ಬುಧವಾರ, ಜೂನ್ 29, 2022
24 °C

ಸಂಪಾದಕೀಯ| ಸುಪ್ರೀಂ ಕೋರ್ಟ್‌ನ ಎರಡು ತೀರ್ಪುಗಳು: ಪುನರ್‌ಪರಿಶೀಲನೆಯ ಜರೂರು

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಸುಪ್ರೀಂ ಕೋರ್ಟ್ ಈಚೆಗೆ ನೀಡಿರುವ ಎರಡು ತೀರ್ಪುಗಳು ಕಾನೂನಿನ ಆಶಯವನ್ನು, ಉದ್ದೇಶವನ್ನು ಉಲ್ಲಂಘಿಸಿವೆ. ಒಂದು ತೀರ್ಪು ಕೊಲೆ ಯತ್ನಕ್ಕೆ ಸಂಬಂಧಿಸಿದ್ದು, ಇನ್ನೊಂದು ತೀರ್ಪು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಗೆ (ಪೋಕ್ಸೊ) ಸಂಬಂಧಿಸಿದ್ದು. ವ್ಯಕ್ತಿಯೊಬ್ಬನ ಕೊಲೆಗೆ ಯತ್ನಿಸಿದ್ದ ಆರೋಪ ಸಾಬೀತಾಗಿ ಶಿಕ್ಷೆಗೆ ಗುರಿಯಾಗಿದ್ದವನನ್ನು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಹಿಮಾ ಕೊಹ್ಲಿ ಅವರಿದ್ದ ನ್ಯಾಯಪೀಠವು ಬಂಧಮುಕ್ತಗೊಳಿಸಿದೆ. ಬಂಧಮುಕ್ತ ಆದವನು, ಅಪರಾಧ ಎಸಗಿದ ನಂತರದಲ್ಲಿ ಸಂತ್ರಸ್ತನ ತಂಗಿಯನ್ನು ಮದುವೆಯಾಗಿದ್ದ. ಕುಟುಂಬದಲ್ಲಿ ಶಾಂತಿ ನೆಲೆಸುವಂತೆ ಮಾಡಲು, ದಂಪತಿ ಅನ್ಯೋನ್ಯವಾಗಿ ಜೀವನ ಸಾಗಿಸುವಂತೆ ಮಾಡಲು ಆತನನ್ನು ಬಂಧಮುಕ್ತ
ಗೊಳಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ. ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ, ಸೋದರ ಸೊಸೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾಗಿದ್ದ ವ್ಯಕ್ತಿಯನ್ನು ಇನ್ನೊಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಬಂಧಮುಕ್ತಗೊಳಿಸಿದೆ. ಈ ವ್ಯಕ್ತಿ ನಂತರದಲ್ಲಿ ಸಂತ್ರಸ್ತೆಯನ್ನು ಮದುವೆಯಾಗಿದ್ದ. ಈತನನ್ನು ಬಂಧಮುಕ್ತಗೊಳಿಸುವಾಗ ನ್ಯಾಯಮೂರ್ತಿಗಳಾದ ನಾಗೇಶ್ವರ ರಾವ್ ಮತ್ತು ಬಿ.ಆರ್. ಗವಾಯಿ ಅವರಿದ್ದ ವಿಭಾಗೀಯ ಪೀಠವು ತಮಿಳುನಾಡಿನಲ್ಲಿ ಸೋದರ ಸಂಬಂಧದಲ್ಲಿ ಮದುವೆ ಆಗುವ ಸಂಪ್ರದಾಯ ಇದೆ, ಮದುವೆಗೆ ಅಡ್ಡಿ ಉಂಟುಮಾಡಲು, ಸಂತಸಮಯ ಕೌಟುಂಬಿಕ ಜೀವನಕ್ಕೆ ತೊಂದರೆ ಕೊಡಲು ಬಯಸುವುದಿಲ್ಲ ಎಂಬ ಕಾರಣ ನೀಡಿದೆ. ಸಂವಿಧಾನದ 142ನೆಯ ವಿಧಿಯ ಅಡಿ ತನಗೆ ಇರುವ ಅಧಿಕಾರವನ್ನು ಬಳಸಿ ಕೋರ್ಟ್ ಈ ತೀರ್ಪುಗಳನ್ನು ನೀಡಿದೆ.

ಕಾನೂನಿನ ಅಡಿ ಅವಕಾಶವೇ ಇರಬಾರದಿದ್ದ ಅಂಶಗಳನ್ನು ಪರಿಗಣಿಸಿ ಈ ಎರಡೂ ತೀರ್ಪುಗಳನ್ನು ನೀಡಲಾಗಿದೆ. ತನ್ನ ಎದುರು ಇರುವ ಯಾವುದೇ ವಿಚಾರದಲ್ಲಿ ‘ಸಂಪೂರ್ಣ ನ್ಯಾಯ’ವನ್ನು ಒದಗಿಸಲು ಸಂವಿಧಾನದ 142ನೆಯ ವಿಧಿಯನ್ನು ಸುಪ್ರೀಂ ಕೋರ್ಟ್‌ ಆಧಾರವಾಗಿ ಬಳಸಿಕೊಳ್ಳಬೇಕು. ಆದರೆ, ಈ ಎರಡು ಪ್ರಕರಣಗಳಲ್ಲಿ ವಿವೇಚನಾ ಅಧಿಕಾರವನ್ನು ಬಳಸಿಕೊಂಡಿರುವ ರೀತಿಯು ನ್ಯಾಯವನ್ನು ದುರ್ಬಲ
ಗೊಳಿಸಿದೆ. ವ್ಯಕ್ತಿಯೊಬ್ಬ ಒಂದು ಪ್ರದೇಶದಲ್ಲಿ ವಾಸ ಮಾಡಲು ಶುರುಮಾಡಿದರೆ ಅಲ್ಲಿ ಶಾಂತಿ ನೆಲೆಸುತ್ತದೆ ಎಂದೋ, ಅಪರಾಧಿಯ ಜೊತೆ ಆತನ ಪತ್ನಿ ಸಂತಸದಿಂದ ಇರಲು ಆಗುತ್ತದೆ ಎಂದೋ ಅಪರಾಧವೊಂದನ್ನು ಶಿಕ್ಷಿಸದೇ ಬಿಡಬಾರದು. ಶಿಕ್ಷಿಸದೇ ಬಿಟ್ಟರೆ, ಸಂತ್ರಸ್ತ ವ್ಯಕ್ತಿಯ ಕುಟುಂಬಕ್ಕೆ ಸೇರಿದವರನ್ನು ವಿವಾಹ ಆದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಸಂದೇಶ ರವಾನೆಯಾಗಬಹುದು. ತೀರ್ಪಿನಲ್ಲಿ ನೀಡಲಾಗಿರುವ ಕಾರಣಗಳು ತಪ್ಪು. ಅಲ್ಲದೆ, ಈ ತೀರ್ಪಿನಿಂದ ಆಗಬಹುದಾದ ಪರಿಣಾಮಗಳು ಕೂಡ ಒಳ್ಳೆಯದಾಗಿರಲಿಕ್ಕಿಲ್ಲ. ಈ ಪ್ರಕರಣಗಳಲ್ಲಿ ಕೆಲವು ವಿಶಿಷ್ಟವಾದ ಸಂದರ್ಭಗಳು ಇದ್ದವು ಎಂಬ ವಾದದಲ್ಲಿಯೂ ಹುರುಳಿಲ್ಲ. ಏಕೆಂದರೆ, ಇಂತಹ ಸಂದರ್ಭಗಳನ್ನು ಇತರ ಕೆಲವು ಪ್ರಕರಣಗಳಲ್ಲಿಯೂ ಗುರುತಿಸಿ, ಅವುಗಳ ದುರ್ಲಾಭ ಪಡೆದುಕೊಳ್ಳುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು.

ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಅಪರಾಧಿ ಎಂದು ಘೋಷಿತನಾದ ವ್ಯಕ್ತಿಯನ್ನು ದೋಷಮುಕ್ತ
ಗೊಳಿಸಿದ ಎರಡನೆಯ ‍ಪ್ರಕರಣದ ತೀರ್ಪು ಕೂಡ ಪ್ರಶ್ನಾರ್ಹ. ಅತ್ಯಾಚಾರ ಎಂಬುದು ಬಹಳ ಹೇಯವಾದ ಅಪರಾಧ. ಸಂತ್ರಸ್ತೆಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗಿದ್ದರೆ, ಶಿಕ್ಷೆಯು ಹೆಚ್ಚು ಕಠಿಣವಾಗಿರಬೇಕು. ಆದರೆ, ಈ ‍ಪ್ರಕರಣದಲ್ಲಿ ಅಪರಾಧಿಯನ್ನು ನ್ಯಾಯಾಲಯವು ಬಂಧಮುಕ್ತಗೊಳಿಸಿ, ಪ್ರಶ್ನೆಗಳನ್ನು ಮೂಡಿಸಿದೆ. ಈ ಪ್ರಕರಣದಲ್ಲಿನ ತೀರ್ಪು ಮುಂದೆ ಬೇರೆ ಪ್ರಕರಣಗಳಲ್ಲಿನ ಆದೇಶ, ತೀರ್ಪುಗಳಿಗೆ ಪೂರ್ವನಿದರ್ಶನವಾಗಿ ಬಳಕೆಯಾಗಬಾರದು ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ. ಹೀಗಿದ್ದರೂ, ಆಚರಣೆಗಳು, ಸಂಪ್ರದಾಯಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಯಾರಿಗೂ ಮಾರ್ಗವಾಗಬಾರದು. ಭಾರತದಲ್ಲಿ ಅಸಂಖ್ಯ ಆಚರಣೆಗಳು, ಸಂಪ್ರದಾಯಗಳು ಇವೆ. ಆದರೆ, ಕಾನೂನು ಅವೆಲ್ಲವುಗಳಿಗಿಂತ ಮಿಗಿಲು. ತ್ರಿವಳಿ ತಲಾಖ್ ಹಾಗೂ ಬಾಲ್ಯವಿವಾಹ ಬಹಳ ಹಳೆಯ ಆಚರಣೆಗಳು. ಹೀಗಿದ್ದರೂ, ಅವು ಕಾನೂನುಬದ್ಧ ಅಲ್ಲ. ಅತ್ಯಾಚಾರ ಎಸಗಿದ ವ್ಯಕ್ತಿ, ಸಂತ್ರಸ್ತೆಯ ನಡುವಿನ ವಿವಾಹ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಈ ಹಿಂದೆ ಕಟು ಟೀಕೆ ಮಾಡಿದ್ದಿದೆ. ಆದರೆ, ಈ ತೀರ್ಪು ಅಂತಹ ಟೀಕೆಗಳಿಗೆ ವ್ಯತಿರಿಕ್ತವಾಗಿ ಇದೆ. ಈ ಎರಡು ತೀರ್ಪುಗಳನ್ನು ಪುನರ್‌ಪರಿಶೀಲನೆಗೆ ಒಳಪಡಿಸಬೇಕು. ಕೆಟ್ಟ ಆಚರಣೆಗಳಿಗೆ ವಿರುದ್ಧವಾಗಿ, ಕಾನೂನನ್ನು ಎತ್ತಿ ಹಿಡಿಯುವ ಕೆಲಸ ಆಗಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು