ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಅಮರನಾಥ ಯಾತ್ರೆ ಸುರಕ್ಷತೆ ಕಲ್ಪಿಸುವಲ್ಲಿ ವೈಫಲ್ಯ

Last Updated 14 ಜುಲೈ 2022, 19:34 IST
ಅಕ್ಷರ ಗಾತ್ರ

ಅಮರನಾಥನ ದರ್ಶನಕ್ಕೆ ತೆರಳಿದ್ದ ಯಾತ್ರಿಕರಲ್ಲಿ ಕೆಲವರು ಹಿಂದಿನ ವಾರ ನೈಸರ್ಗಿಕ ವಿಕೋಪಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಇದು, ಇಂತಹ ಯಾತ್ರೆಗಳ ಸಂದರ್ಭದಲ್ಲಿ ಉಂಟಾಗುವ ಜನಜಂಗುಳಿಯು ತಂದಿಡಬಹುದಾದ ಅಪಾಯ ಎಷ್ಟು ಎಂಬುದನ್ನು ತೋರಿಸಿದೆ. ಅದಕ್ಕಿಂತ ಹೆಚ್ಚಾಗಿ, ಮನುಷ್ಯನ ಜೀವದ ಬಗ್ಗೆ ಅಧಿಕಾರಸ್ಥರಲ್ಲಿ ಇರುವ ಕಾಳಜಿ ಎಷ್ಟರಮಟ್ಟಿನದು ಎಂಬುದನ್ನೂ ಇದು ತೋರಿಸಿಕೊಟ್ಟಿದೆ. ಕಾಶ್ಮೀರ ದಲ್ಲಿರುವ ಅಮರನಾಥನ ದರ್ಶನಕ್ಕೆ ದೇಶದ ಎಲ್ಲೆಡೆಯಿಂದ ಯಾತ್ರಿಕರು ಹೋಗುತ್ತಾರೆ. ಆಸ್ತಿಕರಲ್ಲಿ ಹಲವರು ಈ ಯಾತ್ರೆಗಾಗಿ ಹಂಬಲಿಸುವುದಿದೆ. ಯಾತ್ರೆ ಶುರುವಾದ ನಂತರದಲ್ಲಿ ಸಂಭವಿಸಿದ ಭಾರಿ ಮಳೆ ಹಾಗೂ ಅದರ ಪರಿಣಾಮವಾಗಿ ಉಂಟಾದ ನೆರೆಯಲ್ಲಿ ಯಾತ್ರಿಕರ ಡೇರೆಗಳು ಕೊಚ್ಚಿಹೋದವು ಎಂದು ವರದಿಯಾಗಿದೆ. ಇದರಿಂದಾಗಿ ಕನಿಷ್ಠ 15 ಜನ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ನಾಪತ್ತೆಯಾಗಿದ್ದ ಕೆಲವರು ನಂತರ ಪತ್ತೆಯಾಗಿದ್ದಾರೆ, ಅವರು ಸುರಕ್ಷಿತವಾಗಿದ್ದಾರೆ ಎಂಬ ವರದಿಗಳು ಇವೆ. ಅಮರನಾಥನ ನೆಲೆಯು ಬಹಳ ಎತ್ತರದ ಪ್ರದೇಶದಲ್ಲಿದೆ, ಅಲ್ಲಿಗೆ ತಲುಪಬೇಕು ಎಂದಾದರೆ ದುರ್ಗಮ ಹಾದಿಯನ್ನು ಕ್ರಮಿಸಬೇಕು. ಹಲವು ಕಾರಣಗಳಿಂದಾಗಿ ಮೂರು ವರ್ಷಗಳಿಂದ ರದ್ದಾಗಿದ್ದ ಯಾತ್ರೆಯು ಈ ಬಾರಿ ಮತ್ತೆ ಶುರುವಾಗಿದೆ.

ಈಗ ಆಗಿರುವ ದುರಂತವನ್ನು ‘ನೈಸರ್ಗಿಕ ವಿಕೋಪ’ ಎಂದಷ್ಟೇ ಹೇಳಿ ಸುಮ್ಮನಿರುವುದು ಸರಿಯಲ್ಲ. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಕೇಂದ್ರಾಡಳಿತ ಪ್ರದೇಶದ ಆಡಳಿತ ಯಂತ್ರವು ಈ ಜೀವಹಾನಿಯ ಹೊಣೆ ಹೊರಬೇಕು. ವಾತಾವರಣವು ತೀರಾ ವಿಷಮವಾಗಿದ್ದಾಗ, ಪರಿಸ್ಥಿತಿ ಹೇಗಾಗುತ್ತದೆ ಎಂಬುದು ಖಚಿತ ವಾಗಿಲ್ಲದಿದ್ದಾಗ ಯಾತ್ರೆಗೆ ಅವಕಾಶ ಮಾಡಿಕೊಟ್ಟಿದ್ದು ತಪ್ಪು. ಯಾತ್ರೆಯ ಅವಧಿಯು ವರ್ಷದಿಂದ ವರ್ಷಕ್ಕೆ ಬೇರೆ ಬೇರೆ ಆಗಿರುತ್ತದೆ. ತೀರಾ ಸೀಮಿತವಾದ ಪ್ರದೇಶ ವೊಂದರಲ್ಲಿ ಎಷ್ಟು ಮಳೆ ಆಗಬಹುದು ಎಂಬುದನ್ನು ಹೇಳಲು ಹವಾಮಾನ ಕೇಂದ್ರಕ್ಕೆ ಸಾಧ್ಯವಾಗುವುದಿಲ್ಲ ಎಂದು ಹವಾಮಾನ ಇಲಾಖೆಯಶ್ರೀನಗರದ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ, ತೀರಾ ದುರ್ಗಮವಾದ ಪ್ರದೇಶಗಳಲ್ಲಿ ಆಗುವ ಮಳೆಯ ಪ್ರಮಾಣ ಎಷ್ಟೆಂಬುದನ್ನು ಅಳೆಯಲು ವ್ಯವಸ್ಥೆ ಇಲ್ಲ ಎಂದೂ ಅವರು ತಿಳಿಸಿದ್ದಾರೆ. ಅಮರನಾಥ ಗುಹೆಯ ಸುತ್ತ ನೀರ್ಗಲ್ಲುಗಳು ಇವೆ. ಹವಾಮಾನ ಬದಲಾವಣೆಯ ಕಾರಣದಿಂದಾಗಿ ಅಲ್ಲಿನ ವಾತಾವರಣ ವಿಷಮಗೊಳ್ಳುವ ಸಾಧ್ಯತೆ ಇದ್ದೇ ಇರುತ್ತದೆ. ಅಧಿಕಾರಿಗಳು ಯಾತ್ರೆಯ ಯೋಜನೆ ಸಿದ್ಧಪಡಿಸುವಾಗ ಹವಾಮಾನದ ಬದಲಾವಣೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಹಿಂದಿನ ವರ್ಷ ಹಠಾತ್ ನೆರೆ ಸೃಷ್ಟಿಯಾದ ಪ್ರದೇಶಗಳಲ್ಲಿ ಡೇರೆ ಹಾಕಲು ಅವಕಾಶ ಕೊಡಲಾಯಿತು. ಹವಾಮಾನ ಕೇಂದ್ರಗಳನ್ನು ಅಮರನಾಥ ಯಾತ್ರೆಯ ಹಾದಿಯುದ್ದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸುವ ಅಗತ್ಯವನ್ನು ಆಡಳಿತ ವ್ಯವಸ್ಥೆಯು ಗಂಭೀರವಾಗಿ ಪರಿಗಣಿಸಲಿಲ್ಲ. ಯಾತ್ರಿಕರ ಪ್ರತೀ ತಂಡದ ಜೊತೆ ವಿಕೋಪ ನಿರ್ವಹಣಾ ತಂಡವನ್ನು ಕಳುಹಿಸುವ ಕೆಲಸವೂ ಆಗಲಿಲ್ಲ. ತಜ್ಞರ ಸಮಿತಿಯು ಶಿಫಾರಸು ಮಾಡಿದ್ದ ಸಂಖ್ಯೆಗಿಂತ ಹೆಚ್ಚು ಯಾತ್ರಿಕರಿಗೆ ಅವಕಾಶ ಕೊಡಲಾಯಿತು.

ದೇಶದಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು, ಯಾತ್ರೆಗಳನ್ನು ಸ್ಥಳೀಯ ಹವಾಮಾನಕ್ಕೆ ಅನುಗುಣವಾಗಿ ಯೋಜಿಸಲಾಗುತ್ತದೆ. ಆದರೆ, ಹವಾಮಾನ ಬದಲಾವಣೆ ಹಾಗೂ ಅನಿರೀಕ್ಷಿತ ಸಂದರ್ಭಗಳು ಎದುರಾಗುವುದನ್ನು ಪರಿಗಣಿಸಿ, ಇಂತಹ ಕಾರ್ಯಕ್ರಮಗಳನ್ನು ಯೋಜಿಸಬೇಕಾದ ಅಗತ್ಯ ಈಗ ಇದೆ. ಯಾವುದೇ ಯಾತ್ರೆ, ಧಾರ್ಮಿಕ ಕಾರ್ಯಕ್ರಮ ನಡೆಯಲಿ, ಅಲ್ಲಿ ಅಗತ್ಯ ಸುರಕ್ಷತಾ ಕ್ರಮಗಳು ಇರುವಂತೆ ನೋಡಿಕೊಳ್ಳುವುದು ಆಡಳಿತ ವ್ಯವಸ್ಥೆಯ ಹೊಣೆ. ಹವಾಮಾನ ಮುನ್ಸೂಚನೆ ವ್ಯವಸ್ಥೆಯನ್ನು ಎಲ್ಲೆಡೆಯೂ ಬಲಪಡಿಸಬೇಕು. ಅದರಲ್ಲೂ ಮುಖ್ಯವಾಗಿ, ಹವಾಮಾನ ವೈಪರೀತ್ಯಗಳು ತೀವ್ರವಾಗಿರುವ ಕಡೆಗಳಲ್ಲಿ ಇವು ಆದ್ಯತೆಯ ಮೇಲೆ ಆಗಬೇಕು. ಅಗತ್ಯ ಮೂಲಸೌಕರ್ಯ ಹಾಗೂ ಸಾರಿಗೆ ಸೌಲಭ್ಯ ಇರಬೇಕು. ಉಗ್ರರ ಚಟುವಟಿಕೆಗಳ ನಡುವೆಯೂ ಅಮರನಾಥ ಯಾತ್ರೆಯನ್ನು ಯಶಸ್ವಿಯಾಗಿ ಆಯೋಜಿಸಿ ಕೇಂದ್ರ ಸರ್ಕಾರವನ್ನು, ಬಹುಶಃ ಇಡೀ ವಿಶ್ವವನ್ನು ಮೆಚ್ಚಿಸುವ ಉದ್ದೇಶವನ್ನು ಕಾಶ್ಮೀರದ ಆಡಳಿತ ಯಂತ್ರ ಹೊಂದಿತ್ತು. ಆದರೆ, ಅದು ಯಾತ್ರಿಕರ ಸುರಕ್ಷತೆಯನ್ನು ಖಾತರಿ‍ಪಡಿಸುವಲ್ಲಿ ವಿಫಲವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT