ಕೇಂದ್ರೀಯ ತನಿಖಾ ದಳವನ್ನು (ಸಿಬಿಐ) ಸುಪ್ರೀಂ ಕೋರ್ಟ್ 2013ರಲ್ಲಿ ‘ಪಂಜರದ ಗಿಣಿ’ ಎಂದು ಬಣ್ಣಿಸುವ ಮೂಲಕ ಸಿಬಿಐ ಕಾರ್ಯವೈಖರಿ ಬಗ್ಗೆ ತನ್ನ ತೀವ್ರ ಅತೃಪ್ತಿ ವ್ಯಕ್ತಪಡಿಸಿತ್ತು. ಆಗ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇತ್ತು. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂತು. ಈಗ, ಸಿಬಿಐ ಕಾರ್ಯವೈಖರಿ ಬಗ್ಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಅವರ ಈಗಿನ ಮಾತುಗಳನ್ನು 2013ರಲ್ಲಿ ಆಡಿದ ಮಾತುಗಳ ಪರಿಷ್ಕೃತ ರೂಪವಾಗಿಯೂ ಗ್ರಹಿಸಬಹುದು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ತನಿಖಾ ಸಂಸ್ಥೆಗಳ ಪಾತ್ರ ಹಾಗೂ ಹೊಣೆಗಾರಿಕೆ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ನ್ಯಾಯಮೂರ್ತಿ ರಮಣ ಅವರು, ಸಿಬಿಐ ನಿರ್ವಹಿಸಿದ ಪಾತ್ರವು ಹಲವು ಪ್ರಶ್ನೆಗಳನ್ನು ಮೂಡಿಸಿದೆ ಎಂದು ಹೇಳಿದ್ದಾರೆ. ಸಂಸ್ಥೆಯು ಸಾರ್ವಜನಿಕರ ಕಣ್ಣಲ್ಲಿ ವಿಶ್ವಾಸವನ್ನು ಮತ್ತೆ ಸಂಪಾದಿಸಿಕೊಳ್ಳಬೇಕು, ಸಾಮಾಜಿಕ ಸ್ವೀಕಾರಾರ್ಹತೆಯ ಬಗ್ಗೆಯೂ ಗಮನ ನೀಡಬೇಕು ಎಂದು ಕೂಡ ಹೇಳಿದ್ದಾರೆ. ಈ ದಿಸೆಯಲ್ಲಿ ಮೊದಲ ಹೆಜ್ಜೆಯಾಗಿ, ತನಿಖಾ ಸಂಸ್ಥೆಗಳು ರಾಜಕೀಯ ಅಧಿಕಾರ ಹೊಂದಿರುವವರ ಜೊತೆಗಿನ ನಂಟನ್ನು ಬಿಡಬೇಕು ಎಂದು ಕರೆ ನೀಡಿದ್ದಾರೆ. ಪೊಲೀಸ್ ವ್ಯವಸ್ಥೆ ಮತ್ತು ಇತರ ತನಿಖಾ ಸಂಸ್ಥೆಗಳು ಸೇರಿದಂತೆ ದೇಶದ ಯಾವುದೇ ಸಂಸ್ಥೆಯು ಸರ್ವಾಧಿಕಾರಿ ಧೋರಣೆ ತನ್ನತ್ತ ಸುಳಿಯದಂತೆ ನೋಡಿಕೊಳ್ಳಬೇಕು, ಎಲ್ಲ ಸಂಸ್ಥೆಗಳೂ ಪ್ರಜಾತಾಂತ್ರಿಕ ಚೌಕಟ್ಟಿನ ಒಳಗೇ ಕೆಲಸ ಮಾಡಬೇಕು ಎಂದು ಕೂಡ ಅವರು ಹೇಳಿದ್ದಾರೆ. ಈ ಚೌಕಟ್ಟು ಮೀರಿ ಕಾರ್ಯ ನಿರ್ವಹಿಸಲು ಮುಂದಾದರೆ ಸಂಸ್ಥೆಗಳಿಗೇ ಧಕ್ಕೆ ಆಗುತ್ತದೆ, ಪ್ರಜಾತಂತ್ರ ದುರ್ಬಲ ಆಗುತ್ತದೆ ಎಂದು ಕೂಡ ಅವರು ಎಚ್ಚರಿಸಿದ್ದಾರೆ. ಸಿಬಿಐ, ಜಾರಿ ನಿರ್ದೇಶನಾಲಯದಂತಹ ತನಿಖಾ ಸಂಸ್ಥೆಗಳನ್ನು ಒಂದೇ ಸ್ವತಂತ್ರ ಸಂಸ್ಥೆಯ ಅಡಿ ತರುವ ಆಲೋಚನೆಯನ್ನೂ ಅವರು ಮುಂದಿರಿಸಿದ್ದಾರೆ.

ಇಡೀ ಪೊಲೀಸ್ ವ್ಯವಸ್ಥೆ ಹಾಗೂ ತನಿಖಾ ಸಂಸ್ಥೆಗಳಿಗೆ ಇರುವ ಸಮಸ್ಯೆಗಳು ಏನು ಎಂಬುದನ್ನು ಸಿಜೆಐ ರಮಣ ಅವರು ಬಹಳ ವಿವರವಾಗಿ ಹೇಳಿದ್ದಾರೆ. ಬಹುಶಃ, 2013ರಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಪೀಠ ಹೇಳಿದ್ದ ಮಾತುಗಳಿಗಿಂತ ಹೆಚ್ಚು ವಿವರವಾಗಿ ಇವೆ ಅವರ ಮಾತುಗಳು. ಭ್ರಷ್ಟಾಚಾರ, ಅಧಿಕಾರದ ಮಿತಿಯನ್ನು ಮೀರಿ ವರ್ತಿಸುವುದು, ನಿಷ್ಪಕ್ಷಪಾತ ಧೋರಣೆ ಕಡಿಮೆ ಆಗಿರುವುದು, ರಾಜಕೀಯ ಲೋಕದ ಜೊತೆ ನಿಕಟ ಸಂಬಂಧ ಹೊಂದಿರುವುದು ಆ ಸಮಸ್ಯೆಗಳಲ್ಲಿ ಕೆಲವು ಎಂದು ಅವರು ಪಟ್ಟಿ ಮಾಡಿದ್ದಾರೆ. ಇವಿಷ್ಟೇ ಅಲ್ಲದೆ, ಮೂಲಸೌಕರ್ಯದ ಕೊರತೆ, ಅಗತ್ಯ ಮಾನವ ಸಂಪನ್ಮೂಲ ಇಲ್ಲದಿರುವುದು, ಆಧುನಿಕ ಉಪಕರಣಗಳನ್ನು ತನಿಖಾ ಸಂಸ್ಥೆಗಳಿಗೆ ಕೊಡದಿರುವುದು ಕೂಡ ಸಮಸ್ಯೆಗಳ ಪಟ್ಟಿಯಲ್ಲಿ ಜಾಗ ಪಡೆದಿರಬಹುದು. ಆದರೆ, ಮುಖ್ಯ ಸಮಸ್ಯೆ ಇರುವುದು ರಾಜಕೀಯ ನಾಯಕರ ಜೊತೆಗಿನ ನಂಟು ಮತ್ತು ತನಿಖಾ ಸಂಸ್ಥೆಗಳ ಮೇಲೆ ರಾಜಕಾರಣಿಗಳು ಹೊಂದಿರುವ ನಿಯಂತ್ರಣ. ಇದು ಎಲ್ಲರಿಗೂ ಗೊತ್ತಿದೆ. ಅಧಿಕಾರದಲ್ಲಿ ಇರುವವರನ್ನು ಹಾಗೂ ಇಂತಹ ನಿಯಂತ್ರಣದಿಂದ ಲಾಭ ಮಾಡಿಕೊಳ್ಳುವವರನ್ನು ಹೊರತುಪಡಿಸಿದರೆ ಉಳಿದ ಎಲ್ಲರೂ ಇದನ್ನು ಒಪ್ಪಿಕೊಳ್ಳುತ್ತಾರೆ. ದುರದೃಷ್ಟದ ಸಂಗತಿಯೆಂದರೆ, ಇಂತಹ ನಿಯಂತ್ರಣಗಳನ್ನು ಹೊಂದುವ ಮೂಲಕ ತಾವು ದೇಶದ ಪ್ರಜಾತಂತ್ರ ವ್ಯವಸ್ಥೆಗೆ ಮಾಡುವ ಹಾನಿಯನ್ನು ರಾಜಕೀಯ ಪಕ್ಷಗಳಾಗಲೀ ಸರ್ಕಾರಗಳಾಗಲೀ ಅರ್ಥ ಮಾಡಿಕೊಳ್ಳುವುದಿಲ್ಲ. ವ್ಯವಸ್ಥೆಯಲ್ಲಿ ಸರ್ವಾಧಿಕಾರದ ಮನಃಸ್ಥಿತಿ ನುಸುಳದಂತೆ ನೋಡಿಕೊಳ್ಳಬೇಕು ಎಂದು ಸಿಜೆಐ ರಮಣ ಹೇಳಿರುವುದು ಇವೆಲ್ಲವುಗಳನ್ನು ಗಮನಿಸಿಯೇ.

ತನಿಖಾ ಸಂಸ್ಥೆಗಳನ್ನು ನೋಡಿಕೊಳ್ಳಲು ಸ್ವತಂತ್ರವಾದ ವ್ಯವಸ್ಥೆಯೊಂದನ್ನು ರಚಿಸುವ ಸಿಜೆಐ ಪ್ರಸ್ತಾವ
ವನ್ನು ಅಧಿಕಾರದಲ್ಲಿ ಇರುವವರು ಗಂಭೀರವಾಗಿ ಪರಿಗಣಿಸುವರೇ ಎಂಬುದು ಸ್ಪಷ್ಟವಾಗಿಲ್ಲ. ಸಿಬಿಐ ಹಾಗೂ ಪೊಲೀಸ್ ವ್ಯವಸ್ಥೆ ಇಂದಿನ ಸಮಸ್ಯೆಗಳಲ್ಲಿ ಸಿಲುಕಿರುವುದಕ್ಕೆ ಕಾರಣ ಒಳ್ಳೆಯ ಆಲೋಚನೆಗಳ ಕೊರತೆಯಾಗಲೀ ಪ್ರಸ್ತಾವಗಳು ಇಲ್ಲದಿರುವುದಾಗಲೀ ಅಲ್ಲ. ವ್ಯವಸ್ಥೆ ಈಗಿರುವಂತೆಯೇ ಇರಲಿ ಎಂದು ಸರ್ಕಾರವೇ ಬಯಸುತ್ತಿರಬಹುದು. ಸರ್ಕಾರದ ಧೋರಣೆ ಏನಿರಬಹುದು ಎಂಬುದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರ ಮಾತಿನಲ್ಲಿ ಧ್ವನಿಸಿದೆ. ಸಿಬಿಐ ಈಗ ಪಂಜರದ ಗಿಣಿ ಅಲ್ಲ; ಅದು ನಿಜವಾಗಿಯೂ ತನ್ನ ಕರ್ತವ್ಯ ನಿಭಾಯಿಸುತ್ತಿದೆ ಎಂದು ರಿಜಿಜು ಹೇಳಿದ್ದಾರೆ. ಪೊಲೀಸರನ್ನು, ತನಿಖಾ ಸಂಸ್ಥೆಗಳನ್ನು ಸರ್ಕಾರಗಳು ಅಸ್ತ್ರದಂತೆ ಬಳಸಿಕೊಂಡಿವೆ. ಈಗ ಸರ್ಕಾರದ ನೇತೃತ್ವ ವಹಿಸಿರುವವರು ಈ ಕೆಲಸವನ್ನು ಇನ್ನಷ್ಟು ವ್ಯಾಪಕವಾಗಿ ಮಾಡಿದ್ದಾರೆ. ಸಿಜೆಐ ಅವರ ಮಾತುಗಳು ಆಡಳಿತದ ಚುಕ್ಕಾಣಿ ಹಿಡಿದಿರುವವರ ಧೋರಣೆಯಲ್ಲಿ ಬದಲಾವಣೆ ತರಬಹುದೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.