ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಅತಿಶಾಖದ ಜೊತೆಗೆ ಕಾಳ್ಗಿಚ್ಚು: ನಿಸರ್ಗ ಸಂಕಟಕ್ಕೆ ಯಾರು ದಿಕ್ಕು?

Published 7 ಮೇ 2024, 0:18 IST
Last Updated 7 ಮೇ 2024, 0:18 IST
ಅಕ್ಷರ ಗಾತ್ರ

ಜನನಾಯಕರಿಂದ ಎಲ್ಲೆಲ್ಲೂ ಬೆಂಕಿಯುಗುಳುವ ಭಾಷಣಗಳು ಕೇಳಿಬರುತ್ತಿವೆಯೇ ವಿನಾ ನಿಸರ್ಗ ರಕ್ಷಣೆ, ಜನಸಾಮಾನ್ಯರ ಬದುಕಿಗೆ ಸಂಬಂಧಿಸಿದ ವಿಷಯಗಳು ಕತ್ತಲಲ್ಲೇ ಉಳಿದಂತಾಗಿವೆ.

ಭರತಖಂಡದ ಸಮತಟ್ಟಾದ ಪ್ರದೇಶಗಳೆಲ್ಲ ಅತಿಸೆಕೆಯಿಂದ ತತ್ತರಿಸುತ್ತಿರುವಾಗ ಶೀತಲ ಹಿಮಾಲಯದಲ್ಲಿ ಕಾಳ್ಗಿಚ್ಚಿನ ಪ್ರಕೋಪ ಹೆಚ್ಚುತ್ತಿದೆ. ಉತ್ತರಾಖಂಡದ ಹತ್ತಾರು ಅರಣ್ಯಗಳಲ್ಲಿ ಒಂದರ ಮೇಲೊಂದರಂತೆ ಬೆಂಕಿಯ ದುರಂತಗಳು ವರದಿಯಾಗುತ್ತಿವೆ. ಕಳೆದ ವಾರ ನೈನಿತಾಲ್‌ ಜಿಲ್ಲೆಯಲ್ಲಿ ಏಕಕಾಲಕ್ಕೆ 23 ತಾಣಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕಡಿದಾದ ದುರ್ಗಮ ಪ್ರದೇಶಗಳಲ್ಲಿ ಅರಣ್ಯ ಸಿಬ್ಬಂದಿಯಾಗಲೀ ಅಗ್ನಿಶಾಮಕ ಸಾಧನಗಳಾಗಲೀ ಧಾವಿಸಲು ಸಾಧ್ಯವಾಗುವುದಿಲ್ಲ. ವಾಯುಸೇನೆಯ ಹೆಲಿಕಾಪ್ಟರ್‌ಗಳು ನೀರಿನ ಮೂಟೆಯನ್ನು ಅಲ್ಲಲ್ಲಿ ಬೀಳಿಸಿ ಬೆಂಕಿಯನ್ನು ನಂದಿಸಲು ಯತ್ನಿಸಿದವು. ಆದರೆ ಅದೂ ಅಪಾಯಕಾರಿಯೆಂದು ನಿನ್ನೆಯಿಂದ ಹೆಲಿಕಾಪ್ಟರ್‌ ಹಾರಾಟವನ್ನೂ ನಿಲ್ಲಿಸಲಾಗಿದೆ. ಮಳೆಗಾಗಿ ಕಾಯುವುದನ್ನು ಬಿಟ್ಟರೆ ಬೇರೇನನ್ನೂ ಮಾಡಲಾಗದ ಹತಾಶ ಪರಿಸ್ಥಿತಿ ಉದ್ಭವಿಸಿದೆ.

ಭಾರತದಲ್ಲಿ ಕಾಳ್ಗಿಚ್ಚಿನ ಶೇಕಡ 95ರಷ್ಟು ಪ್ರಕರಣಗಳು ಮನುಷ್ಯ ಕೃತ್ಯವೆಂದೇ ಅರಣ್ಯ ಇಲಾಖೆಯ ದಾಖಲೆಗಳು ಹೇಳುತ್ತವೆ. ಹುಲ್ಲು ಚೆನ್ನಾಗಿ ಬೆಳೆಯಲೆಂದು ಮುಗ್ಧ ಕುರಿಗಾರರು ತರಗೆಲೆಗೆ ಬೆಂಕಿ ಇಡುವುದೊ, ಚಾರಣಿಗರ ಬೇಜವಾಬ್ದಾರಿ ನಡವಳಿಕೆಯೊ ಅಥವಾ ಮಜ ನೋಡಲೆಂದೇ ಕಡ್ಡಿ ಗೀರುವ ಕಿಡಿಗೇಡಿಗಳ ಕೃತ್ಯವೊ ಕಾಳ್ಗಿಚ್ಚಿಗೆ ಕಾರಣ ಆಗಬಹುದು. ಆದರೆ ಏಕಕಾಲಕ್ಕೆ ಅಷ್ಟೊಂದು ದುರ್ಗಮ ತಾಣಗಳಲ್ಲಿ ಬೆಂಕಿ ಹೊತ್ತಿಕೊಳ್ಳುವುದಕ್ಕೆ ನೈಸರ್ಗಿಕ ಕಾರಣವೂ ಇದ್ದೀತು. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಈ ವರ್ಷ ಹಿಮಪಾತದ ಪ್ರಮಾಣ ಕಡಿಮೆ ಇದ್ದುದರಿಂದ ನೆಲದಲ್ಲಿ ತೇವಾಂಶ ಏನೂ ಉಳಿದಿಲ್ಲ. ಪೊದೆಗಳು ಒಣಗಿ ನಿಂತಿವೆ. ಪೈನ್‌ (ಸೂಚಿಪರ್ಣಿ) ಮರಗಳ ತೊಗಟೆ ಮತ್ತು ನೆಲದ ಮೇಲೆ ಹಾಸಿ ಬಿದ್ದಿರುವ ಸೂಜಿಯಂಥ ಎಲೆಗಳಲ್ಲಿ ಎಣ್ಣೆಯ ಅಂಶ ಜಾಸ್ತಿ ಇರುತ್ತದೆ. ಬೆಂಕಿಯನ್ನು ಬಾಚಿಕೊಳ್ಳಲು ನಿಸರ್ಗವೇ ಸಜ್ಜಾಗಿ ನಿಂತಂತಿದೆ.

ಮೇಘಸ್ಫೋಟ, ದಿಢೀರ್‌ ಧಾರೆ, ಭೂಕುಸಿತ, ಕಾಳ್ಗಿಚ್ಚು, ಹಿಮಕುಸಿತ ಇವೆಲ್ಲವೂ ಹಿಮಾಲಯದಲ್ಲಿ ಹಿಂದೊಂದು ಕಾಲದಲ್ಲಿ ತನ್ನಷ್ಟಕ್ಕೆ ಜರುಗುವ ವಿದ್ಯಮಾನಗಳಾಗಿದ್ದವು. ಈಗೀಗ ಎಲ್ಲವೂ ಮಾನವನಿರ್ಮಿತ ದುರಂತಗಳ ಪಟ್ಟಿಗೇ ಸೇರಿಕೊಳ್ಳುತ್ತಿವೆ. ಅಭಿವೃದ್ಧಿ ಹೊಂದಿದ ದೇಶಗಳು ವಿಪರೀತ ಪ್ರಮಾಣದಲ್ಲಿ ಭೂಗತ ಇಂಧನಗಳನ್ನು ಮೇಲೆತ್ತಿ ಉರಿಸಿದ್ದರಿಂದಲೇ ಜಾಗತಿಕ ತಾಪಮಾನ ಏರುತ್ತಿದೆ. ವಿಪರ್ಯಾಸದ ಸಂಗತಿ ಏನೆಂದರೆ, ಇಂಧನ ಬಳಕೆ ಎಲ್ಲೆಲ್ಲೂ ಜಾಸ್ತಿಯಾಗಿದ್ದರಿಂದಲೇ ಅರಣ್ಯಗಳಲ್ಲಿ ಶೇಖರಣೆಯಾಗಿರುವ ನೈಸರ್ಗಿಕ ಇಂಧನಗಳೂ ಹೊತ್ತಿ ಉರಿಯುತ್ತಿವೆ. ಇದರಿಂದ ಹೊಮ್ಮುವ ಇಂಗಾಲದ ಡೈಆಕ್ಸೈಡ್‌ ಅನಿಲವೇ ತಾಪಮಾನದ ಏರಿಕೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅಪಾಯ ಎದುರಾದಾಗಲೆಲ್ಲ ಧಾವಿಸಿ ಬೆಂಕಿ ನಂದಿಸುವ ತಾತ್ಕಾಲಿಕ ಉಪಾಯಗಳಾಗಿ ತಂತ್ರಜ್ಞಾನ ನೆರವಿಗೆ ಬಂದೀತಷ್ಟೆ.

ಆದರೆ ಈ ವಿಷವ್ಯೂಹದಿಂದ ಪಾರಾಗುವ ವಿಧಾನ ವಿಜ್ಞಾನಕ್ಕಿನ್ನೂ ಗೋಚರಿಸಿಲ್ಲ. ಈ ನಡುವೆ ಅಗ್ನಿಶಮನಕ್ಕೆಂದು ಅರಣ್ಯ ಸಿಬ್ಬಂದಿ ಅಲ್ಲಲ್ಲಿ ಬೆಂಕಿಗೆರೆಗಳನ್ನು ಹಾಕುತ್ತಾರೆ ವಿನಾ ಅರಣ್ಯದ ಬಳಕೆದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸಮುದಾಯದ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮವೇನನ್ನೂ ಅಧಿಕಾರಿಗಳು ಕೈಗೊಂಡಿದ್ದು ಎಲ್ಲೂ ಎದ್ದುಕಾಣುತ್ತಿಲ್ಲ. ಇತ್ತ ಮೋಜಿನ ಪ್ರವಾಸಕ್ಕೆಂದೊ, ಪುಣ್ಯಕ್ಷೇತ್ರಗಳ ದರ್ಶನಕ್ಕೆಂದೊ, ಸಾಹಸಚಾರಣಕ್ಕೆಂದೊ ಗುಡ್ಡಬೆಟ್ಟಗಳಿಗೆ ಧಾವಿಸುವವರ ಸಂಖ್ಯೆ ಹೆಚ್ಚುತ್ತ ಹೋಗುತ್ತಿದೆ. ಹಾಗೆ ಧಾವಿಸುವವರು ತಮ್ಮ ಮೇಲೆ ಸಂಕಷ್ಟಗಳನ್ನು ಎಳೆದುಕೊಳ್ಳುತ್ತಾರೆ, ಪ್ರಕೃತಿಯನ್ನೂ ಸಂಕಟಕ್ಕೆ ದೂಡುತ್ತಾರೆ.

ಮಳೆಗಾಲ ಆರಂಭವಾದರೆ ನಮ್ಮಲ್ಲಿನ ಅತಿಶಾಖದ ಅಲೆಗಳೂ ಹಿಮಾಲಯದ ಕಾಳ್ಗಿಚ್ಚಿನ ಪ್ರಕೋಪಗಳೂ ತಣ್ಣಗಾಗುತ್ತವೆ ನಿಜ. ಆದರೆ ಅದರ ಹಿಂದೆ ಮಹಾಮಳೆ, ಚಂಡಮಾರುತ, ಭೂಕುಸಿತದ ಹೊಸ ಸರಣಿ ಆರಂಭವಾಗುತ್ತದೆ. ಅರಬ್‌ ದೇಶಗಳು, ಆಫ್ರಿಕಾದ ಕೀನ್ಯಾ, ದಕ್ಷಿಣ ಅಮೆರಿಕದ ಬ್ರೆಜಿಲ್‌ನಿಂದ ಪ್ರಳಯಾಂತಕ ಅತಿವೃಷ್ಟಿಯ ವರದಿಗಳು ಬರತೊಡಗಿವೆ. ಈ ವಿಶ್ವವ್ಯಾಪಿ ಚಕ್ರೀಯ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಶ್ನೆ ಹೇಗೂ ಇರಲಿ, ಬಂದೇ ಬರಲಿರುವ ಈ ಸಂಕಟಗಳಿಂದ ಬಚಾವಾಗಲು
ರಾಷ್ಟ್ರಮಟ್ಟದಲ್ಲಿ ಯಾವ ಯಾವ ರಾಜಕೀಯ ಪಕ್ಷಗಳು ಏನೆಲ್ಲ ಕ್ರಮಗಳನ್ನು ಯೋಜಿಸಿವೆ ಎಂಬುದನ್ನು ಪ್ರಜೆಗಳಿಗೆ ತಿಳಿಸುವ ಯತ್ನ ನಡೆಯಬೇಕಿತ್ತು. ಆದರೆ ತಾಪಮಾನ ಏರಿಕೆಯ ಆತಂಕ ಮತ್ತು ಆರ್ಥಿಕ ಆಘಾತ ಈಗಲೂ ಚುನಾವಣೆಯ ವಿಷಯಗಳೇ ಆಗಿಲ್ಲ. ಲೋಕಸಭೆಗೆ ಹೊರಡಲು ಸಜ್ಜಾದ ಯಾವ ಅಭ್ಯರ್ಥಿಯೂ ಯಾವ ವೇದಿಕೆಯಲ್ಲೂ ಅದರ ಬಗ್ಗೆ ಹೇಳಿದಂತಿಲ್ಲ. ಮತಯಾಚನೆಗಾಗಿ ಸುಂಟರಗಾಳಿಯಂತೆ ಸುತ್ತುತ್ತ, ವಿವಾದಗಳ ದೂಳೆಬ್ಬಿಸುತ್ತ, ಮಾತಿನ ಮಹಾಧಾರೆಯನ್ನೇ ಹರಿಸುವ ಜನನಾಯಕರಿಂದ ಎಲ್ಲೆಲ್ಲೂ ಬೆಂಕಿಯುಗುಳುವ ಭಾಷಣಗಳು ಕೇಳಿಬರುತ್ತಿವೆಯೇ ವಿನಾ ನಿಸರ್ಗ ರಕ್ಷಣೆ, ಜನಸಾಮಾನ್ಯರ ಬದುಕು ಮತ್ತು ಆಸ್ತಿಪಾಸ್ತಿ ಭದ್ರತೆಯ ವಿಷಯಗಳು ಕತ್ತಲಲ್ಲೇ ಉಳಿದಂತಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT