ಹಣಕಾಸು ಆಯೋಗದ ಅನುದಾನಕ್ಕೆ ಕತ್ತರಿ ಪ್ರಯೋಗ ಆಗಿರುವುದಕ್ಕೆ ರಾಜ್ಯ ಸರ್ಕಾರದ ಹೊಣೆಗೇಡಿತನವೇ ಕಾರಣ. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸದಿರುವುದು ಬಹು ದೊಡ್ಡ ಕರ್ತವ್ಯಲೋಪ.

ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಸಕಾಲಕ್ಕೆ ನಡೆಸದ ಕಾರಣಕ್ಕಾಗಿ 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬರಬೇಕಾಗಿದ್ದ ₹1,279 ಕೋಟಿ ಅನುದಾನ ಬಾರದಿರುವುದು ರಾಜ್ಯ ಸರ್ಕಾರ ಸ್ವತಃ ಆಹ್ವಾನಿಸಿಕೊಂಡ ದಂಡನೆಯಾಗಿದೆ. ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆ ನಡೆದರೆ ಮಾತ್ರ ಅನುದಾನ ಬಿಡುಗಡೆ ಆಗುತ್ತದೆ. 2020–21ರಿಂದ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಚುನಾವಣೆ ನಡೆಯದ ಕಾರಣಕ್ಕೆ ಕರ್ನಾಟಕಕ್ಕೆ ಅನುದಾನ ತಡೆಹಿಡಿಯಲಾಗಿದೆ ಎಂದು ಕೇಂದ್ರ ಪಂಚಾಯತ್ರಾಜ್ ಸಚಿವ ರಂಜನ್ ಸಿಂಗ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಹಣಕಾಸು ಆಯೋಗದಿಂದ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆಯಾಗಿರುವ ₹13,184 ಕೋಟಿಯಲ್ಲಿ ಈವರೆಗೆ ₹11,905 ಕೋಟಿ ಬಿಡುಗಡೆಯಾಗಿದೆ. ಉಳಿದ ಹಣ, ಚುನಾವಣೆ ನಡೆಯದ ಕಾರಣಕ್ಕಾಗಿ ಬಿಡುಗಡೆಯಾಗಿಲ್ಲ. ತನ್ನ ಪಾಲಿನ ಅನುದಾನವನ್ನು ಪಡೆಯುವುದಕ್ಕಾಗಿ ನಿರ್ವಹಿಸಬೇಕಾದ ಉತ್ತರದಾಯಿತ್ವವನ್ನು ಪ್ರದರ್ಶಿಸುವಲ್ಲಿ ಕರ್ನಾಟಕ ಸರ್ಕಾರ ವಿಫಲವಾಗಿರುವುದರ ಫಲಶ್ರುತಿಯಿದು. ರಾಜ್ಯದ ಅಭಿವೃದ್ಧಿ ಚಟುವಟಿಕೆಗಳಿಗೆ ನ್ಯಾಯಬದ್ಧವಾಗಿ ದೊರೆಯಬೇಕಿದ್ದ ಹಣ ದೊರೆಯದೆ ಹೋದುದರ ಗುರುತರ ಲೋಪವನ್ನು ಸರ್ಕಾರವೇ ಹೊರಬೇಕು.

ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ 2016ರ ಏಪ್ರಿಲ್ನಲ್ಲಿ ಚುನಾವಣೆ ನಡೆದು, ಚುನಾಯಿತ ಪ್ರತಿನಿಧಿಗಳ ಅವಧಿ 2021ರ ಏಪ್ರಿಲ್ನಲ್ಲಿ ಕೊನೆಗೊಂಡಿತ್ತು. ಅಲ್ಲಿಂದ ಇಲ್ಲಿಯವರೆಗೆ ವಿವಿಧ ಕಾರಣಗಳಿಂದಾಗಿ ಚುನಾವಣೆ ಮುಂದಕ್ಕೆ ಹೋಗುತ್ತಲೇ ಇದೆ. ಕ್ಷೇತ್ರಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆ ನೆಪದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಸರ್ಕಾರ ಮುಂದೂಡುತ್ತಲೇ ಬಂದಿದೆ. ಈ ಕರ್ತವ್ಯ
ಲೋಪದಲ್ಲಿ ಈಗಿನ ಕಾಂಗ್ರೆಸ್ ಸರ್ಕಾರದೊಂದಿಗೆ ಹಿಂದಿನ ಬಿಜೆಪಿ ಸರ್ಕಾರದ ಪಾತ್ರವೂ ಇದೆ. ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ಅಧಿಕಾರವನ್ನು ಚುನಾವಣಾ ಆಯೋಗದಿಂದ ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರ ಹಿಂಪಡೆಯುವುದರೊಂದಿಗೆ ಆರಂಭವಾದ ಸಮಸ್ಯೆ ಈಗಲೂ ಬಗೆಹರಿದಿಲ್ಲ. ಸ್ಥಳೀಯ
ಸಂಸ್ಥೆಗಳಿಗೆ ನಿಗದಿತ ಅವಧಿಯಲ್ಲಿ ಚುನಾವಣೆಗಳನ್ನು ನಡೆಸಲು ಸಾಧ್ಯಆಗದೆ ಇರುವ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿರುವ ಚುನಾವಣಾ ಆಯೋಗ, ಚುನಾವಣೆ ನಡೆಯದಿರಲು ರಾಜ್ಯ ಸರ್ಕಾರ ಅನುವು ಮಾಡಿಕೊಡದಿರುವುದೇ ಕಾರಣ ಎಂದು ಹೈಕೋರ್ಟ್ ಗಮನಕ್ಕೆ ತಂದಿದೆ. ಪಂಚಾಯಿತಿಗಳಿಗೆ ಸಕಾಲಕ್ಕೆ ಚುನಾವಣೆ ನಡೆಸದಿರುವುದು, ಸಂವಿಧಾನದ 73ನೇ ಮತ್ತು 74ನೇ ತಿದ್ದುಪಡಿಗಳು ಸ್ಥಳೀಯ ಸಂಸ್ಥೆಗಳಿಗೆ ನೀಡಿರುವ ಸಾಂವಿಧಾನಿಕ ಮಹತ್ವವನ್ನು ಕುಗ್ಗಿಸುವಂತಿದೆ. ಸ್ಥಳೀಯ ಸಂಸ್ಥೆಗಳು ನಿಷ್ಕ್ರಿಯವಾದರೆ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ ನಿರ್ಣಯಗಳಲ್ಲಿ ನಾಗರಿಕರ ನಿಜವಾದ ಧ್ವನಿ, ಸಹಭಾಗಿತ್ವ ಇಲ್ಲದೇ ಹೋಗುತ್ತದೆ.

ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವನಾಡಿಗಳಂತಿರುವ ಸ್ಥಳೀಯ ಸಂಸ್ಥೆಗಳನ್ನು ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಬೇರುಗಳ ರೂಪದಲ್ಲಿ ಗುರ್ತಿಸಲಾಗುತ್ತದೆ. ಅಧಿಕಾರ ವಿಕೇಂದ್ರೀಕರಣಕ್ಕೆ ಅತ್ಯುತ್ತಮ ಮಾದರಿಯಾಗಿರುವ ಪಂಚಾಯತ್ ರಾಜ್ ವ್ಯವಸ್ಥೆಯ ಪ್ರಯೋಗಶಾಲೆ ರೂಪದಲ್ಲಿ ಕರ್ನಾಟಕ ದೇಶಕ್ಕೇ ಆದರ್ಶಪ್ರಾಯವಾಗಿತ್ತು. ದುರದೃಷ್ಟವಶಾತ್, ಪಂಚಾಯತ್ ವ್ಯವಸ್ಥೆಯ ತವರುನೆಲದಲ್ಲೇ ಸ್ಥಳೀಯ ಸಂಸ್ಥೆಗಳು ಐದು ವರ್ಷಗಳಿಗೂ ಹೆಚ್ಚು ಕಾಲ ಪ್ರತಿನಿಧಿಗಳಿಲ್ಲದೆ ಇರುವ ಸ್ಥಿತಿ ರೂಪುಗೊಂಡಿದೆ. ಜನಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಅಧಿಕಾರಿಗಳು ದೀರ್ಘ ಕಾಲ ಆಡಳಿತ ನಡೆಸುವುದು ಗ್ರಾಮೀಣ ಭಾಗದಲ್ಲಿನ ಅಭಿವೃದ್ಧಿ ಚಟುವಟಿಕೆಗಳಿಗೆ ಹಿನ್ನಡೆ ಉಂಟುಮಾಡುತ್ತದೆ. ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆಯುಳ್ಳ ಯಾವುದೇ ಸರ್ಕಾರ, ಸ್ಥಳೀಯ ಸಂಸ್ಥೆಗಳು ದುರ್ಬಲಗೊಳ್ಳಲು ಬಿಡುವುದಿಲ್ಲ. ತನ್ನನ್ನು ‘ಸಂವಿಧಾನಪರ’ ಎಂದು ಬಿಂಬಿಸಿಕೊಳ್ಳುವ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಪಂಚಾಯತ್ ರಾಜ್ ಸಂಸ್ಥೆಗಳ ಚುನಾವಣೆ ನನೆಗುದಿಗೆ ಬಿದ್ದಿರುವುದು, ಪಕ್ಷದ ಆಶಯಗಳ ವಿಶ್ವಾಸಾರ್ಹತೆಯನ್ನೇ ಅನುಮಾನಿಸುವುದಕ್ಕೆ ಆಸ್ಪದ ಕಲ್ಪಿಸುವಂತಿದೆ. ಚುನಾವಣೆ ನಡೆಸದಿರುವ ಕಾರಣಕ್ಕಾಗಿ, ಹಣಕಾಸು ಆಯೋಗದಿಂದ ಅನುದಾನ ಬಾರದಿರುವುದನ್ನು ರಾಜ್ಯ ಸರ್ಕಾರ ಎಚ್ಚರಿಕೆಯಂತೆ ಭಾವಿಸಬೇಕು. ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸಲು ತಕ್ಷಣವೇ ಕಾರ್ಯಪ್ರವೃತ್ತವಾಗಬೇಕು. ಸ್ಥಳೀಯ ಸಂಸ್ಥೆಗಳನ್ನು ಅಸ್ಥಿರವಾಗಿ ಇರಿಸುವುದು ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ಹಾಗೂ ಗ್ರಾಮೀಣ ಅಭಿವೃದ್ಧಿಗೆ ತೀವ್ರ ಹಿನ್ನಡೆ ಉಂಟುಮಾಡುವ ಕ್ರಮ ಎನ್ನುವುದನ್ನು ಸರ್ಕಾರ ಮರೆಯಬಾರದು.