ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಬಿಎಸ್‌ಎನ್‌ಎಲ್‌ಗೆ ನೆರವು ಅಗತ್ಯವಾಗಿದ್ದ ಉಪಕ್ರಮ

Last Updated 3 ಆಗಸ್ಟ್ 2022, 20:45 IST
ಅಕ್ಷರ ಗಾತ್ರ

ಭಾರತ್ ಸಂಚಾರ್ ನಿಗಮ್‌ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌) ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರವು ಒಟ್ಟು ₹ 1.64 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ ಮಾಡಿದೆ. ಸರ್ಕಾರಿ ಸ್ವಾಮ್ಯದ, ನಷ್ಟದಲ್ಲಿರುವ ಈ ಕಂಪನಿಗೆ ಇಷ್ಟು ಮೊತ್ತ ನೀಡಲು ಕೇಂದ್ರ ಸಂಪುಟವು ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ. ಕಂಪನಿಯ ಈಗಿನ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿದರೆ, ಈ ಪ್ಯಾಕೇಜ್ ಮೂಲಕ ಸಾಧಿಸಲು ಹೊರಟಿರುವ ಗುರಿಯು ಬಹುದೊಡ್ಡದು ಎಂದು ಅನ್ನಿಸುತ್ತದೆ.

ಬಿಎಸ್‌ಎನ್‌ಎಲ್‌ ಕಂಪನಿಯನ್ನು 2026–27ರೊಳಗೆ ಲಾಭದಾಯಕ ಆಗಿಸುವ ಉದ್ದೇಶ ಕೇಂದ್ರಕ್ಕೆ ಇದೆ. ಈ ಪ್ಯಾಕೇಜ್‌ ಅನ್ನು ವಾಸ್ತವದಲ್ಲಿ ಇನ್ನೂ ಮೊದಲೇ ಘೋಷಣೆ ಮಾಡಿದ್ದಿದ್ದರೆ ಒಳ್ಳೆಯದಿತ್ತು. 2019ರಲ್ಲಿ ಕೇಂದ್ರ ಸರ್ಕಾರವು ಬಿಎಸ್‌ಎನ್‌ಎಲ್‌ ಕಂಪನಿಗಾಗಿ ₹ 74 ಸಾವಿರ ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ ಮಾಡಿತ್ತು. ಇದು ಒಂದಿಷ್ಟು ನೆರವಿಗೆ ಬಂದಿದೆ. ಪ್ಯಾಕೇಜ್‌ನ ಭಾಗವಾಗಿದ್ದ ಸಾಲದ ಮರುಹೊಂದಾಣಿಕೆ ಕ್ರಮಗಳು ಬಿಎಸ್‌ಎನ್‌ಎಲ್‌ಗೆ ಪ್ರಯೋಜನ ತಂದುಕೊಟ್ಟಿವೆ.

ಹೀಗಿದ್ದರೂ, ಕಂಪನಿಗೆ ಇನ್ನಷ್ಟು ನೆರವಿನ ಅಗತ್ಯ ಇದೆ. ಬಿಎಸ್‌ಎನ್‌ಎಲ್‌ಕಳೆದ ಹಲವು ವರ್ಷಗಳಿಂದ ಗ್ರಾಹಕರನ್ನು ಕಳೆದುಕೊಳ್ಳುತ್ತ ಬಂದಿದೆ. ಬ್ರಾಡ್‌ಬ್ಯಾಂಡ್ ಮಾರುಕಟ್ಟೆಯಲ್ಲಿ ರಿಲಯನ್ಸ್ ಜಿಯೊ ಕಂಪನಿಯು ಶೇಕಡ 52.18ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಏರ್‌ಟೆಲ್‌ ಕಂಪನಿಯು ಶೇ 27.32ರಷ್ಟು ಪಾಲು ಹೊಂದಿದೆ. ಆದರೆ, ಈ ಮಾರು ಕಟ್ಟೆಯಲ್ಲಿ ಬಿಎಸ್‌ಎನ್‌ಎಲ್ ಪಾಲು ಶೇ 3.21 ಮಾತ್ರ.

ಕಳೆದ ಮೂರು ವರ್ಷಗಳಲ್ಲಿ ಕಂಪನಿ ಅನುಭವಿಸಿರುವ ಒಟ್ಟು ನಷ್ಟವು ಸರಿಸುಮಾರು ₹ 30 ಸಾವಿರ ಕೋಟಿ ಆಗುತ್ತದೆ. 2018–19ರಲ್ಲಿ ವಾರ್ಷಿಕ ನಷ್ಟ ₹ 13,804 ಕೋಟಿ ಇದ್ದುದು 2020–21ರಲ್ಲಿ ₹ 7,453 ಕೋಟಿಗೆ ಇಳಿಕೆ ಆಗಿದೆ. ಹೀಗಿದ್ದರೂ, ಈ ಕಂಪನಿಯು ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಹೊರೆಯೇ ಆಗಿದೆ.

ಬಿಎಸ್‌ಎನ್‌ಎಲ್‌ ಕಂಪನಿಗೆ ಸರ್ಕಾರದ ನೆರವಿನ ಅಗತ್ಯ ಇದೆ. ಏಕೆಂದರೆ, ಇದು ಸರ್ಕಾರದ ಉಪಸ್ಥಿತಿಯ ಅಗತ್ಯ ಇರುವ ಮಹತ್ವದ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ದೇಶದ ದೂರಸಂಪರ್ಕ ವಲಯದಲ್ಲಿ ಈಗ ಎರಡು ಪ್ರಮುಖ ಕಂಪನಿಗಳ ನಡುವೆ ನೇರ ಪೈಪೋಟಿ ಇದೆ.

ಈ ವಲಯದಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು ಎಂದಾದರೆ ಬಿಎಸ್‌ಎನ್‌ಎಲ್‌ ಗಟ್ಟಿಯಾಗಿ ನೆಲೆ ಕಂಡುಕೊಳ್ಳುವ ಅಗತ್ಯ ಖಂಡಿತ ಇದೆ. ದೇಶದಲ್ಲಿನ ಡಿಜಿಟಲ್ ಕಂದಕವನ್ನು ಮುಚ್ಚಬೇಕು ಎಂದಾದರೆ ಅದಕ್ಕೂ ಬಿಎಸ್‌ಎನ್‌ಎಲ್‌ನ ನೆರವು ಬೇಕು. ಖಾಸಗಿ ಕಂಪನಿಗಳು ಪ್ರವೇಶ ಮಾಡಲು ಹಿಂದೇಟು ಹಾಕುವ ಗ್ರಾಮೀಣ ಮಾರುಕಟ್ಟೆಗಳಲ್ಲಿ, ನಗರಗಳಿಂದ ತೀರಾ ದೂರದಲ್ಲಿನ ಮಾರುಕಟ್ಟೆಗಳಲ್ಲಿ ಬಿಎಸ್‌ಎನ್‌ಎಲ್‌ಗೆ ಈಗಲೂ ಗಣನೀಯ ಸಂಖ್ಯೆ ಯಲ್ಲಿ ಗ್ರಾಹಕರು ಇದ್ದಾರೆ.

ಗ್ರಾಮೀಣ ಭಾಗಗಳಲ್ಲಿ ಬಿಎಸ್‌ಎನ್‌ಎಲ್‌ ತನ್ನ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ವಿನಿಯೋಗ ಮಾಡಿದರೆ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಸಂಪಾದಿಸಬಹುದು ಎಂಬ ವಾದ ಇದೆ. ಈ ವಾದದಲ್ಲಿ ಖಂಡಿತ ಹುರುಳಿದೆ. ಮಹತ್ವಾಕಾಂಕ್ಷೆಯ ಭಾರತ್‌ನೆಟ್‌ ಯೋಜನೆ ಯನ್ನು 2025ರೊಳಗೆ ಅನುಷ್ಠಾನಕ್ಕೆ ತರುವ ಗುರಿಯನ್ನು ಬಿಎಸ್‌ಎನ್‌ಎಲ್‌ ಹೊಂದಿದೆ. ಕೇಂದ್ರ ಸರ್ಕಾರವು ಈಗ ಘೋಷಣೆ ಮಾಡಿರುವ ಪುನಶ್ಚೇತನ ಪ್ಯಾಕೇಜ್‌ನ ಭಾಗವಾಗಿ, ಭಾರತ್ ಬ್ರಾಡ್‌ಬ್ಯಾಂಡ್‌ ನೆಟ್‌ವರ್ಕ್‌ ಲಿಮಿಟೆಡ್‌ (ಬಿಬಿಎನ್‌ಎಲ್) ಕಂಪನಿಯನ್ನು ಬಿಎಸ್‌ಎನ್‌ಎಲ್ ಜೊತೆ ವಿಲೀನ ಮಾಡ ಲಾಗುತ್ತದೆ.

ಬಿಬಿಎನ್‌ಎಲ್‌ಗೆ ಭಾರತ್‌ನೆಟ್‌ ಫೈಬರ್ ನೆಟ್‌ವರ್ಕ್‌ ಜಾಲ ರೂಪಿಸುವ ಹೊಣೆ ಇದೆ. ಇದು ದೇಶದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸಲಿದೆ. ನಕ್ಸಲ್‌ ಸಮಸ್ಯೆ ಇರುವ ಪ್ರದೇಶಗಳು ಸೇರಿದಂತೆ ಅತ್ಯಂತ ದುರ್ಗಮ ಪ್ರದೇಶಗಳಲ್ಲಿಯೂ ಬ್ರಾಡ್‌ಬ್ಯಾಂಡ್ ಸೌಲಭ್ಯ ದೊರೆಯುವಂತೆ ಮಾಡಲಿದೆ.

ಕೇಂದ್ರ ಸರ್ಕಾರದ ಪ್ಯಾಕೇಜ್‌ನಲ್ಲಿ ಎರಡು ಭಾಗಗಳು ಇವೆ. ಅವುಗಳಲ್ಲಿ ಒಂದು ನಗದು ರೂಪದಲ್ಲಿ ಸಿಗುವ ₹ 43,964 ಕೋಟಿ. ಇತರ ನೆರವುಗಳ ರೂಪದಲ್ಲಿ ಸಿಗುವ ₹ 1.20 ಲಕ್ಷ ಕೋಟಿ ಇನ್ನೊಂದು ಭಾಗ. ಇವು ನಾಲ್ಕು ವರ್ಷಗಳ ಅವಧಿಯಲ್ಲಿ ಸಿಗಲಿವೆ. ಬಿಎಸ್‌ಎನ್‌ಎಲ್‌ ಸೇವೆಗಳನ್ನು ಉನ್ನತೀಕರಿಸಲು, ಕಂಪನಿಗೆ ತರಂಗಾಂತರ ಹಂಚಿಕೆ ಮಾಡಲು, ಕಂಪನಿಯ ಮೇಲಿನ ಹಣಕಾಸಿನ ಒತ್ತಡವನ್ನು ಕಡಿಮೆ ಮಾಡಲು ಹಾಗೂ ಫೈಬರ್ ಜಾಲವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲು ನೆರವನ್ನು ಬಳಸಿಕೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರವು ಹೇಳಿದೆ.

ಕೇಂದ್ರವು ಘೋಷಣೆ ಮಾಡಿರುವ ಪ್ಯಾಕೇಜ್‌ ಅನ್ನು ಅತ್ಯಂತ ದಕ್ಷವಾಗಿ ಬಳಕೆ ಮಾಡಿಕೊಳ್ಳುವುದು ಹಾಗೂ ಕಂಪನಿಯ ಕಾರ್ಯ ಕ್ಷಮತೆಯನ್ನು ಹೆಚ್ಚಿಸುವುದು ಬಹುದೊಡ್ಡ ಸವಾಲು. ನೆರವಿನ ಹಣವನ್ನು ಬಹಳ ವೃತ್ತಿಪರವಾಗಿ ಬಳಕೆ ಮಾಡಿಕೊಳ್ಳಬೇಕು. ಕಂಪನಿಯ ಸೇವೆಗಳನ್ನು ಉತ್ತಮಪಡಿಸಲು ಒಳ್ಳೆಯ ತಾಂತ್ರಿಕ ನೆರವು ಬೇಕು. ಮೊದಲು 1.65 ಲಕ್ಷ ಇದ್ದ ಕಂಪನಿಯ ಕೆಲಸಗಾರರ ಸಂಖ್ಯೆಯು ಈಗ 64,536ಕ್ಕೆ ಇಳಿಕೆ ಆಗಿದೆ. ಆದರೆ, ತಂತ್ರಜ್ಞಾನವನ್ನು ಮೇಲ್ದರ್ಜೆಗೆ ಏರಿಸಬೇಕಾಗಿದೆ.

ದೂರಸಂಪರ್ಕ ವಲಯದ ಖಾಸಗಿ ಕಂಪನಿಗಳು ಐದನೆಯ ತಲೆಮಾರಿನ (5ಜಿ) ತರಂಗಾಂತರಗಳನ್ನು ಹರಾಜು ಮೂಲಕ ಖರೀದಿ ಮಾಡಿರುವ ಸಂದರ್ಭದಲ್ಲಿ, ತನ್ನ ಗ್ರಾಹಕರಿಗೆ 4ಜಿ ಸೇವೆಗಳನ್ನು ಯಾವಾಗ ಒದಗಿಸುವುದು ಎಂಬ ಚಿಂತನೆ ಬಿಎಸ್‌ಎನ್‌ಎಲ್‌ನಲ್ಲಿ ನಡೆದಿದೆ. ಇದು ಈ ಕಂಪನಿಯು ಸೇವೆಗಳನ್ನು ಒದಗಿಸುವ ವಿಚಾರದಲ್ಲಿ ಅದೆಷ್ಟು ಹಿಂದಕ್ಕೆ ಉಳಿದಿದೆ ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ತೋರಿಸುತ್ತಿದೆ. ಇವನ್ನೆಲ್ಲ ಗಮನಿಸಿದರೆ, ಹಣಕಾಸಿನ ವಿಚಾರದಲ್ಲಿ ಬಿಎಸ್‌ಎನ್‌ಎಲ್‌ ತಕ್ಷಣಕ್ಕೆ ಬಹಳ ದೊಡ್ಡ ಸಾಧನೆಯನ್ನು ತೋರಲಿದೆ ಎಂದು ನಿರೀಕ್ಷೆ ಮಾಡುವುದು ಅತಿಯಾಗಬಹುದು. ಹೀಗಿದ್ದರೂ ಈ ಕಂಪನಿಯ ಬೆಂಬಲಕ್ಕೆ ಸರ್ಕಾರವು ನಿಲ್ಲಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT