ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಸಚಿವ ಸಂಪುಟ ವಿಸ್ತರಣೆ ಈ ವಿಳಂಬ ಸರಿಯಲ್ಲ

Last Updated 20 ಜನವರಿ 2020, 1:27 IST
ಅಕ್ಷರ ಗಾತ್ರ

ಸರ್ಕಾರಗಳು ಜನರಿಗೆ ಹತ್ತಿರವಾಗಿದ್ದರೆ ಅವರ ಕಷ್ಟಗಳಿಗೆ ಹೆಚ್ಚು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಸ್ಪಂದಿಸಲು ಸಾಧ್ಯ. ಕೇಂದ್ರ ಸರ್ಕಾರಕ್ಕಿಂತ ರಾಜ್ಯ ಸರ್ಕಾರವು ಜನರಿಗೆ ಹೆಚ್ಚು ಹತ್ತಿರ. ರಾಜ್ಯ ಸರ್ಕಾರದ ನಂತರದ ಹಂತದ ಸ್ಥಳೀಯ ಆಡಳಿತ ವ್ಯವಸ್ಥೆಗಳು ಜನರಿಗೆ ಇನ್ನೂ ಹತ್ತಿರ. ಆದರೆ, ಅವುಗಳಿಗೆ ಹಲವು ಮಿತಿಗಳಿವೆ. ರಾಜ್ಯ ಸರ್ಕಾರ ಹಾಗಲ್ಲ. ರಾಜ್ಯ ಸರ್ಕಾರವು ತನ್ನ ಸಚಿವರು ಮತ್ತು ಅವರ ಕಾರ್ಯವೈಖರಿಯ ಮೂಲಕ ಜನರ ಬವಣೆಗಳಿಗೆ ತಕ್ಷಣ ಸ್ಪಂದಿಸಬಹುದು.

ಪ್ರವಾಹ, ಕ್ಷಾಮದಂತಹ ವಿಕೋಪಗಳು ರಾಜ್ಯದ ಬಹುಭಾಗವನ್ನು ಆವರಿಸಿ, ಜನರ ಬದುಕನ್ನು ಸಂಕಷ್ಟಮಯಗೊಳಿಸಿದಂತಹ ಸಂದರ್ಭಗಳಲ್ಲಿ ರಾಜ್ಯ ಸರ್ಕಾರವು ಹೆಚ್ಚು ಕ್ರಿಯಾಶೀಲವಾಗಿ, ಜನಸ್ನೇಹಿಯಾಗಿ ಕೆಲಸ ಮಾಡಿ, ಜನರ ಕಂಬನಿ ಒರೆಸುವ ಕೆಲಸ ಮಾಡಲೇಬೇಕು.

ರಾಜಕೀಯ ಅಸ್ಥಿರತೆ ಇದ್ದಾಗ ಇಂತಹ ವಿಕೋಪಗಳು ಸಂಭವಿಸಿದರೆ, ಸರ್ಕಾರವು ಜನರಿಗೆ ಸ್ಪಂದಿಸುವುದು ಕಷ್ಟವಾಗುತ್ತದೆ. ಕರ್ನಾಟಕದಲ್ಲಿ ಒಂದೂವರೆ ವರ್ಷದಿಂದ ರಾಜಕೀಯವಾಗಿ ಅಸ್ಥಿರ ಸ್ಥಿತಿ ಇದೆ. ಅದೇ ಹೊತ್ತಿನಲ್ಲಿ, ರಾಜ್ಯವು ಭೀಕರವಾದ ಪ್ರವಾಹಕ್ಕೆ‌ತುತ್ತಾಗಿದೆ. ಸಾವಿರಾರು ಜನರು ನೆಲೆ ಕಳೆದುಕೊಂಡಿದ್ದಾರೆ. ಪ್ರವಾಹದ ಕಾರಣಕ್ಕೆ ಬೆಳೆ ನಾಶ ಮತ್ತು ಜಮೀನಿನ ಫಲವತ್ತತೆ ಹಾಳಾಗಿ ರೈತ ಕಂಗಾಲಾಗಿದ್ದಾನೆ.

ಈ ಎಲ್ಲರ ಬದುಕು ಮತ್ತೆ ಹಸನಾಗುವಂತೆ ಮಾಡಲು ಸಾವಿರಾರು ಕೋಟಿ ರೂಪಾಯಿ ಬೇಕು. ಸಮರೋಪಾದಿಯಲ್ಲಿ ಕೆಲಸಗಳಾಗಬೇಕು. ಈ ಕೆಲಸಗಳಿಗೆ ಪ್ರಾಮಾಣಿಕ ಮತ್ತು ದಕ್ಷವಾದ ಮೇಲ್ವಿಚಾರಣೆ ಇರಬೇಕು. ಇವನ್ನೆಲ್ಲ ಮಾಡಲು ಸಚಿವರು ಇರಬೇಕು. ಆದರೆ, ಆರು ತಿಂಗಳ ಹಿಂದೆ ರಾಜ್ಯದ ಚುಕ್ಕಾಣಿ ಹಿಡಿದ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಅರ್ಧ ಸಂಪುಟ ರಚನೆಯಷ್ಟೇ ಸಾಧ್ಯವಾಗಿದೆ.

ಕಾಂಗ್ರೆಸ್‌, ಜೆಡಿಎಸ್‌ ಮತ್ತು ಕೆಪಿಜೆಪಿಯಿಂದ ಗೆದ್ದಿದ್ದ 17 ಶಾಸಕರು ರಾಜೀನಾಮೆ ನೀಡುವ ಮೂಲಕ ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂತು. ಈ ಶಾಸಕರನ್ನು ವಿಧಾನಸಭೆಯ ಈ ಹಿಂದಿನ ಅಧ್ಯಕ್ಷ ರಮೇಶ್‌ ಕುಮಾರ್‌ ಅವರು ಅನರ್ಹಗೊಳಿಸಿದ್ದನ್ನು ಸುಪ್ರೀಂ ಕೋರ್ಟ್‌ ಕೂಡ ಎತ್ತಿ ಹಿಡಿದಿತ್ತು. ಆದರೆ, ಅವರಲ್ಲಿ 11 ಮಂದಿಉಪಚುನಾವಣೆಯಲ್ಲಿ ಪುನರಾಯ್ಕೆಯಾಗಿದ್ದಾರೆ.

ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ಕಾರಣರಾದ ಇವರೆಲ್ಲರಿಗೂ ಸಚಿವ ಸ್ಥಾನ ನೀಡಲಾಗುವುದು ಎಂದು ಬಿಜೆಪಿ ನಾಯಕರು ಹಲವು ಬಾರಿ ಹೇಳಿದ್ದಾರೆ. ಅವರಿಗೆ ಸ್ಥಾನ ನೀಡುವುದಕ್ಕಾಗಿಯೇ ಸಚಿವ ಸಂಪುಟವನ್ನು ಪೂರ್ಣ ಪ್ರಮಾಣದಲ್ಲಿ ರಚಿಸಲಾಗಿಲ್ಲ. ರಾಜ್ಯದ ಸಚಿವ ಸಂಪುಟದಲ್ಲಿ 34 ಸಚಿವರಿಗೆ ಅವಕಾಶ ಕಲ್ಪಿಸಲು ಸಾಧ್ಯವಿದೆಯಾದರೂ ಈಗ ಇರುವವರು 18 ಸಚಿವರು ಮಾತ್ರ. ಮುಖ್ಯಮಂತ್ರಿ ಬಳಿ ಹಣಕಾಸು ಸೇರಿ ಹತ್ತಕ್ಕೂ ಹೆಚ್ಚು ಮಹತ್ವದ ಖಾತೆಗಳಿವೆ.‌

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಲ್ಲಿ ಲೋಕೋಪಯೋಗಿ ಖಾತೆಯ ಜತೆಗೆ ಸಮಾಜ ಕಲ್ಯಾಣ ಖಾತೆ ಹೆಚ್ಚುವರಿಯಾಗಿ ಇದೆ. ಸಮಾಜ ಕಲ್ಯಾಣ ಇಲಾಖೆಯು ಹೆಚ್ಚು ಅನುದಾನವನ್ನು ಹೊಂದಿದೆ. ಲೋಕೋಪಯೋಗಿ ಖಾತೆ ಕೂಡ ಬಹಳ ಮುಖ್ಯವಾದುದೇ ಆಗಿದೆ. ಹಲವು ಮಹತ್ವದ ಖಾತೆಗಳು ಒಬ್ಬ ವ್ಯಕ್ತಿಯ ಬಳಿ ಇದ್ದಾಗ ಎಲ್ಲ ಖಾತೆಗಳಿಗೆ ನ್ಯಾಯ ಒದಗಿಸುವುದು ಸಾಧ್ಯವೇ? ಸಚಿವ ಸಂಪುಟ ವಿಸ್ತರಣೆ ಇಂದು ನಡೆಯುತ್ತದೆ, ನಾಳೆ ನಡೆಯುತ್ತದೆ ಎಂದು ಹೇಳುತ್ತಲೇ ಬರಲಾಗಿದೆ.

ಸಚಿವರ ನೇಮಕವು ಮುಖ್ಯಮಂತ್ರಿಯ ಪರಮಾಧಿಕಾರ. ಆದರೆ, ಯಡಿಯೂರಪ್ಪ ಅವರಿಗೆ ಈ ಅಧಿಕಾರ ಇದ್ದ ಹಾಗೆ ಕಾಣಿಸುತ್ತಿಲ್ಲ. ಆಡಳಿತಾರೂಢ ಬಿಜೆಪಿಯಲ್ಲಿ ವರಿಷ್ಠರ ಹಿಡಿತ ಈಗ ಬಿಗಿಯಾಗಿಯೇ ಇದೆ. ಆದರೆ, ಅದು ರಾಜ್ಯವೊಂದರ ಅಭಿವೃದ್ಧಿಗೆ, ಜನರ ಸಮಸ್ಯೆಗಳ ನಿವಾರಣೆಗೆ ತೊಡಕಾಗಿ ಪರಿಣಮಿಸಬಾರದು.

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದ್ದಾಗ, ಪ್ರವಾಹ ಪರಿಹಾರಕ್ಕೆ ಹೆಚ್ಚಿನ ಮೊತ್ತ ಕೊಡಿ ಎಂದು ಯಡಿಯೂರಪ್ಪ ಕೇಳಿದ್ದರು. ಅದಕ್ಕೆ ಪ್ರಧಾನಿ ಯಾವ ಪ್ರತಿಕ್ರಿಯೆಯನ್ನೂ ನೀಡದೆ, ಜನರಿಂದ ಚುನಾಯಿತವಾದ ಸರ್ಕಾರವೊಂದರ ಮುಖ್ಯಸ್ಥರನ್ನು ಅಲಕ್ಷಿಸಿದ್ದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ದೆಹಲಿಗೆ ಹೋಗಿ ಚರ್ಚಿಸಲು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಮುಖ್ಯಮಂತ್ರಿಗೆ ಸಮಯವನ್ನೇ ನೀಡಿಲ್ಲ ಎಂದು ವರದಿಯಾಗಿದೆ. ಇದಕ್ಕೆ ಕಾರಣವೇನು ಎಂಬುದನ್ನು ತಿಳಿಯುವ ಹಕ್ಕು ಜನರಿಗೆ ಇದೆ. ಯಡಿಯೂರಪ್ಪನವರ ಆಡಳಿತ ವೈಖರಿ ಬಗ್ಗೆ ಪಕ್ಷದ ವರಿಷ್ಠರಿಗೆ ಅಸಮಾಧಾನ ಇದೆ ಎಂದಾದರೆ, ಅದು ಪಕ್ಷದ ಆಂತರಿಕ ವಿಚಾರ. ಅದಕ್ಕೆ ಪಕ್ಷವು ಪರಿಹಾರ ಕಂಡುಕೊಳ್ಳಬೇಕೇ ವಿನಾ ರಾಜ್ಯದ ಜನರು ಬೆಲೆ ತೆರುವಂತೆ ಆಗಬಾರದು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT