ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕತಾರ್‌ ಮರಣದಂಡನೆ ಪ್ರಕರಣ; ಭಾರತಕ್ಕೆ ಕಲಿಸಿದ ಪಾಠಗಳು ಹಲವು

Published 2 ಜನವರಿ 2024, 0:54 IST
Last Updated 2 ಜನವರಿ 2024, 0:54 IST
ಅಕ್ಷರ ಗಾತ್ರ

ಕತಾರ್‌ ದೊರೆಯಿಂದ ಕ್ಷಮಾದಾನ ಪಡೆದುಕೊಳ್ಳುವ ಸಾಧ್ಯತೆಯೂ ಇದೆ. ಆದರೆ, ಅದಕ್ಕಾಗಿ ಭಾರತವು ರಾಜತಾಂತ್ರಿಕವಾಗಿ ಹೆಚ್ಚು ಪ್ರಯತ್ನ ಮಾಡಬೇಕಾದೀತು

ಭಾರತದ ನೌಕಾಪಡೆಯ ಎಂಟು ಮಂದಿ ಮಾಜಿ ಸಿಬ್ಬಂದಿಗೆ ನೀಡಿದ್ದ ಮರಣದಂಡನೆಯನ್ನು ಕತಾರ್‌ ದೇಶವು ರದ್ದು ಮಾಡಿರುವುದು ಈ ಪ್ರಕರಣದಲ್ಲಿ ಮೂಡಿದ ಭರವಸೆಯ ಬೆಳಕು. ಬೇಹುಗಾರಿಕೆ ಆರೋಪದಲ್ಲಿ 2022ರ ಆಗಸ್ಟ್‌ನಲ್ಲಿ ಇವರನ್ನು ಬಂಧಿಸಲಾಗಿತ್ತು. ಮೇಲ್ಮನವಿ ನ್ಯಾಯಾಲಯವು ಮರಣದಂಡನೆಯನ್ನು ರದ್ದು ಮಾಡಿ ಮೂರರಿಂದ 25 ವರ್ಷಗಳವರೆಗಿನ ಶಿಕ್ಷೆಯನ್ನು ವಿಧಿಸಿದೆ ಎಂದು ವರದಿಯಾಗಿದೆ. ಭಾರತ ಸರ್ಕಾರವು ಕತಾರ್‌ ಸರ್ಕಾರದ ಜೊತೆಗೆ ಈ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ವಿವೇಚನೆಯಿಂದ ಮಾತುಕತೆ ನಡೆಸಿದೆ. ಕುಲಭೂಷಣ್‌ ಜಾಧವ್‌ ಪ್ರಕರಣದಲ್ಲಿ ನಡೆದುಕೊಂಡಂತೆ ಭಾರತವು ನಡೆದುಕೊಳ್ಳಲಿಲ್ಲ.

ಜಾಧವ್ ಅವರನ್ನು ಐಎಸ್‌ಐ ಸಿಲುಕಿಸಿದೆ ಎಂದು ಭಾರತವು ಬಿಂಬಿಸಿತ್ತು ಮತ್ತು ಹಾಗೆ ಮಾಡುವುದು ಸುಲಭವಾಗಿ ಸಾಧ್ಯವಾಗಿತ್ತು. ಆದರೆ, ಕತಾರ್‌ ಪ್ರಕರಣದಲ್ಲಿ ರಾಜಕೀಯ ನಾಯಕರು ಸಾರ್ವಜನಿಕವಾಗಿ ಯಾವುದೇ ಭರವಸೆಯನ್ನು ಕೊಡಲಿಲ್ಲ. ಅವರ ಮೇಲಿದ್ದ ಆರೋಪಗಳ ಕುರಿತು ಏನನ್ನೂ ಬಹಿರಂಗಪಡಿಸಲಿಲ್ಲ. ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡಲಾಗುವುದು ಎಂದು ಮಾತ್ರ ಸರ್ಕಾರ ಹೇಳಿತ್ತು. ಸರ್ಕಾರವು ಏನನ್ನು ಮಾಡಬೇಕಿತ್ತೋ ಅದನ್ನು ಮಾಡುತ್ತಿಲ್ಲ ಎಂಬ ಕಳವಳ ಶಿಕ್ಷೆಗೆ ಒಳಗಾದವರ ಕುಟುಂಬಗಳ ಸದಸ್ಯರಿಗೆ ಇತ್ತು. ಹಾಗಿದ್ದರೂ ಅವರು ಬಹಿರಂಗವಾಗಿ ಏನನ್ನೂ ಹೇಳದೆ ಘನತೆಯಿಂದ ವರ್ತಿಸಿದರು. ಆದರೆ, ಕೆಲವರು ಸಾಮಾಜಿಕ ಮಾಧ್ಯಮದ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸವನ್ನು ನಿರಂತರವಾಗಿ ಮಾಡಿದರು.

ಎಂಟು ಮಂದಿಯ ಬಂಧನದ ನಂತರ ಪ್ರತಿ ತಿಂಗಳೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕಿ, ಅದನ್ನು ಸರ್ಕಾರದಲ್ಲಿರುವವರಿಗೆ ಟ್ಯಾಗ್‌ ಮಾಡಿ, ವಿಚಾರವು ಸಾರ್ವಜನಿಕವಾಗಿಯೇ ಇರುವಂತೆ ನೋಡಿಕೊಂಡರು. ವಕೀಲರೊಬ್ಬರನ್ನು ನೇಮಿಸಿ, ಕಾನೂನು ಹೋರಾಟದ ಸಂಪೂರ್ಣ ವೆಚ್ಚವನ್ನು ಭರಿಸುವ ನಿರ್ಧಾರ ಕೈಗೊಂಡದ್ದು ಸರ್ಕಾರದಿಂದ ಸಿಕ್ಕ ಗಟ್ಟಿಯಾದ ಭರವಸೆಯಾಗಿತ್ತು. ಕಾನೂನು ಹೋರಾಟವು ಮುಂದುವರಿಯಲಿದೆ. ಕತಾರ್‌ನ ಅತ್ಯುನ್ನತ ನ್ಯಾಯಾಲಯವು ಈಗ ನೀಡಿರುವ ಶಿಕ್ಷೆಯ ಅವಧಿಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಸಂತ್ರಸ್ತರ ಕುಟುಂಬಸ್ಥರು ಹೇಳಿದ್ದಾರೆ. ಈ ಎಂಟು ಮಂದಿ ತಮ್ಮ ಜೈಲುವಾಸದ ಅವಧಿಯನ್ನು ಭಾರತದಲ್ಲಿಯೇ ಕಳೆಯಬಹುದು ಎಂಬ ಭರವಸೆಯೊಂದು ಇದೆ. ಕೈದಿಗಳ ಹಸ್ತಾಂತರಕ್ಕೆ ಸಂಬಂಧಿಸಿದ ಒಪ್ಪಂದವನ್ನು 2014ರಲ್ಲಿಯೇ ಮಾಡಿಕೊಳ್ಳಲಾಗಿದೆ. ಆದರೆ, ಕತಾರ್‌ ಸರ್ಕಾರ ಅದಕ್ಕೆ ಇನ್ನೂ ಅನುಮೋದನೆ ನೀಡಿಲ್ಲ. 

ಕತಾರ್‌ ದೊರೆಯಿಂದ ಕ್ಷಮಾದಾನ ಪಡೆದುಕೊಳ್ಳುವ ಸಾಧ್ಯತೆಯೂ ಇದೆ. ಆದರೆ, ಅದಕ್ಕಾಗಿ ಭಾರತವು ರಾಜತಾಂತ್ರಿಕವಾಗಿ ಬಹಳ ಹೆಚ್ಚು ಪ್ರಯತ್ನ ಮಾಡಬೇಕಾದೀತು. ಆರೋಪ ಮತ್ತು ನ್ಯಾಯಾಲಯದಲ್ಲಿನ ವಿಚಾರಣೆಯ ವಿವರಗಳಿಗೆ ಸಂಬಂಧಿಸಿ ಕಾಯ್ದುಕೊಂಡ ಗೋಪ್ಯತೆಯನ್ನು ಗಮನಿಸಿದರೆ, ಪ್ರಕರಣವು ಯಾವುದೇ ತಿರುವು ಪಡೆದುಕೊಂಡರೂ ವ್ಯಾಪಕವಾದ ಪರಿಣಾಮವನ್ನು ಬೀರಲಿದೆ ಎಂಬುದಂತೂ ನಿಜ. ಭಾರತವಾಗಲೀ ಕತಾರ್‌ ಆಗಲೀ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಭಾರತವಂತೂ ಎಂದಿನಂತೆ ‘ಸೂಕ್ಷ್ಮ’ ಪ್ರಕರಣ ಎಂದು ಹೇಳಿಬಿಟ್ಟಿದೆ. ಈ ಜಟಿಲ ಪರಿಸ್ಥಿತಿಯಿಂದಾಗಿ ಭಾರತದ ವರ್ಚಸ್ಸಿಗೆ ಆಗುವ ಹಾನಿಯ ಕುರಿತು ಸರ್ಕಾರದ ಚಿಂತೆ ಸಹಜವಾದುದೇ ಆಗಿದೆ.

ಭಾರತದ ಭದ್ರತಾ ಪಡೆಗಳ ಸಿಬ್ಬಂದಿಯ ನಿವೃತ್ತಿಯ ವಯಸ್ಸು ಕಡಿಮೆ ಆಗಿರುವುದರಿಂದ ನಿವೃತ್ತಿಯ ನಂತರ ಅವರು ಬೇರೊಂದು ಕೆಲಸವನ್ನು ಹುಡುಕಿಕೊಳ್ಳುತ್ತಾರೆ. ನೌಕಾಪಡೆಯ ಈ ಎಂಟು ನಿವೃತ್ತ ಸಿಬ್ಬಂದಿಯ ರೀತಿಯಲ್ಲಿಯೇ ಕೆಲವರು ಭಾರತದ ಜೊತೆ ರಕ್ಷಣಾ ವಿಚಾರಕ್ಕೆ ಸಂಬಂಧಿಸಿ ಪ್ರಬಲ ಬಾಂಧವ್ಯ ಹೊಂದಿರುವ ಸಣ್ಣ ದೇಶಗಳಲ್ಲಿ ಹೊಸ ಉದ್ಯೋಗ ಕಂಡುಕೊಳ್ಳುತ್ತಾರೆ. ಇಂತಹ ಉದ್ಯೋಗಿಗಳ ನಿಷ್ಠೆ ಮತ್ತು ಬದ್ಧತೆ ಕುರಿತು ಉದ್ಯೋಗದಾತರಿಗೆ ಸಣ್ಣ ಅನುಮಾನ ಬಂದರೂ ಅದು ರಕ್ಷಣಾ ಪಡೆಗಳ ಅಂತರರಾಷ್ಟ್ರೀಯ ವರ್ಚಸ್ಸಿಗೆ ಮಾತ್ರವಲ್ಲದೆ ದ್ವಿಪಕ್ಷೀಯ ಸಂಬಂಧಕ್ಕೂ ಧಕ್ಕೆ ಉಂಟುಮಾಡುತ್ತದೆ. ಹಾಗಾಗಿಯೇ ರಕ್ಷಣಾ ಪಡೆಗಳ ಸಿಬ್ಬಂದಿಯು ನಿವೃತ್ತಿಯ ನಂತರ ಬೇರೆ ಉದ್ಯೋಗ ಪಡೆದುಕೊಳ್ಳುವುದಕ್ಕೆ ಸಂಬಂಧಿಸಿ ನಿಯಮಗಳನ್ನು ರೂಪಿಸಲು ಕತಾರ್‌ ಪ್ರಕರಣವು ಎಚ್ಚರಿಕೆಯ ಗಂಟೆಯಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT