ಮಂಗಳವಾರ, ಡಿಸೆಂಬರ್ 6, 2022
21 °C

ಸಂಪಾದಕೀಯ: ಮಂಗಳೂರು ಸ್ಫೋಟ ಪ್ರಕರಣ ತನಿಖೆಯ ಆಚೆಗೂ ಕ್ರಮಗಳು ಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೊರಿಕ್ಷಾ ಒಂದರಲ್ಲಿ ಈಚೆಗೆ ನಡೆದ ಸ್ಫೋಟ ಪ್ರಕರಣವು ಒಂದು ಭಯೋತ್ಪಾದನಾ ಕೃತ್ಯವೆಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಆಟೊದಲ್ಲಿ ಪ್ರಯಾಣಿಸುತ್ತಿದ್ದ ಮೊಹಮ್ಮದ್ ಶಾರಿಕ್ ಎಂಬ ವ್ಯಕ್ತಿಯು ತನ್ನ ಜೊತೆ ಪ್ರೆಷರ್ ಕುಕ್ಕರ್ ಒಯ್ಯುತ್ತಿದ್ದ. ಅದರಲ್ಲಿ ಸ್ಫೋಟಕ ಸಾಧನ ಇತ್ತು. ಆಟೊರಿಕ್ಷಾ ಚಲಿಸುತ್ತಿದ್ದಾಗಲೇ ಅದು ಸ್ಫೋಟಗೊಂಡಿತು. ಅದರ ಪರಿಣಾಮವಾಗಿ ಆಟೊ ಚಾಲಕ ಮತ್ತು ಶಾರಿಕ್ ಗಾಯಗೊಂಡಿದ್ದಾರೆ. ಶಾರಿಕ್‌ಗೆ ಜಿಹಾದಿ ಸಂಘಟನೆಗಳ ಜೊತೆ ಸಂಪರ್ಕ ಇದೆಯೇ ಎಂಬ ಬಗ್ಗೆ ತನಿಖಾ ಸಂಸ್ಥೆಗಳು ತನಿಖೆ ಆರಂಭಿಸಿವೆ. ಅಕ್ಟೋಬರ್ 23ರಂದು ಕೊಯಮತ್ತೂರಿನಲ್ಲಿ ಕಾರೊಂದರಲ್ಲಿ ನಡೆದ ಬಾಂಬ್‌ ಸ್ಫೋಟ ಸೇರಿದಂತೆ ಈಚೆಗೆ ಸಂಭವಿಸಿದ ಇತರ ಕೆಲವು ಸ್ಫೋಟ ಪ್ರಕರಣಗಳಿಗೂ ಶಾರಿಕ್‌ಗೂ ಸಂಬಂಧ ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆದಿದೆ. ಸೆಪ್ಟೆಂಬರ್ ಕೊನೆಯ ಭಾಗದಲ್ಲಿ ಶಾರಿಕ್‌, ಶಿವಮೊಗ್ಗದಲ್ಲಿ ಸ್ಫೋಟಕವನ್ನು ಪರೀಕ್ಷಿಸಿದ್ದ ಎಂದು ವರದಿಯಾಗಿದೆ. ತಮಿಳುನಾಡು ಮತ್ತು ಕರ್ನಾಟಕದ ಕೆಲವು ಪಟ್ಟಣಗಳ ನಡುವೆ ಆತ ಹಲವು ಬಾರಿ ಪ್ರಯಾಣ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಸ್ಫೋಟಕಗಳನ್ನು ಹಾಗೂ ಬಾಂಬ್‌ ತಯಾರಿಕೆಯಲ್ಲಿ ಬಳಸುವ ಇತರ ವಸ್ತುಗಳನ್ನು ಸಂಗ್ರಹಿಸಿ ಇಡುವ ಸ್ಥಳಗಳ ಮೇಲೆ ತನಿಖಾ ಸಂಸ್ಥೆಗಳು ದಾಳಿ ಮಾಡಿವೆ. ಶಾರಿಕ್‌ ಏಕಾಂಗಿಯಾಗಿ ಕೆಲಸ ಮಾಡುತ್ತಿದ್ದನೇ ಅಥವಾ ಆತ ಉಗ್ರಗಾಮಿ ವಿಚಾರಗಳಿಂದ ಪ್ರಭಾವಿತ
ರಾಗಿರುವ ಯುವಕರ ಜಾಲದ ಸೂಚನೆಯ ಪ್ರಕಾರ ಕೆಲಸ ಮಾಡುತ್ತಿದ್ದನೇ, ಜಾಗತಿಕ ಮಟ್ಟದಲ್ಲಿ ಜಾಲ ಹೊಂದಿರುವ ಅಲ್–ಕೈದಾ ಅಥವಾ ಅದರಂತಹ ಸಂಘಟನೆಗಳ ಜೊತೆ ನಂಟು ಹೊಂದಿದ್ದನೇ ಎಂಬ ಬಗ್ಗೆಯೂ ಪರಿಶೀಲನೆ ನಡೆದಿದೆ.

ಕರ್ನಾಟಕದ ಕರಾವಳಿ ಭಾಗವು ಬಹುಕಾಲದಿಂದ ಕೋಮು ಸಂಘರ್ಷದ ಬಾಣಲೆಯಾಗಿದೆ. ಧಾರ್ಮಿಕ ತೀವ್ರಗಾಮಿಗಳು, ಕೆಲವು ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರ ದ್ವೇಷ ಭಾಷಣ ಇಲ್ಲಿ ಮತ್ತೆ ಮತ್ತೆ ವರದಿಯಾಗುತ್ತಿರುತ್ತದೆ. ಇದು ಯುವಕರ ಮನಸ್ಸು ಕೆಡಿಸುವುದಕ್ಕೆ, ಅವರನ್ನು ಧಾರ್ಮಿಕವಾಗಿ
ಪ್ರಚೋದಿಸುವುದಕ್ಕೆ ಹೇಳಿ ಮಾಡಿಸಿದ ವಾತಾವರಣ ಸೃಷ್ಟಿಸಿಕೊಟ್ಟಿದೆ. ಧಾರ್ಮಿಕ ತೀವ್ರಗಾಮಿ ಸಾಹಿತ್ಯ, ಅದಕ್ಕೆ ಸಂಬಂಧಿಸಿದ ವಿಡಿಯೊಗಳು ಇಂದು ಅಂತರ್ಜಾಲದಲ್ಲಿ ಹೇರಳವಾಗಿ ಲಭ್ಯವಿವೆ. ಇವು ಯುವಕರನ್ನು ಹಿಂಸೆಯ ಹಾದಿಗೆ ನೂಕುವ ಸಾಮರ್ಥ್ಯ ಹೊಂದಿವೆ. ಅಲ್ಲದೆ, ಮನೆಯಲ್ಲೇ ಬಾಂಬ್ ತಯಾರಿಸುವುದನ್ನು ಕಲಿಸುವ ವಿವರಗಳೂ ಇಂಟರ್ನೆಟ್‌ನಲ್ಲಿ ಲಭ್ಯವಿವೆ ಎಂದು ವರದಿಗಳು ಹೇಳುತ್ತವೆ. ಇವು ಯಾವುದೇ ಸಂಘಟನೆಯ ನೆರವಿಲ್ಲದೆಯೂ ಭಯೋತ್ಪಾದನಾ ಕೃತ್ಯವನ್ನು ಎಸಗುವ ಯುವಕರನ್ನು ಸೃಷ್ಟಿಸಿವೆ. ಈ ಯುವಕರು ತಮ್ಮ ಪಾಲಿಗೆ ‘ಶತ್ರು’ಗಳಾಗಿ ಕಂಡಿರುವವರನ್ನು ಗುರಿ ಮಾಡಿಕೊಂಡಿರುತ್ತಾರೆ. ಹಿಜಾಬ್‌ ಸುತ್ತಲಿನ ವಿವಾದದ ನಂತರದಲ್ಲಿ ಜನರ ಮನಸ್ಸನ್ನು ಹಾಳುಮಾಡುವ ಕೆಲಸಗಳು ಹೆಚ್ಚಾದವು. ಧಾರ್ಮಿಕ ಹಾಗೂ ಕೋಮು ಸಂಘಟನೆಗಳು ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟುವ ಕೆಲಸ ಮಾಡಿದವು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಅದರ ಸಹಸಂಘಟನೆಗಳನ್ನು ನಿಷೇಧಿಸಿದ ಕ್ರಮ ಕೂಡ ಸಮಾಜದ ಒಂದು ವರ್ಗದಲ್ಲಿ ಅತೃಪ್ತಿಯನ್ನು ಸೃಷ್ಟಿಸಿರುವ ಸಾಧ್ಯತೆ ಇದೆ.

ಮಂಗಳೂರು ಹಾಗೂ ಕೊಯಮತ್ತೂರು ಪ್ರಕರಣಗಳ ತನಿಖೆ ನಡೆಸುತ್ತಿರುವ ಸಂಸ್ಥೆಗಳು ಕೃತ್ಯಗಳಿಗೆ ಕಾರಣರು ಯಾರು, ಅವರು ಯಾವ ಸಂಘಟನೆಗೆ ಸೇರಿದವರು, ಆ ಸಂಘಟನೆಯ ಜಾಲ ಎಲ್ಲೆಲ್ಲಿ ಹರಡಿಕೊಂಡಿದೆ ಎಂಬುದನ್ನು ಪತ್ತೆ ಮಾಡಬೇಕು. ಅದನ್ನು ನಿರ್ಮೂಲಗೊಳಿಸಬೇಕು. ಅಷ್ಟೇ ಅಲ್ಲದೆ, ಯುವಕರು ಭಯೋತ್ಪಾದನೆಯ ಮಾರ್ಗ ಹಿಡಿಯುತ್ತಿರುವುದಕ್ಕೆ ಕಾರಣ ಏನು ಎಂಬುದನ್ನೂ ಪತ್ತೆ ಮಾಡಬೇಕು. ಕೆಲವು ಸಂಘಟನೆಗಳನ್ನು ನಿಷೇಧಿಸಿದಾಗ ಅವುಗಳ ವಿರುದ್ಧ ಕ್ರಮ ಜರುಗಿಸಲು ಪೊಲೀಸರಿಗೆ ಸುಲಭವಾಗುತ್ತದೆ. ಆದರೆ ಅವೇ ಸಂಘಟನೆಗಳು ಇನ್ನೊಂದು ಹೆಸರಿನಲ್ಲಿ ತಲೆ ಎತ್ತುತ್ತವೆ. ಸಮುದಾಯಗಳು ಧಾರ್ಮಿಕ ತೀವ್ರಗಾಮಿ ಧೋರಣೆಗಳನ್ನು ಬೆಳೆಸಿಕೊಳ್ಳುವುದನ್ನು ತಡೆಯುವ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳುವ ಅಗತ್ಯ ಇದೆ. ದ್ವೇಷ ಭಾಷಣ ಮಾಡುವವರು ಯಾವುದೇ ಧರ್ಮಕ್ಕೆ ಸೇರಿದ್ದರೂ ಅವರ ವಿರುದ್ಧ ಕ್ರಮ ಜರುಗಿಸುವ ಕೆಲಸ ಆಗಬೇಕು. ಇಲ್ಲವಾದರೆ, ದ್ವೇಷ ಭಾಷಣಗಳು, ‘ನಾವು ಬಲಿಪಶುಗಳು’ ಎಂಬ ಭಾವನೆಯನ್ನು ಸಮುದಾಯಗಳ ಮಟ್ಟದಲ್ಲಿ ಬೆಳೆಸುತ್ತವೆ. ಆ ರೀತಿಯ ಭಾವನೆಯು ಮುಂದೊಂದು ದಿನ ಹಿಂಸೆಗೆ ಸಮರ್ಥನೆಯಾಗಿ ಬಳಕೆಯಾಗುತ್ತದೆ. ಧಾರ್ಮಿಕ ತೀವ್ರವಾದವನ್ನು ತಡೆಯುವ ಹೊಣೆಯು ನಾಗರಿಕ ಸಮುದಾಯದ ಮೇಲೆಯೂ ಇದೆ. ಅದಕ್ಕಿಂತ ಹೆಚ್ಚಾಗಿ ಸರ್ಕಾರ, ರಾಜಕೀಯ ಹಾಗೂ ಧಾರ್ಮಿಕ ಮುಖಂಡರು ಈ ದಿಸೆಯಲ್ಲಿ ಹೆಚ್ಚು ಕೆಲಸ ಮಾಡಬೇಕು. ಶಾಂತಿ, ಸಾಮರಸ್ಯ ಮೂಡಿಸುವಲ್ಲಿ ಅವರು ಮೇಲ್ಪಂಕ್ತಿ ಹಾಕಿಕೊಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು