ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಭ್ರೂಣಹತ್ಯೆ: ದೂರು ವಿಳಂಬ ಅಕ್ಷಮ್ಯ, ವಿಚಾರಣೆ ದಿಕ್ಕುತಪ್ಪದೆ ನಡೆಯಲಿ

Published 22 ಮೇ 2024, 23:30 IST
Last Updated 22 ಮೇ 2024, 23:30 IST
ಅಕ್ಷರ ಗಾತ್ರ

ಹೆಣ್ಣು ಭ್ರೂಣಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ವಿರುದ್ಧ ಮಂಡ್ಯದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ನೋಂದಣಿ (ಪಿಸಿಆರ್‌) ವಿಳಂಬವಾಗಿಯಾದರೂ ದಾಖಲಾಗಿದೆ. ದೂರು ಸಲ್ಲಿಕೆಯಲ್ಲಿ ಆಗಿರುವ ವಿಳಂಬವು ವ್ಯವಸ್ಥೆಯ ಸಂವೇದನಾಶೂನ್ಯ ಹಾಗೂ ಕ್ರಿಯಾಶೂನ್ಯ ಸ್ಥಿತಿಯನ್ನು ಸೂಚಿಸುವಂತಿದೆ. ಚುನಾವಣಾ ನೀತಿಸಂಹಿತೆ ನೆಪದಲ್ಲಿ ಹೆಣ್ಣು ಭ್ರೂಣಹತ್ಯೆ ಪ್ರಕರಣಗಳನ್ನು ದಾಖಲಿಸಲು ಮಂಡ್ಯದ ಉಪವಿಭಾಗಾಧಿಕಾರಿ ನಿರ್ಲಕ್ಷ್ಯ ವಹಿಸಿರುವುದು ಸ್ಪಷ್ಟವಾಗಿದೆ. ಗಂಭೀರ ಪ್ರಕರಣವನ್ನು ನಿಭಾಯಿಸುವಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ವಿಫಲವಾಗಿವೆ. ಲಿಂಗಪತ್ತೆ ಪರೀಕ್ಷೆ ನಡೆಸಿ ಹೆಣ್ಣು ಭ್ರೂಣಹತ್ಯೆ ನಡೆಸಿದ ಪ್ರಕರಣಗಳ ಬಗ್ಗೆ ತನಿಖೆ ನಡೆಸಿದ್ದ ಸಿಐಡಿ, ಆರೋಗ್ಯ ಇಲಾಖೆಗೆ ವರದಿ ಸಲ್ಲಿಸಿ ಒಂದೂವರೆ ತಿಂಗಳಾದರೂ ನ್ಯಾಯಾಲಯದಲ್ಲಿ ದೂರು ದಾಖಲಾಗದೇ ಇದ್ದುದು ದುರದೃಷ್ಟಕರ. ಸಿಐಡಿ ವರದಿಯ ಆಧಾರದಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸುವುದು ಸಕ್ಷಮ ಪ್ರಾಧಿಕಾರದ ಹೊಣೆಗಾರಿಕೆ. ಆದರೆ, ಸಕ್ಷಮ ಪ್ರಾಧಿಕಾರ ತನ್ನ ಕರ್ತವ್ಯವನ್ನು ನಿಭಾಯಿಸಲು ನಿರ್ಲಕ್ಷ್ಯ ತೋರಿದ ಪರಿಣಾಮ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಕೆಲವು ಆರೋಪಿಗಳು ಪಾಂಡವಪುರದಲ್ಲಿರುವ ಆರೋಗ್ಯ ಇಲಾಖೆಯ ವಸತಿ ಗೃಹವೊಂದರಲ್ಲಿ ತಮ್ಮ ಕೃತ್ಯ ಮುಂದುವರಿಸಿದ್ದರು ಎಂದು ಹೇಳಲಾಗಿದೆ. ಜಾಮೀನು ಪಡೆದವರು ಭ್ರೂಣಹತ್ಯೆ ಮುಂದುವರಿಸಿರುವ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟಗೊಳ್ಳುವವರೆಗೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ದೂರು ಸಲ್ಲಿಕೆ ವಿಳಂಬಕ್ಕೆ ನೀಡಿರುವ ಕಾರಣ ಕ್ಷುಲ್ಲಕವಾದುದು. ನ್ಯಾಯಾಲಯಕ್ಕೆ ದೂರು ಸಲ್ಲಿಸಬೇಕಾಗಿದ್ದ ಮಂಡ್ಯದ ಉಪವಿಭಾಗಾಧಿಕಾರಿಯನ್ನು ಚುನಾವಣೆ ಕಾರಣಕ್ಕೆ ಬೇರೆಡೆಗೆ ನಿಯೋಜಿಸಲಾಗಿತ್ತು. ಅವರ ಸ್ಥಾನಕ್ಕೆ ತಾತ್ಕಾಲಿಕವಾಗಿ ಬಂದಿರುವ ಅಧಿಕಾರಿ, ‘ಅಧಿಕಾರ ಪತ್ರ’ (ಪವರ್‌ ಆಫ್‌ ಅಟಾರ್ನಿ) ದೊರೆಯದ ಕಾರಣ ದೂರು ದಾಖಲಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದರು. ಸಕ್ಷಮ ಪ್ರಾಧಿಕಾರದಿಂದ ದೂರು ದಾಖಲಿಸುವ ಅಧಿಕಾರ ಹಸ್ತಾಂತರ ಆಗದಿರುವುದನ್ನು ವಿಳಂಬಕ್ಕೆ ಕಾರಣವನ್ನಾಗಿ ಜಿಲ್ಲಾ ಆರೋಗ್ಯಾಧಿಕಾರಿಯೂ ನೀಡಿದ್ದರು. ಭ್ರೂಣಹತ್ಯೆ ಪ್ರಕರಣದ ದಾಖಲಾತಿ ವಿಳಂಬದ ಲೋಪಕ್ಕೆ ತಾಂತ್ರಿಕ ಕಾರಣ ನೀಡುವುದನ್ನು ಒಪ್ಪುವುದು ಸಾಧ್ಯವಿಲ್ಲ. ಹೆಣ್ಣು ಭ್ರೂಣಹತ್ಯೆ ಆರೋಪದಂಥ ಗಂಭೀರ ಪ್ರಕರಣಗಳಲ್ಲಿ ದೂರು ದಾಖಲಿಸಲು ಮಾಡುವ ಅನಗತ್ಯ ವಿಳಂಬ ಕರ್ತವ್ಯಲೋಪವೇ ಸರಿ.

ಆರು ತಿಂಗಳ ಹಿಂದೆ ಮಂಡ್ಯ ಜಿಲ್ಲೆಯ ಆಲೆಮನೆಯೊಂದರಲ್ಲಿ ಹೆಣ್ಣು ಭ್ರೂಣಲಿಂಗ ಪತ್ತೆ ಚಟುವಟಿಕೆ ಬೆಳಕಿಗೆ ಬಂದಿತ್ತು. ಪ್ರಕರಣವೊಂದರ ಜಾಡು ಹಿಡಿದು ಬೆಂಗಳೂರು ಪೊಲೀಸರು ನಡೆಸಿದ ದಾಳಿಯಲ್ಲಿ ಈ ಪ್ರಕರಣ ಹೊರಬಂದಿತ್ತು. ಅಲ್ಲಿಯವರೆಗೂ ಸ್ಥಳೀಯ ಪೊಲೀಸರಿಗೆ ಹಾಗೂ ಆರೋಗ್ಯ ಇಲಾಖೆಗೆ ಕುಕೃತ್ಯಗಳ ಸುಳಿವು ದೊರೆಯದಿರುವುದು ಆಶ್ಚರ್ಯಕರ. ಕೃತ್ಯಕ್ಕೆ ಸಂಬಂಧಿಸಿದಂತೆ 17 ಆರೋಪಿಗಳನ್ನು ಬಂಧಿಸಲಾಗಿತ್ತು. ಲಿಂಗಪತ್ತೆ ಹಾಗೂ ಹೆಣ್ಣು ಭ್ರೂಣಹತ್ಯೆಯ ಜಾಲ ಮಂಡ್ಯ ಜಿಲ್ಲೆಗೆ ಸೀಮಿತವಾಗಿರದೆ, ಬೆಂಗಳೂರು, ಮೈಸೂರು, ರಾಮನಗರ ಜಿಲ್ಲೆಗಳಲ್ಲೂ ಸಕ್ರಿಯವಾಗಿರುವುದು ಪೊಲೀಸ್‌ ತನಿಖೆಯಲ್ಲಿ ತಿಳಿದುಬಂದಿತ್ತು. ಮಂಡ್ಯ ಜಿಲ್ಲೆಯ 32ಕ್ಕೂ ಹೆಚ್ಚು ಸಗಟು ಔಷಧಿ ಮಳಿಗೆಗಳಲ್ಲಿ, ಗರ್ಭಪಾತಕ್ಕೆ ಬಳಸುವ ಸಾವಿರಾರು ‘ಎಂಟಿಪಿ ಕಿಟ್‌’ಗಳನ್ನು ಕೇವಲ ಒಂದು ವರ್ಷದ ಅವಧಿಯಲ್ಲಿ ಮಾರಾಟ ಮಾಡಲಾಗಿತ್ತು. ಪ್ರಕರಣ ಬೆಳಕಿಗೆ ಬಂದ ಮೇಲೆ ಈ ಕಿಟ್‌ಗಳ ಮಾರಾಟಕ್ಕೆ ಜಿಲ್ಲೆಯಲ್ಲಿ ನಿರ್ಬಂಧ ವಿಧಿಸಲಾಯಿತಾದರೂ, ಹೊರ ಜಿಲ್ಲೆಗಳ ಔಷಧಿ ಅಂಗಡಿಗಳಿಂದ ಕಿಟ್‌ ಖರೀದಿಸಿ ತಂದು ಭ್ರೂಣಹತ್ಯೆ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಕಿಟ್‌ಗಳ ಮಾರಾಟಕ್ಕೆ ಸಂಬಂಧಿಸಿದಂತೆ ಏಕರೂಪ ಸಂಹಿತೆ ಇಲ್ಲದಿರುವುದರ ಲಾಭವನ್ನು ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾದವರು ಬಳಸಿಕೊಳ್ಳುತ್ತಿದ್ದರು. ರಾಜ್ಯದ ಗಮನಸೆಳೆದ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಆದರೆ, ಸಿಐಡಿ ವರದಿಯ ನಂತರದಲ್ಲಿ ಸಕ್ಷಮ ಪ್ರಾಧಿಕಾರ ದೂರು ದಾಖಲಿಸುವಲ್ಲಿ ವಿಳಂಬ ಮಾಡಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳೂ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸಂವಹನದ ಕೊರತೆಯಿಂದಾಗಿ ಗಂಭೀರ ಪ್ರಕರಣದ ದೂರು ದಾಖಲಾತಿ ಪ್ರಕ್ರಿಯೆ ದೀರ್ಘಕಾಲ ನನೆಗುದಿಗೆ ಬೀಳುವಂತಾಯಿತು. ದೂರು ದಾಖಲಿಸುವಲ್ಲಿ ಆದ ನಿರ್ಲಕ್ಷ್ಯವು ಪ್ರಕರಣದ ವಿಚಾರಣೆ ಸಂದರ್ಭದಲ್ಲೂ ಮುಂದುವರಿಯಬಾರದು. ವಿಚಾರಣೆ ಸರಿಯಾದ ದಿಕ್ಕಿನಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು ಹಾಗೂ ಕೃತ್ಯದಲ್ಲಿ ಭಾಗಿಯಾದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಈ ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಿ ತಾರ್ಕಿಕ ಅಂತ್ಯ ಕಂಡರೆ, ಹೆಣ್ಣು ಭ್ರೂಣಹತ್ಯೆ ತಡೆಗಟ್ಟುವ ಹೋರಾಟ ಬಲಗೊಳ್ಳುವುದು ಸಾಧ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT