ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಲೋಕಾಯುಕ್ತ ಕಾಯ್ದೆ ತಿದ್ದುಪಡಿಗೆ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಲಿ

Last Updated 8 ಫೆಬ್ರುವರಿ 2023, 20:06 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರದಲ್ಲಿನ ಭ್ರಷ್ಟಾಚಾರ, ದುರಾಡಳಿತ, ಕರ್ತವ್ಯಲೋಪ ಪ್ರಕರಣಗಳ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸುವುದಕ್ಕಾಗಿ ಲೋಕಾಯುಕ್ತ ಸಂಸ್ಥೆ ಅಸ್ತಿತ್ವದಲ್ಲಿದೆ. ರಾಜ್ಯ ಸರ್ಕಾರದ ಯಾವುದೇ ಇಲಾಖೆ, ಸಂಸ್ಥೆ ಅಥವಾ ಸರ್ಕಾರದ ಅಧೀನ ಸಂಸ್ಥೆಗಳ ನೌಕರರಿಂದ ರಾಜ್ಯದ ಮುಖ್ಯಮಂತ್ರಿಯವರೆಗೆ ಎಲ್ಲರೂ ಲೋಕಾಯುಕ್ತದ ವಿಚಾರಣಾ ವ್ಯಾಪ್ತಿಗೆ ಒಳಪಡುತ್ತಾರೆ. ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಲ್ಲಿಸುವ ದೂರುಗಳನ್ನು ಆಧರಿಸಿ ವಿಚಾರಣೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಬಹುದು. ಲೋಕಾಯುಕ್ತಕ್ಕೆ ಈ ರೀತಿ ಸಾವಿರಾರು ದೂರುಗಳು ಸಲ್ಲಿಕೆಯಾಗುತ್ತವೆ.

ಅವುಗಳ ಜತೆಯಲ್ಲೇ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳು ಹಾಗೂ ಇತರ ಮೂಲಗಳಿಂದ ಲಭ್ಯವಾಗುವ ಮಾಹಿತಿ ಆಧರಿಸಿ ಲೋಕಾಯುಕ್ತ ಅಥವಾ ಉಪಲೋಕಾಯುಕ್ತರು ಸ್ವಯಂಪ್ರೇರಿತ ‍ಪ್ರಕರಣಗಳನ್ನೂ ದಾಖಲಿಸಿಕೊಳ್ಳುತ್ತಾರೆ. ಭ್ರಷ್ಟಾಚಾರ ಮತ್ತು ದುರ್ನಡತೆ ಆರೋಪ ಎದುರಿಸುವ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ವಿಚಾರಣೆ ನಡೆಸುವ ಹೊಣೆಯನ್ನು ಸರ್ಕಾರವೇ ಲೋಕಾಯುಕ್ತಕ್ಕೆ ಒಪ್ಪಿಸುತ್ತದೆ. ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಅಡಿಯಲ್ಲಿ ಈ ರೀತಿಯ ವಿಚಾರಣೆಗಳನ್ನು ನಡೆಸುವುದಕ್ಕಾಗಿ ಲೋಕಾಯುಕ್ತವು ಪ್ರತ್ಯೇಕವಾದ ವಿಚಾರಣಾ ವಿಭಾಗವನ್ನೇ ಹೊಂದಿದೆ. ಈ ವಿಚಾರಣಾ ವಿಭಾಗವು ನ್ಯಾಯಾಲಯದಲ್ಲಿನ ವಿಚಾರಣಾ ಪ್ರಕ್ರಿಯೆಯನ್ನೇ ಬಹುತೇಕ ಅನುಸರಿ
ಸುತ್ತದೆ. ನ್ಯಾಯಾಂಗ ಇಲಾಖೆಯಲ್ಲಿ ಸೇವೆಯಲ್ಲಿರುವ ಹಾಲಿ ನ್ಯಾಯಾಧೀಶರು ಮತ್ತು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲೇ ವಿಚಾರಣೆಗಳನ್ನು
ನಡೆಸಲಾಗುತ್ತಿದೆ. ಸಾಕ್ಷ್ಯಗಳ ಪರಿಶೀಲನೆ, ವಾದಮಂಡನೆ, ಆರೋಪಿತರಿಗೆ ತಮ್ಮನ್ನು ಸಮರ್ಥಿಸಿ ಕೊಳ್ಳುವ ಅವಕಾಶ ಸೇರಿದಂತೆ ಸುದೀರ್ಘವಾದ ಪ್ರಕ್ರಿಯೆಯ ಬಳಿಕವೇ ವಿಚಾರಣಾ ವರದಿಯನ್ನು ಅಂತಿಮಗೊಳಿಸುವ ಪದ್ಧತಿ ಇದೆ. ಲೋಕಾಯುಕ್ತ ಅಸ್ತಿತ್ವಕ್ಕೆ ಬಂದ ದಿನದಿಂದ ಈವರೆಗೆ ಸಾವಿರಾರು ವಿಚಾರಣಾ ವರದಿಗಳನ್ನು ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರು ಸಕ್ಷಮ ಪ್ರಾಧಿಕಾರಗಳಿಗೆ ಸಲ್ಲಿಸಿದ್ದಾರೆ. ಆದರೆ, ಲೋಕಾಯುಕ್ತದ ವಿಚಾರಣಾ ವರದಿಗಳ ಶಿಫಾರಸುಗಳಿಗೆ ಸರ್ಕಾರವು ಮನ್ನಣೆ ನೀಡುತ್ತಿಲ್ಲ. ಆರೋಪಿತರ ಜಾತಿ, ಹಣಬಲ, ರಾಜಕೀಯ ಪ್ರಭಾವ ಹೆಚ್ಚು ಕೆಲಸ ಮಾಡುವುದರಿಂದ ವಿಚಾರಣಾ ವರದಿಗಳು ಸಕ್ಷಮ ಪ್ರಾಧಿಕಾರಗಳ ಕಪಾಟಿನಲ್ಲಿ ದೂಳು ತಿನ್ನುತ್ತಾ ಬಿದ್ದಿರುತ್ತವೆ. ಹಲವು ಪ್ರಕರಣಗಳಲ್ಲಿ ಲೋಕಾಯುಕ್ತದ ವಿಚಾರಣಾ ವರದಿಗಳನ್ನು ತಿರಸ್ಕರಿಸಿ, ತಪ್ಪಿತಸ್ಥರನ್ನು ದಂಡನೆಯಿಂದ ಪಾರುಮಾಡುವ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸರ್ಕಾರವೇ ವಿಚಾರಣೆಗೆ ಆದೇಶಿಸಿದ್ದ
ಪ್ರಕರಣಗಳಲ್ಲೂ ಇದೇ ರೀತಿ ವರ್ತಿಸುವ ಪ್ರವೃತ್ತಿಯು ಲೋಕಾಯುಕ್ತ ಕಾಯ್ದೆಯಡಿ ನಡೆಯುವ
ವಿಚಾರಣೆಗಳನ್ನೇ ಅಣಕಿಸುತ್ತಿದೆ.

ಲೋಕಾಯುಕ್ತದ ವಿಚಾರಣಾ ವರದಿಗಳನ್ನು ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದು ಅಥವಾ ವರದಿಗಳನ್ನೇ ತಿರಸ್ಕರಿಸಿ ಅವರಿಗೆ ರಕ್ಷಣೆ ನೀಡಿರುವ ಕುರಿತು ಹೈಕೋರ್ಟ್‌ನಲ್ಲಿ ಗಂಭೀರವಾದ ಚರ್ಚೆ ನಡೆದಿತ್ತು. ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ರಚನೆಯನ್ನು ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಈ ಬಗ್ಗೆಯೂ ಹೈಕೋರ್ಟ್‌ ವಿಭಾಗೀಯ ಪೀಠ ಪರಾಮರ್ಶೆ ನಡೆಸಿತ್ತು. ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್‌ 12(3)ರ ಅಡಿಯಲ್ಲಿ ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರು ಸಲ್ಲಿಸುವ ವರದಿಗಳನ್ನು ಸಕ್ಷಮ ಪ್ರಾಧಿಕಾರವು ಪರಾಮರ್ಶಿಸಿ ಮೂರು ತಿಂಗಳೊಳಗೆ ಕ್ರಮ ಕೈಗೊಳ್ಳಬೇಕು ಎಂಬ ಅಂಶ ಸೆಕ್ಷನ್‌ 12(4)ರಲ್ಲಿದೆ. ಸಕ್ಷಮ ಪ್ರಾಧಿಕಾರ ಕೈಗೊಳ್ಳುವ ಕ್ರಮವು ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರಿಗೆ ತೃಪ್ತಿಯಾಗದಿದ್ದರೆ ವಿಶೇಷ ವರದಿಯೊಂದನ್ನು ರಾಜ್ಯಪಾಲರಿಗೆ ಕಳುಹಿಸುವುದಕ್ಕೆ ಸೆಕ್ಷನ್‌ 12(5)ರಲ್ಲಿ ಅವಕಾಶವಿದೆ. ಆದರೆ, ಸರ್ಕಾರವು ಲೋಕಾಯುಕ್ತದ ವಿಚಾರಣಾ ವರದಿಗಳನ್ನು ಕಡ್ಡಾಯವಾಗಿ ಒಪ್ಪಿಕೊಂಡು, ಶಿಫಾರಸಿನಂತೆ ತಪ್ಪಿತಸ್ಥರಿಗೆ ದಂಡನೆ ವಿಧಿಸುವುದನ್ನು ಖಾತರಿಪಡಿಸುವ ಅಂಶ ಕಾಯ್ದೆಯಲ್ಲಿಲ್ಲ. ಈ ಅವಕಾಶವನ್ನು ಸಕ್ಷಮ ಪ್ರಾಧಿಕಾರಗಳು ಹಾಗೂ ಆರೋಪಿತರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಲೋಕಾಯುಕ್ತದ ಅಧಿಕಾರಿಗಳ ಮಾಹಿತಿ ಪ್ರಕಾರ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 500ಕ್ಕೂ ಹೆಚ್ಚು ವಿಚಾರಣಾ ವರದಿಗಳು ಬಾಕಿ ಇವೆ. ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರು ಸಲ್ಲಿಸುವ ವಿಚಾರಣಾ ವರದಿಗಳನ್ನು ಸಕ್ಷಮ ಪ್ರಾಧಿಕಾರಗಳು ಒಪ್ಪಿಕೊಂಡು, ಕ್ರಮ ಜರುಗಿಸುವುದನ್ನು ಕಡ್ಡಾಯಗೊಳಿಸಲು ಕರ್ನಾಟಕ ಲೋಕಾಯುಕ್ತ ಕಾಯ್ದೆ–1984ರ ಸೆಕ್ಷನ್‌ 12(4)ಕ್ಕೆ ತಿದ್ದುಪಡಿ ತರುವಂತೆ ಆಗಸ್ಟ್‌ 11ರಂದು ನೀಡಿದ್ದ ತೀರ್ಪಿನಲ್ಲಿ ಹೈಕೋರ್ಟ್‌ ವಿಭಾಗೀಯ ಪೀಠ ಶಿಫಾರಸು ಮಾಡಿತ್ತು. ಹೈಕೋರ್ಟ್‌ ತೀರ್ಪು ಪ್ರಕಟವಾಗಿ ಆರು ತಿಂಗಳಾದರೂ ಕಾಯ್ದೆ ತಿದ್ದುಪಡಿಗೆ ಯಾವುದೇ ಪ್ರಕ್ರಿಯೆ ಆರಂಭಿಸದಿರುವುದು ಲೋಕಾಯುಕ್ತದ ಬಲವರ್ಧನೆ ಮತ್ತು ಉತ್ತಮ ಆಡಳಿತದ ವಿಚಾರದಲ್ಲಿ ಸರ್ಕಾರದ ಬದ್ಧತೆಯ ಕುರಿತೇ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ. ಹೈಕೋರ್ಟ್‌ ಮಾಡಿರುವ ಶಿಫಾರಸನ್ನು ಒಪ್ಪಿಕೊಂಡು ಅನುಷ್ಠಾನಕ್ಕೆ ತರುವ ಬದ್ಧತೆಯನ್ನು ಸರ್ಕಾರ ಪ್ರದರ್ಶಿಸಬೇಕು. ಲೋಕಾಯುಕ್ತದ ಬಲವರ್ಧನೆ ಎಂಬುದು ರಾಜಕೀಯ ಪಕ್ಷಗಳಿಗೆ ಕೇವಲ ಚುನಾವಣಾ ಪ್ರಣಾಳಿಕೆಯ ಸರಕು ಆಗಬಾರದು. ಲೋಕಾಯುಕ್ತದ ವಿಚಾರಣಾ ಪ್ರಕ್ರಿಯೆಯಲ್ಲಿ ಲೋಪಗಳಿದ್ದರೆ, ವರದಿಗಳಲ್ಲಿ ದೋಷವಿದ್ದರೆ ಬಾಧಿತರು ನ್ಯಾಯಾಂಗದಲ್ಲಿ ಪ್ರಶ್ನಿಸಲು ಅವಕಾಶ ಇದೆ. ವಿಚಾರಣಾ ವರದಿಗಳನ್ನು ಗೌರವಿಸಿ ತಪ್ಪಿತಸ್ಥರನ್ನು ದಂಡನೆಗೆ
ಗುರಿಪಡಿಸುವುದನ್ನು ಖಾತರಿಪಡಿಸುವುದಕ್ಕೆ ಪೂರಕವಾಗಿ ಕಾಯ್ದೆಗೆ ತಿದ್ದುಪಡಿ ತರುವ ಇಚ್ಛಾಶಕ್ತಿ
ಯನ್ನು ಸರ್ಕಾರ ಪ್ರದರ್ಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT