ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಕಲ್ಯಾಣ ಯೋಜನೆಗಳಿಗೆ ಆದ್ಯತೆ; ಸಂಪನ್ಮೂಲದ್ದೇ ಕೊರತೆ

Published 17 ಫೆಬ್ರುವರಿ 2024, 0:30 IST
Last Updated 17 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ದೊಡ್ಡ ಘೋಷಣೆಗಳಿಲ್ಲದ ಈ ಬಜೆಟ್‌ನಲ್ಲಿ ದೂರದೃಷ್ಟಿಯ ಹಲವು ಗುರಿಗಳಿವೆ. ಆದರೆ, ಅಪೇಕ್ಷಿತ ಪ್ರಮಾಣದ ಅನುದಾನ ಇಲ್ಲದಿರುವುದೇ ಮುಖ್ಯ ಅಡ್ಡಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹ 3.71 ಲಕ್ಷ ಕೋಟಿ ಗಾತ್ರದ 2024–25ನೇ ಸಾಲಿನ ರಾಜ್ಯ ಬಜೆಟ್‌ ಅನ್ನು ಶುಕ್ರವಾರ ಮಂಡಿಸಿದ್ದಾರೆ. ಹದಿನೈದನೇ ಬಾರಿ ಬಜೆಟ್‌ ಮಂಡಿಸಿದ ದಾಖಲೆಯನ್ನೂ ಅವರು ಬರೆದಿದ್ದಾರೆ. ಯಥಾಪ್ರಕಾರ, ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿರುವ ಅವರು ಸಮಾಜದ ಎಲ್ಲ ವರ್ಗದವರನ್ನೂ ತಲುಪುವ ಪ್ರಯತ್ನ ಮಾಡಿದ್ದಾರೆ. ನ್ಯಾಯ, ಸಮಾನತೆ ಹಾಗೂ ಭ್ರಾತೃತ್ವದ ತಳಹದಿಯ ಮೇಲೆ ‘ಕರ್ನಾಟಕ ಮಾದರಿ ಅಭಿವೃದ್ಧಿ’ಯ ಹೊಸ ದೃಷ್ಟಾಂತವನ್ನು ರೂಪಿಸುವ ಕನಸನ್ನೂ ಅವರು ಹಂಚಿಕೊಂಡಿದ್ದಾರೆ.

‘ಅಹಿಂದ’ ಮತ್ತು ಮಹಿಳಾ ಸಮುದಾಯದ ಮೇಲಿನ ತಮ್ಮ ಒಲವನ್ನು ಮುಖ್ಯಮಂತ್ರಿ ಢಾಳಾಗಿ ಪ್ರಕಟಿಸಿದ್ದರೂ ಇತರ ಸಮುದಾಯಗಳನ್ನೇನೂ ಕಡೆಗಣಿಸಿಲ್ಲ. ಸರ್ವರನ್ನೂ ಒಳಗೊಳ್ಳುವ ಆಶಯದ ಸಾಮಾಜಿಕ ಕಲ್ಯಾಣ ಯೋಜನೆಗಳ ಸಂಖ್ಯೆ ಹೆಚ್ಚಾಗಿರುವುದೇ ಇದಕ್ಕೆ ಸಾಕ್ಷಿ. ಲೋಕಸಭಾ ಚುನಾವಣೆಗೆ ಇನ್ನೇನು ಅಧಿಸೂಚನೆ ಹೊರಡಲಿರುವ ಈ ಹೊತ್ತಿನಲ್ಲಿ ಬಜೆಟ್‌ ಮಂಡನೆ
ಆಗಿದ್ದರೂ ದೊಡ್ಡ ಮಟ್ಟದಲ್ಲಿ ಜನಪ್ರಿಯ ಘೋಷಣೆಗಳ ಜಾಡನ್ನು ತುಳಿಯುವ ಗೋಜಿಗೆ
ಸಿದ್ದರಾಮಯ್ಯನವರು ಹೋಗಿಲ್ಲ. ಸರ್ಕಾರಿ ನೌಕರರ ಸಂಬಳ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಸಾಲ ಮರುಪಾವತಿಯ ಬಾಬತ್ತುಗಳಿಗೆ ಬಜೆಟ್‌ನ ಸಿಂಹಪಾಲು ವ್ಯಯವಾಗುತ್ತಿರುವ ಕಾರಣ ಅಭಿವೃದ್ಧಿ ಯೋಜನೆಗಳು ಅನುದಾನದ ಬರ ಎದುರಿಸುತ್ತಿರುವುದು ಮೇಲ್ನೋಟಕ್ಕೇ ವೇದ್ಯ. ಉಳಿದಿರುವುದನ್ನು ಎಲ್ಲರಿಗೂ ಹಂಚುವ ಕೆಲಸವಷ್ಟೇ ಮುಖ್ಯಮಂತ್ರಿಯವರಿಂದ ಆಗಿದೆ. ಹೀಗಾಗಿ, ಮೂಲಸೌಕರ್ಯ ವೃದ್ಧಿಗಿಂತಲೂ ಕಡಿಮೆ ಖರ್ಚು ಬಯಸುವ ಮಾನವ ಸಂಪನ್ಮೂಲದ ಅಭಿವೃದ್ಧಿಯತ್ತಲೇ ಹೆಚ್ಚಿಗೆ ಗಮನಹರಿಸಲಾಗಿದೆ.

ತರಬೇತಿ, ಕೌಶಲವೃದ್ಧಿಯ ಮೂಲಕ ಮಹಿಳೆಯರು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಬರದಿಂದ ತತ್ತರಿಸಿರುವ ಕೃಷಿ ವಲಯವು ಬಜೆಟ್‌ನಿಂದ ಹೆಚ್ಚಿನದನ್ನೇ ನಿರೀಕ್ಷಿಸಿತ್ತು. ಸೋಜಿಗ ಎನ್ನುವಂತೆ, ಅನುದಾನ ಹಂಚಿಕೆಯಲ್ಲೂ ಈ ವಲಯ ‘ಬರ’ ಅನುಭವಿಸಿದೆ. ಮೇಕೆದಾಟು, ಭದ್ರಾ, ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ಬೃಹತ್‌ ನೀರಾವರಿ ಯೋಜನೆಗಳ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿದೆ. ಆದರೆ, ಅನುದಾನ ಹಂಚಿಕೆ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಗ್ರಾಮ ಸರೋವರ ನಿರ್ಮಾಣ, ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ಏತ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿರುವುದು ಗಮನಾರ್ಹ. ಹಾಗೆಯೇ ಎಲ್ಲ ಪ್ರದೇಶಗಳಿಗೂ ಒಂದಿಲ್ಲೊಂದು ರೀತಿಯಲ್ಲಿ ನೆರವಿನಹಸ್ತ ಚಾಚುವ ಪ್ರಯತ್ನವನ್ನು ಮಾಡಲಾಗಿದೆ.

ಆಡಳಿತ ಸುಧಾರಣೆಗೂ ಒತ್ತು ನೀಡಿರುವುದು ಬಜೆಟ್‌ನ ಹೆಗ್ಗುರುತುಗಳಲ್ಲಿ ಒಂದು. ಕಡ್ಡಾಯವಾಗಿ ನೋಂದಾಯಿಸಬೇಕಾದ ಆಯ್ದ ದಾಖಲೆಗಳ ಇ–ನೋಂದಣಿಯನ್ನು ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಎರಡೂ ಪಕ್ಷಗಾರರ ಹಾಜರಾತಿಯಿಲ್ಲದೆ ಮಾಡಲು ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಿಂದ ನೋಂದಣಿ ಮಾಡಿಸುವ ಸೌಲಭ್ಯವನ್ನು ಇಡೀ ರಾಜ್ಯಕ್ಕೆ
ವಿಸ್ತರಿಸಲಾಗುತ್ತದೆ ಎಂದೂ ಪ್ರಕಟಿಸಲಾಗಿದೆ. ಗ್ರಾಮ ಪಂಚಾಯಿತಿ ಸೇವೆಗಳನ್ನು ಪಾರದರ್ಶಕ
ಗೊಳಿಸಲು ಮತ್ತು ತ್ವರಿತವಾಗಿ ಒದಗಿಸಲು ಇ–ಆಫೀಸ್‌ ವ್ಯವಸ್ಥೆ ಜಾರಿಗೊಳಿಸುವುದಾಗಿ ಘೋಷಿಸಲಾಗಿದೆ. ಈ ಸೌಲಭ್ಯಗಳಿಂದ ಜನರಿಗೆ ನೇರವಾಗಿ ಪ್ರಯೋಜನ ತಟ್ಟಲಿದೆ.

ಕ್ಯಾನ್ಸರ್‌ ರೋಗಿಗಳಿಗೆ ಆರೈಕೆ ಹಾಗೂ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ಪ್ರತಿ ಜಿಲ್ಲೆಯಲ್ಲಿಯೂ ಒಂದೊಂದು ಡೇ–ಕೇರ್‌ ಕಿಮೋಥೆರಪಿ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಅಗತ್ಯವಾಗಿ ಆಗಲೇಬೇಕಾಗಿರುವ ಕೆಲಸ ಇದು. ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ರಾತ್ರಿ ಒಂದು ಗಂಟೆವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸುವ ನಿರ್ಧಾರದಲ್ಲಿ ಕಾಲದ ಅಗತ್ಯಕ್ಕೆ ಸ್ಪಂದಿಸುವ ತವಕ ಇದೆ. ವಸತಿನಿಲಯಗಳು, ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಒಲವು ತೋರಲಾಗಿದ್ದು, ಶಿಕ್ಷಣದ ಮೂಲಸೌಕರ್ಯ ಹೆಚ್ಚಿಸುವ ಕೆಲಸ ಇದಾಗಿದೆ. ದೊಡ್ಡ ಘೋಷಣೆಗಳಿಲ್ಲದ ಈ ಬಜೆಟ್‌ನಲ್ಲಿ ದೂರದೃಷ್ಟಿಯ ಹಲವು ಗುರಿಗಳಿವೆ. ಆದರೆ, ಅಪೇಕ್ಷಿತ ಪ್ರಮಾಣದ ಅನುದಾನ ಇಲ್ಲದಿರುವುದೇ ಮುಖ್ಯ ಅಡ್ಡಿ. ಅನುಪಯುಕ್ತ ಸರ್ಕಾರಿ ಆಸ್ತಿಗಳ ಮಾರಾಟ ಮತ್ತು ಖಾಸಗಿ ಸಹಭಾಗಿತ್ವದ ಮೂಲಕ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳುವ ಇರಾದೆಯನ್ನು ವ್ಯಕ್ತಪಡಿಸಲಾಗಿದೆ. ಆದರೆ, ಇದು ಎಷ್ಟರಮಟ್ಟಿಗೆ ಕಾರ್ಯಸಾಧು ಎಂಬ ಪ್ರಶ್ನೆ ಕಾಡುತ್ತದೆ.

ಜಿಎಸ್‌ಟಿ ‘ರಾಜ್ಯಭಾರ’ ಶುರುವಾದ ಮೇಲೆ ರಾಜ್ಯಗಳ ಸ್ವಂತ ವರಮಾನದ ಮೂಲಗಳು ಬಹುಪಾಲು ತಗ್ಗಿವೆ. ಖಜಾನೆಯನ್ನು ಭರ್ತಿ ಮಾಡಿಕೊಳ್ಳಲು ಕೇಂದ್ರದಿಂದ ಸಿಗುವ ತೆರಿಗೆ ಪಾಲಿಗಾಗಿ ಅವುಗಳು ಕಾಯುವುದು ಅನಿವಾರ್ಯ. ತೆರಿಗೆಯಲ್ಲಿ ರಾಜ್ಯಕ್ಕೆ ಸಿಗಬೇಕಾದ ನ್ಯಾಯಯುತ ಪಾಲು ಸಿಗುತ್ತಿಲ್ಲ ಎಂದು ಇತ್ತೀಚೆಗಷ್ಟೇ ದೆಹಲಿಗೆ ಹೋಗಿ ಪ್ರತಿಭಟನೆ ಮಾಡಿಬಂದಿದ್ದ ಸಿದ್ದರಾಮಯ್ಯ, ಕೇಂದ್ರ ಸರ್ಕಾರವನ್ನು ಕುಟುಕಲು ಬಜೆಟ್‌ ಭಾಷಣದಲ್ಲಿ ಸಿಕ್ಕ ಅವಕಾಶವನ್ನು ಬಿಟ್ಟುಕೊಟ್ಟಿಲ್ಲ. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಕೇಂದ್ರದ ವಿರುದ್ಧ ಅವರು ಧ್ವನಿ ಎತ್ತಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲಾಗಿದೆ ಎಂಬ ಮಾಹಿತಿ ನೀಡಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಈ ಹಿಂದಿನ ಸರ್ಕಾರದ ಕಾಲನ್ನೂ ಎಳೆದಿದ್ದಾರೆ.

ಆರ್ಥಿಕ ಶಿಸ್ತಿನ ಕುರಿತು ಪದೇ ಪದೇ ಪ್ರಸ್ತಾಪಿಸಿರುವ ಸಿದ್ದರಾಮಯ್ಯ, ಯೋಜನೆಗಳ ಅನುಷ್ಠಾನಕ್ಕಾಗಿ ₹ 1.05 ಲಕ್ಷ ಕೋಟಿಯಷ್ಟು ಸಾಲ ಮಾಡಲು ಹೊರಟಿದ್ದಾರೆ. ಇದು, ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಯ (ಜಿಎಸ್‌ಡಿಪಿ) ಶೇ 2.95ರಷ್ಟಾಗಲಿದೆ. ಸಾಲದ ಬಾಬತ್ತು ಹೀಗೇ ಏರುತ್ತಾ ಹೋದರೆ ಹೇಗೆ ಎಂಬ ಪ್ರಶ್ನೆಯನ್ನು ಅವರು ಹಾಕಿಕೊಳ್ಳಬೇಕಿತ್ತು. ವಿತ್ತೀಯ ಕೊರತೆಯನ್ನು ತಗ್ಗಿಸುವ ಬೇರೆ ಹಾದಿಯೇ ಉಳಿದಿಲ್ಲ ಎಂಬ ಅಸಹಾಯಕತೆಗೆ ಅವರು ಸಿಲುಕಿದಂತಿದೆ. ‘ಗ್ಯಾರಂಟಿ’ ಯೋಜನೆಗಳ ‘ಭಾರ’ ತಡೆದುಕೊಳ್ಳಲು ವರಮಾನದ ಬೇರೆ ಮೂಲಗಳೇ ಅವರ ಮುಂದಿಲ್ಲ. ಬಜೆಟ್‌ ಮಂಡನೆಗೂ ಮುನ್ನವೇ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಪರಿಷ್ಕರಿಸಿರುವುದು, ಮದ್ಯದ ದರವನ್ನೂ ಹೆಚ್ಚಿಸಿರುವುದು ಮುಖ್ಯಮಂತ್ರಿಯವರ ಕೈ ಕಟ್ಟಿಹಾಕಿವೆ. ಕೇಂದ್ರದಿಂದ ಸಿಗುವ ಹೆಚ್ಚಿನ ತೆರಿಗೆ ಪಾಲಿಗಾಗಿ ಕಾಯುವುದು ಅವರಿಗೆ ಅನಿವಾರ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT