ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ಕೈಗಾರಿಕಾ ನಗರ ಸ್ಥಾಪನೆ ಯೋಜನೆ– ಅನುಷ್ಠಾನ ಸಮರ್ಪಕವಾಗಿ ಆಗಲಿ

Published 2 ಸೆಪ್ಟೆಂಬರ್ 2024, 0:10 IST
Last Updated 2 ಸೆಪ್ಟೆಂಬರ್ 2024, 0:10 IST
ಅಕ್ಷರ ಗಾತ್ರ

ಹತ್ತು ರಾಜ್ಯಗಳಲ್ಲಿ 12 ಕೈಗಾರಿಕಾ ನಗರಗಳನ್ನು ಅಭಿವೃದ್ಧಿಪಡಿಸುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ತಯಾರಿಕಾ ವಲಯಕ್ಕೆ ಈ ಯೋಜನೆಯು ಉತ್ತೇಜನ ನೀಡಲಿದೆ ಮತ್ತು ಭಾರತದಂತಹ ಮಹತ್ವಾಕಾಂಕ್ಷಿ ಅರ್ಥ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಆರು ಕೈಗಾರಿಕಾ ಕಾರಿಡಾರ್‌ಗಳಲ್ಲಿ ಈ 12 ಕೈಗಾರಿಕಾ ನಗರಗಳು ತಲೆ ಎತ್ತಲಿವೆ.

ಇವುಗಳಿಗಾಗಿ ಒಟ್ಟು ₹ 28,600 ಕೋಟಿ ವಿನಿಯೋಗ ಆಗಲಿದೆ. ಈ ಕೈಗಾರಿಕಾ ನಗರಗಳು ಸಂಪೂರ್ಣವಾಗಿ ಹೊಸದಾಗಿ ಸ್ಮಾರ್ಟ್‌ ಸಿಟಿ ರೂಪದಲ್ಲಿ ತಲೆ ಎತ್ತಲಿವೆ; ಸುಸ್ಥಿರತೆಗೆ ಒತ್ತು ನೀಡಲಿರುವ ಈ ಕೈಗಾರಿಕಾ ನಗರಗಳ ಜೊತೆಗೆ ವಸತಿ ಮತ್ತು ವಾಣಿಜ್ಯ ವಲಯಗಳೂ ಇರಲಿವೆ. ರಾಜ್ಯ ಸರ್ಕಾರಗಳ ಜೊತೆಗೆ ಖಾಸಗಿ ಕ್ಷೇತ್ರವೂ ಈ ಯೋಜನೆಯಲ್ಲಿ ತನ್ನದೇ ಆದ ‍ಪಾಲು ಹೊಂದಲಿದೆ. ಕೈಗಾರಿಕಾ ನಗರಕ್ಕೆ ಅಗತ್ಯವಿರುವ ಜಮೀನನ್ನು ರಾಜ್ಯ ಸರ್ಕಾರಗಳು ಒದಗಿಸಲಿವೆ. ಬಂಡವಾಳ ಅಥವಾ ಸಾಲ ನೀಡಿಕೆ ರೂಪದಲ್ಲಿ ಕೇಂದ್ರ ಸರ್ಕಾರವು ಯೋಜನೆಯಲ್ಲಿ ಭಾಗಿಯಾಗಲಿದೆ. ವಿದೇಶಿ ಸಹಭಾಗಿತ್ವಕ್ಕೂ ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯಲ್ಲಿ ಒಟ್ಟಾಗಿ ₹ 1.5 ಲಕ್ಷ ಕೋಟಿ ಹೂಡಿಕೆ ಆಗಲಿದೆ ಎಂಬ ಭರವಸೆಯನ್ನು ಸರ್ಕಾರ ಹೊಂದಿದೆ. ಈ ಯೋಜನೆಯಿಂದ ನೇರವಾಗಿ 10 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಪರೋಕ್ಷವಾಗಿ 30 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಯೋಜನೆಯು ‘ಸುವರ್ಣ ಚತುರ್ಭುಜ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಬಣ್ಣಿಸಿದ್ದಾರೆ.

ಭಾರತದ ಅರ್ಥ ವ್ಯವಸ್ಥೆಯ ಈ ಸಂದರ್ಭದಲ್ಲಿ ಇಂತಹ ಬೃಹತ್‌ ಯೋಜನೆಯ ಅಗತ್ಯ ಖಂಡಿತ ಇದೆ. ಕೈಗಾರಿಕಾ ನಗರಗಳನ್ನು ಸ್ಥಾಪಿಸುವ ಸ್ಥಳವನ್ನು ಹೆಚ್ಚು ಜಾಣತನದಿಂದ ಆಯ್ಕೆ ಮಾಡಿಕೊಳ್ಳಬೇಕಿದೆ. ಜಾಗತಿಕ ಪೂರೈಕೆ ಸರಪಣಿಯಲ್ಲಿ ದೇಶದ ಸ್ಥಿತಿಯನ್ನು ಉತ್ತಮಪಡಿಸುವುದು ಈ ಯೋಜನೆಯ ಉದ್ದೇಶಗಳಲ್ಲಿ ಒಂದು. ಜವಳಿ, ಫ್ಯಾಬ್ರಿಕೇಷನ್‌, ಬ್ಯಾಟರಿ ಚಾಲಿತ ವಾಹನ, ವಿಮಾನಯಾನ ಮೂಲಸೌಕರ್ಯ, ಆಹಾರ ಸಂಸ್ಕರಣೆ, ಪ್ರವಾಸೋದ್ಯಮ ಮತ್ತು ಇತರ ಕ್ಷೇತ್ರಗಳ ಉದ್ದಿಮೆಗಳು ಈ ಕೈಗಾರಿಕಾ ನಗರಗಳಲ್ಲಿ ಸ್ಥಾಪನೆ ಆಗಲಿವೆ. ₹ 2 ಲಕ್ಷ ಕೋಟಿ ಮೌಲ್ಯದ ಸರಕುಗಳ ರಫ್ತು ಈ ಯೋಜನೆಯ ಮೂಲಕ ಸಾಧ್ಯವಾಗಬಹುದು ಎಂಬ ಗುರಿ ಇರಿಸಿಕೊಳ್ಳಲಾಗಿದೆ. ಯೋಜನೆಯ ಕುರಿತು ಗಾಢವಾದ ಚಿಂತನೆ ನಡೆದಿದೆ. ಆದರೆ, ಯೋಜನೆ ಹೇಗೆ ಜಾರಿಯಾಗಲಿದೆ ಎಂಬುದರ ಮೇಲೆ ಇದರ ಯಶಸ್ಸು ನಿಂತಿದೆ. 2005ರಲ್ಲಿ ಅನುಷ್ಠಾನಕ್ಕೆ ಬಂದ ವಿಶೇಷ ಆರ್ಥಿಕ ವಲಯಗಳು (ಎಸ್ಇಜೆಡ್‌), 2014ರ ‘ಭಾರತದಲ್ಲಿ ತಯಾರಿಸಿ’ ಮತ್ತು 2015ರ ಸ್ಮಾರ್ಟ್‌ ಸಿಟಿ ಯೋಜನೆಗಳೊಂದಿಗೆ ಈ ಯೋಜನೆಯನ್ನು ಹೋಲಿಸಬಹುದು.

ಈ ಹಿಂದಿನ ಯೋಜನೆಗಳು ಸಿದ್ಧವಾದ ಬಳಿಕ ಅವುಗಳ ಅನುಸರಣೆ ಚಟುವಟಿಕೆಯಲ್ಲಿ ಆರಂಭದಲ್ಲಿ ಇದ್ದ ಉಮೇದು ಕಾಣಿಸಲಿಲ್ಲ. ಕಾರ್ಯಕ್ಷಮತೆಯು ಕಳಪೆಯಾಗಿದೆ. ಎಸ್‌ಇಜೆಡ್‌ಗಳ ಕಾರ್ಯಕ್ಷಮತೆ ಕೂಡ ಚೀನಾದಲ್ಲಿ ಇದೇ ರೀತಿಯ ಯೋಜನೆಯ ಕಾರ್ಯಕ್ಷಮತೆಯ ಮಟ್ಟದಲ್ಲಿ ಇಲ್ಲ. ಇತರ ಕಾರ್ಯಕ್ರಮಗಳು ಕೂಡ ತಮ್ಮ ಪೂರ್ಣ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಮಾಡಲಿಲ್ಲ. ಈ ಯೋಜನೆಗಳ ಅನುಷ್ಠಾನದಲ್ಲಿ ಇರುವ ತೊಡಕುಗಳು ಮತ್ತು ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಬೇಕು. ಇಲ್ಲಿ ಕಲಿತ ಪಾಠಗಳು ಕೈಗಾರಿಕಾ ನಗರ ಸ್ಥಾಪನೆ ಯೋಜನೆಯಲ್ಲಿ ಮಾರ್ಗದರ್ಶಕವಾಗಬೇಕು. ಇದು ಬಹಳ ದೊಡ್ಡ ಗಾತ್ರದ ಯೋಜನೆ. ಈ ಯೋಜನೆಗೆ ಸಾಮಾಜಿಕ ಮತ್ತು ಭೌತಿಕ ಮೂಲಸೌಕರ್ಯ, ಹೂಡಿಕೆ ಮಾಡಲು ಕಂಪನಿಗಳ ಆಸಕ್ತಿ ಮತ್ತು ಸಾಮರ್ಥ್ಯ, ಜಮೀನು ಸ್ವಾಧೀನ, ನಿಯಮಗಳು ಮತ್ತು ತೆರಿಗೆಗಳು, ಹೂಡಿಕೆಯಂಥವು ಬಹಳ ಮುಖ್ಯವಾಗಿವೆ. ನೀತಿಯ ಸ್ಥಿರತೆ ಕೂಡ ಯೋಜನೆಯ ಯಶಸ್ಸಿನ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಕೈಗಾರಿಕಾ ನಗರ ಸ್ಥಾಪನೆಗೆ ಸಂಬಂಧಿಸಿದ ಎಲ್ಲ ಕಾಮಗಾರಿಗಳ ಮೇಲೆ ನಿಕಟ ನಿಗಾ ಇರಿಸಿ ಕೆಲಸ ಮಾಡಬೇಕು. ಅನುಷ್ಠಾನದ ಹಂತದಲ್ಲಿ ಯೋಜನೆಯು ಬಿದ್ದು ಹೋಗದಂತೆ ಕಟ್ಟುನಿಟ್ಟಿನ ಅನುಸರಣೆಯೂ ಇರಬೇಕು.

****

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT