ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯು ಉದ್ಯಮಶೀಲತೆ, ಸಾಂಸ್ಕೃತಿಕ ಪರಂಪರೆ, ಶೈಕ್ಷಣಿಕ ಸಾಧನೆಯಂತಹ ಹಲವು ವಿಷಯಗಳಲ್ಲಿ ದೇಶಕ್ಕೆ ಮಾದರಿ. ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ವಿಜಯಾ ಬ್ಯಾಂಕ್ ಸೇರಿದಂತೆ ಹಲವು ಬೃಹತ್ ಬ್ಯಾಂಕ್ಗಳು ಕೂಡ ಈ ನೆಲದಲ್ಲೇ ಹುಟ್ಟಿದವು. ಪ್ರಾಥಮಿಕ, ಪ್ರೌಢಶಿಕ್ಷಣ ಮಾತ್ರವಲ್ಲ, ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲೂ ಈ ಜಿಲ್ಲೆಗಳು ಮುಂಚೂಣಿಯಲ್ಲಿವೆ. ಹೋಟೆಲ್ ಉದ್ಯಮದಲ್ಲಿ ಇಲ್ಲಿನ ಜನ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಸೌಹಾರ್ದಕ್ಕೆ ಹೆಸರಾಗಿದ್ದ ಈ ಜಿಲ್ಲೆಗಳು ಹಲವು ವರ್ಷಗಳಿಂದ ಕೋಮು ಧ್ರುವೀಕರಣದ ಪ್ರಯೋಗಶಾಲೆಯಾಗಿ ಪರಿವರ್ತನೆ ಹೊಂದಿವೆ. ಕೋಮು ಹಿಂಸೆಯ ದಳ್ಳುರಿಗೆ ಎರಡೂ ಜಿಲ್ಲೆಗಳು ನಲುಗಿವೆ. ಅಭಿವೃದ್ಧಿಪಥದಲ್ಲಿ ದೇಶಕ್ಕೆ ಮಾದರಿಯಾದ ರಾಜ್ಯದ ಕರಾವಳಿಯಲ್ಲಿ ಈಗ ಮತೀಯವಾದ ಆರ್ಭಟಿಸುತ್ತಿದೆ. ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಅನುಮಾನದ ಕಂದಕ ಸೃಷ್ಟಿಯಾಗಿದೆ.

ಏಪ್ರಿಲ್ 27ರಂದು ಮಂಗಳೂರು ಹೊರವಲಯದ ಕುಡುಪು ಎಂಬಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದ ಸ್ಥಳದಲ್ಲಿ ಕೇರಳದ ವಯನಾಡು ಜಿಲ್ಲೆಯ ಅಶ್ರಫ್ ಎಂಬ ವ್ಯಕ್ತಿಯನ್ನು ಗುಂಪು ಹಲ್ಲೆ ನಡೆಸಿ, ಹತ್ಯೆ ಮಾಡಲಾಗಿತ್ತು. ಘಟನೆಯ ಪ್ರತ್ಯಕ್ಷದರ್ಶಿಗಳು ಕರೆ ಮಾಡಿ ಮಾಹಿತಿ ನೀಡಿದ್ದರೂ ಅದಕ್ಕೆ ಸ್ಪಂದಿಸದೇ ಪೊಲೀಸ್ ಸಹಾಯವಾಣಿಗೆ ಕರೆ ಮಾಡುವಂತೆ ಸೂಚಿಸಿ, ಕರ್ತವ್ಯಲೋಪ ಎಸಗಿದ್ದ ಆರೋಪದ ಮೇಲೆ ಒಬ್ಬ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಇಬ್ಬರು ಕಾನ್ಸ್ಟೆಬಲ್ಗಳನ್ನು ಅಮಾನತು ಮಾಡಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಬಜಪೆಯ ಕಿನ್ನಿಪದವು ಎಂಬಲ್ಲಿ ಹಿಂದುತ್ವ ಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ರೌಡಿಶೀಟರ್ ಸುಹಾಸ್ ಶೆಟ್ಟಿ ಎಂಬಾತನನ್ನು ಎದುರಾಳಿ ಗುಂಪೊಂದು ಹತ್ಯೆ ಮಾಡಿದೆ. ರೌಡಿಗಳಿಬ್ಬರ ಮಧ್ಯದ ಸಂಘರ್ಷದಲ್ಲಿ ಕೊಲೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೂ ಪ್ರಕರಣಕ್ಕೆ ಮತೀಯ ಬಣ್ಣ ಲೇಪಿಸಿ, ಸಾಮರಸ್ಯ ಕದಡುವ ಪ್ರಯತ್ನ ಕರಾವಳಿಯಲ್ಲಿ ನಡೆದಿದೆ. ವೈಯಕ್ತಿಕ ದ್ವೇಷದಿಂದ ಕೊಲೆಯಾದವರಿಗೂ ಹುತಾತ್ಮರ ಪಟ್ಟ ಕಟ್ಟುವ ಪ್ರಯತ್ನಗಳು ಇಲ್ಲಿ ಪದೇ ಪದೇ ಘಟಿಸಿವೆ. ಧರ್ಮಾಧಾರಿತ ಸಂಘಟನೆಗಳ ಮುಖಂಡರ ಜೊತೆ ರಾಜಕೀಯ ನಾಯಕರೂ ಇದರಲ್ಲಿ ಶಾಮೀಲಾಗಿದ್ದಾರೆ. ದ್ವೇಷ ಕೆರಳಿಸುವ ಮಾತುಗಳ ಪರಿಣಾಮವಾಗಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಲ್ಲಿ ಮೇ 1ರ ಬಳಿಕ ಸರಣಿಯೋಪಾದಿಯಲ್ಲಿ ಮತೀಯ ದ್ವೇಷದ ಹಿಂಸಾಕೃತ್ಯಗಳು ನಡೆದಿವೆ. ಹತ್ಯೆಗೆ– ಹತ್ಯೆ ಎಂಬ ಪ್ರತೀಕಾರದ ನಡೆಗೆ ನಾಗರಿಕ ಸಮಾಜದಲ್ಲಿ ಅವಕಾಶವಿಲ್ಲ. ಈ ಬಗೆಯ ದುಷ್ಕೃತ್ಯಗಳನ್ನು ಯಾವುದೇ ಮುಲಾಜಿಗೆ ಒಳಗಾಗದೇ ಹತ್ತಿಕ್ಕುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕು.

ಮತೀಯ ಧ್ರುವೀಕರಣದ ಮೂಲಕ ರಾಜಕೀಯ ಲಾಭ ಪಡೆಯಲು ಕಾದು ಕುಳಿತ ರಾಜಕೀಯ ನಾಯಕರು, ದ್ವೇಷೋನ್ಮಾದವನ್ನು ಪ್ರಚೋದಿಸುವ ಕೆಲವು ಸಂಘಟನೆಗಳ ಮುಖಂಡರು ಹೊತ್ತಿಕೊಂಡ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಾರೆ. ದ್ವೇಷ ಕೆರಳಿಸಿ, ರಕ್ತ ಹರಿಸಿ ಲಾಭ ಪಡೆಯಲು ಹವಣಿಸುವವರು ಎಲ್ಲ ಧರ್ಮಗಳಲ್ಲೂ ಇದ್ದಾರೆ. ಸಾಮಾಜಿಕ ಮಾಧ್ಯಮಗಳ ಪ್ರಭಾವ ಬಲವಾಗಿರುವ ಈ ಕಾಲಘಟ್ಟದಲ್ಲಿ ಇಂತಹ ಪ್ರಚೋದನೆ ಬಹುಬೇಗ ಜನರನ್ನು ಆವರಿಸುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಮತೀಯ ದ್ವೇಷದ ಹಿಂಸೆ ತಡೆಗೆ ‘ಕೋಮುಹಿಂಸೆ ನಿಗ್ರಹ ಕಾರ್ಯಪಡೆ’ ರಚಿಸುವುದಾಗಿ ಗೃಹ ಸಚಿವ ಜಿ. ಪರಮೇಶ್ವರ ಘೋಷಿಸಿದ್ದಾರೆ. ಇದು ಉತ್ತಮ ನಿರ್ಧಾರ. ಆದರೆ, ಕೋಮು ಹಿಂಸೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ಮತ್ತು ದುಷ್ಕೃತ್ಯಗಳ ನಿಗ್ರಹದ ವಿಷಯದಲ್ಲಿ ಪೊಲೀಸರು ಕಠಿಣ ನಿಲುವು ತೆಗೆದುಕೊಂಡರೆ ಮಾತ್ರ ಪರಿಸ್ಥಿತಿ ಹತೋಟಿಗೆ ಬರಲು ಸಾಧ್ಯ. ಮತೀಯ ದ್ವೇಷವನ್ನು ಪ್ರಚೋದಿಸುವ ರಾಜಕೀಯ ನಾಯಕರು, ಸಂಘಟನೆಗಳ ಮುಖಂಡರ ವಿರುದ್ಧವೂ ಕಾನೂನಿನ ಅಸ್ತ್ರ ಪ್ರಯೋಗಿಸುವ ಮೂಲಕ ಇಂತಹ ಚಟುವಟಿಕೆಗಳನ್ನು ಸಹಿಸುವುದಿಲ್ಲ ಎಂಬ ಬಲವಾದ ಸಂದೇಶವನ್ನು ಸರ್ಕಾರ ರವಾನಿಸಬೇಕು. ಕರಾವಳಿಯ ಜನರು ಸೌಹಾರ್ದದ ಪರವಾಗಿ ದಿಟ್ಟತನದಿಂದ ನಿಂತರಷ್ಟೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯ. ಇಂತಹ ಕೃತ್ಯಗಳಿಂದ ರಾಜಕೀಯ ಮತ್ತು ಇತರ ಲಾಭ ಪಡೆಯಲು ಪ್ರಯತ್ನಿಸುವ ವ್ಯಕ್ತಿ, ಸಂಘಟನೆ, ರಾಜಕೀಯ ಪಕ್ಷಗಳನ್ನು ಈ ಜಿಲ್ಲೆಯ ಜನರು ದೂರ ಇಡಬೇಕು. ಮತೀಯ ದ್ವೇಷವನ್ನು ಬದಿಗೊತ್ತಿ ಅಭಿವೃದ್ಧಿಪಥವನ್ನು ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ಜನರು ತೋರುವ ಧೈರ್ಯವೇ ಈ ಜಿಲ್ಲೆಗಳ ಭವಿಷ್ಯವನ್ನು ನಿರ್ಧರಿಸುತ್ತದೆ. ಈ ದಿಸೆಯಲ್ಲಿ ಕಠಿಣವಾದ ನಿಲುವು ತಾಳುವ ಮೂಲಕ ಕರಾವಳಿಯ ಜಿಲ್ಲೆಗಳಿಗೆ ಪಾರಂಪರಿಕವಾಗಿ ಇದ್ದ ಘನತೆ ಮತ್ತು ವೈಭವವನ್ನು ಮರಳಿ ತಂದುಕೊಡುವ ಪ್ರಯತ್ನ ಜನರಿಂದಲೇ ಆರಂಭವಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.