ಮಂಗಳವಾರ, ಡಿಸೆಂಬರ್ 1, 2020
23 °C

ಸಂಪಾದಕೀಯ: ಚುನಾವಣೆಯ ಗುಂಗಿನಿಂದ ಹೊರಬನ್ನಿ ಅಭಿವೃದ್ಧಿಯತ್ತ ಗಮನಹರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ರಾಜಕೀಯ–ಪ್ರಾತಿನಿಧಿಕ ಚಿತ್ರ

ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಆಡಳಿತಾರೂಢ ಬಿಜೆಪಿಯು ಎರಡೂ ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಶಿರಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಗೆಲುವು ದಾಖಲಿಸಿದೆ. ರಾಜರಾಜೇಶ್ವರಿ ನಗರ ಕ್ಷೇತ್ರವನ್ನು ಕಾಂಗ್ರೆಸ್ಸಿನಿಂದ ಕಸಿದುಕೊಂಡಿದೆ. ಕೊರೊನಾ ಸಂಕಷ್ಟದ ಈ ಕಾಲದಲ್ಲಿ ಹಲವು ತೊಡಕುಗಳ ನಡುವೆಯೂ ಯಶಸ್ವಿಯಾಗಿ ಚುನಾವಣೆ ನಡೆಸಿದ ಚುನಾವಣಾ ಆಯೋಗವನ್ನು ಅಭಿನಂದಿಸಬೇಕು. ಈ ಚುನಾವಣೆಯಲ್ಲಿ ಉತ್ಸಾಹದಿಂದ ಭಾಗಿಯಾದ ಮತದಾರರೂ ಅಭಿನಂದನೆಗೆ ಅರ್ಹರು. ಈ ಹಿಂದೆ ನಡೆದ ಉಪಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ದೊರೆತ ಗೆಲುವು, ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಸ್ಥಿರತೆ ಒದಗಿಸಿತ್ತು. ಈಗಿನ ಉಪಚುನಾವಣೆಯಲ್ಲಿ ದೊರೆತ ಜಯ, ಆಡಳಿತ ಪಕ್ಷಕ್ಕೆ ಇನ್ನಷ್ಟು ಶಕ್ತಿ ನೀಡಿದೆ. ಈ ಗೆಲುವಿನಿಂದಾಗಿ ಪಕ್ಷದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವರ್ಚಸ್ಸು ಹೆಚ್ಚಿದೆ. ಈ ಹಿಂದಿನ ಉಪಚುನಾವಣೆಯಲ್ಲಿ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯು ಭಿನ್ನ ತಂತ್ರಗಾರಿಕೆಯನ್ನು ಅನುಸರಿಸಿ ಗೆಲುವು ಪಡೆದಿತ್ತು. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರೇ ಇದರ ರೂವಾರಿ ಎಂದು ಹೇಳಲಾಗಿತ್ತು. ಶಿರಾ ಕ್ಷೇತ್ರದ ಚುನಾವಣೆ ತಂತ್ರಗಾರಿಕೆಯಲ್ಲೂ ವಿಜಯೇಂದ್ರ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಬಿಜೆಪಿಗೆ ಗಟ್ಟಿ ನೆಲೆಯಿರದ ಈ ಎರಡೂ ಕ್ಷೇತ್ರಗಳಲ್ಲಿನ ಗೆಲುವು, ಪಕ್ಷದಲ್ಲಿ ಅವರ ಮಹತ್ವ ಹೆಚ್ಚಿಸಬಹುದು. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ನಡೆಸಿದ ತಂತ್ರಗಾರಿಕೆ ಯಶಸ್ವಿಯಾಗಿಲ್ಲ. ಉಪಚುನಾವಣೆಯಲ್ಲಿ ಮತದಾರರು ಆಡಳಿತ ಪಕ್ಷದತ್ತಲೇ ವಾಲುವುದು ಸಾಮಾನ್ಯ ವಿದ್ಯಮಾನ. ಅದು, ಈ ಬಾರಿಯೂ ಪುನರಾವರ್ತನೆಯಾಗಿದೆ. ಅಲ್ಲದೆ, ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಕ್ಷೇತ್ರದ ಜನರೊಂದಿಗೆ ಹೊಂದಿರುವ ಸಂಪರ್ಕವೂ ಈ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿರಬಹುದು. ಉಪಚುನಾವಣೆಯ ಫಲಿತಾಂಶವು ರಾಜ್ಯ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನ ಕೊಟ್ಟ ತೀರ್ಪು ಎಂದು ಅಧಿಕಾರಸ್ಥರು ಭಾವಿಸಬಾರದು.

ಈಗ ದೊರೆತ ಗೆಲುವು ಆಡಳಿತ ಪಕ್ಷದ ಮೈಮರೆವಿಗೆ ಕಾರಣವಾಗಬಾರದು. ಕೊರೊನಾ ಸಂಕಷ್ಟದಿಂದ ರಾಜ್ಯ ಬಳಲಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಕೈಗಾರಿಕಾ ವಲಯ ದಿಕ್ಕುಕಾಣದಂತಾಗಿದೆ. ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಈ ಬಾರಿ ವಿಪರೀತ ಮಳೆಯಾಗಿ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ರೈತರಿಗೆ ಬಹಳಷ್ಟು ಹಾನಿಯುಂಟಾಗಿದೆ. ಕೆಲವು ಕಡೆ ಜನರು ಮನೆ ಕಳೆದುಕೊಂಡಿದ್ದಾರೆ. ಜೀವಹಾನಿಯೂ ಆಗಿದೆ. ಜನರ ನೋವು ನಿವಾರಣೆಗೆ ಯಾವುದೇ ನೆವ ಹೇಳದೆ ಸರ್ಕಾರ ಇನ್ನಾದರೂ ಕಾರ್ಯಪ್ರವೃತ್ತವಾಗಬೇಕು. ಪ್ರವಾಹ ಪರಿಹಾರ ಕಾರ್ಯಕ್ಕೆ ವೇಗ ತುಂಬಬೇಕು. ಆಡಳಿತ ವ್ಯವಸ್ಥೆಯು ಮತ್ತಷ್ಟು ಚುರುಕುಗೊಳ್ಳಬೇಕು. ರಾಜ್ಯದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಕಡೆ ಸರ್ಕಾರ ಗಮನಹರಿಸಬೇಕು. ‘ಸಚಿವ ಸಂಪುಟ ವಿಸ್ತರಣೆಯನ್ನು ಶೀಘ್ರವೇ ಮಾಡುತ್ತೇನೆ’ ಎಂದು ಉಪಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಯಡಿಯೂರಪ್ಪ ಅವರು ಹೇಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಮಾಡುವುದು, ಬಿಡುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟ ವಿಚಾರ. ಆಡಳಿತದ ಅಗತ್ಯಕ್ಕೆ ಅನುಗುಣವಾಗಿ ಅವರು ನಿರ್ಧಾರ ಕೈಗೊಳ್ಳಬೇಕು. ಆದರೆ, ಜನರಿಗೆ ಸಂಬಂಧಿಸಿದಂತೆ ಸಂಪುಟ ವಿಸ್ತರಣೆಗಿಂತ ತುರ್ತಾಗಿ ಆಗಬೇಕಾಗಿರುವ ಕಾರ್ಯಗಳು ಬೇರೆಯೇ ಇವೆ. ಹಾಗಾಗಿ, ಆಡಳಿತ ಸುಧಾರಣೆಗೆ ಬೇಕಾದ ಎಲ್ಲ ಕ್ರಮಗಳನ್ನೂ ತ್ವರಿತವಾಗಿ ಕೈಗೊಳ್ಳುವುದು ಅಗತ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಆದರೆ, ಆಡಳಿತದಲ್ಲಿ ಇರುವ ಪಕ್ಷಕ್ಕೆ ಜನಹಿತವೇ ಮುಖ್ಯವಾಗಬೇಕು. ಗಮನ ಇನ್ನಾದರೂ ಅದರತ್ತಲೇ ಇರುವಂತೆ ನೋಡಿಕೊಳ್ಳಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು