ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಲಿಂಗತ್ವ ಪೂರ್ವಗ್ರಹ– ಸುಪ್ರೀಂ ಕೋರ್ಟ್ ಕೈಪಿಡಿ ಸಮುದಾಯಗಳಿಗೆ ದಾರಿದೀಪ

Published 18 ಆಗಸ್ಟ್ 2023, 23:31 IST
Last Updated 18 ಆಗಸ್ಟ್ 2023, 23:31 IST
ಅಕ್ಷರ ಗಾತ್ರ

ಸಮಾಜದಲ್ಲಿ ಬೇರುಬಿಟ್ಟಿರುವ ಪೂರ್ವಗ್ರಹಗಳನ್ನು ನಿವಾರಿಸಲು ಇರುವ ಒಂದು ಪ್ರಮುಖ ಅಸ್ತ್ರ ಭಾಷೆ ಹಾಗೂ ಭಾವದಲ್ಲಿ ಬದಲಾವಣೆ. ಪೂರ್ವಗ್ರಹಗಳು ಮಹಿಳೆಯ ವಿಚಾರದಲ್ಲಿ ಹೆಚ್ಚಾಗಿ ಇವೆ. ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸಿಕೊಂಡೂ ಪೂರ್ವಗ್ರಹಗಳನ್ನು ಸಮಾಜ ಬೆಳೆಸಿಕೊಂಡಿದೆ. ಇವುಗಳನ್ನೆಲ್ಲ ನಿವಾರಿಸಬೇಕಿರುವುದು ಸಭ್ಯ ಸಮಾಜದ ಹೊಣೆ ಹೌದು. ಆದರೆ ನಿವಾರಿಸುವ ಬಗೆ ಸರಳವಾಗಿಲ್ಲ. ಸಮಾಜದಲ್ಲಿ ಪೂರ್ವಗ್ರಹಗಳು ಸಂಕೀರ್ಣ ಸ್ವರೂಪದಲ್ಲಿ ಬೆಳೆದುಬಂದಿರುವ ಕಾರಣ, ತೀರಾ ಸರಳವಾದ ಪರಿಹಾರ ಮಾರ್ಗಗಳು ಸಿಗಲಿಕ್ಕಿಲ್ಲ. ಮಹಿಳೆಯರನ್ನು ಉದ್ದೇಶಿಸಿ ಆಡುವ ಮಾತುಗಳಲ್ಲಿ ಪೂರ್ವಗ್ರಹಗಳು ಕೆಲವೊಮ್ಮೆ ಸಹಜ ಎಂಬಂತೆ ವ್ಯಕ್ತವಾಗುತ್ತಿರುತ್ತವೆ. ಇಂತಹ ಪೂರ್ವಗ್ರಹಗಳನ್ನು ನಿವಾರಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್‌ ಕೈಪಿಡಿಯೊಂದನ್ನು ಈಚೆಗೆ ಸಿದ್ಧಪಡಿಸಿದೆ. ಬಹಳ ಪ್ರಗತಿಪರವಾದ ನಡೆ ಇದು. ನ್ಯಾಯಾಲಯದ ಕಲಾಪಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳನ್ನು ನಿಭಾಯಿಸುವ ಸಂದರ್ಭಗಳಲ್ಲಿ ಪೂರ್ವಗ್ರಹವನ್ನು ಗಟ್ಟಿಗೊಳಿಸುವ ಪದಗಳನ್ನು ಬಳಸಬಾರದು; ಅವುಗಳ ಬದಲಿಗೆ ಹೆಚ್ಚು ಸಂವೇದನಾಶೀಲವಾದ ಪರ್ಯಾಯ ಪದಗಳನ್ನು ಬಳಸಬೇಕು ಎಂದು ಈ ಕೈಪಿಡಿಯಲ್ಲಿ ಹೇಳಲಾಗಿದೆ. ಮಹಿಳೆಯರನ್ನು ಉದ್ದೇಶಿಸಿ ಆಡುವ, ಪೂರ್ವಗ್ರಹಪೀಡಿತ ನಿರ್ದಿಷ್ಟ ಪದಗಳ ಬದಲಾಗಿ, ಹೆಚ್ಚು ಸಭ್ಯವಾದ ಪದಗಳ ಪಟ್ಟಿಯನ್ನು ನೀಡಲಾಗಿದೆ. ಇದು ನ್ಯಾಯಾಲಯದ ಕಲಾಪಗಳಿಗೆ ಅನ್ವಯವಾಗುತ್ತದೆಯಾದರೂ, ಸಾರ್ವಜನಿಕ ಜೀವನದಲ್ಲಿ ಎಲ್ಲ ಹಂತಗಳಲ್ಲಿಯೂ ಅಳವಡಿಸಿಕೊಳ್ಳಲು ಕೂಡ ಸೂಕ್ತವಾಗಿದೆ.

‘ಮಹಿಳೆಯ ಅಭಿವ್ಯಕ್ತಿಯ ಬಗೆಯನ್ನು ಆಧರಿಸಿ ಅಥವಾ ಆಕೆಯ ಲೈಂಗಿಕ ಹಿನ್ನೆಲೆಯನ್ನು ಗಮನಿಸಿ ಆ ಮಹಿಳೆಯ ವ್ಯಕ್ತಿತ್ವ ಹಾಗೂ ನಡತೆಯ ಬಗ್ಗೆ ಕೆಲವು ನಂಬಿಕೆಗಳನ್ನು ಬೆಳೆಸಿಕೊಳ್ಳಲಾಗುತ್ತದೆ. ಆದರೆ, ನ್ಯಾಯಾಲಯದ ಕಲಾಪಗಳ ಸಂದರ್ಭದಲ್ಲಿ ಮಹಿಳೆಯ ನಡೆ ಹಾಗೂ ಹೇಳಿಕೆಗಳನ್ನು ಸ್ವೀಕರಿಸುವ ಬಗೆಯ ಮೇಲೆ ಇಂತಹ ನಂಬಿಕೆಗಳು ಪ್ರಭಾವ ಬೀರುತ್ತವೆ. ಮಹಿಳೆಯ ನಡತೆ ಅಥವಾ ಆಕೆ ಧರಿಸುವ ಬಟ್ಟೆಯನ್ನು ಆಧರಿಸಿದ ನಂಬಿಕೆಗಳು, ಲೈಂಗಿಕ ಸಂಬಂಧಗಳ ವಿಚಾರದಲ್ಲಿ ಮಹಿಳೆಯ ಒಪ್ಪಿಗೆಗೆ ಇರುವ ಮಹತ್ವವನ್ನು ಕುಗ್ಗಿಸುತ್ತವೆ. ಮಹಿಳೆಯರ ಕ್ರಿಯಾಸ್ವಾತಂತ್ರ್ಯ ಹಾಗೂ ಅವರ ವ್ಯಕ್ತಿತನಕ್ಕೆ ಇರುವ ಮಹತ್ವವನ್ನು ಕೂಡ ತಗ್ಗಿಸುತ್ತವೆ’ ಎಂದು ಸುಪ್ರೀಂ ಕೋರ್ಟ್‌ ಸಿದ್ಧಪಡಿಸಿರುವ ಕೈಪಿಡಿಯಲ್ಲಿ ಹೇಳಲಾಗಿದೆ. ಈ ಕೈಪಿಡಿಯಲ್ಲಿ ಬಳಸಿರುವ ಭಾಷೆ, ಆ ಭಾಷೆಯು ಹೊಮ್ಮಿಸುವ ಭಾವ ಬಹಳ ಮಾನವೀಯವಾಗಿದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಭಾರತೀಯ ಸಮಾಜದಲ್ಲಿ ಎಲ್ಲ ಸಮುದಾಯ, ಎಲ್ಲ ವರ್ಗಗಳ ವಿಚಾರದಲ್ಲಿಯೂ ಪೂರ್ವಗ್ರಹಗಳು ಬೆಳೆದಿವೆಯಾದರೂ, ಎಲ್ಲ ಸಮುದಾಯಗಳಲ್ಲಿಯೂ ಇರುವ ಮಹಿಳೆಯರ ಬಗ್ಗೆ ಪೂರ್ವಗ್ರಹಗಳು ಹೆಚ್ಚೇ ಇವೆ. ವ್ಯಕ್ತಿಯೊಬ್ಬ ವ್ಯಗ್ರಗೊಂಡಾಗ ಬಳಸುವ ಭಾಷೆಯು ಮಹಿಳೆಯನ್ನು ತೀರಾ ಕೆಟ್ಟದಾಗಿ ನಿಂದಿಸುವ ಬಗೆಯಲ್ಲಿಯೇ ಇರುತ್ತದೆ.

ಪೂರ್ವಗ್ರಹಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ರೀತಿಯಲ್ಲಿ ಇರುವ ಭಾಷೆಯ ಬಳಕೆಯಲ್ಲಿ ಬದಲಾವಣೆಗಳನ್ನು ತರುವ ಕೆಲಸವನ್ನು ಸರ್ಕಾರ, ನ್ಯಾಯಾಂಗ ಮಾಡಬಹುದು. ಅಥವಾ ಯಾವುದೇ ಸಂಸ್ಥೆ ಈ ಕೆಲಸ ಮಾಡಬಹುದು. ಆದರೆ, ಇಂತಹ ಸಾಂಸ್ಥಿಕ ಪ್ರಯತ್ನಗಳಿಗೆ ಕೂಡ ಒಂದು ಮಿತಿ ಇರುತ್ತದೆ. ಭಾಷೆಯು ವ್ಯಕ್ತಿಯಲ್ಲಿನ ಭಾವವನ್ನು ಹೇಳುತ್ತಿರುತ್ತದೆ. ವ್ಯಕ್ತಿಯ ಹಂತದಲ್ಲಿ ಮೂಡುವ ಭಾವವನ್ನು ಯಾವುದೇ ಸಾಂಸ್ಥಿಕ ಪ್ರಯತ್ನದ ಮೂಲಕ ಪೂರ್ತಿಯಾಗಿ ಸರಿಪಡಿಸಲಾಗದು. ಹೆಣ್ಣಿನ ವಿಚಾರದಲ್ಲಿಯಾಗಲೀ, ಸಮಾಜದ ಯಾವುದೇ ವರ್ಗದ ವಿಚಾರದಲ್ಲಿಯಾಗಲೀ, ವ್ಯಾಪಕವಾಗಿ ಬೆಳೆದುನಿಂತಿರುವ ಪೂರ್ವಗ್ರಹಗಳನ್ನು ವ್ಯಕ್ತಿಗತ ನೆಲೆಯಲ್ಲಿಯೂ ಸರಿಪಡಿಸಬೇಕು. ಈ ಕೆಲಸವನ್ನು ಸರ್ಕಾರ ಅಥವಾ ಇನ್ಯಾವುದೇ ಸಂಸ್ಥೆ ಮಾಡಬೇಕು ಎಂದು ಅಪೇಕ್ಷಿಸುವುದಕ್ಕಿಂತ, ಇದರಲ್ಲಿ ಸಮುದಾಯಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಮಹಿಳೆಯರನ್ನು ಉದ್ದೇಶಿಸಿ ಇರುವ ಪೂರ್ವಗ್ರಹಗಳು ಸರ್ಕಾರ, ನ್ಯಾಯಾಂಗದಂತಹ ಸಾಂಸ್ಥಿಕ ವ್ಯವಸ್ಥೆ ರೂಪುಗೊಳ್ಳುವುದಕ್ಕಿಂತಲೂ ಬಹಳ ಹಿಂದಿನಿಂದ ಇವೆ. ಅಷ್ಟೇ ಅಲ್ಲ, ಪೂರ್ವಗ್ರಹಗಳು ಸಾಂಸ್ಥಿಕ ವ್ಯವಸ್ಥೆಯ ಆಚೆಗೂ ಬಹಳ ಆಳವಾಗಿ ಬೇರುಬಿಟ್ಟಿವೆ. ಈ ಕಾರಣದಿಂದಾಗಿಯೇ ಪೂರ್ವಗ್ರಹಗಳನ್ನು ಕಿತ್ತುಹಾಕುವ ಕೆಲಸವು ಯಾವುದೇ ಒಂದು ಸಂಸ್ಥೆಯಿಂದ ಆಗುವಂಥದ್ದಲ್ಲ. ಆದರೆ, ಪೂರ್ವಗ್ರಹಗಳನ್ನು ನಿವಾರಿಸುವ ಹಾಗೂ ಸಮಾಜವನ್ನು ಇನ್ನಷ್ಟು ಮಾನವೀಯವಾಗಿಸುವ, ಸಂವೇದನಾಶೀಲವಾಗಿಸುವ ಕೆಲಸದಲ್ಲಿ ಸಮುದಾಯಗಳು ತೊಡಗಿಸಿಕೊಳ್ಳುವುದಕ್ಕೆ ಸುಪ್ರೀಂ ಕೋರ್ಟ್‌ ಸಿದ್ಧಪಡಿಸಿರುವ ಈ ಕೈಪಿಡಿಯು ಒಂದು ಮಾರ್ಗದರ್ಶಿಯಾಗಿ ಖಂಡಿತ ನೆರವಿಗೆ ಬರಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT