ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಂತಿಗಳ ಉಸಾಬರಿ ಸರ್ಕಾರಕ್ಕೆ ಏಕೆ ಬೇಕು?

Last Updated 2 ಜನವರಿ 2020, 22:16 IST
ಅಕ್ಷರ ಗಾತ್ರ

ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನವನ್ನು ಸರ್ಕಾರದ ವತಿಯಿಂದಲೇ ಆಚರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದಾರೆ. ‘ಸರ್ಕಾರದ ವತಿಯಿಂದ ಜಕಣಾಚಾರಿ ಜಯಂತಿ ಆಚರಣೆಗೆ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದರೂ ಕನ್ನಡ ಮತ್ತು ಸಂಸ್ಕೃತಿ ಸಚಿವರು ಈ ಪ್ರಸ್ತಾವಕ್ಕೆ ಸಹಿ ಹಾಕಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಪಿ.ನಂಜುಂಡಿ ಅವರು ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿಅಸಮಾಧಾನ ವ್ಯಕ್ತಪಡಿಸಿದ ಬಳಿಕ ಮುಖ್ಯಮಂತ್ರಿ ಹೀಗೆ ಹೇಳಿದ್ದಾರೆ.

ಪಕ್ಷದ ಶಾಸಕರ ಅಹವಾಲುಗಳನ್ನು ಆಲಿಸಿ ಸಮಾಧಾನಪಡಿಸುವುದು ಮುಖ್ಯಮಂತ್ರಿಯವರಕರ್ತವ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸಂಬಂಧಿಸಿದ ಖಾತೆಯ ಸಚಿವರು ಇಂತಹ ಜಯಂತಿ ಆಚರಣೆಗಳ ಕುರಿತು ಮರುಚಿಂತಿಸುವುದಕ್ಕೆ ಕಾರಣಗಳು ಏನಿರಬಹುದು ಎನ್ನುವ ಬಗ್ಗೆಯೂ ಮುಖ್ಯಮಂತ್ರಿ ಯೋಚಿಸಬೇಕಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಈಗಾಗಲೇ 25 ಮಹಾಪುರುಷರ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಇದರ ಜೊತೆಗೆ ಸಮಾಜ ಕಲ್ಯಾಣ ಮತ್ತಿತರ ಇಲಾಖೆಗಳೂ ವಿವಿಧ ಮಹಾಪುರುಷರ ಜಯಂತಿಯನ್ನು ಆಚರಿಸುತ್ತಿದ್ದು, ಸರ್ಕಾರಿ ಪ್ರಾಯೋಜಿತ ಜಯಂತಿಗಳ ಒಟ್ಟು ಸಂಖ್ಯೆ 30ರ ಆಸುಪಾಸಿನಲ್ಲಿದೆ.

ಸರ್ಕಾರದ ವತಿಯಿಂದ ಆಚರಿಸುತ್ತಿದ್ದ ಟಿಪ್ಪು ಸುಲ್ತಾನ್‌ ಜಯಂತಿಯನ್ನು ಮಾತ್ರ ಸರ್ಕಾರ ಕೈಬಿಟ್ಟಿದೆ. ಉಳಿದಂತೆ ಹಲವು ಮಹಾಪುರುಷರ ಜಯಂತಿಯನ್ನು ಸರ್ಕಾರವೇ ಮುಂದೆ ನಿಂತು ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲೇ ಸರ್ಕಾರಿ ಪ್ರಾಯೋಜಿತ ಜಯಂತಿಗಳ ಸ್ವರೂಪದ ಬಗ್ಗೆ ಪುನರ್ ಅವಲೋಕಿಸಿ, ಕೈಗೊಳ್ಳಬಹುದಾದ ಸುಧಾರಣಾ ಕ್ರಮಗಳ ಬಗ್ಗೆ ಸೂಕ್ತ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸೂಚನೆ ಹೋಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಪ್ರಾಯೋಜಿತ ಜಯಂತಿಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಮುಂದಾಗುವುದರಲ್ಲಿ ಅರ್ಥವಿಲ್ಲ.

ಯಾವುದೇ ಪಕ್ಷದ ನೇತೃತ್ವದ ಸರ್ಕಾರವಿರಲಿ, ಹೀಗೆ ಮಹಾಪುರುಷರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುವುದರ ಹಿಂದೆ, ಆಯಾ ಜಾತಿ– ಸಮುದಾಯದ ಮತದಾರರನ್ನು ಓಲೈಸುವ ರಾಜಕೀಯ ತಂತ್ರಗಾರಿಕೆ ಇದೆ ಎನ್ನುವುದು ಗುಟ್ಟಿನ ಸಂಗತಿಯೇನೂ ಅಲ್ಲ. ತಮ್ಮ ಜೀವಿತ ಕಾಲದಲ್ಲಿ ಇಡೀ ಸಮಾಜದ ಓರೆಕೋರೆಗಳನ್ನು ವಿರೋಧಿಸಿ, ಸಮಾಜದ ಒಟ್ಟಾರೆ ಸುಧಾರಣೆಗೆ ಶ್ರಮಿಸಿದ ಹಲವು ಮಹಾಪುರುಷರೂ ಇಂದು ಆಯಾ ಜಾತಿಗೆ ಸೀಮಿತ ಎಂಬಂತೆ ಭಾಸವಾಗುವುದಕ್ಕೆ ರಾಜಕೀಯ ಪಕ್ಷಗಳ ಇಂತಹ ಓಲೈಕೆಯೂ ಒಂದು ಮುಖ್ಯ ಕಾರಣ.

ಅದಕ್ಕೆ ಅನುಗುಣವಾಗಿ, ತಮ್ಮ ಜಾತಿಯ ಮಹಾಪುರುಷರ ಜಯಂತಿಯನ್ನು ಸರ್ಕಾರಿ ಖರ್ಚಿನಲ್ಲಿ ಆಚರಿಸದಿದ್ದರೆ ಅದು ತಮ್ಮ ಸಮುದಾಯಕ್ಕೆ ಬಗೆಯುವ ಅಪಚಾರ ಎನ್ನುವ ರೀತಿಯಲ್ಲಿ ಜಾತಿ ಸಂಘಟನೆಗಳೂ ವರ್ತಿಸುತ್ತಿವೆ. ಇದು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಇನ್ನೂ ಹತ್ತು–ಇಪ್ಪತ್ತು ಜಯಂತಿಗಳು ಸರ್ಕಾರಿ ಆಚರಣೆಯ ಪಟ್ಟಿಗೆ ಸೇರುವ ಸಂಭವ ಇಲ್ಲದೇ ಇಲ್ಲ. ಈಗ ಕೆಲವು ಜಯಂತಿಗಳಿಗಷ್ಟೇ ಸರ್ಕಾರಿ ರಜೆಯ ಸೌಲಭ್ಯವಿದೆ. ಅದನ್ನು ಇನ್ನಷ್ಟು ಜಯಂತಿಗಳಿಗೆ ವಿಸ್ತರಿಸುವುದಕ್ಕೂ ಒತ್ತಡ ಹೆಚ್ಚುತ್ತದೆ.

ಇಂತಹ ಸಂದಿಗ್ಧವನ್ನು ಸ್ವತಃ ಸರ್ಕಾರವೇ ತನ್ನ ಮೈಮೇಲೆ ಎಳೆದುಕೊಳ್ಳುವುದು ಆಡಳಿತಾತ್ಮಕವಾಗಿ ಮುತ್ಸದ್ದಿತನದ ನಿರ್ಧಾರವಲ್ಲ.ತಮಗೆ ಇಷ್ಟ ಬಂದ ಮಹಾಪುರುಷರ ಜಯಂತಿಯನ್ನು ಆಚರಿಸಲು ಎಲ್ಲ ಜಾತಿ, ಧರ್ಮಗಳವರೂ ಸ್ವತಂತ್ರರಿದ್ದಾರೆ. ಅಂತಹ ಸಂಘ– ಸಂಸ್ಥೆಗಳನ್ನು ಪ್ರೋತ್ಸಾಹಿಸುವ ಮನಸ್ಸಿದ್ದರೆ ಸರ್ಕಾರ ಅದಕ್ಕೆ ನೆರವಾಗುವುದೂ ತಪ್ಪಲ್ಲ. ಆದರೆ ಸರ್ಕಾರವೇ ಮುಂದೆ ನಿಂತು ಮಹಾಪುರುಷರ ಜಯಂತಿಯನ್ನು ಆಚರಿಸುವ ಅಗತ್ಯವೇನಿದೆ?

ಸಂಪನ್ಮೂಲ ಸಂಗ್ರಹದಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿರುವ ರಾಜ್ಯ ಸರ್ಕಾರವು ಜಯಂತಿಗಳಿಗಾಗಿ ಮಾಡುವ ವೆಚ್ಚವನ್ನು ಉತ್ಪಾದಕ ಯೋಜನೆಗಳಿಗೆ ಬಳಸಿಕೊಳ್ಳುವುದು ಒಳ್ಳೆಯದು.ಎಲ್ಲ ಜಾತಿ– ಧರ್ಮದವರಿಗೂ ಅನುಕೂಲವಾಗುವಂತಹ ಅತ್ಯುತ್ತಮ ರಸ್ತೆ, ಸುಸಜ್ಜಿತ ಆಸ್ಪತ್ರೆ, ಗುಣಮಟ್ಟದ ಶಿಕ್ಷಣ, ಕಡಿಮೆ ದರದಲ್ಲಿ ಪೌಷ್ಟಿಕ ಆಹಾರ ಒದಗಿಸುವಂತಹ ಕಾರ್ಯಕ್ರಮಗಳಿಗೆ ಸರ್ಕಾರದ ಹಣ ಖರ್ಚಾದರೆ ಅದರಿಂದ ಇಡೀ ಸಮಾಜಕ್ಕೆ ಒಳಿತಾಗುತ್ತದೆ.

ಗತಿಸಿಹೋದ ಮಹಾಪುರುಷರು ಬಯಸಿದ್ದು ಇಡೀ ಸಮಾಜದ ಒಳಿತನ್ನೇ ಹೊರತು, ಆಯಾ ಜಾತಿ– ಸಮುದಾಯದ ಓಲೈಕೆಯ ರಾಜಕಾರಣವನ್ನಲ್ಲ. ಸರ್ಕಾರವು ಜಯಂತಿಗಳ ಉಸಾಬರಿಯನ್ನು ಜನರಿಗೆ ಬಿಟ್ಟು, ಮೂಲಸೌಕರ್ಯಗಳ ವಿಸ್ತರಣೆ ಮತ್ತು ಉದ್ಯೋಗ ಸೃಷ್ಟಿಯತ್ತ ಗಮನಹರಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT