ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಭಾರತೀಯ ನ್ಯಾಯ ಸಂಹಿತೆ: ಕಾಲದ ಅಗತ್ಯ ಗುರುತಿಸದ ಕಾನೂನು

ಕಾನೂನುಗಳು ಆಧುನಿಕ ಸಮಾಜದ ರೀತಿ ರಿವಾಜುಗಳಿಗೆ ಸ್ಪಂದಿಸುವಂತೆಯೂ ಇರಬೇಕು
Published 7 ಜುಲೈ 2024, 21:57 IST
Last Updated 7 ಜುಲೈ 2024, 21:57 IST
ಅಕ್ಷರ ಗಾತ್ರ

ಜುಲೈ 1ರಿಂದ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆಯು (ಬಿಎನ್‌ಎಸ್‌) ಹೊಸ ಕಾನೂನು ಜಾರಿಯ ದೃಷ್ಟಿಯಿಂದ ಸ್ವಾತಂತ್ರ್ಯಾನಂತರ ದೇಶ ಕಂಡಿರುವ ಅತ್ಯಂತ ಮಹತ್ವದ ಘಟ್ಟಗಳಲ್ಲಿ ಒಂದು. ಆದರೆ, ಈ ಕಾನೂನಿನ ಜಾರಿಯ ಜೊತೆ ವಿವಾದಗಳೂ ಬೆಸೆದುಕೊಂಡಿವೆ. ಭಾರತೀಯ ದಂಡಸಂಹಿತೆಯಲ್ಲಿ (ಐಪಿಸಿ) ದೇಶದ್ರೋಹಕ್ಕೆ ಸಂಬಂಧಿಸಿದಂತೆ ಇದ್ದ ಸೆಕ್ಷನ್‌ ಅನ್ನು ಬಿಎನ್‌ಎಸ್‌ನಲ್ಲಿ ಕೈಬಿಡಲಾಗಿದೆ. ಆದರೆ, ಅದಕ್ಕಿಂತ ಹೆಚ್ಚು ಕಠಿಣವಾಗಿರುವ, ಕರಾಳವಾಗಿರುವ ಅಂಶಗಳನ್ನು ಬಿಎನ್‌ಎಸ್‌ನಲ್ಲಿ ಸೇರಿಸಲಾಗಿದೆ ಎಂದು ಕೆಲವು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೊಸ ಕಾನೂನಿನ ಪ್ರಕಾರ, ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳ ಮೂಲಕ ಒಂದು ಅಭಿಪ್ರಾಯ ದಾಖಲಿಸುವುದನ್ನು ಕೂಡ ರಾಷ್ಟ್ರವಿರೋಧಿ ಎಂದು ಅರ್ಥೈಸಲು ಅವಕಾಶ ಇದೆ. ಇದರ ಪರಿಣಾಮವಾಗಿ ವ್ಯಕ್ತಿಯ ಬಂಧನವೂ ಆಗಬಹುದು. ಪ್ರಭುತ್ವ ವಿರೋಧಿ ಚಟುವಟಿಕೆಗಳ ಬಗ್ಗೆ ಬಹಳ ಬಿಡುಬೀಸಾದ ಹಾಗೂ ಅಸ್ಪಷ್ಟವಾದ ವ್ಯಾಖ್ಯಾನವನ್ನು ಕಾನೂನಿನಲ್ಲಿ ಅಳವಡಿಸಿಕೊಂಡಿರುವುದು ಮುಕ್ತ ಅಭಿವ್ಯಕ್ತಿಗೆ ಹಾಗೂ ನಾಗರಿಕ ಹಕ್ಕುಗಳಿಗೆ ಗಂಭೀರ ಬೆದರಿಕೆಯನ್ನು ಒಡ್ಡಿದೆ. ಏಕೆಂದರೆ, ಈ ಬಗೆಯ ವ್ಯಾಖ್ಯಾನವು ಭಿನ್ನಮತ ಹಾಗೂ ಟೀಕೆಗಳ ವಿರುದ್ಧ ಬಹಳ ಸುಲಭವಾಗಿ ಕ್ರಮ ಜರುಗಿಸಲು ಪ್ರಭುತ್ವಕ್ಕೆ ಅವಕಾಶ ಕಲ್ಪಿಸುತ್ತದೆ.

ಪುರುಷ ಹಾಗೂ ಮಹಿಳೆಯ ನಡುವಿನ ಸಂಬಂಧದ ವಿಚಾರದಲ್ಲಿಯೂ ಸಮಸ್ಯೆಗಳನ್ನು ಸೃಷ್ಟಿಸಬಹುದಾದ ಅಂಶಗಳು ಬಿಎನ್‌ಎಸ್‌ನಲ್ಲಿ ಇವೆ. ಮದುವೆ ಆಗುವುದಾಗಿ ಭರವಸೆ ನೀಡಿ ಮಹಿಳೆಯ ಜೊತೆ ಲೈಂಗಿಕ ಸಂಪರ್ಕ ಬೆಳೆಸುವ ಪುರುಷನೊಬ್ಬ, ಮುಂದೆ ಸಂಬಂಧವನ್ನು ಕಡಿದುಕೊಂಡರೆ ಆತನಿಗೆ ದಂಡ ಹಾಗೂ 10 ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಲು ಬಿಎನ್‌ಎಸ್‌ನ ಸೆಕ್ಷನ್‌ 69ರ ಅಡಿಯಲ್ಲಿ ಅವಕಾಶ ಇದೆ. ಆಧುನಿಕ ಕಾಲಘಟ್ಟದ ಸಂಬಂಧಗಳಿಗೆ ಇರುವ ಸಂಕೀರ್ಣ ಆಯಾಮಗಳನ್ನು ಈ ಸೆಕ್ಷನ್‌ ಪರಿಗಣನೆಗೆ ತೆಗೆದುಕೊಂಡೇ ಇಲ್ಲ. ಬದಲಿಗೆ, ಇಬ್ಬರು ವಯಸ್ಕರು ಸಹಮತದ ಸಂಬಂಧ ಹೊಂದುವುದನ್ನೂ ಬಹಳ ಹಳೆಯ ಕಾಲದ ದೃಷ್ಟಿನೋನದ ಮೂಲಕ ಕಂಡು, ಅದಕ್ಕೆ ಶಿಕ್ಷೆಯನ್ನು ವಿಧಿಸುತ್ತದೆ. ಸಂಬಂಧವನ್ನು ಬೆಳೆಸುವ ಮೊದಲು ಪುರುಷನು ತನ್ನ ನಿಜ ಗುರುತನ್ನು ಮುಚ್ಚಿಟ್ಟಿದ್ದರೆ ಅಥವಾ ತನ್ನ ವೈವಾಹಿಕ ಸಂಬಂಧದ ಬಗ್ಗೆ ಸುಳ್ಳು ಹೇಳಿದ್ದಿದ್ದರೆ ಆತನಿಗೆ ಶಿಕ್ಷೆ ವಿಧಿಸಲು, ಈಗ ಮಾನ್ಯತೆ ಕಳೆದುಕೊಂಡಿರುವ ಐಪಿಸಿ ಅಡಿ ಅವಕಾಶ ಇತ್ತು. ಆದರೆ, ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಬಿಎನ್‌ಎಸ್‌, ಸಂಬಂಧವೊಂದರಲ್ಲಿ ಮದುವೆಯಾಗುವ ಭರವಸೆ ನೀಡಿ, ಮುಂದೆ ಆ ಸಂಬಂಧವನ್ನು ಮುರಿದುಕೊಂಡರೆ, ಹಾಗೆ ಸಂಬಂಧ ಮುರಿದುಕೊಳ್ಳುವುದು ಕ್ರಿಮಿನಲ್ ಅಪರಾಧ ಎಂಬಂತೆ ಕಾಣುತ್ತದೆ. ಆದರೆ ಇಂದಿನ ಸಮಾಜದಲ್ಲಿ ಲಿವ್‌–ಇನ್ ಸಂಬಂಧಗಳು ಹಾಗೂ ಸಹಮತದ ಸಂಬಂಧಗಳು ಹೆಚ್ಚೆಚ್ಚು ಒಪ್ಪಿತವಾಗಿವೆ. ಅಂತಹ ಸಂಬಂಧಗಳನ್ನು ಗುರುತಿಸುವ ಕೆಲಸಗಳು ಕೂಡ ಆಗಿವೆ. ಹೀಗಿರುವಾಗಿ ಬಿಎನ್‌ಎಸ್‌ನಲ್ಲಿ ಇರುವ ಇಂತಹ ಅಂಶಗಳು ಪ್ರತಿಗಾಮಿ ಆಗುತ್ತವೆ. ಎಲ್ಲ ಸಂಬಂಧಗಳೂ ಮದುವೆಯ ಹಂತವನ್ನು ಪ್ರವೇಶಿಸಬೇಕು ಎಂದೇನೂ ಇಲ್ಲ, ಒಬ್ಬರಿಗೊಬ್ಬರು ಆಗಿಬರುತ್ತಿಲ್ಲ ಎಂದಾದರೆ ಸಂಬಂಧವನ್ನು ಕೊನೆಗೊಳಿಸುವ ಸ್ವಾತಂತ್ರ್ಯವು ಇಬ್ಬರಿಗೂ ಇರಬೇಕು ಎಂಬ ವಾಸ್ತವವನ್ನು ಈ ಕಾನೂನು ಮಾನ್ಯ ಮಾಡುವುದಿಲ್ಲ.

ಪುರುಷರ ಪಾಲಿಗೆ, ಮನಸ್ಸಿಗೆ ಒಪ್ಪಿಗೆ ಆಗದಿದ್ದರೂ ಮದುವೆ ಆಗಲೇಬೇಕಾದ ಅನಿವಾರ್ಯವನ್ನು ತಂದಿರಿಸುತ್ತದೆ. ಅಥವಾ ಸಂಬಂಧವನ್ನು ಕೊನೆಗೊಳಿಸುವುದನ್ನೇ ಆಯ್ಕೆ ಮಾಡಿಕೊಂಡರೆ ಅದಕ್ಕೆ ಕಠಿಣ ಶಿಕ್ಷೆಯನ್ನು ಅನುಭವಿಸಬೇಕಾದ ಪರಿಸ್ಥಿತಿಯನ್ನು ಬಿಎನ್‌ಎಸ್‌ ಸೃಷ್ಟಿಸುತ್ತದೆ. ಸಂಬಂಧಗಳು ರೂಪುಗೊಳ್ಳಬೇಕಿರುವುದು ಪರಸ್ಪರ ಸಹಮತದ ಮೂಲಕ, ಪರಸ್ಪರರಲ್ಲಿ ಮೂಡುವ ಹೊಂದಾಣಿಕೆಗಳ ಮೂಲಕವೇ ವಿನಾ ಕಾನೂನುಗಳು ಸೃಷ್ಟಿಸುವ ಅನಿವಾರ್ಯದ ಮೂಲಕ ಅಲ್ಲ. ಪುರುಷ ಹಾಗೂ ಮಹಿಳೆಯ ನಡುವಿನ ಸಂಬಂಧಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸದೇ ಇರುವುದು ಈ ಕಾನೂನಿನ ವೈಫಲ್ಯ. ಮದುವೆಗೆ ಮುನ್ನ ಸಂಬಂಧ ಹಳಸಿದರೆ, ಪುರುಷನು ತನ್ನನ್ನು ವಂಚಿಸಿದ್ದಾನೆ ಎಂದು ಆರೋಪಿಸಿ ಆತನನ್ನು ಜೈಲಿಗೆ ಅಟ್ಟಲು ಈ ಕಾನೂನು ಅವಕಾಶ ಕಲ್ಪಿಸುತ್ತದೆ. ಈ ಅಂಶವು ದುರ್ಬಳಕೆ ಆಗಬಹುದು, ಶಿಕ್ಷೆಯು ನ್ಯಾಯಬದ್ಧವಾಗಿ ಆಗದೇ ಇರಬಹುದು. ತಮ್ಮಿಬ್ಬರಿಗೂ ಅನುಕೂಲ ಅಲ್ಲದಿದ್ದರೆ, ಕಾನೂನಿನ ಅಥವಾ ಶಿಕ್ಷೆಯ ಭೀತಿಗೆ ಒಳಗಾಗದೆ, ಸಂಬಂಧದಿಂದ ಹೊರನಡೆಯುವ ಅವಕಾಶವು ಮಹಿಳೆಗೂ ಪುರುಷನಿಗೂ ಇರಬೇಕು. ಹೊಸ ಕಾನೂನು ನಾಗರಿಕ ಹಕ್ಕುಗಳನ್ನು ರಕ್ಷಿಸುವಂತೆ ಇರಬೇಕು, ಆಧುನಿಕ ಸಮಾಜದ ರೀತಿ ರಿವಾಜುಗಳಿಗೆ ಸ್ಪಂದಿಸುವಂತೆಯೂ ಇರಬೇಕು. ನ್ಯಾಯ ಹಾಗೂ ಸಮಾನತೆಯ ತತ್ವಗಳನ್ನು ಕಾನೂನು ಎತ್ತಿಹಿಡಿಯುವ ಕೆಲಸ ಮಾಡಬೇಕು. ಕಾನೂನಿಗೆ ಆ ರೀತಿಯಲ್ಲಿ ಬದಲಾವಣೆ ತರಬೇಕು. ಆಗಮಾತ್ರ, ಪ್ರಜೆಗಳಿಗೆ ನ್ಯಾಯಸಮ್ಮತವಾದ ಬಗೆಯಲ್ಲಿ ಕಾನೂನು ನೆರವಿಗೆ ಬರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT