ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಸಿರಿಧಾನ್ಯ ಬೆಳೆಯಲು, ಬಳಸಲು ಪ್ರೋತ್ಸಾಹ ಹೆಚ್ಚಿಸಬೇಕಿದೆ

Last Updated 19 ಫೆಬ್ರುವರಿ 2023, 22:00 IST
ಅಕ್ಷರ ಗಾತ್ರ

ಭಾರತದ ಆಗ್ರಹಕ್ಕೆ ಅನುಗುಣವಾಗಿ ವಿಶ್ವ ಸಂಸ್ಥೆಯು 2023ನೇ ಇಸವಿಯನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಿದ ಬಳಿಕ ಈ ಧಾನ್ಯಗಳ ಕುರಿತು ವಿಶ್ವ ಸಮುದಾಯದಲ್ಲಿ ಆಸಕ್ತಿ ಹೆಚ್ಚಳವಾಗಿದೆ. ಆಹಾರ ಮತ್ತು ಬೆಳೆಯಾಗಿ ಸಿರಿಧಾನ್ಯಗಳ ಮಹತ್ವದ ಕುರಿತು ಪ್ರಚಾರ ಮತ್ತು ಜಾಗೃತಿ ಅಭಿಯಾನವೂ ನಡೆಯುತ್ತಿದೆ. ಕೇಂದ್ರ ಸರ್ಕಾರದ 2023–24ರ ಬಜೆಟ್‌ನಲ್ಲಿಯೂ ಭಾರತವನ್ನು ಸಿರಿಧಾನ್ಯಗಳ ಕೇಂದ್ರವನ್ನಾಗಿ ಮಾಡುವ ಪ್ರಸ್ತಾವವನ್ನು ಇರಿಸಲಾಗಿದೆ.

ಆದರೆ ಅದಕ್ಕಾಗಿ ಯಾವುದೇ ಯೋಜನೆಯನ್ನು ರೂಪಿಸಲಾಗಿಲ್ಲ. ಪೌಷ್ಟಿಕತೆ, ಪರಿಸರ, ಕಡಿಮೆ ದರ ಮತ್ತು ಇತರ ಕಾರಣಗಳಿಗಾಗಿ ಸಿರಿಧಾನ್ಯಗಳ ಕಡೆಗಿನ ಗಮನ ಇತ್ತೀಚಿನ ಕೆಲವು ವರ್ಷಗಳಲ್ಲಿ ಹೆಚ್ಚಿದೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ಸಿರಿಧಾನ್ಯಗಳನ್ನು ಬೆಳೆಯುವ ದೇಶ ಭಾರತ. ಸಿರಿಧಾನ್ಯಗಳ ರಫ್ತಿನಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಸಿರಿಧಾನ್ಯಗಳನ್ನು ಬೆಳೆಯಲು ಮತ್ತು ಸೇವಿಸಲು ಹೆಚ್ಚು ಪ್ರೋತ್ಸಾಹ ನೀಡಲು ಸಾಧ್ಯವಾಗುವಂತಹ ಸಮರ್ಪಕ ನೀತಿಯನ್ನು ಜಾರಿಗೆ ತಂದರೆ ಸಿರಿಧಾನ್ಯಗಳಿಗೆ ಸಂಬಂಧಿಸಿ ಮುಂಚೂಣಿ ಸ್ಥಾನವನ್ನು
ಕಾಯ್ದುಕೊಳ್ಳುವುದು ಸಾಧ್ಯ. ಜೋಳ, ರಾಗಿ, ಸಜ್ಜೆ ಸೇರಿದಂತೆ ಹತ್ತಾರು ವಿವಿಧ ಸಿರಿಧಾನ್ಯಗಳನ್ನು ದೇಶದಲ್ಲಿ ಬೆಳೆಯಲಾಗುತ್ತಿದೆ. ರಾಜಸ್ಥಾನ, ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ.

ಕೆಲವು ದಶಕಗಳಿಂದ ದೇಶದಲ್ಲಿ ಸಿರಿಧಾನ್ಯಗಳ ಉತ್ಪಾದನೆ ಕುಸಿದಿರುವುದು ಕಳವಳಕಾರಿ ಬೆಳವಣಿಗೆ. ಇತ್ತೀಚಿನ ಬೆಳೆ ಋತುವಿನಲ್ಲಿ ಬಿತ್ತನೆ ಮಾಡಲಾದ ಒಟ್ಟು ಪ್ರದೇಶವು ಹೆಚ್ಚಳವಾಗಿದ್ದರೂ ಸಿರಿಧಾನ್ಯಗಳನ್ನು ಬಿತ್ತಲಾದ ಪ್ರದೇಶವು ಕಡಿಮೆಯಾಗಿದೆ. ಬೆಳೆ ಮತ್ತು ಆಹಾರವಾಗಿ ಸಿರಿಧಾನ್ಯಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದ್ದರೂ ಬಿತ್ತನೆ ಪ್ರದೇಶ ಕಡಿಮೆಯಾಗಲು ಕಾರಣಗಳೇನು ಎಂಬುದನ್ನು ಗುರುತಿಸಬೇಕು ಮತ್ತು ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಅಕ್ಕಿ ಮತ್ತು ಗೋಧಿಯಿಂದ ರೊಟ್ಟಿ ಮತ್ತು ಇತರ ಆಹಾರ ಪದಾರ್ಥಗಳನ್ನು ತಯಾರಿಸುವುದು ಸುಲಭ. ದೇಶದ ಹೆಚ್ಚಿನ ಪ್ರದೇಶಗಳಲ್ಲಿ ಆಹಾರ ಅಂದರೆ, ಅಕ್ಕಿ ಮತ್ತು ಗೋಧಿಯಂತಹ ಧಾನ್ಯಗಳೇ ಆಗಿವೆ. ಪಡಿತರ ವ್ಯವಸ್ಥೆಯ ಮೂಲಕವೂ ಅಕ್ಕಿ ಮತ್ತು ಗೋಧಿಯನ್ನೇ ನೀಡುವುದರಿಂದ ಜನರು ಇವುಗಳ ಬಳಕೆಗೇ ಹೊಂದಿಕೊಂಡಿದ್ದಾರೆ.

ಸಿರಿಧಾನ್ಯಗಳನ್ನು ಬಡವರಷ್ಟೇ ಬಳಸುತ್ತಾರೆ ಎಂಬ ಭಾವನೆ ಜನರಲ್ಲಿ ನೆಲೆ ಆಗಿರುವುದರಿಂದ ಆದಾಯ ಹೆಚ್ಚಳವಾಗುತ್ತಲೇ
ಜನರು ಈ ಧಾನ್ಯಗಳನ್ನು ಬಿಟ್ಟು ಅಕ್ಕಿ ಅಥವಾ ಗೋಧಿಯತ್ತ ಹೊರಳುತ್ತಾರೆ. ರೈತರು ಕೂಡ ಭತ್ತ ಮತ್ತು ಗೋಧಿಯನ್ನು ಬೆಳೆಯುವುದಕ್ಕೇ ಒಗ್ಗಿಕೊಂಡಿದ್ದಾರೆ. ನೀರಾವರಿ ಸೌಲಭ್ಯ ವಿಸ್ತರಣೆಯಾದಂತೆಯೇ ಹೆಚ್ಚು ನೀರು ಬೇಕಾಗುವ ಗೋಧಿ ಮತ್ತು ಭತ್ತ ಬೆಳೆಯುವುದು ಹೆಚ್ಚಾಗಿದೆ. ರೈತರು ಗೋಧಿ ಮತ್ತು ಭತ್ತದ ಬೆಳೆಗಳತ್ತ ಆಕರ್ಷಿತರಾಗಲು ಇತರ ಕಾರಣಗಳೂ ಇವೆ: ಈ ಬೆಳೆಗಳಿಂದ ಬರುವ ಲಾಭವು ಸಿರಿಧಾನ್ಯಗಳಿಗೆ ಹೋಲಿಸಿದರೆ ಹೆಚ್ಚು; ಸರ್ಕಾರ ಹೆಚ್ಚಿನ ಸಹಾಯಧನ ನೀಡುತ್ತದೆ ಮತ್ತು ಮಾರುಕಟ್ಟೆಯಲ್ಲಿ ಉತ್ತಮ ದರ ದೊರೆಯುವ ಖಾತರಿಯೂ ಇರುತ್ತದೆ.

ಹಲವು ಅನುಕೂಲಗಳಿಂದಾಗಿ ಸಿರಿಧಾನ್ಯಗಳು ವಿಶೇಷ ಅನ್ನಿಸಿಕೊಳ್ಳುತ್ತವೆ. ಇತರ ಧಾನ್ಯಗಳಿಗೆ ಹೋಲಿಸಿದರೆ ಸಿರಿಧಾನ್ಯಗಳಲ್ಲಿ ಪೋಷಕಾಂಶಗಳು, ಖನಿಜಾಂಶಗಳು ಮತ್ತು ನಾರಿನ ಅಂಶಗಳು ಹೆಚ್ಚು. ಹಾಗಾಗಿ ಸಿರಿಧಾನ್ಯಗಳನ್ನು ಸೇವಿಸುವುದರಿಂದ ಹೆಚ್ಚಿನ ಪೌಷ್ಟಿಕಾಂಶ ದೊರೆಯುತ್ತದೆ. ಒಣ ಮತ್ತು ಅರೆಒಣ ಪ್ರದೇಶಗಳಲ್ಲಿಯೂ ಸಿರಿಧಾನ್ಯಗಳನ್ನು ಬೆಳೆಯಬಹುದಾಗಿದೆ. ಗೋಧಿ ಮತ್ತು ಭತ್ತಕ್ಕೆ ಬೇಕಾಗುವುದರ ಅರ್ಧದಷ್ಟು ನೀರಿನಲ್ಲಿ ಈ ಧಾನ್ಯಗಳನ್ನು ಬೆಳೆಯಬಹುದಾಗಿದೆ. ನೀರಿನ ಲಭ್ಯತೆ ಕಡಿಮೆಯಾಗುತ್ತಲೇ ಹೋಗುತ್ತಿರುವ ಈ ಸಂದರ್ಭದಲ್ಲಿ ಇದೊಂದು ಬಹುದೊಡ್ಡ ಅನುಕೂಲ. ಸಿರಿಧಾನ್ಯಗಳು ಹೆಚ್ಚು ದೃಢವಾದ ಬೆಳೆಗಳಾದ್ದರಿಂದ ಹವಾಮಾನದ ವ್ಯತ್ಯಯಗಳು ಮತ್ತು ಕೀಟಗಳ ದಾಳಿಗೆ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಳ್ಳುತ್ತವೆ.

ಅಲ್ಪಾವಧಿಯಲ್ಲಿಯೇ ಇವುಗಳನ್ನು ಬೆಳೆಯಬಹುದಾಗಿದೆ. ಹವಾಮಾನ ಬದಲಾವಣೆಯು ಕೃಷಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಈ ಸಂದರ್ಭದಲ್ಲಿ ಸಿರಿಧಾನ್ಯಗಳು ಹೆಚ್ಚು ಸೂಕ್ತವಾದ ಬೆಳೆಗಳಾಗಿವೆ. ಇವುಗಳನ್ನು ಬೆಳೆಯಲು ರೈತರಿಗೆ ಉತ್ತೇಜನ ನೀಡುವ ಅಗತ್ಯ ಇದೆ. ಸ್ಪರ್ಧಾತ್ಮಕ ದರ ದೊರೆಯುವಂತೆ ಮಾಡಬೇಕು. ಇತರ ರೀತಿಯ ನೆರವನ್ನೂ ರೈತರಿಗೆ ಒದಗಿಸಬೇಕು. ಪಡಿತರ ವ್ಯವಸ್ಥೆಯ ಮೂಲಕ ಸಿರಿಧಾನ್ಯಗಳನ್ನು ಪೂರೈಸಿ, ಜನರು ಇವುಗಳ ಬಳಕೆ ಹೆಚ್ಚಿಸಲು ಪ್ರೋತ್ಸಾಹ ನೀಡಬೇಕು. ಸಿರಿಧಾನ್ಯಗಳನ್ನು ವ್ಯಾಪಕವಾಗಿ ಬೆಳೆಯುವಂತೆ ಮತ್ತು ಬಳಕೆ ಆಗುವಂತೆ ಮಾಡುವ ಅಗತ್ಯ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT