ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಈ ವರ್ಷ ವಿಜ್ಞಾನ ಕಾಂಗ್ರೆಸ್‌ ನಡೆಯದಿರಲು ಸರ್ಕಾರದ ಅಸಹಕಾರವೇ ಕಾರಣ!

ಪ್ರತಿವರ್ಷ ಜನವರಿ ಮೊದಲ ವಾರದಲ್ಲಿ ಆಯೋಜನೆಗೊಳ್ಳುತ್ತಿದ್ದ ವಿಜ್ಞಾನ ಕಾಂಗ್ರೆಸ್‌ ಈ ವರ್ಷ ನಡೆದಿಲ್ಲ.
Published 7 ಜನವರಿ 2024, 19:04 IST
Last Updated 7 ಜನವರಿ 2024, 19:04 IST
ಅಕ್ಷರ ಗಾತ್ರ

ಪ್ರತಿವರ್ಷ ಜನವರಿ ಮೊದಲ ವಾರದಲ್ಲಿ ಆಯೋಜನೆಗೊಳ್ಳುತ್ತಿದ್ದ ವಿಜ್ಞಾನ ಕಾಂಗ್ರೆಸ್‌ ಈ ವರ್ಷ ನಡೆದಿಲ್ಲ. ಮುಂದಿನ ದಿನಗಳಲ್ಲಿ ಅದು ನಡೆಯಲಿದೆಯೇ ಎಂಬುದರ ಬಗ್ಗೆಯೂ ಖಚಿತತೆ ಇಲ್ಲ. ಕೋವಿಡ್‌ ಸಾಂಕ್ರಾಮಿಕದ ಸಂದರ್ಭವನ್ನು ಬಿಟ್ಟು, ಶತಮಾನಕ್ಕೂ ಹೆಚ್ಚಿನ ಕಾಲದಿಂದ ಈ ವಿಜ್ಞಾನ ಕಾರ್ಯಕ್ರಮ ನಿರಂತರವಾಗಿ ನಡೆದುಕೊಂಡು ಬಂದಿದೆ. ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇದು ದೇಶದಲ್ಲಿ ನಡೆಯುತ್ತಿದ್ದ ಅತ್ಯಂತ ಮಹತ್ವದ ಕಾರ್ಯಕ್ರಮ. ಸ್ವಾತಂತ್ರ್ಯಾನಂತರ, ಪ್ರಧಾನಮಂತ್ರಿಯವರೇ ಈ ಕಾರ್ಯಕ್ರಮವನ್ನು ಉದ್ಘಾಟಿಸುವುದು ಒಂದು ಪದ್ಧತಿಯೇ ಆಗಿತ್ತು. ಹಾಗಾಗಿಯೇ ಇದು ರಾಷ್ಟ್ರೀಯ ಮಹತ್ವದ ಕಾರ್ಯಕ್ರಮ ಎಂದು ಪರಿಗಣಿತವಾಗಿತ್ತು. ದೇಶದ ಪ್ರಗತಿ ಮತ್ತು ಅಭಿವೃದ್ಧಿಗಾಗಿ ವಿಜ್ಞಾನಕ್ಕೆ ಮಹತ್ವ ನೀಡಬೇಕು ಎಂದು ರಾಜಕೀಯ ನಾಯಕರು ಭಾವಿಸಿದ್ದರ ಸಂಕೇತವಾಗಿಯೂ ಇದು ಇತ್ತು. ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ವಿಜ್ಞಾನ ಮತ್ತು ವೈಜ್ಞಾನಿಕ ಸ್ಫೂರ್ತಿಗೆ ಪ್ರೋತ್ಸಾಹ ನೀಡುವ ವೇದಿಕೆಯಾಗಿ ಈ ಕಾರ್ಯಕ್ರಮವನ್ನು ಪರಿಗಣಿಸಿದ್ದರು. ದೇಶದ ಉನ್ನತ ವಿಜ್ಞಾನಿಗಳು, ವಿಜ್ಞಾನ ಸಂಸ್ಥೆಗಳು ಮತ್ತು ಸಂಘಟನೆಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಎಲ್ಲ ಹಂತಗಳ ವಿಜ್ಞಾನಿಗಳು ಮತ್ತು ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರಿಗೆ ಪರಸ್ಪರ ಭೇಟಿಯಾಗಲು, ಸಂವಾದ ನಡೆಸಲು ಇದೊಂದು ಅವಕಾಶವನ್ನು ಸೃಷ್ಟಿಸಿಕೊಡುತ್ತಿತ್ತು. ವಿಜ್ಞಾನ ಪ್ರಬಂಧಗಳ ಕುರಿತು ಉಪಯುಕ್ತ ಮತ್ತು ಮಾಹಿತಿಯುಕ್ತ ಚರ್ಚೆಗಳು ಹಾಗೂ ಪ್ರದರ್ಶನಗಳು ನಡೆಯುತ್ತಿದ್ದವು. ಕಳೆದ ವರ್ಷಗಳಲ್ಲಿ ಈ ವಿಜ್ಞಾನ ಕಾಂಗ್ರೆಸ್‌ ಅನ್ನು ಸಣ್ಣ ಪಟ್ಟಣಗಳು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಡೆಸಲಾಗಿದೆ. 

ಆದರೆ, ಇತ್ತೀಚಿನ ವರ್ಷಗಳಲ್ಲಿ ವಿಜ್ಞಾನ ಕಾಂಗ್ರೆಸ್‌ ತನ್ನ ಮೌಲ್ಯ ಮತ್ತು ಪ್ರಸಿದ್ಧಿಯನ್ನು ಕಳೆದುಕೊಂಡಿದೆ. ಪ್ರಮುಖ ವಿಜ್ಞಾನಿಗಳಲ್ಲಿ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ನಿಲ್ಲಿಸಿದ್ದಾರೆ. ಹಲವು ಸಂಸ್ಥೆಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಸಕ್ತಿ ತೋರುತ್ತಿಲ್ಲ. ಮಂಡನೆಯಾಗುವ ಪ್ರಬಂಧಗಳ ಗುಣಮಟ್ಟ, ಚರ್ಚೆಯ ಮಟ್ಟ ಎಲ್ಲವೂ ಕುಸಿದಿವೆ. ಮಂಡನೆಯಾದ ಪ್ರಬಂಧಗಳ ವಿಷಯಗಳ ಕುರಿತು ವಿವಾದಗಳು ಉಂಟಾಗಿವೆ. ಕಾರ್ಯಕ್ರಮಕ್ಕೆ ಆರ್ಥಿಕ ನೆರವು ನೀಡಲು ಸರ್ಕಾರವು ನಿರಾಕರಿಸಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ. ಇಂಡಿಯನ್‌ ಸೈನ್ಸ್‌ ಕಾಂಗ್ರೆಸ್‌ ಅಸೋಸಿಯೇಷನ್‌ (ಐಎಸ್‌ಸಿಎ) ಎಂಬ ಖಾಸಗಿ ಸಂಸ್ಥೆಯು ಸರ್ಕಾರದ ನೆರವಿನೊಂದಿಗೆ ಕಾರ್ಯಕ್ರಮವನ್ನು ಆಯೋಜಿಸುತ್ತಿತ್ತು. ಐಎಸ್‌ಸಿಎ ಹಣಕಾಸಿನ ವಿಚಾರದಲ್ಲಿ ಅವ್ಯವಹಾರ ನಡೆಸಿದೆ ಮತ್ತು ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಎಂಬ ಆರೋಪಗಳಿವೆ ಎಂದು ಸರ್ಕಾರ ಹೇಳಿದೆ. ಇದೇ ಕಾರಣ ಕೊಟ್ಟು ಆರ್ಥಿಕ ನೆರವು ನೀಡಲು ಸರ್ಕಾರವು ನಿರಾಕರಿಸಿದೆ. ಈ ‌ವರ್ಷದ ವಿಜ್ಞಾನ ಕಾಂಗ್ರೆಸ್‌ನ ಸ್ಥಳವನ್ನು ಲಖನೌ ವಿಶ್ವವಿದ್ಯಾಲಯದಿಂದ ಜಲಂಧರ್‌ನ ಖಾಸಗಿ ವಿಶ್ವವಿದ್ಯಾಲಯವೊಂದಕ್ಕೆ ವರ್ಗಾಯಿಸಲಾಗಿದೆ. ಆದರೆ, ಅನಿರೀಕ್ಷಿತ ಸವಾಲುಗಳ ಕಾರಣದಿಂದಾಗಿ ಕಾರ್ಯಕ್ರಮ ನಡೆಸಲಾಗದು ಎಂದು ಈ ವಿಶ್ವವಿದ್ಯಾಲಯ ಕೂಡ ಈಗ ಹೇಳಿದೆ. ಕಾರ್ಯಕ್ರಮದ ಆತಿಥ್ಯ ವಹಿಸಲು ವಿಶ್ವವಿದ್ಯಾಲಯಗಳು ಮುಂದೆ ಬರಬೇಕು ಎಂದು ಐಎಸ್‌ಸಿಎ ಕೋರಿದೆ. ಸಾಧ್ಯವಾದರೆ ಫೆಬ್ರುವರಿಯಲ್ಲಿ ಕಾರ್ಯಕ್ರಮ ನಡೆಸಬಹುದು ಎಂದಿದೆ. 

ವಿಜ್ಞಾನ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿರುವ ಸರ್ಕಾರವು ಬೇರೊಂದು ವಿಜ್ಞಾನ ಸಮಾವೇಶಕ್ಕೆ ಪ್ರೋತ್ಸಾಹ ನೀಡುತ್ತಿದೆ. ‘ವಿಜ್ಞಾನ ಭಾರತಿ’ಯ ಸಹಯೋಗದಲ್ಲಿ ನಡೆಸಲಾಗುವ ಇಂಡಿಯಾ–ಇಂಟರ್‌ನ್ಯಾಷನಲ್‌ ಸೈನ್ಸ್‌ ಫೆಸ್ಟಿವಲ್‌ಗೆ ಸರ್ಕಾರ ನೆರವು ನೀಡುತ್ತಿದೆ. ವಿಜ್ಞಾನ ಭಾರತಿಯು ಸಂಘ ಪರಿವಾರದ ಜೊತೆ ನಂಟು ಇರುವ ಸಂಸ್ಥೆಯಾಗಿದೆ. ಈ ಸಂಸ್ಥೆಯ ವಾರ್ಷಿಕ ಸಭೆಯು ಹರಿಯಾಣದ ಫರೀದಾಬಾದ್‌ನಲ್ಲಿ ಈ ತಿಂಗಳು ನಡೆಯಲಿದೆ. ಈ ಸಂಸ್ಥೆಯು ನಡೆಸುವ ಕಾರ್ಯಕ್ರಮವನ್ನು ವಿಜ್ಞಾನ ಕಾಂಗ್ರೆಸ್‌ಗೆ ಪರ್ಯಾಯ ಎಂದು ಬಿಂಬಿಸಲು ಸರ್ಕಾರ ಯತ್ನಿಸುತ್ತಿದೆ. ವಿಜ್ಞಾನ ಕಾಂಗ್ರೆಸ್‌ನ ಕಾರ್ಯಚಟುವಟಿಕೆ ಕುರಿತು ಸರ್ಕಾರಕ್ಕೆ ಅಸಮಾಧಾನ ಇದ್ದಿದ್ದರೆ ಅದನ್ನು ಸರಿಪಡಿಸುವ ಕೆಲಸವನ್ನು ಮಾಡಬಹುದಿತ್ತು. ಅದರ ಬದಲಿಗೆ, ವಿಜ್ಞಾನ ಕಾಂಗ್ರೆಸ್‌ನ ಕತ್ತು ಹಿಸುಕುವ ಕೆಲಸ ಮಾಡಬಾರದಿತ್ತು. ವಿಜ್ಞಾನ ಕಾಂಗ್ರೆಸ್‌ಗೆ ಇದ್ದ ಪ್ರಸಿದ್ಧಿಯನ್ನು ಸತತ ಪ್ರಯತ್ನಗಳ ಮೂಲಕ ಮರಳಿ ತರಬಹುದಿತ್ತು. ಪ್ರತಿಸ್ಪರ್ಧಿ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುತ್ತಿರುವುದಕ್ಕೆ ಸೈದ್ಧಾಂತಿಕ ಕಾರಣಗಳು ಇರಬಹುದು. ಆದರೆ, ವಿಜ್ಞಾನ ಮತ್ತು ರಾಜಕೀಯ ಸಿದ್ಧಾಂತದ ನಡುವೆ ಯಾವುದೇ ಸಂಬಂಧ ಇಲ್ಲ. ಇಂತಹ ನಡವಳಿಕೆಯು ವಿಜ್ಞಾನದ ಬೆಳವಣಿಗೆಗೆ ಮಾರಕ. ನೈಜವಾದ ವಿಜ್ಞಾನಕ್ಕೆ ಪ್ರೋತ್ಸಾಹ ನೀಡುವುದು ದೇಶಕ್ಕೆ ಅತ್ಯಗತ್ಯವಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT