ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ವಾಲ್ಮೀಕಿ ನಿಗಮದಲ್ಲಿ ನಡೆದ ಅವ್ಯವಹಾರ: ತಪ್ಪಿತಸ್ಥರ ಪತ್ತೆ ಹಚ್ಚಲಿ

ಭ್ರಷ್ಟಾಚಾರದಂತಹ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣ ತುಂಬಾ ಕಡಿಮೆ ಇರುವುದರಿಂದ, ಅಧಿಕಾರಿಗಳು ಜನರ ದುಡ್ಡಿಗೆ ನಿರ್ಲಜ್ಜೆಯಿಂದ ಕೈಹಾಕುವ ಧೈರ್ಯ ಪ್ರದರ್ಶಿಸುತ್ತಿದ್ದಾರೆ
Published 30 ಮೇ 2024, 23:34 IST
Last Updated 30 ಮೇ 2024, 23:34 IST
ಅಕ್ಷರ ಗಾತ್ರ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕರೊಬ್ಬರ ದುರಂತ ಅಂತ್ಯದ ಮೂಲಕ, ನಿಗಮದಲ್ಲಿ ನಡೆದಿದೆ ಎನ್ನಲಾದ ₹ 94.73 ಕೋಟಿ ಮೊತ್ತದ ಅವ್ಯವಹಾರವೊಂದು ಬಯಲಾಗಿದೆ. ನಿಗಮದ ಅಧೀಕ್ಷಕರಾಗಿದ್ದ ಪಿ.ಚಂದ್ರಶೇಖರನ್‌ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿಟ್ಟಿರುವ ಪತ್ರದಲ್ಲಿ ಹಗರಣದ ಕುರಿತು ಹಲವು ವಿವರಗಳನ್ನು ದಾಖಲಿಸಿದ ಮಾಹಿತಿ ಇದೆ. ಈ ಅಧಿಕಾರಿ ಮಾಡಿರುವುದೇನೂ ಮಾಮೂಲಿ ಆರೋಪವಲ್ಲ, ನಿಗಮದಲ್ಲಿ ಹಗರಣ ನಡೆದಿರುವುದು ನಿಜ ಎಂಬುದನ್ನು ‍ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಕೂಡ ಒಪ್ಪಿಕೊಂಡಿದ್ದಾರೆ. ಒಂದುವೇಳೆ, ಚಂದ್ರಶೇಖರನ್‌ ಅವರು ತಮ್ಮ ಸಾವಿಗೂ ಮುನ್ನ ಪತ್ರದಲ್ಲಿ ಬರೆಯದೇ ಹೋಗಿದ್ದರೆ ಈ ಅವ್ಯವಹಾರ ಹೊರಬರುತ್ತಿರಲಿಲ್ಲವೇನೋ. ನಿಗಮದಿಂದ ನಡೆದಿರುವ ಬ್ಯಾಂಕ್‌ ವ್ಯವಹಾರಗಳೇ ಗೊಂದಲಕಾರಿಯಾಗಿವೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟ. ನಿಗಮವು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಬೆಂಗಳೂರಿನ ವಸಂತನಗರ ಶಾಖೆಯಲ್ಲಿ ಅಧಿಕೃತ ಖಾತೆಯನ್ನು ಹೊಂದಿತ್ತು. ಇದೇ ಬ್ಯಾಂಕ್‌ನ ಎಂ.ಜಿ. ರಸ್ತೆಯ ಶಾಖೆಗೆ ಆ ಖಾತೆಯನ್ನು ವರ್ಗಾಯಿಸಿಕೊಂಡಿತು ಮತ್ತು ವಸಂತನಗರ ಶಾಖೆಯ ಖಾತೆಯಲ್ಲಿದ್ದ ₹ 187 ಕೋಟಿ ಮೊತ್ತವನ್ನು ಹಂತ, ಹಂತವಾಗಿ ಎಂ.ಜಿ. ರಸ್ತೆ ಶಾಖೆಯ ಹೊಸ ಖಾತೆಗೆ ವರ್ಗಾಯಿಸಲಾಯಿತು ಎಂದು ಹೇಳಲಾಗಿದೆ. ಒಂದೇ ಬ್ಯಾಂಕ್‌ನ ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ಹೀಗೆ ಖಾತೆ ಮತ್ತು ಹಣ ವರ್ಗಾಯಿಸಿದ್ದೇಕೆ ಎಂಬ ಅನುಮಾನವೂ ಇಲ್ಲಿ ಮೂಡುತ್ತದೆ. ಎಂ.ಜಿ. ರಸ್ತೆಯ ಶಾಖೆಯಲ್ಲಿದ್ದ ನಿಗಮದ ಖಾತೆಗೆ ಜಮೆ ಆಗಿದ್ದ ಹಣದಲ್ಲಿ ₹ 94.73 ಕೋಟಿ ಮೊತ್ತವನ್ನು 14 ಅನ್ಯ ಖಾತೆಗಳಿಗೆ ವರ್ಗಾಯಿಸಲಾಗಿದೆ. ಕೆಲವು ಸಾಫ್ಟ್‌ವೇರ್‌ ಕಂಪನಿಗಳ ಖಾತೆಗಳಿಗೂ ಈ ಹಣ ಹೋಗಿದೆ ಎಂದು ದೂರಲಾಗಿದೆ. ಈ ಅವ್ಯವಹಾರಗಳಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ. ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ
ದುರ್ಗಣ್ಣನವರ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮುಖ್ಯ ವ್ಯವಸ್ಥಾಪಕಿ ಶುಚಿಸ್ಮಿತಾ ರಾವಲ್‌ ಕಾರಣ ಎಂದು ಸಾವಿಗೀಡಾದ ಅಧಿಕಾರಿ ಪತ್ರದಲ್ಲಿ ಉಲ್ಲೇಖಿಸಿದ ಮಾಹಿತಿ ಇದೆ. ಸಚಿವರ ಮೌಖಿಕ ಸೂಚನೆ ಇದೆ ಎಂದು ಲೆಕ್ಕಾಧಿಕಾರಿ ಹೇಳಿದ್ದರಿಂದಾಗಿ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂಬ ವಾಕ್ಯ ಕೂಡ ಮೃತ ಚಂದ್ರಶೇಖರನ್‌ ಅವರು ಬರೆದಿಟ್ಟ ಪತ್ರದಲ್ಲಿ ಇರುವುದಾಗಿ ಹೇಳಲಾಗಿದೆ. ಆದರೆ, ತಮ್ಮ ಮೇಲಿನ ಆರೋಪವನ್ನು ಸಚಿವರು ಅಲ್ಲಗಳೆದಿದ್ದಾರೆ. ತಮ್ಮ ಸಹಿಯನ್ನು ಫೋರ್ಜರಿ ಮಾಡಲಾಗಿದೆ ಎಂದು ಪದ್ಮನಾಭ ಅವರು ದೂರಿದ್ದಾರೆ. ಈ ಮಧ್ಯೆ, ನಿಗಮದ ಪ್ರಧಾನ ವ್ಯವಸ್ಥಾಪಕರು, ‘ನಿಗಮದ ಅನುಮತಿ ಇಲ್ಲದೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ’ ಎಂದು ಯೂನಿಯನ್‌ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಹೈಗ್ರೌಂಡ್ಸ್‌ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ನಿಗಮದ ಖಾತೆಗಳ ವ್ಯವಹಾರದ ಕುರಿತು ಇ–ಮೇಲ್‌, ಎಸ್‌ಎಂಎಸ್‌ ಸಹ ಹೋಗದಂತೆ ನೋಡಿಕೊಳ್ಳಲಾಗಿತ್ತು ಎಂದೂ ದೂರಲಾಗಿದೆ.

ಕರ್ತವ್ಯಲೋಪ ಎಸಗಿದ ಹಾಗೂ ಆರ್ಥಿಕ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಪದ್ಮನಾಭ ಹಾಗೂ ದುರ್ಗಣ್ಣನವರ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಮಣಿಮೇಖಲೈ, ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕಿ ಶುಚಿಸ್ಮಿತಾ ಸೇರಿದಂತೆ ಆರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಅಧಿಕಾರಿಯೊಬ್ಬರ ಆತ್ಮಹತ್ಯೆಯ ಕಾರಣದಿಂದ ಈ ಹಗರಣ ಬಯಲಾಗುವಂತೆ ಆಗಿರುವುದು ವ್ಯವಸ್ಥೆಯ ವೈಫಲ್ಯವನ್ನೂ ಸರ್ಕಾರ ಹಾಗೂ ನಿಗಮದ ಆಂತರಿಕ ಪರಿಶೋಧನಾ ವ್ಯವಸ್ಥೆ ಸಂಪೂರ್ಣವಾಗಿ ಮುಗ್ಗರಿಸಿರುವುದನ್ನೂ ಎತ್ತಿ ತೋರುತ್ತದೆ. ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಗರಣದ ಕುರಿತು ತಮಗೆ ಮಾಹಿತಿ ನೀಡಿರಲಿಲ್ಲ ಎಂದು ಸಚಿವರು ಹೇಳಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಭ್ರಷ್ಟಾಚಾರದ ಗಂಭೀರ ಪ್ರಕರಣ ಇದಾಗಿರುವುದರಿಂದ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ನ್ಯಾಯಸಮ್ಮತ ತನಿಖೆಗೆ ಅನುವು ಮಾಡಿಕೊಡಬೇಕು. ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಗುತ್ತಿಗೆದಾರ ರೊಬ್ಬರು ಸಾವಿಗೆ ಮುನ್ನ ಬರೆದಿಟ್ಟ ಪತ್ರದಲ್ಲಿ ಅಂದಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರಾಗಿದ್ದ ಕೆ.ಎಸ್‌. ಈಶ್ವರಪ್ಪ ಅವರನ್ನು ಹೆಸರಿಸಿದ್ದರು. ಈಶ್ವರಪ್ಪ ಆಗ ರಾಜೀನಾಮೆ ಸಲ್ಲಿಸಿದ್ದರು. ನಿಗಮ ಹಾಗೂ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಅಧಿಕಾರಿಗಳು ಒಟ್ಟಾಗಿಯೇ ಈ ಅವ್ಯವಹಾರದಲ್ಲಿ ಪಾಲ್ಗೊಂಡ ಅನುಮಾನಗಳು ಬಲವಾಗಿವೆ. ಒಂದೆಡೆ, ವಾಲ್ಮೀಕಿ ಸಮುದಾಯದವರು ಸೌಲಭ್ಯಗಳಿಗಾಗಿ ಕಾತರಿಸಿ ಕುಳಿತಿದ್ದರೂ ಅವರಿಗಾಗಿ ಖರ್ಚು ಮಾಡಲು ನಿಗಮದ ಬಳಿಯಿದ್ದ ಹಣ ಹೀಗೆ ಅನ್ಯ ಖಾತೆಗಳ ಪಾಲಾಗಿರುವುದು ಸರ್ಕಾರದ ಹಣವನ್ನು ಹೇಗೆ ಸೂರೆ ಹೊಡೆಯಲಾಗುತ್ತದೆ ಎಂಬುದಕ್ಕೆ ನಿದರ್ಶನ. ಭ್ರಷ್ಟಾಚಾರದಂತಹ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣ ತುಂಬಾ ಕಡಿಮೆ. ಹೀಗಾಗಿ ಅಧಿಕಾರಿಗಳು ಹೀಗೆ ಜನರ ದುಡ್ಡಿಗೆ ನಿರ್ಲಜ್ಜೆಯಿಂದ ಕೈಹಾಕುವ ಧೈರ್ಯ ಪ್ರದರ್ಶಿಸುತ್ತಿದ್ದಾರೆ. ನಿಜವಾದ ತಪ್ಪಿತಸ್ಥರು ಯಾರು ಹಾಗೂ ಹಣ ವರ್ಗಾವಣೆಯಿಂದ ಲಾಭ ಪಡೆದವರು ಯಾರು ಎನ್ನುವುದನ್ನು ಸಿಐಡಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಪತ್ತೆ ಹಚ್ಚಬೇಕು. ನಿಗಮದ ಖಾತೆಯಿಂದ ಅಕ್ರಮವಾಗಿ ವರ್ಗವಾದ ಪ್ರತಿ ಪೈಸೆಯೂ ನಿಗಮಕ್ಕೆ ವಾಪಸ್‌ ಆಗುವಂತೆ ಸರ್ಕಾರ ನೋಡಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT