ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಅಮೃತ್‌ಪಾಲ್‌ಗೆ ರಾಜಕಾರಣಿಗಳ ಬೆಂಬಲ ಸಿಕ್ಕಿದರೆ ದೇಶಕ್ಕೆ ಅಪಾಯ

Last Updated 20 ಮಾರ್ಚ್ 2023, 21:00 IST
ಅಕ್ಷರ ಗಾತ್ರ

ಸ್ವಯಂಘೋಷಿತ ಧರ್ಮಬೋಧಕ ಮತ್ತು ಪ್ರತ್ಯೇಕ ಖಾಲಿಸ್ಥಾನ ರಾಷ್ಟ್ರದ ಪ್ರತಿಪಾದಕ ಅಮೃತ್‌ಪಾಲ್‌ ಸಿಂಗ್‌ ಅವರನ್ನು ಸೆರೆಹಿಡಿಯುವ ಕಾರ್ಯಾಚರಣೆಯು ಅವರಿಗೆ ಬಲವಾದ ಬೆಂಬಲ ಜಾಲ ಇದೆ ಎಂಬುದನ್ನು ಬಹಿರಂಗಪಡಿಸಿದೆ. ಅಮೃತ್‌‍ಪಾಲ್‌ ನಾಯಕತ್ವದ ‘ವಾರಿಸ್‌ ಪಂಜಾಬ್‌ ದೇ’ ಎಂಬ ಸಂಘಟನೆಯ ನೂರಕ್ಕೂ ಹೆಚ್ಚು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಸೆಪ್ಟೆಂಬರ್‌ನಿಂದ ಈ ಸಂಘಟನೆಯ ನೇತೃತ್ವವನ್ನು ಅಮೃತ್‌ಪಾಲ್‌ ವಹಿಸಿಕೊಂಡಿದ್ದಾರೆ. ಅಮೃತ್‌ಪಾಲ್‌ ಆಪ್ತರೂ ಬಂಧಿತರಲ್ಲಿ ಸೇರಿದ್ದಾರೆ. ಆದರೆ, ಅಮೃತ್‌ಪಾಲ್‌ ಅವರು ಪೊಲೀಸರ ಕೈಗೆ ಸಿಕ್ಕಿಲ್ಲ. ಅವರನ್ನು ಸೆರೆ ಹಿಡಿಯಲು ಭಾರಿ ಸಂಖ್ಯೆಯಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ಗುಪ್ತಚರ ಇಲಾಖೆಯ ಬೆಂಬಲವನ್ನೂ ಒದಗಿಸಲಾಗಿದೆ. ಅಮೃತ್‌ಪಾಲ್‌ ಅವರ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಚಾಲಕನ ಬಂಧನವಾಗುವುದಕ್ಕೆ ಕೆಲವೇ ನಿಮಿಷಗಳ ಮೊದಲು ಅಮೃತ್‌ಪಾಲ್‌ ತಪ್ಪಿಸಿಕೊಂಡಿದ್ದಾರೆ.
ಅಮೃತ್‌ಪಾಲ್‌ ಇದ್ದಲ್ಲಿಗೆ ಪೊಲೀಸರು ಕೆಲವೇ ನಿಮಿಷಗಳಲ್ಲಿ ತಲುಪಬೇಕಿತ್ತು. ಆದರೆ ಅದಕ್ಕೂ ಮೊದಲೇ ಅವರು ಅಲ್ಲಿಂದ ಪರಾರಿಯಾಗಿದ್ದರು. ಪೊಲೀಸರು ತಮ್ಮತ್ತ ಬರುತ್ತಿದ್ದಾರೆ ಎಂಬ ಕುರಿತು ಅಮೃತ್‌ಪಾಲ್‌ ಅವರಿಗೆ ಮಾಹಿತಿ ದೊರೆತಿತ್ತೇ? ಪೊಲೀಸ್‌ ಪಡೆಯ ಒಳಗಿನಿಂದಲೇ ಮಾಹಿತಿ ಸೋರಿಕೆ ಆಗಿದೆಯೇ? ನಾಲ್ಕು ದಿನಗಳಿಂದ ಸತತವಾಗಿ ಪ್ರಯತ್ನಿಸಿ
ದರೂ ಅಮೃತ್‌ಪಾಲ್ ಅವರು ಪೊಲೀಸರಿಗೆ ಸಿಕ್ಕಿಲ್ಲ. ಅವರಿಗೆ ಬೆಂಬಲಿಗರ ವ್ಯವಸ್ಥಿತ ಜಾಲ ಇದೆ ಮತ್ತು ಅಡಗುದಾಣಗಳು ಇವೆ ಎಂಬುದನ್ನು ಇದು ಸೂಚಿಸುತ್ತದೆ. 1980 ಮತ್ತು 1990ರ ದಶಕಗಳಲ್ಲಿ ಪಂಜಾಬ್‌ನಲ್ಲಿ ಉಗ್ರವಾದವು ತಾರಕಕ್ಕೆ ಏರಲು ಉಗ್ರವಾದಿಗಳಿಗೆ ರಾಜಕಾರಣಿಗಳು ಮತ್ತು ಪೊಲೀಸರ ಬೆಂಬಲ ಇದ್ದದ್ದೇ ಕಾರಣ ಎಂಬುದು ಬಹಳ ಸ್ಪಷ್ಟ. ಹಾಗಾಗಿಯೇ ವಾರಿಸ್‌ ಪಂಜಾಬ್‌ ದೇ ಸಂಘಟನೆಯೊಂದಿಗೆ ನಂಟು ಹೊಂದಿರುವ ರಾಜಕಾರಣಿಗಳು ಮತ್ತು ಪೊಲೀಸರನ್ನು ಭದ್ರತಾ ಪಡೆಗಳು ಗುರುತಿಸಬೇಕು. ಈ ನಂಟನ್ನು ಕಡಿಯಲು ಸಾಧ್ಯವಾಗುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಧಿಕಾರಿಗಳನ್ನು ಸಶಕ್ತಗೊಳಿಸಬೇಕು.

ಪಂಜಾಬ್‌ ರಾಜ್ಯವು ಪಾಕಿಸ್ತಾನದ ಜೊತೆಗೆ ಗಡಿಯನ್ನು ಹಂಚಿಕೊಂಡಿದೆ. ಹಾಗಾಗಿ ಗಡಿಯಾಚೆಯಿಂದ ಉಗ್ರರು ಒಳನುಸುಳುವ ಅಪಾಯ ಇದೆ. ಅಮೃತ್‌ಪಾಲ್‌ ಮತ್ತು ಅವರ ಜೊತೆಗಾರರು ಪಾಕಿಸ್ತಾನದಲ್ಲಿ ಆಶ್ರಯ ಕೋರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಹಾಗಾಗಿ, ಗಡಿಯಲ್ಲಿ ಹೆಚ್ಚಿನ ನಿಗಾ ಇರಿಸುವುದು ಅಗತ್ಯ. ಇದಲ್ಲದೆ, ಪಾಕಿಸ್ತಾನದಿಂದ ಆಯುಧ ಬರುವುದನ್ನೂ ತಡೆಯಬೇಕಿದೆ. ಭಾರಿ ಸಂಖ್ಯೆಯ ಆಯುಧಗಳು ಮತ್ತು ಮಾದಕ ಪದಾರ್ಥಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನ ಮತ್ತು ಇತರ ದೇಶಗಳಲ್ಲಿ ಇರುವ ಖಾಲಿಸ್ತಾನ ಬೆಂಬಲಿಗರು ಶಸ್ತ್ರಾಸ್ತ್ರ–ಮಾದಕ ಪದಾರ್ಥ ವ್ಯಾಪಾರ ಜಾಲವನ್ನು ಬಳಸಿಕೊಂಡು ಉಗ್ರವಾದಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂಬುದನ್ನೂ ತಳ್ಳಿಹಾಕಲಾಗದು. ಕೆನಡಾ, ಬ್ರಿಟನ್‌, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಇರುವ ಸಿಖ್‌ ಕಾರ್ಯಕರ್ತರು ಖಾಲಿಸ್ತಾನ ಪರಿಕಲ್ಪನೆಯನ್ನುಈತನಕ ಜೀವಂತವಾಗಿ ಇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಯಾ ದೇಶಗಳ ಸರ್ಕಾರಗಳು ಕೊಟ್ಟ ಸ್ವಾತಂತ್ರ್ಯದಿಂದಾಗಿ ಭಾರತ ಮೂಲದ ಈ ಜನರಿಗೆ ಖಾಲಿಸ್ತಾನ ಪರಿಕಲ್ಪನೆಯನ್ನು ಜೀವಂತವಾಗಿ ಇರಿಸಲು ಸಾಧ್ಯವಾಗಿದೆ. ಹಾಗಿದ್ದರೂ ಖಾಲಿಸ್ತಾನ ಪರಿಕಲ್ಪನೆಯನ್ನು ಒಪ‍್ಪುವ ಜನರು ಪಂಜಾಬ್‌ನಲ್ಲಿ ಬಹಳ ವಿರಳ. ಖಾಲಿಸ್ತಾನದ ಹೆಸರಿನಲ್ಲಿ ಪಂಜಾಬ್‌ನಲ್ಲಿ ಹಿಂಸಾಚಾರ ನಡೆಸುತ್ತಿರುವವರು ಮುಖ್ಯವಾಗಿ ಅದರ ಮೂಲಕ ತಮ್ಮ ಅಪರಾಧ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್‌ ಮತ್ತು ಅಕಾಲಿಗಳ ನಡುವಣ ತೀವ್ರ ಸ್ಪರ್ಧೆಯು 1980ರ ದಶಕದಲ್ಲಿ ಬಿಂದ್ರನ್‌ವಾಲೆಯು ಮುಂಚೂಣಿಗೆ ಬರಲು ನೆರವಾಯಿತು. ಇತಿಹಾಸ ಮರುಕಳಿಸುವುದನ್ನು ನಾವು ನೋಡಬೇಕಾದೀತೇ? ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇದೆ. ಪಂಜಾಬ್‌ನಲ್ಲಿ ಎಎಪಿ ನೇತೃತ್ವದ ಸರ್ಕಾರ ಇದೆ. ರಾಜಕಾರಣಿಗಳು ಮತ್ತು ಗುಪ್ತಚರ ಸಂಸ್ಥೆಯಲ್ಲಿ ಇರುವ ಕೆಲವರು ಈಗಿನ ಪರಿಸ್ಥಿತಿಯನ್ನು ರಾಜಕೀಯ ಲಾಭ ಪಡೆಯಲು ಬಳಸಿಕೊಳ್ಳುವ ತುಡಿತಕ್ಕೆ ಒಳಗಾಗಬಹುದು. ಹಾಗೆ ಆದರೆ, ಅದರಿಂದ ಅಮೃತ್‌ಪಾಲ್‌ ಮತ್ತು ಅವರ ಬೆಂಬಲಿಗರಿಗೆ ಅನುಕೂಲ ಆಗಬಹುದೇ ವಿನಾ ದೇಶಕ್ಕೆ ಯಾವುದೇ ಪ್ರಯೋಜನ ದೊರೆಯುವುದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT