ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಅನುದಾನ ಹಂಚಿಕೆಯಲ್ಲಿ ತಾರತಮ್ಯ‌– ಅಭಿವೃದ್ಧಿಯಲ್ಲಿ ಅಸಮತೋಲನಕ್ಕೆ ದಾರಿ

Last Updated 6 ಅಕ್ಟೋಬರ್ 2022, 12:31 IST
ಅಕ್ಷರ ಗಾತ್ರ

ಅಭಿವೃದ್ಧಿ ಚಟುವಟಿಕೆಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಎಸಗುವ ಪರಿಪಾಟ ಇಂದು ನಿನ್ನೆಯದಲ್ಲ. ಆಡಳಿತಾರೂಢರ ಈ ನಡೆ ಯಾವುದೇ ನೆಲೆಯಲ್ಲೂ ಸಮರ್ಥನೀಯವಲ್ಲ. ಆಡಳಿತ ಪಕ್ಷದ ಶಾಸಕರು ಹಾಗೂ ರಾಜಕೀಯವಾಗಿ ಪ್ರಭಾವ ಹೊಂದಿರುವ ಜನಪ್ರತಿನಿಧಿಗಳು ಪ್ರತಿನಿಧಿಸುವ ಕ್ಷೇತ್ರಗಳಿಗೆ ದೊಡ್ಡ ಮೊತ್ತದ ಅನುದಾನವನ್ನುಮನಸೋಇಚ್ಛೆ ನೀಡುವುದರಿಂದ ಅಭಿವೃದ್ಧಿಯಲ್ಲಿ ಅಸಮತೋಲನ ಉಂಟಾಗುತ್ತದೆ. ಈಪಿಡುಗುರಾಜ್ಯದ ರಾಜಧಾನಿ ಬೆಂಗಳೂರನ್ನೂ ಬಿಟ್ಟಿಲ್ಲ. ಅನುದಾನ ಹಂಚಿಕೆಯಲ್ಲಿ ಇಲ್ಲಿಯೂ ತಾರತಮ್ಯಢಾಳಾಗಿ ಗೋಚರಿಸುತ್ತಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಸರ್ಕಾರ ಪ್ರತಿವರ್ಷವೂ ಸಾವಿರಾರು ಕೋಟಿ ರೂಪಾಯಿ ಅನುದಾನವನ್ನು ವಿವಿಧ ಯೋಜನೆಗಳಡಿ ನೀಡುತ್ತಿದೆ. ಈ ಅನುದಾನವು ಹೆಚ್ಚು ಅಗತ್ಯವಿರುವ ಕಾಮಗಾರಿಗೆ ಬಳಕೆ ಆಗುವ ಬದಲು ಪ್ರಭಾವಿ ಜನಪ್ರತಿನಿಧಿಗಳ ಕ್ಷೇತ್ರಗಳಿಗಷ್ಟೇ ಹಂಚಿಕೆಯಾಗುತ್ತಿರುವುದು ವಿಪರ್ಯಾಸ. ಬಿಬಿಎಂಪಿ ವ್ಯಾಪ್ತಿಯ ಕೆಲವು ವಿಧಾನಸಭಾ ಕ್ಷೇತ್ರಗಳು ನೂರಾರು ಕೋಟಿ ರೂಪಾಯಿ ಅನುದಾನ ಗಿಟ್ಟಿಸಿಕೊಳ್ಳುತ್ತಿವೆ. ಅಲ್ಲಿನ ರಸ್ತೆಗಳು ಪದೇ ಪದೇ ಡಾಂಬರು ಕಾಣುತ್ತಿದ್ದರೆ, ಇನ್ನು ಕೆಲವು ಕ್ಷೇತ್ರಗಳಲ್ಲಿ ರಸ್ತೆಗುಂಡಿ ಮುಚ್ಚುವುದಕ್ಕೂ ಹಣವಿಲ್ಲದ ದುಃಸ್ಥಿತಿ ಇದೆ. ಕೆಲವು ವಾರ್ಡ್‌ಗಳಲ್ಲಿ ಪಾದಚಾರಿ ಮಾರ್ಗಗಳು ಎರಡು–ಮೂರು ವರ್ಷಗಳಿಗೊಮ್ಮೆ ನವೀಕರಣಗೊಳ್ಳುತ್ತವೆ.
ಇನ್ನು ಕೆಲವು ಕಡೆ ಪಾದಚಾರಿ ಮಾರ್ಗದಲ್ಲಿ ಕಿತ್ತುಹೋದ ಕಲ್ಲುಹಾಸುಗಳ ದುರಸ್ತಿಗೂ ಹಣ ಸಿಗುವುದಿಲ್ಲ. ಅನುದಾನದ ತಾರತಮ್ಯಕ್ಕೆ ಇತ್ತೀಚಿನ ಉದಾಹರಣೆ, ಮುಖ್ಯಮಂತ್ರಿಯವರ ಅಮೃತ ನಗರೋತ್ಥಾನ ಯೋಜನೆ. ಈ ಯೋಜನೆಯಡಿ ಬಿಬಿಎಂಪಿ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರವು ₹6 ಸಾವಿರ ಕೋಟಿ ಒದಗಿಸಿದೆ. ಇದರ ಹಂಚಿಕೆಯಲ್ಲಂತೂ ತಾರತಮ್ಯ ಕಣ್ಣಿಗೆ ರಾಚುವಂತಿದೆ.

ನಗರೋತ್ಥಾನ ಯೊಜನೆಯಡಿ ‌ನಗರದ 28 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು ₹3,850 ಕೋಟಿ ಅನುದಾನವನ್ನು ನೇರವಾಗಿ ಹಂಚಿಕೆ ಮಾಡಲಾಗಿದೆ. ಇದರ ಸಿಂಹಪಾಲು ಸಿಕ್ಕಿರುವುದು ಆಡಳಿತಾರೂಢ ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ. ಬಿಜೆಪಿ ಶಾಸಕರು ಪ್ರತಿನಿಧಿಸುತ್ತಿರುವ 15 ಕ್ಷೇತ್ರಗಳಿಗೆ ಶೇ 70ರಷ್ಟು ಮೊತ್ತ ಹಂಚಿಕೆಯಾಗಿದೆ. ಬಿಜೆಪಿಯ ಶಾಸಕರು ಪ್ರತಿನಿಧಿಸುವ ಮಹದೇವಪುರ ಹಾಗೂ ರಾಜರಾಜೇಶ್ವರಿನಗರ ಕ್ಷೇತ್ರಗಳಿಗೆ ತಲಾ ₹208 ಕೋಟಿ ಅನುದಾನ ಸಿಕ್ಕಿದ್ದರೆ, ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಜಯನಗರ, ವಿಜಯನಗರ ಕ್ಷೇತ್ರಗಳಿಗೆ ₹ 60 ಕೋಟಿ ಮಾತ್ರ ನೀಡಲಾಗಿದೆ. ಯಾವ ಕಾಮಗಾರಿಗೆ ಎಷ್ಟು ಅನುದಾನ ಎಂಬುದನ್ನು ಅನುದಾನ ಹಂಚಿಕೆಯ ಆದೇಶದಲ್ಲಿ ಸ್ಪಷ್ಟಪಡಿಸಿಲ್ಲ. ಶಾಸಕರ ವಿವೇಚನೆ ಅನುಸಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಈ ಅನುದಾನವನ್ನು ಬಳಸಬಹುದು. ರಸ್ತೆ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ 227 ಕಾಮಗಾರಿಗಳಿಗೆ ₹ 700 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಅದರಲ್ಲೂ ರಾಜರಾಜೇಶ್ವರಿ ನಗರ ವಲಯವೇ ಅತಿಹೆಚ್ಚು ಪಾಲನ್ನು ಪಡೆದಿದೆ. ಈಗಾಗಲೇ ಅಭಿವೃದ್ಧಿಯಾಗಿರುವ ನಗರದ ಕೇಂದ್ರ ವಾಣಿಜ್ಯ ಪ್ರದೇಶಗಳಿಗೆ ಮತ್ತೆ ನೂರಾರು ಕೋಟಿ ಅನುದಾನವನ್ನು ಒದಗಿಸಲಾಗಿದೆ. ಪೀಣ್ಯದಂತಹ ಪ್ರಮುಖ ಕೈಗಾರಿಕಾ ಅಭಿವೃದ್ಧಿ ಪ್ರದೇಶಗಳನ್ನು ಹೊಂದಿರುವ, ಲಕ್ಷಗಟ್ಟಲೆ ಕಾರ್ಮಿಕರು ನೆಲೆಸಿರುವ ದಾಸರಹಳ್ಳಿ ಕ್ಷೇತ್ರವನ್ನು ಕಡೆಗಣಿಸಲಾಗಿದೆ. ಅನುದಾನ ಹಂಚಿಕೆಯಲ್ಲಿ ಈ ರೀತಿಯ ತಾರತಮ್ಯವು ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯಗಳಿಗೆ ಮಾರಕವಾಗಬಲ್ಲದು.

ಬೆಂಗಳೂರಿನ ಆಡಳಿತ ಸುಧಾರಣೆಗಾಗಿ ಬಿ.ಎಸ್‌.ಪಾಟೀಲ ನೇತೃತ್ವದ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುವುದರಿಂದ ಮುಂದೆ ಒದಗಬಹುದಾದ ಸಮಸ್ಯೆಗಳ ಕುರಿತು ಅದರಲ್ಲಿ ಬೆಳಕು ಚೆಲ್ಲಲಾಗಿದೆ. ನಗರದ ಎಲ್ಲ ಪ್ರದೇಶಗಳೂ ಸಮಾನವಾಗಿ ಅಭಿವೃದ್ಧಿ ಆಗುವಂತೆ ನೋಡಿಕೊಳ್ಳುವುದಕ್ಕೂ ಸಮಿತಿ ಕೆಲ ಸಲಹೆಗಳನ್ನು ನೀಡಿದೆ. ಬಿಬಿಎಂಪಿಯಲ್ಲೂ ಪಂಚವಾರ್ಷಿಕ ಯೋಜನೆ ಹಾಗೂ ವಾರ್ಷಿಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕು. ವಾರ್ಡ್ ಸಮಿತಿಗಳು ವಾರ್ಡ್‌ ಮಟ್ಟದಲ್ಲೂ ದೀರ್ಘಕಾಲೀನ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸಬೇಕು. ಈ ಯೋಜನೆಗಳು ಮಹಾನಗರ ಯೋಜನಾ ಸಮಿತಿ (ಎಂಪಿಸಿ) ರೂಪಿಸುವ ದೂರಗಾಮಿ ಯೋಜನೆಗಳ ಜೊತೆ ಹೊಂದಿಕೆ ಆಗುವಂತೆ ನೋಡಿಕೊಳ್ಳಬೇಕು ಎಂದು ಶಿಫಾರಸು ಮಾಡಿದೆ. ಈ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಲು ಯಾವುದೇ ಪಕ್ಷದ ನೇತೃತ್ವದ ಸರ್ಕಾರವೂಮುಂದಾಗಲಿಲ್ಲ. ನಗರದ ದೀರ್ಘಕಾಲೀನ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಗರ ಮಹಾಯೋಜನೆಯನ್ನು ರೂಪಿಸಿ, ಅದಕ್ಕೆ ಅನುಗುಣವಾಗಿಯೇ ಅಭಿವೃದ್ಧಿಗೆ ಅನುದಾನ ಹಂಚಿಕೆ ಮಾಡಬೇಕು. ದುರಂತವೆಂದರೆ 2015ರ ನಗರ ಮಹಾಯೋಜನೆಯ ಅವಧಿ ಮುಕ್ತಾಯವಾಗಿ ಏಳು ವರ್ಷಗಳಾದರೂ ಇನ್ನೂ ಪರಿಷ್ಕೃತ ಮಹಾಯೋಜನೆ ಜಾರಿಯಾಗಿಲ್ಲ. 2031ರ ನಗರ ಮಹಾ ಯೋಜನೆಯನ್ನು ಸಿದ್ಧಗೊಳಿಸಲಾಗಿತ್ತಾದರೂ, ಸರ್ಕಾರದ ನಾಯಕತ್ವ ಬದಲಾಗಿದ್ದರಿಂದ ಅದನ್ನೂ ಕೈಬಿಡಲಾಯಿತು. ಈಗ ಬಿಬಿಎಂಪಿಯಲ್ಲಿ ಚುನಾಯಿತ ಕೌನ್ಸಿಲ್‌ ಕೂಡ ಇಲ್ಲ.ಪ್ರಭಾವಿ ಶಾಸಕರು ಆಡಿದ್ದೇ ಆಟ ಎಂಬಂತಾಗಿದೆ. ತಮಗೆ ಬೇಕಾದ ಅಧಿಕಾರಿಗಳನ್ನು ಬಿಬಿಎಂಪಿಗೆ ನಿಯೋಜಿಸಿಕೊಂಡು ಆಡಳಿತ ಪಕ್ಷದ ಪ್ರಭಾವಿ ಶಾಸಕರು ಮನಬಂದಂತೆ ಅಧಿಕಾರ ಚಲಾಯಿಸುತ್ತಿದ್ದಾರೆ ಎಂಬ ಆರೋಪದಲ್ಲಿ ಹುರುಳಿಲ್ಲದೇ ಇಲ್ಲ. ‌ರಾಜಕೀಯ ಲಾಭವನ್ನೇ ಗುರಿಯಾಗಿಟ್ಟುಕೊಂಡು ಅನುದಾನ ಹಂಚಿಕೆ ಮಾಡುವ ಕ್ರಮವು ನಗರದ ಅಭಿವೃದ್ಧಿಯಲ್ಲಿನ ಅಸಮತೋಲನ ಮತ್ತಷ್ಟು ಹೆಚ್ಚಲು ಕಾರಣವಾಗುತ್ತದೆ. ಒಂದು ಕ್ಷೇತ್ರದ ಮತದಾರರು ನಿರ್ದಿಷ್ಟ ಪಕ್ಷದ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಗೆಲ್ಲಿಸಿಲ್ಲ ಎಂಬ ಏಕೈಕ ಕಾರಣದಿಂದ ಆ ಕ್ಷೇತ್ರಕ್ಕೆ ಅನುದಾನ ನಿರಾಕರಿಸುವುದು ಜನರ ಹಕ್ಕನ್ನು ಮೊಟಕುಗೊಳಿಸಿದಂತೆ. ಅನುದಾನ ಹಂಚಿಕೆಗೆ ಸ್ಪಷ್ಟ ಮಾನದಂಡಗಳನ್ನು ರೂಪಿಸಬೇಕು. ಅದರ ಅನುಸಾರ ಅನುದಾನ ಹಂಚಿಕೆ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT