ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕೇಂದ್ರದಿಂದ ಅನುದಾನ ಹಂಚಿಕೆ: ರಾಜ್ಯಗಳ ಅಸಮಾಧಾನಕ್ಕೆ ಕಿವಿಗೊಡಿ

Published 8 ಫೆಬ್ರುವರಿ 2024, 18:56 IST
Last Updated 8 ಫೆಬ್ರುವರಿ 2024, 18:56 IST
ಅಕ್ಷರ ಗಾತ್ರ

ಹಣಕಾಸಿನ ಅನುದಾನ ಬಿಡುಗಡೆಯ ವಿಚಾರದಲ್ಲಿ ಕೇಂದ್ರ ಸರ್ಕಾರವು ತಾರತಮ್ಯದ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಸಂಪುಟದ ಸದಸ್ಯರು, ಕಾಂಗ್ರೆಸ್ಸಿನ ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳು ದೆಹಲಿಯಲ್ಲಿ ನಡೆಸಿದ ಪ್ರತಿಭಟನೆಯು ಹಿಂದೆಂದೂ ನಡೆದಿರದಂಥದ್ದು. ಅನುದಾನ ನೀಡುವಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂಬ ಆರೋಪವನ್ನು ರಾಜ್ಯ ಸರ್ಕಾರವು ಕೇಂದ್ರದ ವಿರುದ್ಧ ಹಲವು ತಿಂಗಳುಗಳಿಂದ ಮಾಡುತ್ತ ಬಂದಿದೆ. ‘ಚಲೋ ದೆಹಲಿ’ ಹೆಸರಿನಲ್ಲಿ ನಡೆದ ಪ್ರತಿಭಟನೆಯು ಈ ವಿಚಾರವನ್ನು ರಾಷ್ಟ್ರಮಟ್ಟಕ್ಕೆ ಒಯ್ದಿದೆ. ಕರ್ನಾಟಕ ಹಾಗೂ ದಕ್ಷಿಣದ ಇತರ ರಾಜ್ಯಗಳ ಪಾಲಿಗೆ ಅನುಕೂಲಕರ ಅಲ್ಲದ ರೀತಿಯಲ್ಲಿ ಅನುದಾನ ಹಂಚಿಕೆ ನಡೆಯುತ್ತಿದೆ, ಅನುದಾನ ಹಂಚಿಕೆಯು ನ್ಯಾಯಸಮ್ಮತವಾಗಿ ಇರಬೇಕು ಎಂದು ಸಿದ್ದರಾಮಯ್ಯ ಹಲವು ಬಾರಿ ಹೇಳಿದ್ದಾರೆ. ದೇಶದ ಬೊಕ್ಕಸಕ್ಕೆ ರಾಜ್ಯ ನೀಡುವ ಪ್ರತಿ ₹100ರಲ್ಲಿ ಮರಳಿ ರಾಜ್ಯಕ್ಕೆ ಸಿಗುತ್ತಿರುವುದು ₹12 ಮಾತ್ರ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದು ಸರಿಯಲ್ಲ ಎಂಬುದು ಅವರ ನಿಲುವು. ಕೇಂದ್ರ ಹಾಗೂ ರಾಜ್ಯಗಳ ನಡುವೆ ಹಂಚಿಕೆಯಾಗುವ ತೆರಿಗೆ ವರಮಾನದಲ್ಲಿ ಕರ್ನಾಟಕದ ಪಾಲು ಶೇಕಡ 4.71ರಷ್ಟು ಇದ್ದದ್ದು 15ನೇ ಹಣಕಾಸು ಆಯೋಗದ ಶಿಫಾರಸಿನ ನಂತರದಲ್ಲಿ ಶೇಕಡ 3.64ಕ್ಕೆ ಇಳಿಕೆ ಆಗಿದೆ ಎಂದು ಹೇಳಲಾಗಿದೆ. ಮೊತ್ತದ ಲೆಕ್ಕದಲ್ಲಿ ಹೇಳಬೇಕಾದರೆ, 14ನೇ ಹಣಕಾಸು ಆಯೋಗದ ಶಿಫಾರಸಿಗೆ ಅನುಗುಣವಾಗಿ ಪಡೆಯುತ್ತಿದ್ದ ಮೊತ್ತಕ್ಕೆ ಹೋಲಿಸಿದರೆ ಇದು ಶೇ 22.5ರಷ್ಟು ಕಡಿಮೆ. ಅನುದಾನ ಹಂಚಿಕೆಯ ಸೂತ್ರದಿಂದಾಗಿ ಅತಿಹೆಚ್ಚಿನ ನಷ್ಟ ಆಗಿರುವುದು ಕರ್ನಾಟಕಕ್ಕೆ ಎಂದು ಸರ್ಕಾರ ಹೇಳಿದೆ.

ರಾಜ್ಯ ಸರ್ಕಾರದ ಅಂದಾಜಿನ ಪ್ರಕಾರ, ರಾಜ್ಯಕ್ಕೆ ಆಗಿರುವ ಒಟ್ಟು ನಷ್ಟದ ಮೊತ್ತವು ₹1.87 ಲಕ್ಷ ಕೋಟಿ. ಹೆಚ್ಚು ಅಭಿವೃದ್ಧಿ ಹೊಂದಿರುವ ರಾಜ್ಯಗಳು,
ಅಭಿವೃದ್ಧಿಯಲ್ಲಿ ಹಿಂದಿರುವ ರಾಜ್ಯಗಳಿಗೆ ನೆರವಾಗಬೇಕು ಎಂಬ ಆಧಾರದಲ್ಲಿ ಅನುದಾನ ಹಂಚಿಕೆಯ ಸೂತ್ರ ಜಾರಿಯಾಗಿರುವ ಕಾರಣದಿಂದಾಗಿ ಈ ರೀತಿ ಆಗಿದೆ. ಆದರೆ ಅಭಿವೃದ್ಧಿಯಲ್ಲಿ ಮುಂದೆ ಬಂದಿರುವ ರಾಜ್ಯಗಳಲ್ಲಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಉತ್ತಮ ಸಾಧನೆ ತೋರಿದ್ದಕ್ಕಾಗಿ ತಮ್ಮನ್ನು ಶಿಕ್ಷಿಸಲಾಗುತ್ತಿದೆ ಎಂಬ ಭಾವನೆ ಮೂಡುವ ಸ್ಥಿತಿ ನಿರ್ಮಾಣ ಆಗಬಾರದು. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ ನೀಡಿದ ಪರಿಹಾರ ಮೊತ್ತವು ಸಮರ್ಪಕವಾಗಿ ಇಲ್ಲ, ರಾಜ್ಯಗಳ ಜೊತೆ ಹಂಚಿಕೊಳ್ಳಲು ಅವಕಾಶವಿಲ್ಲದ ಸೆಸ್ ಹಾಗೂ ಸರ್ಚಾರ್ಜ್‌ ವಿಧಿಸುವುದಕ್ಕೆ ಕೇಂದ್ರವು ಹೆಚ್ಚು ಉತ್ಸಾಹ ತೋರುತ್ತಿದೆ ಎಂಬ ಬೇಸರ ಕೂಡ ಕರ್ನಾಟಕಕ್ಕೆ ಇದೆ. 15ನೇ ಹಣಕಾಸು ಆಯೋಗವು ತೆರಿಗೆ ವರಮಾನದಲ್ಲಿ ಶೇ 41ರಷ್ಟನ್ನು ರಾಜ್ಯಗಳ ಜೊತೆ ಹಂಚಿಕೊಳ್ಳುವಂತೆ ಶಿಫಾರಸು ಮಾಡಿದ್ದರೂ, ವಾಸ್ತವದಲ್ಲಿ ಹಂಚಿಕೆ ಮಾಡುತ್ತಿರುವುದು ಸರಿಸುಮಾರು ಶೇ 30ರಷ್ಟು ಮೊತ್ತವನ್ನು ಮಾತ್ರ ಎಂದೂ ಕರ್ನಾಟಕ ಹೇಳಿದೆ. ಇವಿಷ್ಟೇ ಅಲ್ಲದೆ, ಇನ್ನೂ ಕೆಲವು ದೂರು–ದುಮ್ಮಾನಗಳನ್ನು ರಾಜ್ಯ ಹೊಂದಿದೆ.

ಬಿಜೆಪಿಯನ್ನು ವಿರೋಧಿಸುವ ಪಕ್ಷಗಳ ಆಡಳಿತ ಇರುವ ಇತರ ಕೆಲವು ರಾಜ್ಯಗಳ ಸರ್ಕಾರಗಳು ಕೂಡ ಕರ್ನಾಟಕ ಸರ್ಕಾರದ ರೀತಿಯಲ್ಲೇ ಅಸಮಾಧಾನ ಹೊಂದಿವೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಸಂಪುಟದ ಸಹೋದ್ಯೋಗಿಗಳು ಗುರುವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕ ಸರ್ಕಾರದ ಪ್ರತಿಭಟನೆ ನಡೆದ ಮಾರನೆಯ ದಿನವೇ ಇದು ನಡೆದಿದೆ. ಕೇರಳದ ಪ್ರತಿಭಟನೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಮತ್ತು ವಿರೋಧ ಪಕ್ಷಗಳ ಕೆಲವು ನಾಯಕರು ಭಾಗಿಯಾಗಿದ್ದರು. ಪ್ರತಿಭಟನೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಣಕಾಸು ಅನುದಾನ ಹಂಚಿಕೆಯಲ್ಲಿ ಕೇಂದ್ರವು ತಾರತಮ್ಯ ಎಸಗುತ್ತಿದೆ ಎಂದು ಕೇರಳ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯೊಂದನ್ನು ಕೂಡ ಸಲ್ಲಿಸಿದೆ. ಕೇಂದ್ರದ ಕೆಲವು ಮಹತ್ವದ ಯೋಜನೆಗಳಿಗೆ  ಅನುದಾನ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಧರಣಿ ನಡೆಸಿದ್ದಾರೆ. ಕರ್ನಾಟಕ ಹಾಗೂ ಇತರ ರಾಜ್ಯಗಳ ಆರೋಪವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಲ್ಲಗಳೆದಿದ್ದಾರೆ. ಆದರೆ ಕೇಂದ್ರದ ನೀತಿಗಳ ಕುರಿತಾಗಿ ರಾಜ್ಯಗಳು ಹೊಂದಿರುವ ಅಸಮಾಧಾನ ಮತ್ತು ಅತೃಪ್ತಿ ಸಂಪೂರ್ಣವಾಗಿ ಆಧಾರರಹಿತವೇನೂ ಅಲ್ಲ. ಒಕ್ಕೂಟ ವ್ಯವಸ್ಥೆಯ ಹಣಕಾಸಿನ ಸಂಬಂಧಗಳಲ್ಲಿ ರಾಜಕೀಯ ನುಸುಳಬಾರದು. ರಾಜ್ಯಗಳ ದೂರು ಹಾಗೂ ಪ್ರತಿಭಟನೆಯನ್ನು ‘ರಾಜಕೀಯ ಉದ್ದೇಶದ್ದು’ ಎಂದು ಕೇಂದ್ರವು ತಳ್ಳಿಹಾಕುವುದು ತಪ್ಪಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT