಸ್ವಚ್ಛಗೊಳಿಸುವ ಆಶಯಕ್ಕೆ ಕೊಡಲಿಪೆಟ್ಟು ಬಿದ್ದಂತೆ ಕಾಣುತ್ತಿದೆ. ನಿವೃತ್ತ ನ್ಯಾಯಮೂರ್ತಿ ಆರ್‌.ಎಂ. ಲೋಧಾ ಸಮಿತಿಯ ಶಿಫಾರಸುಗಳು, ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪುಗಳು ಮತ್ತು ಕ್ರಿಕೆಟ್ ಆಡಳಿತ ಸಮಿತಿಯ (ಸಿಒಎ) ಪ್ರಯತ್ನಗಳು ವ್ಯರ್ಥ ಕಸರತ್ತುಗಳಂತಾಗಿರುವ ಅನುಮಾನ ಮೂಡಿದೆ. ಕುಟುಂಬ ರಾಜಕಾರಣವನ್ನು ವಿರೋಧಿಸುವುದಾಗಿಬಿಜೆಪಿ ಹೇಳುತ್ತದೆ. ಆದರೆ, ಬಿಸಿಸಿಐನಲ್ಲಿ ಅಂತಹ ರಾಜಕಾರಣಕ್ಕೆ ತಾನೇ ಅವಕಾಶ ಮಾಡಿಕೊಟ್ಟಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಗ ಜಯ್ ಶಾ ಅವರು ಕಾರ್ಯದರ್ಶಿ ಮತ್ತು ಸಚಿವ ಅನುರಾಗ್ ಠಾಕೂರ್ ಅವರ ಸಹೋದರ ಅರುಣ್‌ಸಿಂಗ್ ಧುಮಾಲ್ ಖಜಾಂಚಿಯಾಗಿದ್ದಾರೆ. ಇವರಿಬ್ಬರ ಕ್ರಿಕೆಟ್‌ ಸಾಧನೆಯೇನೂ ಹೇಳಿಕೊಳ್ಳುವಂತಿಲ್ಲ. ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಬರಲಿರುವ ಕೇರಳದ ಜಯೇಶ್ ಜಾರ್ಜ್ ಅವರ ಮೇಲೆ ಹಣ ಅವ್ಯವಹಾರದ ಆರೋಪ ಇದೆ.

ಕ್ರಿಕೆಟ್‌ ಮಂಡಳಿಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ಹೊಸದೇನಲ್ಲ. 1928ರಲ್ಲಿ ಮಂಡಳಿ ರಚನೆಗೆ ಶ್ರೀಕಾರ ಹಾಕಿದಾಗಿನಿಂದ ರಾಜಮನೆತನ ದವರು, ಉದ್ಯಮಿಗಳು, ಹಿರಿಯ ಕ್ರಿಕೆಟಿಗರು ಮತ್ತು ಸ್ವಾತಂತ್ರ್ಯಾನಂತರ ರಾಜಕೀಯ ಧುರೀಣರು ಅಧ್ಯಕ್ಷರಾಗಿರುವ ಉದಾಹರಣೆಗಳು ಇವೆ. ಹೀಗೆ ಗದ್ದುಗೆಯೇರಿದ ರಾಜಕಾರಣಿಗಳಲ್ಲಿ ಶರದ್‌ ಪವಾರ್, ಮಾಧವರಾವ್ ಸಿಂಧಿಯಾ ಮತ್ತು ಅನುರಾಗ್ ಠಾಕೂರ್ ಪ್ರಮುಖರು. ಆದರೆ ಕ್ರಿಕೆಟ್‌ ಆಡಳಿತದಲ್ಲಿ ಸ್ವಜನಪಕ್ಷಪಾತ, ಆಟದಲ್ಲಿ ಫಿಕ್ಸಿಂಗ್, ಬೆಟ್ಟಿಂಗ್ ದೂರುಗಳು ಹೆಚ್ಚಿದ ಮೇಲೆ ಆಡಳಿತಕ್ಕೆ ಸರ್ಜರಿ ಮಾಡುವ ಅಭಿಪ್ರಾಯಗಳು ವ್ಯಕ್ತವಾದವು. 2014ರಲ್ಲಿ ಐಪಿಎಲ್‌ನಲ್ಲಿ ಸ್ಪಾಟ್‌ ಫಿಕ್ಸಿಂಗ್ ನಡೆದಾಗ ಕ್ರಿಕೆಟ್‌ ಆಡಳಿತವನ್ನು ಸ್ವಚ್ಛ ಗೊಳಿಸಲು ಲೋಧಾ ಸಮಿತಿಯನ್ನು ಸುಪ್ರೀಂ ಕೋರ್ಟ್‌ ನೇಮಕ ಮಾಡಿತು. ಈ ಸಮಿತಿಯು ತನ್ನ ಶಿಫಾರಸುಗಳ ಮೂಲಕ ಯಾರನ್ನು ಕ್ರಿಕೆಟ್‌ನಿಂದ ದೂರ ಇಡಲು ಪ್ರಯತ್ನಿಸಿತೋ, ಅವರೆಲ್ಲ ಪರೋಕ್ಷವಾಗಿ ಬಿಸಿಸಿಐ ಮೇಲೆ ನಿಯಂತ್ರಣ ಸಾಧಿಸಲು ಹೊರಟಿದ್ದಾರೆ. ಫಿಕ್ಸಿಂಗ್ ಹಗರಣದಲ್ಲಿ ಪದಚ್ಯುತ ಗೊಂಡಿದ್ದ ಶ್ರೀನಿವಾಸನ್ ಅವರ ಮಗಳು ಮತ್ತು ಜೈಲುಪಾಲಾಗಿದ್ದ ಗುರುನಾಥ್ ಮೇಯಪ್ಪನ್ ಅವರ ಪತ್ನಿ ರೂಪಾ ಅವರು ತಮಿಳುನಾಡು ರಾಜ್ಯ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷೆಯಾಗಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಮಗ ವೈಭವ್ ಅವರು ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಬಿಸಿಸಿಐ ಮಾಜಿ ಪದಾಧಿಕಾರಿಗಳಾದ ಶಶಾಂಕ್ ಮನೋಹರ್ (ವಿದರ್ಭ), ಜಯವಂತ್ ಲೆಲೆ (ಬರೋಡಾ), ನಿರಂಜನ್ ಶಾ (ಸೌರಾಷ್ಟ್ರ), ದಿವಂಗತ ಜಗಮೋಹನ್ ದಾಲ್ಮಿಯಾ (ಬಂಗಾಳ) ಅವರ ಪುತ್ರರೂ ಆಯಾ ರಾಜ್ಯದ ಕ್ರಿಕೆಟ್‌ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿದ್ದಾರೆ.ಈ ಬಾರಿ ಇನ್ನೊಂದು ಹೊಸ ಬೆಳವಣಿಗೆ ಆಗಿದೆ. ಪ್ರತಿಬಾರಿ ಚುನಾವಣೆಯಾದಾಗಲೂ ‍ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯಗಳ ನಡುವೆ ಪೈಪೋಟಿ ಇರುತ್ತಿತ್ತು. ಹೆಚ್ಚು ಮತಗಳಿದ್ದ ಪೂರ್ವ ವಲಯದ ಪ್ರಾಬಲ್ಯವೇ ಪ್ರಮುಖವಾಗುತ್ತಿತ್ತು. ಈ ಬಾರಿ ಎಲ್ಲರೂ ಒಂದಾಗಿದ್ದಾರೆ. ಮೊದಲು ಅಧಿಕಾರ ಕೈಗೆ ತೆಗೆದುಕೊಂಡು, ಸಿಒಎಯನ್ನು ವಿಸರ್ಜಿಸಬೇಕೆಂಬ ಇವರ ಉದ್ದೇಶ ಗುಟ್ಟಾಗೇನೂ ಉಳಿದಿಲ್ಲ. ನೂತನ ನಿಯಮಾವಳಿ ಪ್ರಕಾರ, ಗಂಗೂಲಿ ಅವರು ಹತ್ತು ತಿಂಗಳ ನಂತರ ‘ಕೂಲಿಂಗ್ ಆಫ್’ ನಿಯಮಕ್ಕೆ ಒಳಪಡುತ್ತಾರೆ. ಅಂದರೆ, ಆರು ವರ್ಷಗಳ ಕಾಲ ಸತತವಾಗಿ ಪದಾಧಿಕಾರಿಯಾಗಿದ್ದವರು ಒಂದು ಅವಧಿಗೆ (ಮೂರು ವರ್ಷ) ವಿರಾಮ ಪಡೆಯುವುದು ಕಡ್ಡಾಯ. ಆದಕಾರಣ, ಗಂಗೂಲಿಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವರು. ಆಗ ಕರ್ನಾಟಕದ ಹಿರಿಯ ಕ್ರಿಕೆಟಿಗ, ಐಪಿಎಲ್‌ನ ನಿಯೋಜಿತ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆ ಇದೆ. ಒಂದಂತೂ ನಿಜ. ಯಾರೇ ಅಧಿಕಾರಕ್ಕೆ ಬಂದರೂ ಕ್ರಿಕೆಟ್ ವರ್ಚಸ್ಸು ಹೆಚ್ಚಿಸಲು ಮತ್ತು ಪ್ರತಿಭಾವಂತ ಆಟಗಾರರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಕ್ರಿಕೆಟ್‌ ಈಗ ಬಹುಕೋಟಿ ಉದ್ಯಮವಾಗಿಯೂ ಬೆಳೆದಿದೆ. ಇದರ ಆಡಳಿತ ಪಾರದರ್ಶಕವಾಗಿ ಉಳಿಯಬೇಕು. ಕುಟುಂಬ ರಾಜಕಾರಣದ ಕರಿನೆರಳು ಆಡಳಿತದ ಮೇಲೆ ಬೀಳಬಾರದು. ಬೆಟ್ಟಿಂಗ್, ಫಿಕ್ಸಿಂಗ್ ಪಿಡುಗನ್ನು ಮಟ್ಟಹಾಕಲೇಬೇಕು. ಇಲ್ಲದಿದ್ದರೆ ಕೋಟ್ಯಂತರ ಕ್ರಿಕೆಟ್‌ಪ್ರೇಮಿಗಳ ವಿಶ್ವಾಸಕ್ಕೆ ದ್ರೋಹ ಬಗೆದಂತಾಗುತ್ತದೆ. ಆಗ ಬಿಸಿಸಿಐಗೆ ಅಸ್ತಿತ್ವವೇ ಇರುವುದಿಲ್ಲ ಎಂಬುದನ್ನು ಆಡಳಿತ ನಡೆಸುವವರು ಮನಗಾಣಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT