ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತ್ವರಿತ ಸ್ಪಂದನ ಅಗತ್ಯ

ಟ್ಯಾಂಕರ್‌ ಮಾಫಿಯಾ ಜನರನ್ನು ಸುಲಿಗೆ ಮಾಡದಂತೆ ನಿಗಾ ವಹಿಸಬೇಕು. ನೀರಿನ ಮಿತಬಳಕೆ ಕುರಿತು ಜನಜಾಗೃತಿ ಮೂಡಿಸಬೇಕು
Published 9 ಮಾರ್ಚ್ 2024, 1:05 IST
Last Updated 9 ಮಾರ್ಚ್ 2024, 1:05 IST
ಅಕ್ಷರ ಗಾತ್ರ

ಬರದ ಬವಣೆಯಿಂದ ತತ್ತರಿಸಿರುವ ರಾಜ್ಯವನ್ನು ಕುಡಿಯುವ ನೀರಿನ ಸಮಸ್ಯೆ ಬಾಧಿಸತೊಡಗಿದೆ. ಬೇಸಿಗೆಯ ಧಗೆಯಿಂದಾಗಿ ತಾಪಮಾನದಲ್ಲಿ ಭಾರಿ ಏರಿಕೆಯಾಗಿದೆ. ಕರಾವಳಿ, ಮಲೆನಾಡು, ಬಯಲುಸೀಮೆ ಸೇರಿದಂತೆ ರಾಜ್ಯದ ಎಲ್ಲ ಭಾಗಗಳಲ್ಲೂ ಬಿಸಿಲಿನ ಝಳಕ್ಕೆ ನಾಗರಿಕರು ತತ್ತರಿಸಿ
ಹೋಗಿದ್ದಾರೆ. ಹಗಲಿನ ಬಹುತೇಕ ಅವಧಿಯಲ್ಲಿ ಜನ ಮನೆಗಳಿಂದ ಹೊರ ಬರಲಾಗದಂತಹ ಸ್ಥಿತಿ ಇದೆ. ರಾಜ್ಯದ ಬಹುತೇಕ ಜಲಮೂಲಗಳು ಬತ್ತಿಹೋಗಿವೆ. ಜಲಾಶಯಗಳಲ್ಲಿ ನೀರಿನ ಸಂಗ್ರಹ ತಳಮಟ್ಟಕ್ಕೆ ಇಳಿದಿದೆ. ಹಲವು ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟದಲ್ಲೂ ದಿಢೀರ್‌ ಕುಸಿತವಾಗಿದ್ದು, ಕೊಳವೆಬಾವಿ
ಗಳಿಂದಲೂ ನೀರೆತ್ತಲು ಸಾಧ್ಯವಾಗುತ್ತಿಲ್ಲ. ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರಿದ್ದ 110 ಹಳ್ಳಿಗಳೂ ಸೇರಿದಂತೆ ಬೆಂಗಳೂರು ನಗರದ ಬಹುಭಾಗಗಳಲ್ಲಿ ನೀರಿನ ಕೊರತೆ ಉಲ್ಬಣಿಸಿದೆ. ಕೆಲವು ಪ್ರದೇಶಗಳಲ್ಲಿ ವಾರಕ್ಕೊಮ್ಮೆಯೂ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಕುಡಿಯುವ ನೀರಿಗಾಗಿ ಜನ ಪಡಿಪಾಟಲು ಅನುಭವಿಸುತ್ತಿದ್ದಾರೆ. ಜನರಷ್ಟೇ ಅಲ್ಲ, ಜಾನುವಾರುಗಳೂ ನೀರಿನ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿವೆ. ವನ್ಯಜೀವಿಗಳೂ ದಾಹ ತೀರಿಸಿಕೊಳ್ಳಲು ಪರಿತಪಿಸುವಂತಹ ಪರಿಸ್ಥಿತಿ ಹಲವೆಡೆ ಸೃಷ್ಟಿಯಾಗಿದೆ. ವಾಡಿಕೆಯಂತೆ ಮಳೆಗಾಲ ಆರಂಭವಾಗಲು ಇನ್ನೂ ಸುಮಾರು ಮೂರು ತಿಂಗಳು ಬಾಕಿ ಇದ್ದು, ಇದೇ ಸ್ಥಿತಿ ಮುಂದುವರಿದರೆ ರಾಜ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು. ಹಲವು ವರ್ಷಗಳಿಂದಲೂ ರಾಜ್ಯವು ಬೇಸಿಗೆಯ ಅವಧಿಯಲ್ಲಿ ನೀರಿನ ಕೊರತೆ ಯಿಂದ ಸಂಕಷ್ಟ ಅನುಭವಿಸುತ್ತಿದೆ. ಆದರೆ, ನೀರಿನ ಸಮಸ್ಯೆಯು ಮಾರ್ಚ್‌ ತಿಂಗಳಲ್ಲೇ ರಾಜ್ಯದ ಬಹುಭಾಗವನ್ನು ಈ ಮಟ್ಟಿಗೆ ಆವರಿಸಿರುವುದು
ಜನಸಮುದಾಯಗಳನ್ನು ಚಿಂತೆಗೆ ದೂಡಿದೆ.

ರಾಜ್ಯದ 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕು ಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. 194 ತಾಲ್ಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಿಗಿದೆ. ಕಂದಾಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ರಾಜ್ಯದ 98 ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಕೊರತೆ ತೀವ್ರವಾಗಿದೆ. ಈ ಬೇಸಿಗೆಯ ಅವಧಿಯಲ್ಲಿ ಒಟ್ಟು 7,408 ಹಳ್ಳಿಗಳಲ್ಲಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ 1,115 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಬಹುದು ಎಂಬ ಅಂದಾಜು ವರದಿಯೂ ರಾಜ್ಯ ಸರ್ಕಾರದ ಮುಂದಿದೆ. ಇವು ರಾಜ್ಯವು ಈ ಬಾರಿ ಎದುರಿಸುತ್ತಿರುವ ಕುಡಿಯುವ ನೀರಿನ ಕೊರತೆಯ ತೀವ್ರತೆಗೆ ಸಾಕ್ಷ್ಯ ಒದಗಿಸುತ್ತವೆ. ಮುಂಗಾರು ಆರಂಭಕ್ಕೂ ಮುನ್ನ ಬೇಸಿಗೆಯಲ್ಲಿ ಮಳೆ ಬೀಳದೇ ಇದ್ದರೆ ನೀರಿನ ಕೊರತೆ ಇನ್ನಷ್ಟು ಪ್ರದೇಶ
ಗಳನ್ನು ವ್ಯಾಪಿಸುವ ಸಾಧ್ಯತೆಯೂ ಇದೆ. ದೇಶದಲ್ಲೇ ಬಹುಬೇಗ ಬರಪೀಡಿತ ತಾಲ್ಲೂಕುಗಳ ಪಟ್ಟಿಯನ್ನು ಘೋಷಿಸಿದ್ದ ರಾಜ್ಯ ಸರ್ಕಾರ, ನೀರು ಮತ್ತು ಮೇವಿನ ಕೊರತೆ ಸೃಷ್ಟಿಯಾಗಬಹುದಾದ ಜನವಸತಿಗಳ ಪಟ್ಟಿ ಸಿದ್ಧಪಡಿಸುವ ಕೆಲಸವನ್ನೂ ಆರಂಭಿಸಿತ್ತು. ಅಂದಾಜು ವರದಿ ಈಗ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ವಿಭಾಗದ ಬಳಿ ಇದೆ. ಆದರೆ, ವರದಿ ಪಡೆದ ಮಾತ್ರಕ್ಕೆ ಸಮಸ್ಯೆ ಪರಿಹಾರವಾಯಿತು ಎಂದು ಭಾವಿಸಲಾಗದು. ತಾಲ್ಲೂಕು ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯ ಕಾರ್ಯಪಡೆಗಳು ಮತ್ತು ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರಗಳು ನಿರಂತರವಾಗಿ ಸಭೆಗಳನ್ನು ನಡೆಸಿವೆ. ಕುಡಿಯುವ ನೀರು ಮತ್ತು ಮೇವಿನ ಕೊರತೆಗೆ ಪರಿಹಾರ ಒದಗಿಸಲು ಜಿಲ್ಲಾಧಿಕಾರಿಗಳ ವೈಯಕ್ತಿಕ ಠೇವಣಿ (ಪಿ.ಡಿ) ಖಾತೆಗಳಲ್ಲಿ
₹ 854 ಕೋಟಿ ಲಭ್ಯವಿದೆ ಎಂದೂ ಸರ್ಕಾರ ಹೇಳಿದೆ. ಇಷ್ಟಾಗಿಯೂ ಕುಡಿಯುವ ನೀರಿನ ಕೊರತೆ
ಉಲ್ಬಣಿಸತೊಡಗಿದೆ. ಸಮಸ್ಯೆ ಎದುರಿಸಲು ವ್ಯವಸ್ಥಿತ ಕಾರ್ಯತಂತ್ರ ರೂಪಿಸುವಲ್ಲಿ ಮತ್ತು ಅದನ್ನು
ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಆಡಳಿತ ವ್ಯವಸ್ಥೆ ಎಡವಿರುವುದನ್ನು ಇದು ಸೂಚಿಸುತ್ತದೆ.

ಕುಡಿಯುವ ನೀರಿನ ಕೊರತೆ ಕಾಡುತ್ತಿರುವ ಈ ಹೊತ್ತಿನಲ್ಲೇ ಲೋಕಸಭಾ ಚುನಾವಣೆಯೂ ಹೊಸಿಲಲ್ಲಿ ನಿಂತಿದೆ. ರಾಜ್ಯದ ಆಡಳಿತ ವ್ಯವಸ್ಥೆ ಈಗಾಗಲೇ ಚುನಾವಣಾ ತಯಾರಿಯಲ್ಲಿ ಸಕ್ರಿಯವಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಆಡಳಿತಯಂತ್ರವು ಸಂಪೂರ್ಣವಾಗಿ ತೊಡಗಿಕೊಳ್ಳಲೇಬೇಕು. ಆದರೆ, ಚುನಾವಣೆಯ ಕಾರಣಕ್ಕಾಗಿ, ಕುಡಿಯುವ ನೀರಿನ ಕೊರತೆಗೆ ಪರಿಹಾರ ಒದಗಿಸುವ ಹೊಣೆಗಾರಿಕೆಯನ್ನು ನಿಭಾಯಿಸುವುದರಿಂದ ತಪ್ಪಿಸಿಕೊಳ್ಳಲಾಗದು.  ನೀರಿನ ಬವಣೆಯಿಂದ ರಾಜ್ಯದ ಜನ ಮತ್ತು ಜಾನುವಾರುಗಳನ್ನು ಪಾರು ಮಾಡಲು ರಾಜ್ಯ ಸರ್ಕಾರ ತಕ್ಷಣದಿಂದಲೇ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಬೇಕು. ನೀರು ಲಭ್ಯವಿರುವ ಜಲಮೂಲಗಳನ್ನು ಗುರುತಿಸಿ, ಕೊರತೆ ಇರುವ ಪ್ರದೇಶಗಳಲ್ಲಿ ಪೂರೈಕೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕು. ಟ್ಯಾಂಕರ್‌ ಮಾಫಿಯಾದವರು ಜನರನ್ನು ಸುಲಿಗೆ ಮಾಡದಂತೆ ನಿಗಾ ವಹಿಸಬೇಕು. ಜತೆಯಲ್ಲೇ ನೀರಿನ ಮಿತಬಳಕೆ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನೂ ಆರಂಭಿಸಬೇಕು. ರಾಜ್ಯದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ಹಲವು ಯೋಜನೆಗಳು ಅನುಷ್ಠಾನಕ್ಕೆ ಬಂದಿದ್ದರೂ, ಪರಿಹಾರ ಮರೀಚಿಕೆಯಾಗಿಯೇ ಉಳಿದಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಜಲ ಜೀವನ್‌ ಮಿಷನ್‌ ಯೋಜನೆ ಪ್ರಗತಿಯಲ್ಲಿದೆ. ಈ ಅವಧಿಯಲ್ಲಿ ಸಮಸ್ಯೆ ಎದುರಿಸಲು ಅದರಿಂದ ಹೆಚ್ಚೇನೂ ಅನುಕೂಲ ಆಗುವುದಿಲ್ಲ. ತಕ್ಷಣದ ಆದ್ಯತೆಗಳಿಗೆ ಸ್ಪಂದಿಸುವುದರ ಜತೆಗೇ ಭವಿಷ್ಯದ ದಿನಗಳಲ್ಲಿ ಕುಡಿಯುವ ನೀರಿನ ಕೊರತೆಗೆ ಶಾಶ್ವತ ಪರಿಹಾರ ಒದಗಿಸುವ ದಿಸೆಯಲ್ಲಿ ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರುವ ಬದ್ಧತೆಯನ್ನು ರಾಜ್ಯ ಸರ್ಕಾರ ತೋರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT