ಅಭಿವೃದ್ಧಿಯ ದಾಪುಗಾಲು ಅದೆಷ್ಟು ಅವಸರದ್ದೆಂದರೆ ಅದು ಗುಡ್ಡಬೆಟ್ಟಗಳೇ ಕುಸಿಯುವಂತೆ ಮಾಡುತ್ತಿದೆ. ನೈಸರ್ಗಿಕ ವಿಕೋಪಗಳನ್ನು ಮೀರಿಸಿದ ಹೆಜ್ಜೆಗುರುತುಗಳನ್ನು ಮೂಡಿಸತೊಡಗಿದೆ. ಮೊನ್ನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತದಿಂದ ಜನ-ಮನೆಗಳಷ್ಟೇ ಅಲ್ಲ, ಹೆದ್ದಾರಿಯಲ್ಲಿ ಸಾಗುತ್ತಿದ್ದ ಅನಿಲದ ಟ್ಯಾಂಕರ್ಗಳೂ ನದಿಗೆ ಬಿದ್ದು ಆತಂಕವನ್ನು ನೂರ್ಮಡಿ ಹೆಚ್ಚಿಸಿದ್ದವು. ಸಂತ್ರಸ್ತರ ನೆರವಿಗೆ ಧಾವಿಸಬೇಕಾದವರನ್ನೇ ಅನಿಲ ಸೋರಿಕೆಯ ಭಯದಿಂದಾಗಿ ದೂರ ಸಾಗಿಸಬೇಕಾದ ವಿಲಕ್ಷಣ ಪರಿಸ್ಥಿತಿ ಉದ್ಭವಿಸಿತ್ತು. ಅತಿವೃಷ್ಟಿಯಿಂದಾಗಿ ಅದಾಗಲೇ ತುಂಬಿ ಹರಿಯುತ್ತಿದ್ದ ಗಂಗಾವಳಿ ನದಿ ಹಠಾತ್ ಗುಡ್ಡ ಕುಸಿತದಿಂದ ಆಳೆತ್ತರದ ಅಲೆಗಳನ್ನು ಎಬ್ಬಿಸಿ ಕಂಗಾಲುಗೊಳಿಸಿತ್ತು. ಪಶ್ಚಿಮಘಟ್ಟಗಳೆಂದರೆ ಭಾರತದ ಅತ್ಯಂತ ಪುರಾತನ ಶಿಲಾಶ್ರೇಣಿಯಾಗಿದ್ದು, ಕಡಿದಾದ ಶಿಥಿಲ ಗುಡ್ಡಬೆಟ್ಟಗಳಿಂದ ಕೂಡಿದೆ. ಸಾಲದ್ದಕ್ಕೆ ಭಾರಿ ಮಳೆಗಾಲ ಮತ್ತು ಸಮುದ್ರದಂಚಿನ ಬಿರುಗಾಳಿಗೆ ಮೈಯೊಡ್ಡಿಕೊಂಡ ಅತಿ ಸೂಕ್ಷ್ಮ ಭೂಪರಿಸರ ಇದರದ್ದಾಗಿದೆ. ದಕ್ಷಿಣ ಭಾರತದ ಇತರ ಭೂಭಾಗಗಳಿಗೆ ಹೋಲಿಸಿದರೆ ಇಲ್ಲಿನ ಅಸ್ಥಿರ ಬೆಟ್ಟಗುಡ್ಡಗಳಲ್ಲಿ ಪ್ರಾಕೃತಿಕ ಸ್ಥಿತ್ಯಂತರಗಳ ಪ್ರಮಾಣ ಸಹಜವಾಗಿಯೇ ಹೆಚ್ಚಾಗಿ ಇರುತ್ತದೆ. ಹೆಚ್ಚುತ್ತಿರುವ ಜನಸಾಂದ್ರತೆ ಮತ್ತು ವ್ಯಾಪಾರ–ವಹಿವಾಟುಗಳಿಗೆ ತಕ್ಕಂತೆ ಕಳೆದ ಎರಡು ದಶಕಗಳಿಂದ ಈ ಘಟ್ಟಸಾಲಿನ ಉದ್ದಕ್ಕೂ ಅಭಿವೃದ್ಧಿಯ ಮಹಾ ಅಭಿಯಾನ ನಡೆದಿದೆ. ಸಮುದ್ರತೀರಕ್ಕೆ ಸಮಾನಾಂತರವಾಗಿ ಹೆದ್ದಾರಿ, ರೈಲು
ಮಾರ್ಗ, ಸುರಂಗ, ಸೇತುವೆಗಳ ನಿರ್ಮಾಣ ನಿರಂತರ ನಡೆಯುತ್ತಲೇ ಇದೆ. ಹಿಂದೆಂದೂ ಕಂಡಿರದಷ್ಟು ದೊಡ್ಡ ಪ್ರಮಾಣದಲ್ಲಿ ಎಲ್ಲೆಂದರಲ್ಲಿ ಬೃಹತ್ ಯಂತ್ರೋಪಕರಣಗಳು ಭೂಸ್ವರೂಪವನ್ನುಬದಲಿಸುವಲ್ಲಿ ತೊಡಗಿವೆ. ನಗರ ನಿರ್ಮಾಣ, ಪ್ರವಾಸಿಧಾಮ ಮತ್ತು ವಿರಾಮಧಾಮಗಳ ನಿರ್ಮಾಣ, ಗಣಿಗಾರಿಕೆ, ವಿದ್ಯುತ್ ಮಾರ್ಗ, ನೀರಾವರಿ ಕಾಲುವೆ, ಅತಿಕ್ರಮ ಸಾಗುವಳಿಯಂತಹ ಚಟುವಟಿಕೆಗಳು ಎಗ್ಗಿಲ್ಲದೆ ಸಾಗಿವೆ. ಇದೇ ಸಂದರ್ಭದಲ್ಲಿ ಹವಾಮಾನ ವೈಪರೀತ್ಯಗಳೂ ಹೆಚ್ಚುತ್ತಿವೆ. ಇವೆಲ್ಲವುಗಳ ಒಟ್ಟಾರೆ ಪರಿಣಾಮ ನಮಗೆ ಮತ್ತೆ ಮತ್ತೆ ಕಾಣುತ್ತಿದೆ. 2019ರ ಆಗಸ್ಟ್ ತಿಂಗಳಲ್ಲಿ ಸಕಲೇಶಪುರ-ಸುಬ್ರಹ್ಮಣ್ಯದಲ್ಲಿ ರೈಲ್ವೆ ಹಳಿಗುಂಟ 35ಕ್ಕೂ ಹೆಚ್ಚು ಸ್ಥಳಗಳಲ್ಲಿ ಸರಣಿ ಭೂಕುಸಿತ ಸಂಭವಿಸಿತ್ತು. 2018ರ ಆಗಸ್ಟ್ ತಿಂಗಳಲ್ಲಿ ಕೇರಳ, ಕೊಡಗು ಮತ್ತು ಚಿಕ್ಕಮಗಳೂರಿನ ಗುಡ್ಡಬೆಟ್ಟಗಳ ಕುಸಿತದಿಂದಾಗಿ 350ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡು, ಅನೇಕ ಹಳ್ಳಿಗಳು ಅಕ್ಷರಶಃ ನಾಪತ್ತೆಯಾದ ದುರಂತಗಳ ಸರಮಾಲೆಗೆ ಪಶ್ಚಿಮಘಟ್ಟಗಳು ಸಾಕ್ಷಿಯಾಗಿದ್ದವು. ತಲಕಾವೇರಿ ಮತ್ತು ಕೊಡಸಳ್ಳಿಯ ಭೂಕುಸಿತಗಳನ್ನಂತೂ ಮರೆಯುವಂತೆಯೇ ಇಲ್ಲ. ಈ ವರ್ಷ ಆಗಸ್ಟ್ಗೆ ಮೊದಲೇ ಭಾರಿ ಅಬ್ಬರದ ಮಳೆ ಬಿದ್ದಿದೆ.

ಹವಾಮಾನ ಇಲಾಖೆಯೇನೋ ತಕ್ಕಮಟ್ಟಿಗೆ ಖಚಿತವಾಗಿ ಮಳೆಗಾಳಿಯ ಮುನ್ಸೂಚನೆಯನ್ನು ನೀಡುತ್ತಿದೆ. ಆದರೆ ಭೂಕಂಪನ, ಭೂಕುಸಿತಗಳ ಮುನ್ನೆಚ್ಚರಿಕೆಯನ್ನು ಅಷ್ಟೇ ನಿಖರವಾಗಿ ಕೊಡುವಷ್ಟು ತಂತ್ರಜ್ಞಾನ ಸುಧಾರಿಸಿಲ್ಲ. ಈ ಘಟ್ಟ ಪ್ರದೇಶಗಳ ಒಂದೊಂದು ಗುಡ್ಡ, ಒಂದೊಂದು ಕಣಿವೆಯ ಶಿಲಾರಚನೆ ಮತ್ತು ಮೇಲ್ಮಣ್ಣಿನ ರಚನೆ ವಿಭಿನ್ನವಾಗಿದ್ದು, ಗಿಡಮರಗಳ ದಟ್ಟಣೆ ಹಾಗೂ ನೀರನ್ನು ಹಿಡಿದಿಡುವ ಸಾಮರ್ಥ್ಯವೂ ಏಕರೂಪವಾಗಿಲ್ಲ. ಆದರೆ ಇಂಥ ಸೂಕ್ಷ್ಮ ಪ್ರದೇಶಗಳಲ್ಲಿ ನಿರ್ಮಾಣ ಕಾರ್ಯ ಕೈಗೊಳ್ಳುವಾಗ ಏನೆಲ್ಲ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಎಲ್ಲೆಲ್ಲಿ ಮನುಷ್ಯರ ಹಸ್ತಕ್ಷೇಪ ಇರಲೇಬಾರದು ಎಂಬ ಬಗ್ಗೆ ಬಹಳಷ್ಟು ಮಾರ್ಗಸೂಚಿಗಳಂತೂ ಲಭ್ಯ ಇವೆ. ಪಶ್ಚಿಮಘಟ್ಟಗಳಲ್ಲಿ ಎಂಥದ್ದೇ ಕಾಮಗಾರಿಗೂ ಮುಂಚೆ ಗಮನಿಸಲೇಬೇಕಾದ ‘ಸಂಭವನೀಯ ಭೂಕುಸಿತದ ನಕ್ಷೆ’ಯನ್ನು ಭಾರತೀಯ ಭೂವಿಜ್ಞಾನ ಸರ್ವೇಕ್ಷಣಾ ಇಲಾಖೆ ಸಿದ್ಧಪಡಿಸಿದೆ. ಬದಲಾಗುತ್ತಿರುವ
ಹವಾಗುಣ ವೈಪರೀತ್ಯವನ್ನು ಹೇಗೆ ಎದುರಿಸಬೇಕೆಂಬ ಬಗ್ಗೆ ಕರ್ನಾಟಕ ರಾಜ್ಯ ಸಿದ್ಧಪಡಿಸಿರುವ ಕ್ರಿಯಾಯೋಜನೆಯ ವರದಿಯಲ್ಲೂ ಗುಡ್ಡ ಕುಸಿತಗಳ ಬಗ್ಗೆ ಎಚ್ಚರಿಕೆಯ ಮಾತುಗಳಿವೆ. ಈ ಎಚ್ಚರಿಕೆಗಳು ಕಿವಿಗೇ ಬೀಳದಷ್ಟು ಗದ್ದಲದೊಂದಿಗೆ ಕಾಮಗಾರಿಗಳು ನಡೆಯುತ್ತಿವೆ. ಭಾರಿ ಅವಸರದಲ್ಲಿ, ಭಾರಿ ಯಂತ್ರೋಪಕರಣಗಳನ್ನು ಬಳಸಿ, ಭಾರಿ ಸಂಖ್ಯೆಯಲ್ಲಿ ಹೆದ್ದಾರಿಗಳನ್ನು ನಿರ್ಮಿಸುವ ಈಗಿನ ಭರಾಟೆಯಲ್ಲಿ ಗುತ್ತಿಗೆದಾರರ ಎಡವಟ್ಟುಗಳು ಜನಸಾಮಾನ್ಯರಿಗೂ ಎದ್ದುಕಾಣುವಂತಿವೆ. ರಸ್ತೆ ನಿರ್ಮಿಸುವಾಗ ಗುಡ್ಡಗಳ ಬದಿಯನ್ನು 45 ಡಿಗ್ರಿಗಳಷ್ಟು ಓರೆಯಾಗಿ ಕತ್ತರಿಸಬೇಕೆಂಬ ನಿಯಮಗಳಿದ್ದರೂ 60, 80, 90 ಡಿಗ್ರಿಗಳಷ್ಟು ಕಡಿದಾಗಿ ಗೋಡೆಯಂತೆ ಕತ್ತರಿಸಿರುವುದು ಅಲ್ಲಲ್ಲಿ ಕಾಣುತ್ತದೆ. ನೀರು ಬಸಿದು ಹೋಗಲು ಕಾಲುವೆಗಳು ಸಮರ್ಪಕವಾಗಿರುವುದಿಲ್ಲ; ತಡೆಗೋಡೆಗಳು ನೆಪಮಾತ್ರಕ್ಕಿರುತ್ತವೆ. ರಸ್ತೆಯಂಚಿನ ಭೂಕುಸಿತಕ್ಕೆ ಮುಖ್ಯ ಕಾರಣ ಏನೆಂದರೆ, ಗುಡ್ಡಪ್ರದೇಶಗಳಲ್ಲಿ ಅಂಕುಡೊಂಕಾಗಿ ಸಾಗಬೇಕಿದ್ದ ರಸ್ತೆಯನ್ನು ನೇರ ಮಾಡಲೆಂದೂ ಅಗಲ ಮಾಡಲೆಂದೂ ಎಂಜಿನಿಯರಿಂಗ್ ಕೆಲಸಗಳು ನಡೆಯುತ್ತವೆ. ಇಡೀ ನಾಗರಿಕತೆಯನ್ನು ಇನ್ನಷ್ಟು ಮತ್ತಷ್ಟು ವೇಗವಾಗಿ ಭವಿಷ್ಯದತ್ತ ಮುನ್ನುಗ್ಗಿಸಬೇಕೆಂಬ ತುಡಿತ ಎಲ್ಲೆಲ್ಲೂ ಕಾಣುತ್ತಿದೆ. ನಿಸರ್ಗದ ಮಹಾನ್ ಶಕ್ತಿಗೆ ತಲೆಬಾಗುವ ತಾಳ್ಮೆ ಈ ಯಂತ್ರಯುಗದ ಎಂಜಿನಿಯರುಗಳಿಗೆ ಇರಲಿಕ್ಕಿಲ್ಲವಾದರೂ ಅದಕ್ಕೆ ಮುಗ್ಧಜೀವಿಗಳು ತಲೆದಂಡ ತೆರಬೇಕಾಗಿ ಬಂದಿರುವುದು ದುರದೃಷ್ಟಕರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.