ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ನ್ಯಾಯಮೂರ್ತಿಗಳ ನೇಮಕ: ಕಾರ್ಯಾಂಗ–ನ್ಯಾಯಾಂಗದ ನಡುವೆ ಸಂಘರ್ಷ ಸಲ್ಲದು

Last Updated 2 ಡಿಸೆಂಬರ್ 2022, 19:31 IST
ಅಕ್ಷರ ಗಾತ್ರ

ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳ ಸಮಿತಿ (ಕೊಲಿಜಿಯಂ) ಮಾಡಿದ್ದ ಶಿಫಾರಸುಗಳ ವಿಚಾರವಾಗಿ ಕೇಂದ್ರ ಸರ್ಕಾರ ಈಚೆಗೆ ತೆಗೆದುಕೊಂಡ ತೀರ್ಮಾನ ಹಾಗೂ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಆಡಿದ ಅನಗತ್ಯ ಮಾತುಗಳಿಗೆ ಕೋರ್ಟ್‌ನ ಪ್ರತಿಕ್ರಿಯೆಯು ನ್ಯಾಯಾಂಗದಲ್ಲಿನ ನೇಮಕಾತಿಗಳ ಕುರಿತಾಗಿ ಕೋರ್ಟ್ ಹಾಗೂ ಸರ್ಕಾರದ ನಡುವಿನ ಅಭಿಪ್ರಾಯಭೇದವನ್ನು ಮಾತ್ರ ತೋರಿಸುತ್ತಿಲ್ಲ. ಬದಲಿಗೆ, ಇವು ಕೇಂದ್ರ ಸರ್ಕಾರ ಹಾಗೂ ನ್ಯಾಯಾಂಗದ ನಡುವೆ ಸಂಘರ್ಷವೊಂದು ಹೆಚ್ಚುತ್ತಿರುವ ಸೂಚನೆಯನ್ನೂ ನೀಡುತ್ತಿರಬಹುದು. ಕೊಲಿಜಿಯಂ ರವಾನಿಸಿದ್ದ 21 ಹೆಸರುಗಳ ಪೈಕಿ 19 ಹೆಸರುಗಳನ್ನು ಸರ್ಕಾರವು ಹಿಂದಕ್ಕೆ ಕಳುಹಿಸಿದೆ. ಈ ಪೈಕಿ 10 ಹೆಸರುಗಳನ್ನು ಕೊಲಿಜಿಯಂ ಎರಡನೆಯ ಬಾರಿಗೆ ರವಾನಿಸಿತ್ತು. ಕೇಂದ್ರವು ಕೊಲಿಜಿಯಂ ಕಳುಹಿಸಿದ ಹೆಸರುಗಳನ್ನು ಒಂದು ಬಾರಿ ವಾಪಸ್ ಕಳುಹಿಸಬಹುದು. ಆದರೆ ಎರಡನೆಯ ಬಾರಿಗೆ ಕಳುಹಿಸಿದ ಹೆಸರುಗಳನ್ನು ಅದು ಮರಳಿಸುವಂತಿಲ್ಲ. ನ್ಯಾಯಮೂರ್ತಿಗಳ ನೇಮಕವನ್ನು ವಿಳಂಬ ಮಾಡುವ ಮೂಲಕ, ನೇಮಕಕ್ಕೆ ಅಡ್ಡಿ ಉಂಟುಮಾಡುವ ಮೂಲಕ ಕೇಂದ್ರವು ನ್ಯಾಯಾಲಯದ ಜೊತೆ ಸಂಘರ್ಷಕ್ಕೆ ಹಾತೊರೆಯುತ್ತಿರುವಂತೆ ಕಾಣುತ್ತಿದೆ. ಈ ಬಗೆಯ ಸಂಘರ್ಷಗಳಿಂದ ಕೆಟ್ಟ ಹಾಗೂ ಅನಿರೀಕ್ಷಿತ ಪರಿಣಾಮಗಳು ಎದುರಾಗಬಹುದು.

ಈಗ ಚಾಲ್ತಿಯಲ್ಲಿ ಇರುವ ವ್ಯವಸ್ಥೆಯ ಪ್ರಕಾರ, ಕೊಲಿಜಿಯಂ ಎರಡನೆಯ ಬಾರಿಗೆ ಶಿಫಾರಸು ಮಾಡಿರುವ ಹೆಸರುಗಳನ್ನು ಕೇಂದ್ರ ಕಾನೂನು ಸಚಿವರು ಪ್ರಧಾನಿಯವರಿಗೆ ರವಾನಿಸಬೇಕು. ಸಾಧ್ಯವಾದರೆ ಮೂರು ವಾರಗಳೊಳಗೆ ಕಳುಹಿಸಬೇಕು. ನ್ಯಾಯಮೂರ್ತಿಗಳ ನೇಮಕಕ್ಕೆ ಪ್ರಧಾನಿಯವರು ರಾಷ್ಟ್ರಪತಿಯವರಿಗೆ ಸಲಹೆ ಮಾಡುತ್ತಾರೆ. ಆದರೆ, ನೇಮಕಾತಿಗೆ ಸರ್ಕಾರ ಒಪ್ಪುತ್ತಿಲ್ಲದಿರುವುದು ದೇಶದ ಕಾನೂನನ್ನು ಪಾಲಿಸದೇ ಇರುವುದಕ್ಕೆ ಸಮ. ಇದು ನ್ಯಾಯಾಲಯದ ಸೂಚನೆಯನ್ನು ಉಲ್ಲಂಘಿಸುವುದಕ್ಕೆ ಸಮ. ದೇಶದ ಕಾನೂನನ್ನು ಪಾಲಿಸುವುದು ಸರ್ಕಾರದ ಹೊಣೆ. ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಜೊತೆ ಸಹಮತ ಇಲ್ಲದಿರಬಹುದು. ಅಥವಾ, ಕೊಲಿಜಿಯಂ ಶಿಫಾರಸು ಮಾಡಿರುವ ಹೆಸರುಗಳು ಸರ್ಕಾರಕ್ಕೆ ಒಪ್ಪಿಗೆ ಆಗುತ್ತಿಲ್ಲದಿರಬಹುದು. ಹೀಗಿದ್ದರೂ ಜಾರಿಯಲ್ಲಿ ಇರುವ ವ್ಯವಸ್ಥೆಗೆ ಅನುಗುಣವಾಗಿ ಅದು ನಡೆದುಕೊಳ್ಳಬೇಕು ಹಾಗೂ ಶಿಫಾರಸುಗಳನ್ನು ಒಪ್ಪಿಕೊಳ್ಳಬೇಕು.

ಸಂವಿಧಾನದ 124(2) ವಿಧಿಯ ಪ್ರಕಾರ, ರಾಷ್ಟ್ರಪತಿಯವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಜೊತೆ ಸಮಾಲೋಚಿಸಿ ನ್ಯಾಯಮೂರ್ತಿಗಳನ್ನು ನೇಮಕ ಮಾಡುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಆರಂಭದ ವರ್ಷಗಳಲ್ಲಿ ನೇಮಕಕ್ಕೆ ಹೆಸರು ಶಿಫಾರಸು ಮಾಡುವ ಅಧಿಕಾರವು ಕಾರ್ಯಾಂಗದ ಕೈಯಲ್ಲಿ ಇತ್ತು. ಆದರೆ, 1993ರ ‘ನ್ಯಾಯಮೂರ್ತಿಗಳ ಎರಡನೆಯ ಪ್ರಕರಣ’ದ ನಂತರದಲ್ಲಿ ಕೊಲಿಜಿಯಂ ವ್ಯವಸ್ಥೆಗೆ ಸುಪ್ರೀಂ ಕೋರ್ಟ್ ಜೀವ ಕೊಟ್ಟಿತು. ಆಗ ಕೊಲಿಜಿಯಂನಲ್ಲಿ ಸಿಜೆಐ ಹಾಗೂ ಸುಪ್ರೀಂ ಕೋರ್ಟ್‌ನ ಇಬ್ಬರು ಹಿರಿಯ ನ್ಯಾಯಮೂರ್ತಿಗಳು ಇರುತ್ತಿದ್ದರು. ಈ ಕೊಲಿಜಿಯಂ ನ್ಯಾಯಮೂರ್ತಿಗಳನ್ನಾಗಿ ಯಾರನ್ನು ನೇಮಿಸಬೇಕು ಎಂಬ ಶಿಫಾರಸು ಮಾಡುತ್ತಿತ್ತು. ಕೊಲಿಜಿಯಂ ಶಿಫಾರಸು ಆಧರಿಸಿ ನ್ಯಾಯಮೂರ್ತಿಗಳ ನೇಮಕ ಮಾಡುವುದನ್ನು ಸುಪ್ರೀಂ ಕೋರ್ಟ್‌, ದೇಶದ ಕಾನೂನನ್ನಾಗಿಸಿತು. ಆದರೆ, ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯಲ್ಲಿ ತನ್ನ ಮಾತಿಗೂ ಬೆಲೆ ಇರಬೇಕು ಎಂದು ಕಾರ್ಯಾಂಗವು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು (ಎನ್‌ಜೆಎಸಿ) ರೂಪಿಸಿತು. ಈ ಆಯೋಗದ ರಚನೆಗೆ ಸಂಸತ್ತು ಸಂವಿಧಾನಕ್ಕೆ 2014ರಲ್ಲಿ ತಿದ್ದುಪಡಿ ತಂದಿತ್ತು. ನ್ಯಾಯಮೂರ್ತಿಗಳ ನೇಮಕ ಹಾಗೂ ಅವರ ವರ್ಗಾವಣೆಯು ಎನ್‌ಜೆಎಸಿ ಮೂಲಕ ಆಗಬೇಕಿತ್ತು. ಸಿಜೆಐ ನೇತೃತ್ವದ ಎನ್‌ಜೆಎಸಿಯಲ್ಲಿ ಸುಪ್ರೀಂ ಕೋರ್ಟ್‌ನ ಇಬ್ಬರು ಹಿರಿಯ ನ್ಯಾಯಮೂರ್ತಿಗಳು, ಕೇಂದ್ರ ಕಾನೂನು ಸಚಿವ ಹಾಗೂ ಇಬ್ಬರು ಹಿರಿಯ ವ್ಯಕ್ತಿಗಳು ಇರಬೇಕಿತ್ತು. ಎನ್‌ಜೆಎಸಿ ರಚನೆಯನ್ನು ಸುಪ್ರೀಂ ಕೋರ್ಟ್‌ ಅಸಿಂಧುಗೊಳಿಸಿತು. ಈ ಆಯೋಗವು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಿದೆ ಎಂದು ಹೇಳಿತ್ತು. ಎನ್‌ಜೆಎಸಿ ರದ್ದುಗೊಳಿಸಿದಾಗಿನಿಂದ, ಆ ಕುರಿತು ಸರ್ಕಾರಕ್ಕೆ ಅಸಮಾಧಾನ ಇದೆ.

ಕೊಲಿಜಿಯಂ ವ್ಯವಸ್ಥೆಯ ಅಡಿಯಲ್ಲಿ ನ್ಯಾಯಮೂರ್ತಿಗಳ ನೇಮಕದ ವಿಚಾರದಲ್ಲಿ ಕಾರ್ಯಾಂಗಕ್ಕೆ ಹೆಚ್ಚಿನ ಪಾತ್ರ ಇಲ್ಲ. ಅಲ್ಲದೆ, ಈ ವ್ಯವಸ್ಥೆಯ ಅಡಿಯಲ್ಲಿ ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯು ಪಾರದರ್ಶಕವಾಗಿಲ್ಲ ಎಂಬ ಟೀಕೆ ಇದೆ. ಕೊಲಿಜಿಯಂ ವ್ಯವಸ್ಥೆಯು ಇನ್ನಷ್ಟು ಪಾರದರ್ಶಕವಾಗಿ ಇರುವಂತೆ ಮಾಡಲಾಗುತ್ತದೆ ಎಂಬ ಭರವಸೆಗಳನ್ನು ನೀಡಲಾಗಿದೆಯಾದರೂ, ಅವು ಕಾರ್ಯರೂಪಕ್ಕೆ ಬಂದಿಲ್ಲ. ಸಿಜೆಐ ಡಿ.ವೈ. ಚಂದ್ರಚೂಡ್, ಹಿಂದಿನ ಸಿಜೆಐ ಯು.ಯು. ಲಲಿತ್ ಅವರು ಕೊಲಿಜಿಯಂ ವ್ಯವಸ್ಥೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ವ್ಯವಸ್ಥೆ ಕುರಿತ ಟೀಕೆಗಳಲ್ಲಿ ನಿಜಾಂಶ ಇದ್ದಿರಬಹುದು. ಆದರೂ, ಜಾರಿಯಲ್ಲಿ ಇರುವ ವ್ಯವಸ್ಥೆಯು ನಿಷ್ಕ್ರಿಯವಾಗುವಂತೆ ಮಾಡುವುದು ತಪ್ಪು. ಆದರೆ, ಸರ್ಕಾರ ಈಗ ಅದನ್ನೇ ಮಾಡುತ್ತಿದೆ. ನ್ಯಾಯಾಂಗದ ಉನ್ನತ ಹುದ್ದೆಗಳು ಖಾಲಿ ಇರುವಾಗ, ನ್ಯಾಯಾಲಯಗಳಲ್ಲಿ ಲಕ್ಷಾಂತರ ‍ಪ್ರಕರಣಗಳು ವಿಚಾರಣೆಗೆ ಬಾಕಿ ಇರುವಾಗ ನ್ಯಾಯಮೂರ್ತಿಗಳ ನೇಮಕಕ್ಕೆ ಅಡ್ಡಿ ಉಂಟುಮಾಡುವುದು ವ್ಯವಸ್ಥೆಯನ್ನು ದುರ್ಬಲವಾಗಿಸುವುದಕ್ಕೆ ಸಮ. ಅಲ್ಲದೆ, ನ್ಯಾಯ ಬಯಸುವ ಜನರಿಗೆ ನ್ಯಾಯ ನಿರಾಕರಿಸಿದಂತೆಯೂ ಆಗುತ್ತದೆ.

ರಿಜಿಜು ಅವರು ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ಮತ್ತೆ ಮತ್ತೆ ವಾಗ್ದಾಳಿ ನಡೆಸುತ್ತಿದ್ದಾರೆ. ತಮ್ಮ ಪ್ರತೀ ಹೇಳಿಕೆಯ ಮೂಲಕ ಅವರು ಪರಿಸ್ಥಿತಿ ಬಿಗಡಾಯಿಸುವಂತೆ ಮಾಡುತ್ತಿದ್ದಾರೆ. ಪ್ರಧಾನಿಯವರ ಸಮ್ಮತಿ ಇದ್ದರಷ್ಟೇ ರಿಜಿಜು ಇಂತಹ ಮಾತುಗಳನ್ನು ಆಡಲು ಸಾಧ್ಯ. ರಿಜಿಜು ಅವರು ತೀರಾ ಈಚೆಗೆ ಆಡಿದ ಮಾತಿನಲ್ಲಿ ‘ಒಪ್ಪಿಕೊಳ್ಳಿ, ಇಲ್ಲವೇ ಬಿಡಿ’ ಎಂಬ ಧೋರಣೆ ಕಾಣಿಸುತ್ತಿತ್ತು. ಕೊಲಿಜಿಯಂ ಶಿಫಾರಸುಗಳ ವಿಚಾರದಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳುತ್ತಿಲ್ಲ ಎಂಬ ದೂರು ಹೇಳುವಂತೆ ಇಲ್ಲ ಎನ್ನುವ ಧಾಟಿಯೂ ಅವರ ಮಾತುಗಳಲ್ಲಿ ಇತ್ತು. ‘ಶಿಫಾರಸು ಕಡತಗಳನ್ನು ಸರ್ಕಾರವು ಮುಂದಕ್ಕೆ ಕಳುಹಿಸುತ್ತಿಲ್ಲ ಎಂದು ಹೇಳಲೇಬೇಡಿ. ಸರ್ಕಾರಕ್ಕೆ ಕಡತಗಳನ್ನು ಕಳುಹಿಸಬೇಡಿ. ನೀವೇ ನೇಮಕ ಮಾಡಿಕೊಳ್ಳಿ’ ಎಂದು ಸಚಿವರು ಹೇಳಿದ್ದಾರೆ. ರಿಜಿಜು ಅವರ ಈ ಮಾತುಗಳಿಗೆ ನ್ಯಾಯಾಲಯವು ಸಂಯಮದಿಂದ ಹಾಗೂ ಪ್ರಬುದ್ಧವಾಗಿ ಪ್ರತಿಕ್ರಿಯೆ ನೀಡಿದೆ. ನ್ಯಾಯಮೂರ್ತಿ ಎಸ್.ಕೆ. ಕೌಲ್ ಅವರು ‘ಉನ್ನತ ಸ್ಥಾನದಲ್ಲಿರುವವರಿಂದ ಈ ಮಾತು ಬಂದಿದೆ. ಈ ಮಾತು ಆಡಬಾರದಿತ್ತು. ಹೀಗಾಗಬಾರದಿತ್ತು ಎಂದಷ್ಟೇ ನಾನು ಹೇಳಬಲ್ಲೆ’ ಎಂದಿದ್ದಾರೆ. ‘ಕಾನೂನಿನ ವಿಚಾರವಾಗಿ ನಿಮಗೆ ಆಕ್ಷೇಪಗಳು ಇದ್ದಿರಬಹುದು. ಆದರೆ, ಕಾನೂನು ಜಾರಿಯಲ್ಲಿ ಇರುವವರೆಗೆ, ಅದೇ ಕಾನೂನು’ ಎಂದು ನ್ಯಾಯಾಲಯವು ಸರ್ಕಾರಕ್ಕೆ ನೆನಪು ಮಾಡಿಕೊಟ್ಟಿದೆ.

‘ದೇಶದ ಕಾನೂನನ್ನು ತಾನು ಪಾಲಿಸುವುದಿಲ್ಲವೆಂದು ಅಥವಾ ಕಾನೂನು ಪಾಲನೆಯನ್ನು ವಿಳಂಬ ಮಾಡುವುದಾಗಿ ಸರ್ಕಾರ ಹೇಳಿದರೆ, ಇನ್ನೊಂದು ಕಾನೂನಿನ ಬಗ್ಗೆ ಇನ್ನೊಬ್ಬರು ಇದೇ ರೀತಿಯ ಮಾತು ಆಡಬಹುದು’ ಎಂದು ಕೂಡ ನ್ಯಾಯಮೂರ್ತಿ ಕೌಲ್ ಹೇಳಿದ್ದಾರೆ. ಕಾನೂನು ಪಾಲಿಸುವುದಿಲ್ಲ ಎಂಬ ಮಾತನ್ನು ಇನ್ಯಾರೋ ಒಬ್ಬರು ಆಡಬೇಕು ಎಂದೇನೂ ಇಲ್ಲ. ಬದಲಿಗೆ, ನ್ಯಾಯಾಲಯದ ‍ಪ್ರಕ್ರಿಯೆಗಳನ್ನು ಪಾಲಿಸದಿದ್ದರೂ ನಡೆಯುತ್ತದೆ ಎಂದಾದರೆ ಸರ್ಕಾರವೇ ಮುಂದೊಂದು ದಿನ ತನಗೆ ಇಷ್ಟವಾಗದ ತೀರ್ಪೊಂದನ್ನು ತಿರಸ್ಕರಿಸುವ ಕೆಲಸ ಮಾಡಬಹುದು. ಅದು ಅಸಹಕಾರ ಆಗುತ್ತದೆ. ಆಗ ನ್ಯಾಯಾಲಯದ ಅಧಿಕಾರವನ್ನು ಕಡೆಗಣಿಸಿದಂತಾಗುತ್ತದೆ. ಹಾಗೆ ಮಾಡಿದಾಗ ವ್ಯವಸ್ಥೆ ಕುಸಿಯುತ್ತದೆ. ಇಂತಹ ಸಂದರ್ಭ ನಿರ್ಮಾಣವಾಗುವುದನ್ನು ತಡೆಯಬೇಕು ಎಂದಾದರೆ ಸರ್ಕಾರವು ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಕಡತಗಳನ್ನು ವಿಲೇವಾರಿ ಮಾಡಬೇಕು. ಸು‍ಪ್ರೀಂ ಕೋರ್ಟ್‌ನ ಕೊಲಿಜಿಯಂ ಮುಂದಿನ ವಾರದಲ್ಲಿ ಸಭೆ ಸೇರುವ ನಿರೀಕ್ಷೆ ಇದೆ. ಈಗಿರುವ ಸ್ಥಿತಿ ಇನ್ನಷ್ಟು ಬಿಗಡಾಯಿಸುವುದು ಒಳ್ಳೆಯದಲ್ಲ.

ದೇಶದ ಕಾರ್ಯಾಂಗವು ವ್ಯಾಪ್ತಿ ಮೀರಿ ವರ್ತಿಸುವುದರ ವಿಚಾರವಾಗಿ ನ್ಯಾಯಾಂಗಕ್ಕೆ ತನ್ನದೇ ಆದ ನೈಜ ಕಳವಳ ಇದ್ದಿರಬಹುದು. ನ್ಯಾಯಾಂಗವು ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಆದರೆ, ನ್ಯಾಯಮೂರ್ತಿಗಳ ನೇಮಕದ ವಿಚಾರದಲ್ಲಿ ತನಗೆ ಯಾವ ಪಾತ್ರವೂ ಇಲ್ಲ, ತನ್ನ ಅಭಿಪ್ರಾಯಕ್ಕೆ ಅಲ್ಲಿ ಸ್ಥಾನವಿಲ್ಲ ಎಂಬುದು ಸರ್ಕಾರದ ವಾದ. ಆದರೆ ಈ ಭಿನ್ನ ದೃಷ್ಟಿಕೋನ ಹಾಗೂ ಭಿನ್ನ ಗ್ರಹಿಕೆಗಳ ಕಾರಣದಿಂದಾಗಿ ಮೂಡಿರುವ ಸಮಸ್ಯೆಯನ್ನು ಪರಿಹರಿಸಲು ಸರ್ಕಾರವು ನ್ಯಾಯಾಂಗದ ಮೇಲೆ ಒತ್ತಡ ಹೇರುವುದು ಸರಿಯಾಗುವುದಿಲ್ಲ. ನ್ಯಾಯಮೂರ್ತಿಗಳ ನೇಮಕಕ್ಕೆ ಈಗಿರುವ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವ ಉದ್ದೇಶದಿಂದ ಬರುವ ಸಲಹೆಗಳನ್ನು ಕೋರ್ಟ್‌ ತಿರಸ್ಕರಿಸಲಾಗದು. ಸಹಕಾರ ಹಾಗೂ ಸಮಾಲೋಚನೆಯೇ ಸಮಸ್ಯೆಯನ್ನು ಪರಿಹರಿಸುತ್ತದೆ; ಸಂಘರ್ಷದಿಂದ ಸಮಸ್ಯೆ ಬಗೆಹರಿಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT