ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: GST ಇನ್ವಾಯ್ಸ್ ಪಡೆಯಲು ಉತ್ತೇಜನ-ವಿನೂತನ ಕ್ರಮ, ಸ್ವಾಗತಾರ್ಹ ನಡೆ

Published 23 ಆಗಸ್ಟ್ 2023, 0:14 IST
Last Updated 23 ಆಗಸ್ಟ್ 2023, 0:14 IST
ಅಕ್ಷರ ಗಾತ್ರ

‘ಮೇರಾ ಬಿಲ್ ಮೇರಾ ಅಧಿಕಾರ್’ ಹೆಸರಿನ ವಿನೂತನ ಯೋಜನೆಯೊಂದನ್ನು ಆರಂಭಿಸಲು ಪರೋಕ್ಷ ತೆರಿಗೆಗಳ ಕೇಂದ್ರೀಯ ಮಂಡಳಿಯು (ಸಿಬಿಐಟಿ) ಮುಂದಾಗಿದೆ. ಗ್ರಾಹಕರು ವರ್ತಕರಿಂದ ಯಾವುದೇ ಉತ್ಪನ್ನವನ್ನು ಖರೀದಿ ಮಾಡಿದಾಗ ಅಥವಾ ಸೇವಾದಾತರಿಂದ ಯಾವುದೇ ಬಗೆಯ ಸೇವೆಯನ್ನು ಪಡೆದಾಗ, ಅದಕ್ಕೆ ಸಂಬಂಧಿಸಿದಂತೆ ವರ್ತಕ ಅಥವಾ ಸೇವಾದಾತನಿಂದ ಜಿಎಸ್‌ಟಿ ಇನ್ವಾಯ್ಸ್‌ ಪಡೆಯುವುದಕ್ಕೆ ಉತ್ತೇಜನ ನೀಡುವ ಯೋಜನೆ ಇದು. ಇದು ಸ್ವಾಗತಾರ್ಹ ಕ್ರಮ. ಈ ಯೋಜನೆಯ ಅಡಿಯಲ್ಲಿ, ₹ 200ಕ್ಕಿಂತ ಹೆಚ್ಚಿನ ಮೊತ್ತದ ಉತ್ಪನ್ನ ಖರೀದಿಸಿದರೆ ಅಥವಾ ಸೇವೆಯೊಂದನ್ನು ಪಡೆದರೆ, ಗ್ರಾಹಕರು ಅದಕ್ಕೆ ಸಂಬಂಧಿಸಿದ ಜಿಎಸ್‌ಟಿ ಇನ್ವಾಯ್ಸ್ ಕೇಳಿ ಪಡೆಯಬೇಕು. ನಂತರ ಅವರು ಅದನ್ನು, ಸ್ಮಾರ್ಟ್‌ಫೋನ್ ಆ್ಯಪ್ ಮೂಲಕ ಅಪ್ಲೋಡ್ ಮಾಡಬೇಕು. ಜಿಎಸ್‌ಟಿ ಇನ್ವಾಯ್ಸ್‌ಗಳನ್ನು ಆಧರಿಸಿ, ಕಾಲಕಾಲಕ್ಕೆ ಲಾಟರಿ ಎತ್ತಲಾಗುತ್ತದೆ. ಅಲ್ಲಿ ಆಯ್ಕೆಯಾಗುವ ಇನ್ವಾಯ್ಸ್‌ಗಳಿಗೆ ಆಕರ್ಷಕ ಬಹುಮಾನ ನಿಗದಿ ಮಾಡಲಾಗಿದೆ. ಬಂಪರ್ ಬಹುಮಾನವಾಗಿ ₹1 ಕೋಟಿ ನೀಡಲಾಗುತ್ತದೆ! ಸರ್ಕಾರವು ತಾನು ಬಯಸುವ ಬದಲಾವಣೆಯನ್ನು ಉತ್ತೇಜಕ ಕ್ರಮಗಳ ಮೂಲಕ ತರಲು ಹೊರಟಿರುವುದು ಮೆಚ್ಚುವಂಥದ್ದು. ‘ಜಿಎಸ್‌ಟಿ ಇನ್ವಾಯ್ಸ್‌ ಪಡೆಯುವುದು ಕಡ್ಡಾಯ’ ಎಂಬ ಆದೇಶ ಹೊರಡಿಸುವುದಕ್ಕಿಂತ, ‘ಜಿಎಸ್‌ಟಿ ಇನ್ವಾಯ್ಸ್ ಪಡೆದು, ಅದನ್ನು ಅಪ್ಲೋಡ್ ಮಾಡಿದಲ್ಲಿ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶವಿದೆ’ ಎಂದು ಹೇಳುವುದು ಹೆಚ್ಚು ಪರಿಣಾಮಕಾರಿ ಎಂಬುದರಲ್ಲಿ ಎರಡು ಮಾತಿಲ್ಲ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ ಬರುವ ಉತ್ಪನ್ನಗಳು ಹಾಗೂ ಸೇವೆಗಳಿಗೆ ಜಿಎಸ್‌ಟಿ ಇನ್ವಾಯ್ಸ್ ನೀಡಬೇಕು ಎಂಬುದು ನಿಯಮ. ಆದರೆ ಈ ನಿಯಮದ ಉಲ್ಲಂಘನೆ ಕೂಡ ಅವ್ಯಾಹತವಾಗಿ ನಡೆದಿದೆ. ವರ್ತಕರಿಂದ ಗ್ರಾಹಕರಿಗೆ ಉತ್ಪನ್ನಗಳ ವರ್ಗಾವಣೆ ಆಗುವ ಹಂತದಲ್ಲಿ, ಬಿಲ್ ಬೇಡ ಎಂದಾದರೆ ಒಂದು ದರ, ಬಿಲ್ ಬೇಕು ಎಂದಾದರೆ ಇನ್ನೊಂದು ದರವನ್ನು ಪಡೆಯುವ ಪದ್ಧತಿ ಇದ್ದೇ ಇದೆ. ಬಿಲ್ ಬೇಡ ಎನ್ನುವವರಿಗೆ ಕಡಿಮೆ ದರ ನಿಗದಿ ಮಾಡಲಾಗುತ್ತದೆ. ಇದು ಜಿಎಸ್‌ಟಿ ವರಮಾನ ಸೋರಿಕೆಗೆ ಕಾರಣವಾಗುತ್ತದೆ. ಇಂತಹ ಅಕ್ರಮವನ್ನು ತಡೆಯಲು ಹೊಸ ಯೋಜನೆಯು ನೆರವಿಗೆ ಬರಬಲ್ಲದು. ಇನ್ವಾಯ್ಸ್ ಪಡೆದಲ್ಲಿ, ಬಹುಮಾನ ಗೆಲ್ಲುವ ಅವಕಾಶವೊಂದು ಇದೆ ಎಂಬುದು ಗ್ರಾಹಕರ ಪಾಲಿಗೆ ಒಂದು ಉತ್ತೇಜಕ ಕ್ರಮವಾಗಬಲ್ಲದು. ಇದರಿಂದಾಗಿ, ಗ್ರಾಹಕ ಬಿಲ್ ಕೇಳುತ್ತಾನೆ, ವರ್ತಕ ಬಿಲ್ ಕೊಡಲೇಬೇಕಾದ ಒತ್ತಡಕ್ಕೆ ಸಿಲುಕುತ್ತಾನೆ. ಸರ್ಕಾರದ ವರಮಾನ ಸಂಗ್ರಹ ಹೆಚ್ಚುತ್ತದೆ. ಜಿಎಸ್‌ಟಿ ವರಮಾನ ಸಂಗ್ರಹವು ಈಗ ತಿಂಗಳಿಗೆ ₹1.60 ಲಕ್ಷ ಕೋಟಿಗಿಂತ ಹೆಚ್ಚಿನ ಮಟ್ಟವನ್ನು ತಲುಪಿದೆ. ಈ ಯೋಜನೆಯು ಜಾರಿಗೆ ಬಂದ ನಂತರದಲ್ಲಿ ವರಮಾನ ಸಂಗ್ರಹ ಇನ್ನಷ್ಟು ಜಾಸ್ತಿ ಆಗುವ ನಿರೀಕ್ಷೆ ಇಟ್ಟುಕೊಳ್ಳಬಹುದು.

ಈ ಯೋಜನೆಗೆ ಅಗತ್ಯವಿರುವ ತಾಂತ್ರಿಕ ವೇದಿಕೆಯನ್ನು ಜಿಎಸ್‌ಟಿಎನ್‌ ತನ್ನ ಪಾಲುದಾರರ ಜೊತೆಗೂಡಿ ಅಭಿವೃದ್ಧಿಪಡಿಸುತ್ತಿದೆ. ಇನ್ವಾಯ್ಸ್ ಅಪ್ಲೋಡ್ ಮಾಡಲು ಅಗತ್ಯವಿರುವ ಆ್ಯಪ್‌, ಆ್ಯಂಡ್ರಾಯ್ಡ್‌ ಹಾಗೂ ಐಒಎಸ್‌ ಕಾರ್ಯಾಚರಣಾ ವ್ಯವಸ್ಥೆಗಳಿಗೆ ಸಿಗಲಿದೆ. ಅಲ್ಲದೆ, ಇನ್ವಾಯ್ಸ್‌ ಮೇಲೆ ನಮೂದಾಗುವ ಜಿಎಸ್‌ಟಿಐಎನ್‌, ಇನ್ವಾಯ್ಸ್ ಸಂಖ್ಯೆ, ಪಾವತಿಸಿದ ಮೊತ್ತ ಹಾಗೂ ತೆರಿಗೆ ಮೊತ್ತವನ್ನು ತಂತ್ರಜ್ಞಾನದ ಸಹಾಯದಿಂದ ನಿಖರವಾಗಿ ಗುರುತಿಸಲಾಗುತ್ತದೆ ಎಂದು ಹೇಳಲಾಗಿದೆ. ಇನ್ವಾಯ್ಸ್ ಆಧಾರಿತ ಲಾಟರಿಯಲ್ಲಿ ಬಹುಮಾನ ಗೆದ್ದವರಿಗೆ ಹಣ ವರ್ಗಾವಣೆ ಮಾಡುವ ಮೊದಲು, ಇನ್ವಾಯ್ಸ್‌ ನಕಲಿ ಅಲ್ಲ ಎಂಬುದನ್ನು ಕೂಡ ಖಾತರಿ ಮಾಡಿಕೊಳ್ಳಲಾಗುತ್ತದೆ. ತೆರಿಗೆ ಸೋರಿಕೆಯನ್ನು ತಡೆಯುವಲ್ಲಿ ಇದು ಬಹಳ ದೊಡ್ಡ ಹೆಜ್ಜೆಯಾಗಿ ಪರಿಣಮಿಸಬಹುದು. ಆದರೆ, ಈ ಯೋಜನೆಗೆ ಸಂಬಂಧಿಸಿದ ಆ್ಯಪ್‌ ಅಭಿವೃದ್ಧಿಪಡಿಸುವಾಗ ಅದರಲ್ಲಿ ಬಳಸುವ ಭಾಷೆ ಇಂಗ್ಲಿಷ್, ಹಿಂದಿ ಮಾತ್ರವೇ ಆಗಿರದೆ, ರಾಜ್ಯವಾರು ಆಡಳಿತ ಭಾಷೆಗಳಲ್ಲಿಯೂ ಆಯ್ಕೆಗಳು ಲಭ್ಯವಿರುವಂತೆ ಮಾಡಬೇಕು. ಆಗ ಹೆಚ್ಚು ಜನ ಈ ಯೋಜನೆಯಲ್ಲಿ ಪಾಲ್ಗೊಳ್ಳಬಹುದು. ಈ ಯೋಜನೆಯಲ್ಲಿ ಪಾಲ್ಗೊಳ್ಳುವುದಕ್ಕೆ ಭಾಷೆಯು ಒಂದು ಅಡ್ಡಿಯಾಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT