ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಐಪಿಎಲ್: ಕೋಲ್ಕತ್ತ ತಂಡದ ಸಾಂಘಿಕ ಪ್ರಯತ್ನಕ್ಕೆ ಸಂದ ಜಯ

Published 28 ಮೇ 2024, 1:06 IST
Last Updated 28 ಮೇ 2024, 1:06 IST
ಅಕ್ಷರ ಗಾತ್ರ

‘ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು’ ಎಂಬುದನ್ನು ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಸಾಬೀತು ಮಾಡಿದೆ. ಅನುಭವಿ ಹಾಗೂ ಯುವ ಆಟಗಾರರ ಸಾಂಘಿಕ ಪ್ರಯತ್ನವು ತಂಡದ ಬಲ ಹೆಚ್ಚಿಸಿತು. ಜೊತೆಗೆ ಶಿಸ್ತಿನ ಮಾರ್ಗದರ್ಶನವೂ ದೊರೆತ ಕಾರಣ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ 17ನೇ ಆವೃತ್ತಿಯಲ್ಲಿ ಪ್ರಶಸ್ತಿ ಜಯಿಸಿತು. ಈ ತಂಡವು ಐಪಿಎಲ್ ಇತಿಹಾಸದಲ್ಲಿ ಜಯಿಸಿದ ಮೂರನೇ ಟ್ರೋಫಿ ಇದಾಗಿದೆ. ಅದೂ ಹತ್ತು ವರ್ಷಗಳ ನಂತರ ಈ ಸಾಧನೆ ಮಾಡಿದೆ. 2012 ಹಾಗೂ 2014ರಲ್ಲಿ ತಂಡವು ಪ್ರಶಸ್ತಿ ಜಯಿಸಿದಾಗ ನಾಯಕರಾಗಿದ್ದ ಗೌತಮ್ ಗಂಭೀರ್ ಈ ಬಾರಿ ಮೆಂಟರ್ ಆಗಿದ್ದರು. ಅವರೊಂದಿಗೆ ದೇಶಿ ಕ್ರಿಕೆಟ್‌ನ ಯಶಸ್ವಿ ತರಬೇತುದಾರರಾದ ಚಂದ್ರಕಾಂತ್ ಪಂಡಿತ್, ಅಭಿಷೇಕ್ ನಾಯರ್, ಭರತ್ ಅರುಣ್ ಹಾಗೂ ನೆರವು ಸಿಬ್ಬಂದಿಯ ಶ್ರಮಕ್ಕೆ ಸಿಹಿಫಲ ಲಭಿಸಿದೆ. ರಣಜಿ ಟ್ರೋಫಿ ಟೂರ್ನಿಯ ಪಂದ್ಯಗಳಲ್ಲಿ ಆಡದ ಕಾರಣಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿದ್ದ ಶ್ರೇಯಸ್ ಅಯ್ಯರ್ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಿದ ಕೆಕೆಆರ್ ಆಡಳಿತ ಮಂಡಳಿ ಬಗ್ಗೆ ಟೀಕೆಗಳು ಕೇಳಿಬಂದಿದ್ದವು. ಹರಾಜು ಪ್ರಕ್ರಿಯೆಯಲ್ಲಿ ₹24.75 ಕೋಟಿ (ಐಪಿಎಲ್‌ ಇತಿಹಾಸದ ಗರಿಷ್ಠ ಮೌಲ್ಯ) ಪಡೆದು ಕೆಕೆಆರ್‌ಗೆ ಸೇರ್ಪಡೆಯಾಗಿದ್ದ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅವರು ಆರಂಭಿಕ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದರು. ಆದರೆ ಫೈನಲ್ ಹಾಗೂ ಕ್ವಾಲಿಫೈಯರ್ ಪಂದ್ಯಗಳಲ್ಲಿ ಸ್ಟಾರ್ಕ್‌ ಅವರೇ ತಂಡದ ಗೆಲುವಿನ ರೂವಾರಿಯಾದರು. ಅನುಭವಿ ಆಲ್‌ರೌಂಡರ್ ಸುನಿಲ್ ನಾರಾಯಣ್ ಮತ್ತು ಆ್ಯಂಡ್ರೆ ರಸೆಲ್ ಅವರ ಮೇಲೆ ತಂಡವು ಇಟ್ಟ ವಿಶ್ವಾಸ ಹುಸಿಯಾಗಲಿಲ್ಲ. ಯುವ ಆಟಗಾರರಾದ ವರುಣ್‌ ಚಕ್ರವರ್ತಿ, ಅಂಗಕ್ರಿಷ್ ರಘುವಂಶಿ, ರಮಣದೀಪ್ ಸಿಂಗ್ ಹಾಗೂ ವೆಂಕಟೇಶ್ ಅಯ್ಯರ್ ಅವರೂ ತಮ್ಮ ಮೇಲಿಟ್ಟ ನಂಬಿಕೆ ಉಳಿಸಿಕೊಂಡರು. ಎಲ್ಲಕ್ಕಿಂತ ಮುಖ್ಯವಾಗಿ ಈ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅಥವಾ ಮಹೇಂದ್ರಸಿಂಗ್ ಧೋನಿ ಅವರಂತಹ ದೊಡ್ಡ ತಾರೆಗಳು ಇರಲಿಲ್ಲ. ಆದರೂ ಒಂದು ತಂಡವಾಗಿ ಆಲ್‌ರೌಂಡ್ ಆಟವಾಡಿದರೆ ಪ್ರಶಸ್ತಿ ಜಯಿಸುವುದು ಸಾಧ್ಯ ಎಂಬ ಮಾದರಿಯನ್ನು ಚಲನಚಿತ್ರ ನಟ ಶಾರೂಕ್ ಖಾನ್ ಮಾಲೀಕತ್ವದ ಕೆಕೆಆರ್ ತೋರಿಸಿಕೊಟ್ಟಿದೆ. ಜೂನ್ 2ರಿಂದ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯದಲ್ಲಿ ನಡೆಯಲಿ ರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ತಂಡಗಳಿಗೂ ಕೆಕೆಆರ್ ಅನುಸರಿಸಿದ ಮಾದರಿಯು ನೆರವಾಗಬಹುದು.

ಫೈನಲ್‌ಗೆ ಪ್ರವೇಶಿಸಿದ್ದ ಪ್ಯಾಟ್ ಕಮಿನ್ಸ್ ನಾಯಕತ್ವದ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಬ್ಯಾಟರ್‌ಗಳು ಟೂರ್ನಿಯ ಆರಂಭದಿಂದಲೂ ಅಬ್ಬರಿಸಿದ್ದರು. ರನ್‌ಗಳ ಹೊಳೆ ಹರಿಸಿದ್ದರು. ಆದರೆ ಫೈನಲ್‌ನಲ್ಲಿ ಕೆಕೆಆರ್ ಬೌಲರ್‌ಗಳು ಚುಟುಕು ಮಾದರಿಯ ಕ್ರಿಕೆಟ್‌ ಬರೀ ಬ್ಯಾಟರ್‌ಗಳದ್ದಲ್ಲ ಎಂಬುದನ್ನು ತೋರಿಸಿಕೊಟ್ಟರು. ಈ ಬಾರಿಯ ಟೂರ್ನಿಯಲ್ಲಿ ಭಾಗವಹಿಸಿದ್ದ ಹತ್ತು ತಂಡಗಳಲ್ಲಿಯೂ ಹೊಸ ಪ್ರತಿಭೆಗಳು ಗಮನ ಸೆಳೆದವು. ಅಭಿಷೇಕ್ ಶರ್ಮಾ, ರಘುವಂಶಿ, ಆಶುತೋಷ್ ಸಿಂಗ್, ಅಭಿಷೇಕ್ ಪೊರೆಲ್, ತುಷಾರ್ ದೇಶಪಾಂಡೆ, ಸಾಯಿಸುದರ್ಶನ್, ಮಯಂಕ್ ಯಾದವ್, ಆಕಾಶ್ ಮಧ್ವಾಲ್, ರಿಯಾನ್ ಪರಾಗ್ ಹಾಗೂ ರಜತ್ ಪಾಟೀದಾರ್ ಭವಿಷ್ಯದಲ್ಲಿಯೂ ಬೆಳಗುವ ಭರವಸೆ ಮೂಡಿಸಿದರು. ಆಸ್ಟ್ರೇಲಿಯಾದ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಹಾಗೂ ಆರ್‌ಸಿಬಿಯಲ್ಲಿ ಆಡಿದ ಇಂಗ್ಲೆಂಡ್‌  ಆಟಗಾರ ವಿಲ್ ಜ್ಯಾಕ್ಸ್‌ ತಮ್ಮ ಛಾಪು ಮೂಡಿಸಿದರು. ಈ ಯುವ ಆಟಗಾರರೊಂದಿಗೆ ಪೈಪೋಟಿಗೆ ಬಿದ್ದಂತೆ ಆಡಿದ ಅನುಭವಿ ಆಟಗಾರರೂ ಮಿಂಚಿದರು. ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದರು. ಬಹುತೇಕ ಕೊನೆಯ ಐಪಿಎಲ್ ಆಡಿದ ಮಹೇಂದ್ರಸಿಂಗ್ ಧೋನಿ ಅವರು 110 ಮೀಟರ್‌ ದೂರದ ಸಿಕ್ಸರ್ ಬಾರಿಸಿದರು. ಕ್ರಿಕೆಟ್‌ಗೆ ವಿದಾಯ ಘೋಷಿಸಿದ ದಿನೇಶ್ ಕಾರ್ತಿಕ್, ಫಫ್ ಡುಪ್ಲೆಸಿ, ಟ್ರಾವಿಸ್ ಹೆಡ್, ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ದೀರ್ಘಕಾಲದ ಚಿಕಿತ್ಸೆಯ ನಂತರ ಕಣಕ್ಕೆ ಮರಳಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಅವರ ಆಟ ಉತ್ತಮವಾಗಿತ್ತು. ಆದರೆ ಅಪಾರ ನಿರೀಕ್ಷೆ ಮೂಡಿಸಿದ್ದ ಕೆಲವು ಆಟಗಾರರು ನಿರಾಶೆಗೊಳಿಸಿದರು. ಅದರಲ್ಲಿ ಹಾರ್ದಿಕ್ ಪಾಂಡ್ಯ ಪ್ರಮುಖರು. ಗುಜರಾತ್ ಟೈಟನ್ಸ್‌ನಿಂದ ಅವರನ್ನು ಮುಂಬೈ ಇಂಡಿಯನ್ಸ್ ತಂಡವು ಕರೆದುಕೊಂಡು ಬಂದು ನಾಯಕತ್ವ ನೀಡಿತ್ತು. ಅದಕ್ಕಾಗಿ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸ ಲಾಗಿತ್ತು. ಆದರೆ ಆ ತಂಡದ ಅಭಿಮಾನಿಗಳು ಇದನ್ನು ಒಪ್ಪಿಕೊಳ್ಳಲಿಲ್ಲ. ಮುಂಬೈ ಇಂಡಿಯನ್ಸ್ ತಂಡವು ಪಂದ್ಯಗಳನ್ನು ಆಡಿದ ಕ್ರೀಡಾಂಗಣಗಳಲ್ಲಿ ಸೇರಿದ್ದ ಅಭಿಮಾನಿಗಳು ಹಾರ್ದಿಕ್ ಅವರನ್ನು ನಿಂದಿಸಿದ್ದು ದೊಡ್ಡ ಸುದ್ದಿಯಾಯಿತು. ಬೆಂಗಳೂರಿನಲ್ಲಿ ಆರ್‌ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ನಂತರವೂ ಉಭಯ ತಂಡಗಳ ಅಭಿಮಾನಿಗಳ ಸಂಘರ್ಷಗಳು ಸುದ್ದಿ ಮಾಡಿದ್ದವು. ಲಖನೌ ಸೂಪರ್‌ಜೈಂಟ್ಸ್ ನಾಯಕ, ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ತಂಡದ ಮಾಲೀಕರು ‘ತರಾಟೆ’ಗೆ ತೆಗೆದುಕೊಂಡ ವಿಡಿಯೊ ದೊಡ್ಡ ಚರ್ಚೆಗೆ ಕಾರಣವಾಯಿತು. ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಪ್ರಮುಖ ಆಟಗಾರರಿಂದ ವಿರೋಧ ವ್ಯಕ್ತವಾಯಿತು. ಇವೆಲ್ಲದರಾಚೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಸಲವೂ ಕಪ್ ಜಯಿಸಲಿಲ್ಲ. ಟೂರ್ನಿಯ ಮೊದಲಾರ್ಧದಲ್ಲಿ ಸತತ ಸೋಲುಗಳನ್ನು ಅನುಭವಿಸಿದ ಆರ್‌ಸಿಬಿ, ಲೀಗ್ ಹಂತದಲ್ಲಿ ತನ್ನ ಕೊನೆಯ ಆರು ಪಂದ್ಯಗಳಲ್ಲಿ ಸತತ ಜಯ ಸಾಧಿಸಿ ಪ್ಲೇಆಫ್‌ ಪ್ರವೇಶಿಸಿದ್ದು ರೋಚಕ ಕತೆಯಾಗಿ ದಾಖಲಾಯಿತು. ಹಣ ಹೂಡಿದವರಿಗೆ ಭರ್ಜರಿ ಆದಾಯ ಮತ್ತು ನೋಡುಗರಿಗೆ ಹೇರಳ ಮನರಂಜನೆ ನೀಡಿದ ಮತ್ತೊಂದು ಐಪಿಎಲ್ ಟೂರ್ನಿಯು ಇತಿಹಾಸದ ಪುಟ ಸೇರಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT