ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕಾಂಗ್ರೆಸ್ ಖಾತೆಗಳ ಸ್ಥಗಿತ– ಜನತಂತ್ರದ ಉಸಿರುಗಟ್ಟಿಸುವ ಕೆಲಸ

ಸಂಪಾದಕೀಯ
Published 18 ಫೆಬ್ರುವರಿ 2024, 19:33 IST
Last Updated 18 ಫೆಬ್ರುವರಿ 2024, 19:33 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಯು ಸಮೀಪಿಸುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್ ಪಕ್ಷವು ಹಣಕಾಸಿನ ಗಂಭೀರ ಸವಾಲೊಂದನ್ನು ಎದುರಿಸಬೇಕಾದ ಭೀತಿಗೆ ಸಿಲುಕಿದೆ. ಈ ಸವಾಲು ಪಕ್ಷದ ಚುನಾವಣಾ ಅಭಿಯಾನಗಳ ಮೇಲೆ ಮಾತ್ರವೇ ಅಲ್ಲದೆ ಪಕ್ಷದ ದಿನನಿತ್ಯದ ಕೆಲಸಗಳ ಮೇಲೆಯೂ ಪರಿಣಾಮ ಉಂಟು
ಮಾಡುವಂಥದ್ದು. ಆದಾಯ ತೆರಿಗೆ ಇಲಾಖೆಯು ತನ್ನ ಮುಖ್ಯ ಬ್ಯಾಂಕ್ ಖಾತೆಗಳನ್ನು ಸ್ಥಗಿತ
ಗೊಳಿಸಿದೆ ಎಂದು ಕಾಂಗ್ರೆಸ್ ಹೇಳಿದೆ. ಇದರ ಪರಿಣಾಮವಾಗಿ ತನ್ನ ಸಿಬ್ಬಂದಿಗೆ ವೇತನ ನೀಡುವುದಕ್ಕೂ ಸಾಧ್ಯವಾಗದಂತೆ ಆಗಿದೆ ಎಂದು ಪಕ್ಷ ಹೇಳಿದೆ. 2018–19ನೇ ಸಾಲಿನ ಆದಾಯ ತೆರಿಗೆ ವಿವರಗಳನ್ನು ತಡವಾಗಿ ಸಲ್ಲಿಸಿದ್ದಕ್ಕಾಗಿ ಈ ಉಗ್ರ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಪಕ್ಷವು ಕ್ರೌಡ್‌ಫಂಡಿಂಗ್ ಯೋಜನೆಯ ಮೂಲಕ ಸಂಗ್ರಹಿಸಿದ ಹಣ ಇದ್ದ ಖಾತೆಯನ್ನು ಕೂಡ ಸ್ಥಗಿತಗೊಳಿಸ
ಲಾಗಿದೆ. ಇಲಾಖೆಯ ಕ್ರಮವನ್ನು ಪ್ರಶ್ನಿಸಿ ಪಕ್ಷವು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ (ಐಟಿಎಟಿ) ಮೊರೆ ಹೋಗಿದೆ. ನ್ಯಾಯಮಂಡಳಿಯು ಪಕ್ಷಕ್ಕೆ ಸದ್ಯಕ್ಕೆ ಈ ಖಾತೆಗಳಲ್ಲಿ ವಹಿವಾಟು ನಡೆಸುವುದಕ್ಕೆ ಅವಕಾಶ ಕಲ್ಪಿಸಿದೆ. ಆದರೆ, ಮುಂದಿನ ವಾರ ಪ್ರಕರಣದ ವಿಚಾರಣೆ ನಡೆಯುವವರೆಗೆ ಖಾತೆಗಳಲ್ಲಿ ಒಟ್ಟು ₹115 ಕೋಟಿಯನ್ನು ಹಾಗೆಯೇ ಇರಿಸಬೇಕು ಎಂಬ ಷರತ್ತನ್ನು ವಿಧಿಸಿದೆ. ₹115 ಕೋಟಿಗಿಂತ ಹೆಚ್ಚುವರಿಯಾಗಿ ಇರುವ ಮೊತ್ತವನ್ನು ಮಾತ್ರ ವೆಚ್ಚ ಮಾಡಲು ಪಕ್ಷಕ್ಕೆ ಅವಕಾಶ ಇದೆ. ಆದರೆ ತನ್ನ ಚಾಲ್ತಿ ಖಾತೆಗಳಲ್ಲಿ ಅಷ್ಟೊಂದು ಮೊತ್ತ ಇಲ್ಲ ಎಂದು ಪಕ್ಷ ಹೇಳಿಕೊಂಡಿದೆ.

ಆದಾಯ ತೆರಿಗೆ ಇಲಾಖೆಯು ತನ್ನ ಕ್ರಮಕ್ಕೆ ನೀಡಿರುವ ಕಾರಣಗಳು ಕಪಟತನದಿಂದ ಕೂಡಿಲ್ಲ ಎಂದು ಅನ್ನಿಸುತ್ತಿಲ್ಲ. ಅಲ್ಲದೆ, ಖಾತೆಗಳನ್ನು ಸ್ಥಗಿತಗೊಳಿ ಸಿರುವುದು, ಆದಾಯ ತೆರಿಗೆಗೆ ಸಂಬಂಧಿಸಿದ ಕಾನೂನುಗಳ ಅಡಿಯಲ್ಲಿ ಜರುಗಿಸಿರುವ ಸಹಜ ಕ್ರಮದಂತೆ ಕಾಣುತ್ತಿಲ್ಲ. 2018–19ನೇ ವರ್ಷವು ಚುನಾವಣಾ ವರ್ಷವೂ ಆಗಿತ್ತು. ಆ ವರ್ಷಕ್ಕೆ ಸಂಬಂಧಿಸಿದಂತೆ ಪಕ್ಷವು ಕೆಲವು ದಿನಗಳ ವಿಳಂಬದ ನಂತರ ಆದಾಯ ತೆರಿಗೆ ವಿವರ ಸಲ್ಲಿಸಿದೆ. ₹14.4 ಲಕ್ಷ ಪಡೆದಿದ್ದಕ್ಕೆ ಸಂಬಂಧಿಸಿದಂತೆ ಕೆಲವು ಲೋಪದೋಷಗಳು ಇದ್ದವು ಎನ್ನಲಾಗಿದೆ. ಆದರೆ ಆ ಮೊತ್ತವನ್ನು ಪಕ್ಷದ ಶಾಸಕರು ಮತ್ತು ಸಂಸದರು ನಗದು ರೂಪದಲ್ಲಿ ದೇಣಿಗೆಯಾಗಿ ನೀಡಿದ್ದರು ಎಂದು ಪಕ್ಷವು ತಿಳಿಸಿದೆ. ವಿವರ ಸಲ್ಲಿಸುವುದು ವಿಳಂಬವಾಗಿ ದ್ದಕ್ಕೆ ₹210 ಕೋಟಿ ದಂಡ ಪಾವತಿಸಬೇಕು ಎಂದು ಹೇಳಿರುವುದು ಆಗಿರುವ ತಪ್ಪಿಗೆ ವಿಪರೀತದ ಶಿಕ್ಷೆ
ಎಂಬಂತೆ ಕಾಣುತ್ತಿದೆ. ಇದಕ್ಕೆ ಯಾವ ನೆಲೆಯಲ್ಲಿಯೂ ಸಮರ್ಥನೆ ಇಲ್ಲ. 2019ರ ಏಪ್ರಿಲ್‌ನಲ್ಲಿ ಭೋಪಾಲ್‌ನಲ್ಲಿ ನಡೆದ ಆದಾಯ ತೆರಿಗೆ ಇಲಾಖೆಯ ದಾಳಿಗೆ ಸಂಬಂಧಿಸಿದಂತೆ ಪಕ್ಷದ ಕೆಲವು ನಾಯಕರಿಗೆ ನೋಟಿಸ್ ಜಾರಿಯಾಗಿದೆ ಎಂದು ಪಕ್ಷದ ಮಧ್ಯಪ್ರದೇಶ ಘಟಕವು ಕಳೆದ ವಾರ ಹೇಳಿದೆ. ಪಕ್ಷದ ಆ ನಾಯಕರನ್ನು ಇಲಾಖೆಯ ಸ್ಥಳೀಯ ಕಚೇರಿಗೆ ಬರಹೇಳುವ ಬದಲು ದೆಹಲಿಗೆ ಬರುವಂತೆ ಸೂಚಿಸಿರುವುದನ್ನು ಪಕ್ಷವು ಪ್ರಶ್ನಿಸಿದೆ. ಈ ಕ್ರಮವು ಪಕ್ಷವನ್ನು ಬೆದರಿಸುವ ಒಂದು ತಂತ್ರ ಎಂದು ದೂರಿದೆ.

ಚುನಾವಣೆ ಹತ್ತಿರವಾಗಿರುವಾಗ ಪಕ್ಷದ ಕೈಕಟ್ಟಿಹಾಕುವ ತಂತ್ರವಾಗಿ ಮಾತ್ರ ಈ ಕ್ರಮವನ್ನು ಕಾಣಬಹುದು. ಕಾಂಗ್ರೆಸ್ ಈ ದೇಶದ ಪ್ರಮುಖ ವಿರೋಧ ಪಕ್ಷ. ಚುನಾವಣೆ ಹೊಸಿಲಲ್ಲಿ ಇರುವಾಗ ಅದರ ಕೈಕಟ್ಟಿಹಾಕುವುದು ಪ್ರಜಾತಂತ್ರ ಪ್ರಕ್ರಿಯೆಯ ಅಪಹರಣಕ್ಕೆ ಸಮನಾದ ಕ್ರಮವಾಗುತ್ತದೆ. ಎನ್‌ಡಿಎ ಸರ್ಕಾರ ಜಾರಿಗೆ ತಂದಿದ್ದ ಚುನಾವಣಾ ಬಾಂಡ್ ಯೋಜನೆಯು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಮಾರನೆಯ ದಿನ ಆದಾಯ ತೆರಿಗೆ ಇಲಾಖೆ ಈ ಕ್ರಮ ಕೈಗೊಂಡಿದೆ ಎಂಬುದನ್ನು ಇಲ್ಲಿ ಗಮನಿಸಬೇಕು. ವಿರೋಧ ಪ‌ಕ್ಷವನ್ನು ಹಾಗೂ ಅದರ ನಾಯಕರನ್ನು ಕಿರುಕುಳಕ್ಕೆ ಗುರಿಪಡಿಸುವ, ಅವರನ್ನು ಬೆದರಿಸುವ ಕೇಂದ್ರೀಯ ತನಿಖಾ ಸಂಸ್ಥೆಗಳು, ಇಲಾಖೆಗಳ ಪ್ರಯತ್ನಗಳ ಭಾಗ ಎಂಬಂತೆ ಆದಾಯ ತೆರಿಗೆ ಇಲಾಖೆಯ ಕ್ರಮ ಕಾಣಿಸುತ್ತದೆ. ಈಗ ಜರುಗಿಸಿರುವ ಕ್ರಮವು ಚುನಾವಣೆಗೆ ಸಂಬಂಧಿಸಿದ ಕೆಲಸಗಳನ್ನು ಪಕ್ಷವು ಕೈಗೆತ್ತಿಕೊಳ್ಳುವುದರ ಮೇಲೆ ವಿಧಿಸಿರುವ ಪರೋಕ್ಷ ನಿರ್ಬಂಧದಂತೆ ಇದೆ. ವಿರೋಧ ಪಕ್ಷವು ಕುಸಿಯುವಂತೆ ಮಾಡಿ, ಅದರ ಅಂಗ ಊನಗೊಳಿಸಿ ನಂತರ ಚುನಾವಣೆ ನಡೆಸುವುದರಿಂದ ಪ್ರಜಾತಂತ್ರ ವ್ಯವಸ್ಥೆಯನ್ನೇ ನಿರಾಕರಿಸಿದಂತಾಗುತ್ತದೆ. ಆ ರೀತಿ ನಡೆಯುವ ಚುನಾವಣೆಯು ಪ್ರಹಸನದಂತೆ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT