ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ : ವಾಕ್‌ ಸ್ವಾತಂತ್ರ್ಯ ದಮನಕ್ಕೆ ಹೊಸ ಹೊಸ ಮಾರ್ಗ

Published 4 ಮೇ 2023, 20:38 IST
Last Updated 4 ಮೇ 2023, 20:38 IST
ಅಕ್ಷರ ಗಾತ್ರ

ವಾಕ್‌ ಸ್ವಾತಂತ್ರ್ಯದ ಹಕ್ಕು ಚಲಾವಣೆಗೆ ಸಂವಿಧಾನವು ಸ್ವಲ್ಪ ಮಟ್ಟಿನ ನಿರ್ಬಂಧಗಳನ್ನು ವಿಧಿಸಿದೆ. ಆದರೆ, ಇತ್ತೀಚಿನ ದಿನಗಳಲ್ಲಿ, ವಾಕ್‌ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳಿಗೆ ಯಾವ ಮಿತಿಯೂ ಇಲ್ಲದಂತಾಗಿದೆ. ಸಿಪಿಎಂ ಸಂಸದ ಜಾನ್‌ ಬ್ರಿಟ್ಟಾಸ್‌ ಅವರು ಬರೆದ ಲೇಖನವೊಂದರ ಕುರಿತು ವಿವರಣೆ ಕೊಡುವಂತೆ ರಾಜ್ಯಸಭೆಯ ಸಭಾಪತಿ ಜಗದೀಪ್‌ ಧನಕರ್ ಅವರು ನೋಟಿಸ್‌ ನೀಡಿದ್ಧಾರೆ. ಧಕನರ್‌ ಅವರ ಈ ನಡವಳಿಕೆಯನ್ನು ನೋಡಿದರೆ, ವಾಕ್‌ ಸ್ವಾತಂತ್ರ್ಯಕ್ಕೆ ಹೇರುವ ನಿರ್ಬಂಧಗಳಿಗೆ ಮಿತಿಯೇ ಇಲ್ಲ ಎಂಬ ತೀರ್ಮಾನಕ್ಕೆ ನಾವು ಬರಬಹುದಾಗಿದೆ. ಬ್ರಿಟ್ಟಾಸ್‌ ಅವರು ಫೆಬ್ರುವರಿ 20ರಂದು ಬರೆದ ಲೇಖನವೊಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯೊಂದನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿದ್ದರು. ‘ಕೇರಳವು ನಿಮ್ಮ ಹತ್ತಿರದಲ್ಲಿದೆ’, ಹಾಗಾಗಿ ಕರ್ನಾಟಕವನ್ನು ಬಿಜೆಪಿ ಮಾತ್ರ ರಕ್ಷಿಸಬಲ್ಲುದು ಎಂಬರ್ಥದಲ್ಲಿ ಶಾ ಮಂಗಳೂರಿನಲ್ಲಿ ಹೇಳಿದ್ದರು. ಕರ್ನಾಟಕದ ಸುರಕ್ಷತೆಗೆ ಕೇರಳವು ಬೆದರಿಕೆ ಒಡ್ಡಬಹುದು ಎಂಬ ಅರ್ಥದಲ್ಲಿ ಶಾ ನೀಡಿದ್ದ ಹೇಳಿಕೆಯನ್ನು ಬ್ರಿಟ್ಟಾಸ್‌ ಅವರು ಟೀಕಿಸಿದ್ದರು. ಶಾ ಅವರನ್ನು ಟೀಕಿಸಿರುವುದು ದೇಶದ್ರೋಹವಾಗಿದ್ದು, ಬ್ರಿಟ್ಟಾಸ್‌ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಪದಾಧಿಕಾರಿಯೊಬ್ಬರು ಧನಕರ್ ಅವರನ್ನು ಕೋರಿದ್ದರು. 

ಅಮಿತ್‌ ಶಾ ಅವರ ಹೇಳಿಕೆಯನ್ನು ಟೀಕಿಸುವ ಹಕ್ಕು ಬ್ರಿಟ್ಟಾಸ್‌ ಅವರಿಗೆ ಇದೆ. ಸಾಂವಿಧಾನಿಕ ಹುದ್ದೆಯಲ್ಲಿರುವ ಧನಕರ್ ಅವರಿಗೆ ಪೌರರ ಹಕ್ಕುಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಇದೆ. ಅಂತಹ ಹೊಣೆಗಾರಿಕೆ ಇರುವ ವ್ಯಕ್ತಿಯು ಬ್ರಿಟ್ಟಾಸ್‌ ಅವರಿಗೆ ನೋಟಿಸ್‌ ನೀಡಿರುವುದು ಅಚ್ಚರಿದಾಯಕ. ಬ್ರಿಟ್ಟಾಸ್‌ ಅವರು ಧನಕರ್ ಅವರನ್ನು ಭೇಟಿಯಾಗಿ ವಿವರಣೆಯನ್ನು ಮೌಖಿಕವಾಗಿ ಕೊಟ್ಟಿದ್ಧಾರೆ. ಆದರೆ, ವಿವರಣೆಯನ್ನು ಲಿಖಿತವಾಗಿ ನೀಡಬೇಕು ಎಂದು ಅವರಿಗೆ ಸೂಚಿಸಲಾಗಿದೆ. ರಾಜ್ಯಸಭೆಯ ಸದಸ್ಯರೊಬ್ಬರ ಸದನದ ಹೊರಗಿನ ವರ್ತನೆಯ ಕುರಿತು ಬಂದ ದೂರಿನ ಆಧಾರದಲ್ಲಿ ಕ್ರಮ ಕೈಗೊಳ್ಳಲು ಸಭಾಪತಿಗೆ ಇರುವ ಅಧಿಕಾರ ಏನು ಎಂಬುದು ಗೊತ್ತಿಲ್ಲ. ಎಲ್ಲ ಘಟನಾವಳಿಗಳನ್ನು ಗಮನಿಸಿದರೆ, ಶಾ ಅವರು ನೀಡಿದ ಹೇಳಿಕೆಯು ತಮ್ಮ ಬೆಂಬಲಿಗರಿಗೆ ನೀಡಿದ ಕುಮ್ಮಕ್ಕು ಎಂಬುದು ತಿಳಿಯುತ್ತದೆ. ಹಾಗಾಗಿ ಶಾ ಅವರ ನಡವಳಿಕೆಯು ಅನುಚಿತವಾಗಿದೆಯೇ ಹೊರತು ಬ್ರಿಟ್ಟಾಸ್‌ ಅವರ ಲೇಖನದಲ್ಲಿ ನ್ಯಾಯಬಾಹಿರವಾದುದು ಏನೂ ಇಲ್ಲ. ಬ್ರಿಟ್ಟಾಸ್‌ ಅವರು ಬರೆದ ಲೇಖನವು ದೇಶದ್ರೋಹದಿಂದ ಕೂಡಿದೆ ಎಂದು ಯಾರೋ ಒಬ್ಬ ವ್ಯಕ್ತಿಗೆ ಅನಿಸುವುದೇ ಅತಿರೇಕ ಮತ್ತು ಅಂತಹ ಕೋರಿಕೆಯ ಆಧಾರದಲ್ಲಿ ಸಭಾಪತಿ ಕ್ರಮ ಕೈಗೊಂಡಿದ್ದಾರೆ ಎಂಬುದು ಅಚ್ಚರಿ ಮೂಡಿಸಿದೆ. ಕೆಟ್ಟ ನಿದರ್ಶನಗಳು ಪದೇ ಪದೇ ಘಟಿಸುತ್ತಿದ್ದು, ಅದರ ನಡುವೆಯೇ ಇದು ಮತ್ತೊಂದು ಕೆಟ್ಟ ‍ನಿದರ್ಶನವಾಗಿದೆ. 

ವಾಕ್‌ ಸ್ವಾತಂತ್ರ್ಯದ ಹಕ್ಕಿಗೆ ಇಲ್ಲಿ ಅಪಾಯ ಎದುರಾಗಿದೆ. ವಾಕ್‌ ಸ್ವಾತಂತ್ರ್ಯ ದಮನಕ್ಕೆ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳಲಾಗಿದೆ ಎಂಬುದರತ್ತ ಈ ವಿದ್ಯಮಾನವು ಬೆಳಕು ಚೆಲ್ಲುತ್ತದೆ. ಸದಸ್ಯರ ಹಕ್ಕುಗಳನ್ನು ರಕ್ಷಿಸುವುದು ಸಭಾಪತಿಯ ಜವಾಬ್ದಾರಿ. ಧನಕರ್‌ ಅವರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಗೊತ್ತಿಲ್ಲ. ಹಾಗಿದ್ದರೂ ಬ್ರಿಟ್ಟಾಸ್‌ ಅವರು ಬರೆದ ಲೇಖನದ ಕುರಿತು ಪ್ರಶ್ನೆ ಎತ್ತಿದ್ದು ಮತ್ತು ಅವರಿಂದ ವಿವರಣೆ ಕೇಳಿರುವುದು ಈ ವಿಚಾರದಲ್ಲಿ ಧನಕರ್‌ ಅವರು ಸಂಕುಚಿತ ಮನೋಭಾವ ಹೊಂದಿದ್ಧಾರೆ ಎಂಬುದನ್ನು ಹೇಳುತ್ತದೆ. ಸರ್ಕಾರ ಮತ್ತು ಅದರ ನೀತಿಗಳನ್ನು ಸದನದೊಳಗೆ ಸದಸ್ಯರು ಟೀಕಿಸಲು ಸಾಧ್ಯವಾಗುತ್ತಿಲ್ಲ. ಈಗ, ಅವರು ಸದನದ ಹೊರಗೆ ವ್ಯಕ್ತಪಡಿಸಿದ ನಿಲುವುಗಳನ್ನು ಕೂಡ ಪ್ರಶ್ನಿಸಲಾಗುತ್ತಿದೆ. ಸಂಸತ್‌ ಸದಸ್ಯರೇ ತಮ್ಮ ವಾಕ್‌ ಸ್ವಾತಂತ್ರ್ಯದ ಹಕ್ಕು ಚಲಾಯಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ, ಸಾಮಾನ್ಯ ಪೌರರ ಪಾಡೇನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT