ಶ‍್ರೇಷ್ಠ ಮುತ್ಸದ್ದಿಗೆ ವಿದಾಯ: ‘ಉದಾರಹೃದಯಿ’ ಯುಗಾಂತ

7

ಶ‍್ರೇಷ್ಠ ಮುತ್ಸದ್ದಿಗೆ ವಿದಾಯ: ‘ಉದಾರಹೃದಯಿ’ ಯುಗಾಂತ

Published:
Updated:
Deccan Herald

ಕವಿ ಹೃದಯದ ಅಟಲ್‍ ಬಿಹಾರಿ ವಾಜಪೇಯಿ ಅವರು, ಭಾರತೀಯ ರಾಜಕಾರಣದ ಇತಿಹಾಸ ಕಂಡ ಅಪರೂಪದ ಮುತ್ಸದ್ದಿ. ಹಲವು ವೈರುಧ್ಯಗಳ ಸಂಕೀರ್ಣತೆಯಲ್ಲಿ ಸ್ಫುರಿಸುವ ಮುಕ್ತ ಮನಸ್ಸಿನ ವ್ಯಕ್ತಿತ್ವ ಅವರದು. ವಾಜಪೇಯಿ ಅವರು ಮೂರು ಬಾರಿ ಪ್ರಧಾನಿಯಾಗಿದ್ದರು. ಮೊದಲಿಗೆ 1996ರಲ್ಲಿ 13 ದಿನ, ನಂತರ 1998–99ರಲ್ಲಿ 13 ತಿಂಗಳು ಹಾಗೂ ಆಮೇಲೆ 1999ರಿಂದ 2004ರವರೆಗೆ ಪೂರ್ಣಾವಧಿ ಪ್ರಧಾನಿಯಾಗಿ ವಾಜಪೇಯಿ ಕಾರ್ಯನಿರ್ವಹಿಸಿದರು. ಪ್ರತಿ ಬಾರಿಯೂ ಅವರು ಮೈತ್ರಿ ಸರ್ಕಾರದ ನೇತೃತ್ವ ವಹಿಸಿದ್ದರು. ಜೊತೆಗೆ ಪೂರ್ಣಾವಧಿ ಪೂರೈಸಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಕೀರ್ತಿಯೂ ಅವರಿಗೇ ಸಲ್ಲುತ್ತದೆ.

ವೈಯಕ್ತಿಕ ಹಾಗೂ ರಾಜಕೀಯ ಗಡಿಗಳನ್ನು ಮೀರಿ ಜನರ ಮನಗಳನ್ನು ಮುಟ್ಟುವಂತಹ ಅವರ ಸಾಮರ್ಥ್ಯವೇ ಇದಕ್ಕೆ ಕಾರಣ. ವಾಜಪೇಯಿ ಸಂಪುಟದಲ್ಲಿ ಜಾರ್ಜ್ ಫರ್ನಾಂಡಿಸ್, ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ, ನವೀನ್ ಪಟ್ನಾಯಕ್‍, ಒಮರ್ ಅಬ್ದುಲ್ಲಾ ಅವರಂತಹ ವಿಭಿನ್ನ ರಾಜಕೀಯ ಸಿದ್ಧಾಂತಗಳ ವ್ಯಕ್ತಿಗಳು ಸಚಿವರಾಗಿದ್ದದ್ದು ಕಡಿಮೆ ಸಾಧನೆಯಲ್ಲ. ವಿಶಾಲವಾದ ನೆಲೆಗೆ ತಮ್ಮ ಪಕ್ಷವನ್ನು ಮುಂದಕ್ಕೆಳೆದು ತಂದವರು ವಾಜಪೇಯಿ.

ಕಾಶ್ಮೀರ ಸಮಸ್ಯೆ ಪರಿಹಾರ ಹಾಗೂ ನೆರೆ ರಾಷ್ಟ್ರ ಪಾಕಿಸ್ತಾನದ ಜೊತೆ ಸಂಬಂಧ ಸುಧಾರಣೆಗೆ ಅವರು ನಡೆಸಿದ ಪ್ರಯತ್ನಗಳು, ಅಪರೂಪದ ಮುತ್ಸದ್ದಿತನಕ್ಕೆ ಸಾಕ್ಷಿ. ಇತ್ತೀಚೆಗೆ ಕಾಶ್ಮೀರದಲ್ಲಿ ಪಿಡಿಪಿ ಜೊತೆ ವಿಫಲ ಮೈತ್ರಿ ಸರ್ಕಾರದ ಪ್ರಯೋಗ ನಡೆಸಿತು ಬಿಜೆಪಿ. ಆದರೆ ಇದಕ್ಕೂ ಮುಂಚೆಯೇ ಇನ್ಸಾನಿಯತ್‍, ಜಮೂರಿಯತ್‍ ಹಾಗೂ ಕಾಶ್ಮೀರಿಯತ್‍ ಎಂಬ ಪದ ವಿಶೇಷಣಗಳ ಮೂಲಕ ಮಾನವೀಯತೆ, ಪ್ರಜಾಪ್ರಭುತ್ವ ಹಾಗೂ ಕಾಶ‍್ಮೀರದ ಅಸ್ಮಿತೆಗೆ ಸಮಾನ ಮೌಲ್ಯ ನೀಡಿದ ರಾಷ್ಟ್ರೀಯ ನಾಯಕನಾಗಿ ವಾಜಪೇಯಿ ಅವರು ಕಾಶ್ಮೀರ ಕಣಿವೆಯಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದರು ಎಂಬುದು ಸ್ಮರಣಾರ್ಹ.

 ನೆಹರೂ- ಇಂದಿರಾ ಯುಗದ ಆರ್ಥಿಕ ಸಿದ್ಧಾಂತಗಳಿಗೆ ವಿದಾಯ ಹೇಳಿ ಪಿ.ವಿ. ನರಸಿಂಹರಾವ್‍ ಅವರು ಪ್ರಧಾನಿಯಾಗಿದ್ದಾಗ ಜಾರಿಗೆ ತಂದ ಹೊಸ ಆರ್ಥಿಕ ನೀತಿಯನ್ನು ಮುಂದಕ್ಕೊಯ್ದವರು ವಾಜಪೇಯಿ. ಇಂದಿರಾ ಗಾಂಧಿ ಕಾಲದ ‘ಗರೀಬಿ ಹಠಾವೊ’ ಘೋಷಣೆ ಸಾಕಾಗದು ಎಂಬುದನ್ನು ಮನಗಂಡಿದ್ದ ವಾಜಪೇಯಿ, ರಾಷ್ಟ್ರದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಮಧ್ಯಮ ವರ್ಗದ ಜನರನ್ನು ಉದ್ದೇಶಿಸಿದ ಘೋಷಣೆಯ ಅಗತ್ಯವನ್ನು ಮನಗಂಡಿದ್ದರು. ಹೀಗಾಗಿ ‘ಭಾರತ ಪ್ರಕಾಶಿಸುತ್ತಿದೆ’ ಎಂಬಂಥ ಘೋಷಣೆಗೆ ಚಾಲನೆ ನೀಡಲಾಯಿತು. ಆದರೆ 2004ರಲ್ಲಿ ಅವರ ಸರ್ಕಾರ ಬೀಳುವುದಕ್ಕೆ ಈ ಘೋಷಣೆಯೂ ಕಾರಣವಾಯಿತು ಎಂಬುದು ಬೇರೆ ಮಾತು. ಆರ್‍ಎಸ್‍ಎಸ್‍ನ ನಿರ್ಬಂಧಿಸುವ ಹಿಂದುತ್ವ ಸಿದ್ಧಾಂತದ ಆಚೆಗೂ ಬೆಳೆದವರು ಅವರು. ಹಿಂದುತ್ವ ನಾಯಕತ್ವದ ಜೊತೆಗಿನ ಪ್ರತಿರೋಧ ಇದ್ದೇ ಇತ್ತು. ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣ, ಹೆದ್ದಾರಿಗಳ ನಿರ್ಮಾಣದಂತಹ ಯೋಜನೆಗಳ ಜೊತೆಗೆ ಸುಧಾರಣಾ ಕ್ರಮಗಳನ್ನು ಮುಂದಕ್ಕೊಯ್ದರು. ಅಣುಬಾಂಬ್ ಪರೀಕ್ಷಿಸುವ ಮೂಲಕ ಅಣುಶಕ್ತಿ ರಾಷ್ಟ್ರವಾಗಿ ಅಂತರರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ಹೊಸಭಾಷ್ಯ ಬರೆಯಲು ಕಾರಣರಾದರು.

ಟೆಲಿಕಾಂ ನೀತಿಯಲ್ಲಿ ವಾಜಪೇಯಿ ನೇತೃತ್ವದ ಸರ್ಕಾರ ತಂದಂತಹ ಭಾರಿ ಬದಲಾವಣೆಗಳು ಮುಖ್ಯವಾದವು. ಅಷ್ಟೇ ಅಲ್ಲ, ಷೇರು ವಿಕ್ರಯಕ್ಕೆ ಪ್ರತ್ಯೇಕ ಸಚಿವಾಲಯವನ್ನೇ ರೂಪಿಸಿದವರು ಅವರು. ವಾಜಪೇಯಿ ಅವರು ಮುನ್ನಡೆಸಿದ ಎನ್‍ಡಿಎ ಸರ್ಕಾರ, ಬಿಜೆಪಿ ಪಕ್ಷದ ಬಗ್ಗೆ ಆವರೆಗೆ ಇದ್ದಂತಹ ರಾಜಕೀಯ ಅಸ್ಪೃಶ್ಯತಾ ಭಾವನೆಯನ್ನು ತೊಲಗಿಸಿತು ಎಂಬುದನ್ನು ಮರೆಯುವಂತಿಲ್ಲ. ನಂತರದ ದಿನಗಳಲ್ಲಿ ಅದರಲ್ಲೂ 2014ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಲೋಕಸಭೆಯಲ್ಲಿ ಬಹುಮತದ ಪಕ್ಷವಾಗಿ ಬಿಜೆಪಿ ಹೊರಹೊಮ್ಮಲು ಇದು ತಳಹದಿಯಾಗಿತ್ತು. ವಿಪರ್ಯಾಸದ ಸಂಗತಿ ಎಂದರೆ, ವಾಜಪೇಯಿ ಅವರು  ಭೌತಿಕವಾಗಿ ಈ ಜಗತ್ತಿನಿಂದ ನಿರ್ಗಮಿಸುವ ಮೊದಲೇ ಕಾಲದ ಓಟದಲ್ಲಿ ಅವರ ದನಿ ಮರೆಯಾಗಿತ್ತು. ಆದರೆ ಅವರು ಬೀರಿದ ಪ್ರಭಾವ ದೊಡ್ಡದು. ಹೀಗಿದ್ದೂ, ಅವರು ಪ್ರತಿಪಾದಿಸಿದ ಮೌಲ್ಯಗಳನ್ನು ಪ್ರತಿನಿಧಿಸುವ ನಾಯಕರು ಅಪರೂಪವಾಗಿದ್ದಾರೆ. ವಾಜಪೇಯಿ ಅವರು ಹೇಳಿದ ‘ರಾಜಧರ್ಮ’ದ ಪಾಠ ಕಡೆಗಣಿಸುವಂತಹದ್ದಲ್ಲ ಎಂಬುದನ್ನು ಇಂದಿನ ರಾಜಕೀಯ ನಾಯಕರು ಅರ್ಥಮಾಡಿಕೊಳ್ಳಬೇಕು.  

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !